ಶನಿವಾರ, ಮೇ 15, 2021
22 °C

ರೆಡ್ಡಿ ಚಿನ್ನಾಭರಣಗಳ ಮೌಲ್ಯ: ಮುಗಿಯದ ಅಂದಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಕರ್ನಾಟಕದ ಮಾಜಿ ಸಚಿವ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಅವರ ವಿವಿಧ ನಿವಾಸಗಳಿಂದ ಕಳೆದ ಸೋಮವಾರ ಸಿಬಿಐ ವಶಪಡಿಸಿಕೊಂಡ ಅಪಾರ ಚಿನ್ನಾಭರಣಗಳ ಮೌಲ್ಯದ ಅಂದಾಜು ಇನ್ನೂ  ಮುಗಿದಿಲ್ಲ.ಬೆಂಗಳೂರು, ಪೊಟ್ಟೂರು ಮತ್ತು ಚೆನ್ನೈ ಮನೆಗಳಿಂದ ವಶಪಡಿಸಿಕೊಂಡ ವಸ್ತುಗಳ ಪಟ್ಟಿ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಸಲ್ಲಿಸಲಿರುವ ಆರೋಪಪಟ್ಟಿಗೆ ಲಗತ್ತಿಸಲು ತನಿಖಾ ಸಂಸ್ಥೆ ಸಿದ್ಧವಾಗುತ್ತಿದೆ.45 ನೆಕ್ಲೇಸ್‌ಗಳು, 610 ವಜ್ರ ಖಚಿತ ಬಂಗಾರದ ಬಳೆಗಳು, 300 ವಜ್ರದ ಹರಳುಗಳ ಕಿವಿಯೋಲೆಗಳು, 1200 ಚಿನ್ನದ ಉಂಗುರಗಳು (ಈ ಪೈಕಿ 100 ಉಂಗುರಗಳಲ್ಲಿ ವಜ್ರಖಚಿತ ಹರಳುಗಳಿವೆ),  ಕುಟಂಬ ಸಮ್ಮಿಲನ ಹಾಗೂ ಧಾರ್ಮಿಕ ಆಚರಣೆಗಳ ವೇಳೆಯಲ್ಲಿ ಮಾತ್ರ  ಬಳಸುತ್ತಿದ್ದ ಇನ್ನೂ ಹಲವಾರು ಚಿನ್ನ, ವಜ್ರ ಹಾಗೂ ಪ್ಲಾಟಿನಂ ಆಭರಣಗಳು ವಶಪಡಿಸಿಕೊಂಡ ವಸ್ತುಗಳಲ್ಲಿ ಸೇರಿವೆ ಎಂದು ಸಿಬಿಐ ಮೂಲಗಳು ತಿಳಿಸಿವೆ.ಚಿನ್ನ- ವಜ್ರದ ಆಭರಣಗಳು, ಚಿನ್ನದ ಪಟ್ಟಿಯ ಸ್ಟೂಲುಗಳು- ಕುರ್ಚಿಗಳು, ಬಂಗಾರದ ಬಟ್ಟಲುಗಳು, ಚಿನ್ನದ ಬಿಂದಿಗೆಗಳು, ಆಷ್- ಟ್ರೇಗಳು, ಲೈಟರ್‌ಗಳು, ತಮಗಾಗಿಯೇ ವಿನ್ಯಾಸಗೊಂಡ ಬಂಗಾರದ ಬ್ಲ್ಯಾಕ್ ಬೆರ‌್ರಿ ಮೊಬೈಲ್, ಚಿನ್ನದ ಕಾಲುಗಳ ಸೋಫಾ, ಹಗುರವಾದ ಮೆತ್ತನೆಯ ಸುಪ್ಪತ್ತಿಗೆ.... ಇವೂ ಅಲ್ಲಿದ್ದವು.ಗಾಲಿ ಕುಟುಂಬ ಹಾಗೂ ಸಿಬಿಐ ಮೂಲಗಳ ಪ್ರಕಾರ, ಭೂಮಿ ಖರೀದಿ ಬಿಟ್ಟರೆ ರೆಡ್ಡಿ ಅತ್ಯಧಿಕ ಹೆಚ್ಚು ಹಣ ತೊಡಗಿಸಿದ್ದು ಹಳದಿ ಲೋಹದ ಮೇಲೆಯೇ. ಗಾಲಿ ಕುಟುಂಬದವರು ಆರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಲಾಕರ್ ಖಾತೆಗಳನ್ನು ಹೊಂದಿದ್ದು, ಅವನ್ನು ಶೋಧಿಸಿದರೆ ಇನ್ನೂ ಭಾರಿ ಸಂಖ್ಯೆಯ ಚಿನ್ನದ ಇಟ್ಟಿಗೆಗಳು ಲಭ್ಯವಾಗಲಿವೆ ಎನ್ನುತ್ತಾರೆ ಸಿಬಿಐ ಅಧಿಕಾರಿಗಳು.ಬಳ್ಳಾರಿ ಮನೆಯಲ್ಲಿ  ಶುದ್ಧ ಚಿನ್ನದಿಂದ ಮಾಡಿದ 1 ಅಡಿ ಎತ್ತರದ ವೆಂಕಟೇಶ್ವರನ ಮೂರ್ತಿ ಹಾಗೂ ಅರ್ಧ ಅಡಿ ಎತ್ತರದ ಪದ್ಮಾವತಿಯ ಮೂರ್ತಿ ಇತ್ತು. 100-50 ಅಡಿ ಅಳತೆಯ ಆ ಪೂಜಾ ಮಂದಿರದಲ್ಲಿ ಇನ್ನೂ ಹಲವಾರು ದೇವತೆಗಳ ಮೂರ್ತಿಗಳು ಇದ್ದವು. ಈಗ ಸಿಬಿಐ ವಶವಾಗಿರುವ ವಸ್ತುಗಳಲ್ಲಿ 1 ಕೆ.ಜಿ. ಚಿನ್ನದಿಂದ ಮಾಡಿದ ಪೂಜಾ ಮಂದಿರದ ಗಂಟೆ ಕೂಡ ಸೇರಿದೆ.ಬಿಜೆಪಿ ನಾಯಕನ ಅಕ್ರಮ ಆಸ್ತಿಯಲ್ಲಿ ಗಣನೀಯ ಪ್ರಮಾಣ ರೆಡ್ಡಿ ಸೋದರಿ ರಾಜೇಶ್ವರಿ ಮತ್ತು ಭಾವ ಸುಧಾಕರ ರೆಡ್ಡಿ ಅವರ ಹೆಸರಿನಲ್ಲಿ ಇರುವ ಅಂದಾಜಿದೆ. ಸುಧಾಕರ ರೆಡ್ಡಿ ತಿರುಪತಿ ಬಳಿಯ ಶ್ರೀಕಾಳಹಸ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಅಲ್ಲಿ ರೆಡ್ಡಿ ತಮ್ಮ ಸೋದರಿಗಾಗಿ ಈಜುಕೊಳವಿರುವ ಮನೆಯೊಂದನ್ನು  ಕಟ್ಟಿಸಿಕೊಟ್ಟಿದ್ದಾರೆ ಎನ್ನಲಾಗಿದೆ. ಈ ವಸ್ತುಗಳನ್ನು ಜೋಪಾನವಾಗಿ ಕಾಪಾಡಲು ಸಿಬಿಐ ವಿಶೇಷ ಗಾರ್ಡ್‌ಗಳನ್ನು ನೇಮಿಸಿಕೊಂಡಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.