ಸೋಮವಾರ, ಮೇ 23, 2022
20 °C

ರೈತರಿಗೆ ತಲೆನೋವಾದ ಕಾಸ್ಕೊಟಿಸಿಯಾ ಕಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರೇಗಲ್: ಅಕಾಲಿಕ ಮಳೆಯಿಂದಾಗಿ ಕಂಗಾಲಾಗಿರುವ ರೈತರು ಇದೀಗ ಉಳ್ಳಾಗಡ್ಡಿ ಹಾಗೂ ಮೆಣಸಿಕಾಯಿ ಗಿಡಗಳಿಗೆ ಆವರಿಸಿರುವ `ಕಾಸ್ಕೂಟಿಸಿಯಾ~ ಎಂಬ ವಿನೂತನ ಜಾತಿಯ ಕಳೆಯಿಂದಾಗಿ ಮತ್ತಷ್ಟು ಆತಂಕ ಎದುರಿಸುವಂತಾಗಿದೆ. ಅಬ್ಬಿಗೇರಿ, ಜಕ್ಕಲಿ, ದ್ಯಾಂಪುರ, ಹಾಲಕೆರೆ ಕೊಚಲಾಪುರ ಸೇರಿದಂತೆ ಇತರೆ ಗ್ರಾಮಗಳ ಪ್ರದೇಶದ ಜಮೀನುಗಳಲ್ಲಿ ಬೆಳೆದ ಉಳ್ಳಾಗಡ್ಡಿ ಹಾಗೂ ಮೆಣಸಿನಕಾಯಿ ಬೆಳೆಗೆ `ಕಾಸ್ಕೂಟಿಸಿಯಾ~ ಕಳೆ ಕಾಣಿಸಿಕೊಂಡಿದೆ.ಏನಿದು `ಕಾಸ್ಕೂಟಿಸಿಯಾ~?

`ಕಾಸ್ಕೂಟಿಸಿಯಾ~ ಎಂಬ ಕಳೆಯು ಉತ್ತರ ಅಮೆರಿಕ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ನಮ್ಮ ಭಾಗದಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಂಡು ಬಂದಿದೆ. ಗ್ರಾಮ್ಯ ಭಾಷೆಯಲ್ಲಿ ಇದನು ಮಂಗ್ಯನ ಬಳ್ಳಿ ಎಂದು ಕರೆಯುವುದುಂಟು. ಇದು ಜೇಡರ ಬಲೆಯಂತೆ ಬೆಳೆಗೆ ಹೆಣೆದುಕೊಳ್ಳುತ್ತಾ ಹೋಗತ್ತದೆ. ಬೆಳೆಯ ರಸ ಹೀರುವ ಮೂಲಕ ಬೆಳೆಯನ್ನು ಸಂಪೂರ್ಣ ನಾಶಮಾಡುತ್ತದೆ. ಹಳದಿ, ತಿಳಿಹಸಿರು ಮತ್ತು ಕೇಸರಿ ಬಣ್ಣಗಳನ್ನು ಹೊಂದಿರುವ ಈ ಕಸ ನಾಲ್ಕೈದು ದಿನಗಳಲ್ಲಿ ತನ್ನ ಬಳ್ಳಿಯು ಬೆಳೆಯ ತುಂಬ ಹಬ್ಬಿಕೊಂಡು ಬಿಡುತ್ತದೆ. ರೈತರಿಗೆ ಈ ಕಳೆಯನ್ನು ನಿಯಂತ್ರಿಸುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.ಅತೀ ಹೆಚ್ಚು ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಈ ಕಳೆಯು ಕಂಡು ಬರುವ ಸಾಧ್ಯತೆಯಿದೆ. ಈ ಜಾತಿಯ ಕಳೆಯಲ್ಲಿ 150 ಕ್ಕೂ ಹೆಚ್ಚು ಉಪ ಜಾತಿಗಳಿವೆ. ಇದರ ಹತೋಟಿಗೆ ಯಾವುದೇ ಕಳೆನಾಶಕ ಬಳಸಿದರೂ ಪ್ರಯೋಜನವಾಗುವುದಿಲ್ಲ. ಇದನ್ನು ಕೈಯಿಂದಲೇ ಬೆಳೆ ಸಮೇತ ಕಿತ್ತು ಸುಟ್ಟು ನಾಶಪಡಿಸುವ ಅನಿವಾರ್ಯತೆ ಇದೆ ಎಂದು ಸಸ್ಯ ತಜ್ಞರಾದ ಬಿ.ಸಿ.ರಾಜೂರ ಹೇಳುತ್ತಾರೆ.ಪರಾವಲಂಬಿ ಜೀವಿಯಾದ `ಕಾಸ್ಕೊಟಿಸಿಯಾ~ ಕಸ ದಿನದಿಂದ ದಿನಕ್ಕೆ ಶೀಘ್ರವಾಗಿ ವ್ಯಾಪಿಸುತ್ತ ಶೇಕಡಾ 80ರಷ್ಟು ಬೆಳೆಯನ್ನು ನಾಶಮಾಡುತ್ತದೆ.  ಈ ಕಸದ ಕಾಂಡದ ತುಂಡು, ಬೀಜಗಳು ನೀರು ಹಾಗೂ ಗಾಳಿಯ ಮೂಲಕ ಸ್ಥಳದಿಂದ ಸ್ಥಳಕ್ಕೆ ವ್ಯಾಪಿಸುತ್ತದೆ. ಮಣ್ಣಿನಲ್ಲಿ ಸೇರಿಕೂಂಡ ಈ ಕಳೆಯ ಬೀಜಗಳು 10 ವರ್ಷಗಳವರೆಗೂ ಬೆಳೆಯುವ ಸಾಮರ್ಥ್ಯ ಪಡೆದಿವೆ ಎನ್ನುತ್ತಾರೆ ಶಿವನಗೌಡ ಪಾಟೀಲ.ಶೀಘ್ರವಾಗಿ ಬೆಳೆಯುತ್ತಿರುವ ಕಳೆಯನ್ನು ಹತೋಟಿಗೆ ಕ್ರಮ ಕೈಕೂಳ್ಳಬೇಕಿದೆ. ಇಲ್ಲದಿದ್ದಲ್ಲಿ ರೈತರು ಅಪಾರ ಹಾನಿ ಅನುಭವಿಸವಂತಾಗುತ್ತದೆ. ಇದರ ಹತೋಟಿಗೆ ಸರ್ಕಾರ ಹಾಗೂ ಕೃಷಿ ಇಲಾಖೆ ಗಮನಹರಿಸುವ ಅವಶ್ಯಕತೆ ಎಂದು ಜಿ. ಪಂ. ಸದಸ್ಯ ಡಾ.ಆರ್.ಬಿ. ಬಸವರಡ್ಡೇರ, ಡಾ. ನಾಗರಾಜ ಗ್ರಾಮಪುರೋಹಿತ, ಎಂ.ಬಿ. ಪಾಟೀಲ, ಎಸ್.ಬಿ. ಪಾಟೀಲ, ಬಿ.ಎಸ್. ಬಾರಕೇರ, ಗುರುನಾಥ ಅವರಡ್ಡಿ, ಬಸವರಾಜ ಪಾಟೀಲ್ ಆಗ್ರಹಿಸಿದ್ದಾರೆ. 

ಸೋಮಲಿಂಗಪ್ಪ ವೈ. ಕುರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.