ಬುಧವಾರ, ಜೂನ್ 23, 2021
29 °C

ರೈತರ ಅಕ್ರಮ ಪಂಪ್‌ಸೆಟ್ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು: ಪಟ್ಟಣದ ದೊಡ್ಡಕೆರೆ ನೀರನ್ನು ಅಕ್ರಮವಾಗಿ ಪಂಪ್‌ಸೆಟ್ ಬಳಸಿ ಕೃಷಿಗೆ ಬಳಸಿಕೊಳ್ಳುತ್ತಿದ್ದವರ ಮೇಲೆ ದಾಳಿ ನಡೆಸಿ, ಐದು ಸಬ್‌ಮರ್ಸಿಬಲ್ ಪಂಪ್‌ಸೆಟ್, ಕೇಬಲ್ ಮತ್ತು ಪೈಪು ವಶಪಡಿಸಿಕೊಳ್ಳಲಾಗಿದೆ.ಸೋಮವಾರ ರೈತರು ತಹಶೀಲ್ದಾರ್ ಕಚೇರಿ ಎದುರು ನೀರಿನ ಅಕ್ರಮ ಬಳಕೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದರಿಂದ ಎಚ್ಚೆತ್ತ ಕಂದಾಯ, ಪುರಸಭೆ, ಬೆಸ್ಕಾಂ, ಪೊಲೀಸ್ ಅಧಿಕಾರಿಗಳು ಮಂಗಳವಾರ ಕೆರೆ ಅಂಗಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಅಕ್ರಮವಾಗಿ ನೀರು ಬಳಸುತ್ತಿದ್ದುದು ಪತ್ತೆಯಾಯಿತು. ಕೂಡಲೇ ಅಧಿಕಾರಿಗಳು ಅವನ್ನು ವಶಕ್ಕೆ ಪಡೆದರು.ಪಟ್ಟಣದಲ್ಲಿ ಅಂತರ್ಜಲ ಕಡಿಮೆ ಆಗುತ್ತಿದೆ. ದೊಡ್ಡಕೆರೆ ನೀರನ್ನು ಕೃಷಿಗೆ ಬಳಸಿಕೊಳ್ಳಬಾರದು ಎಂದು ಹಲವು ಬಾರಿ ರೈತರಿಗೆ ಮುನ್ನೆಚ್ಚರಿಕೆ ನೀಡಲಾಗಿತ್ತು. ಯಾರೊಬ್ಬರೂ ಇದಕ್ಕೆ ಸ್ಪಂದಿಸದಿದ್ದರಿಂದ ದಾಳಿ ನಡೆಸಲಾಗಿದೆ ಎಂದು ಕಂದಾಯ ಅಧಿಕಾರಿ ರಾಮಯ್ಯ `ಪ್ರಜಾವಾಣಿ~ಗೆ ತಿಳಿಸಿದರು.ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಕೆರೆಗಳಲ್ಲಿನ ನೀರನ್ನು ಅಕ್ರಮವಾಗಿ ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ತಹಶೀಲ್ದಾರ್ ಎಚ್.ಅಮರೇಶ್ ಎಚ್ಚರಿಕೆ ನೀಡಿದ್ದಾರೆ.ಬೆಸ್ಕಾಂನಿಂದ ಅನುಮತಿ ಪಡೆಯದೆ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡಿಕೊಂಡಿರುವವರ ವಿರುದ್ಧ ದೂರು ದಾಖಲಿಸಿ ದಂಡ ಹಾಕಲಾಗುವುದು ಎಂದು ಬೆಸ್ಕಾಂನ ಸಹಾಯಕ ಎಂಜಿನಿಯರ್ ಗಣೇಶ್ ಹೇಳಿದರು.

ಆರಕ್ಷಕ ಉಪನಿರೀಕ್ಷಕ ಶಿವಸ್ವಾಮಿ ಮತ್ತು ಸಿಬ್ಬಂದಿ, ಪುರಸಭಾ ಆರೋಗ್ಯಾಧಿಕಾರಿ ರಾಜಣ್ಣ, ಗ್ರಾಮ ಲೆಕ್ಕಾಧಿಕಾರಿ ವಿ.ಎ.ನಾರಾಯಣಸ್ವಾಮಿ ದಾಳಿಯಲ್ಲಿ ಪಾಲ್ಗೊಂಡಿದ್ದರು.ಅಹವಾಲು ಸ್ವೀಕಾರ ನಾಳೆ

ಮಾಲೂರು ಪ್ರವಾಸಿ ಮಂದಿರದಲ್ಲಿ ಮಾ.15ರಂದು ಲೋಕಾಯುಕ್ತ ಕೋಲಾರ ಜಿಲ್ಲಾ ವರಿಷ್ಠಾಧಿಕಾರಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.ಮಾಲೂರು ಪಟ್ಟಣ ಮತ್ತು ತಾಲ್ಲೂಕಿನ ಸುತ್ತಮುತ್ತ ಹಳ್ಳಿಗಳ ಸಾರ್ವಜನಿಕರು ಸಭೆಗೆ ಹಾಜರಾಗಿ ಅಹವಾಲು ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.15ರಿಂದ ವಿದ್ಯುತ್ ವ್ಯತ್ಯಯ

ಕೋಲಾರ: ಕೆಜಿಎಫ್ ನಗರ ವ್ಯಾಪ್ತಿಯಲ್ಲಿ ಉನ್ನತೀಕರಣದ ಕೆಲಸ ನಡೆಯುತ್ತಿರುವುದರಿಂದ ವಿದ್ಯುತ್ ಸರಬರಾಜಾಗುವ ಬಿ.ಇ.ಎಂ.ಎಲ್ ನಗರ, ಎ ಟೈಫ್ ಕ್ವಾಟ್ರಸ್, ಡಿ.ಕೆ.ಹಳ್ಳಿ ಪ್ಲಾಂಟೇಷನ್ ಏರಿಯಾ, ಆಫಿಸರ್ಸ್‌ ಕ್ವಾಟ್ರಸ್, ವಸಂತ ನಗರ, ವಿಜಯ ನಗರ ಭಾಗಗಳಲ್ಲಿ ಮಾ15ರಿಂದ 17ರವರೆಗೆ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಆಗುತ್ತದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಪ್ರಕಟಣೆ ಕೋರಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.