ಗುರುವಾರ , ಮೇ 19, 2022
21 °C

ರೈತರ ಅಭಿವೃದ್ಧಿಗೆ 15 ಕೋಟಿ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು: ರೈತರ ಅಭಿವೃದ್ಧಿಗಾಗಿ ಒಕ್ಕೂಟದಿಂದ ಪ್ರತಿ ವರ್ಷ 15 ಕೋಟಿ ರೂಪಾಯಿಗೂ ಹೆಚ್ಚಿನ ಅನುದಾನನೀಡುತ್ತಿದ್ದು, ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂದು ಕೊಚಿಮುಲ್‌ನ ಅಧ್ಯಕ್ಷ ಡಾ.ಎ.ವಿ.ಪ್ರಸನ್ನ ತಿಳಿಸಿದರು.ಪಟ್ಟಣದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರ ಹಾಗೂ ಕಾರ್ಯದರ್ಶಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಪ್ರತಿ ವರ್ಷ ಹಾಲು ಒಕ್ಕೂಟದಿಂದ ರೈತರ ಅಭಿವೃದ್ಧಿಗಾಗಿ ಹಲವು ರೀತಿ ಅನುದಾನ ನೀಡುತ್ತಿದ್ದು, ಜನಶ್ರೀ ಯೋಜನೆ ಸೇರಿದಂತೆ ರೈತರು ಉಪಯೋಗಿಸುವ ಉಪಕರಣಗಳಿಗೆ ಸಹಾಯ ಧನ ನೀಡುತ್ತಿದೆ. ಹಾಲಿನ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿ ಗುಣಮಟ್ಟದ ಹಾಲನ್ನು ಉತ್ಪಾದಿಸಬೇಕು. ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಒಕ್ಕೂಟದಿಂದ ಬಿಡುಗಡೆಯಾಗುವ ಅನುದಾನಗಳ ಬಗ್ಗೆ ಅರಿವು ಪಡೆದು, ರೈತರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಸಹಕಾರ ಸಂಘಗಳಲ್ಲಿ ಸಮಸ್ಯೆ ಉದ್ಭವಿಸಿದಾಗ ಸಾಮಾನ್ಯ ಸಭೆಗೆ ಕಾಯದೆ, ಅದೇ ದಿನ ಒಕ್ಕೂಟದ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ನಿವಾರಿಸಿಕೊಳ್ಳಬೇಕು ಎಂದರು.ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ತಾಲ್ಲೂಕಿನ ರೈತರು, ಒಕ್ಕೂಟದಿಂದ ನೀಡುವ ಅನುದಾನಗಳನ್ನು ಪಡೆಯುವಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ. ಹಾಲು ಉತ್ಪಾದನೆಯಲ್ಲಿ ಕೊನೆ ಸ್ಥಾನದಲ್ಲಿರುವ ಶ್ರೀನಿವಾಸಪುರ ರೈತರು, ಅನುದಾನ ಪಡೆಯುವಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ.ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ವತಿಯಿಂದ 5 ವರ್ಷದಲ್ಲಿ ಚಿಕ್ಕಬಳ್ಳಾಪುರದ ಬಳಿ 150 ಕೋಟಿ ರೂಪಾಯಿ ವೆಚ್ಚದಲ್ಲಿ ಮದರ್ ಡೇರಿ ಪ್ರಾರಂಭಿಸಲು ಯೋಜನೆ ರೂಪಿಸಿದೆ ಎಂದರು.ಪಶು ಆಹಾರ ಘಟಕ ಪ್ರಾರಂಭಿಸಲು 70 ರಿಂದ 100 ಕೋಟಿ ರೂಪಾಯಿಯ ಯೋಜನೆ ರೂಪಿಸಲಾಗಿದೆ. 5 ಕೋಟಿ ರೂಪಾಯಿ ವೆಚ್ಚದಲ್ಲಿ ಪಶು ಆಹಾರ ತಾಂತ್ರಿಕ ಘಟಕ ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ.ಮೊಟ್ಟಮೊದಲ ಬಾರಿಗೆ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುತ್ತಿದ್ದು, ಸುಮಾರು 253 ಕೋಟಿ ರೂಪಾಯಿ ಬಂಡವಾಳ ಹೂಡಲಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ತಾಲ್ಲೂಕಿನ ವಪ್ಪಚ್ಚಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಮುನಿಯಪ್ಪ ಹಾಗೂ ಸೊಣ್ಣಹಳ್ಳಿ ಸಹಕಾರ ಸಂಘದ ಕಾರ್ಯದರ್ಶಿ ಶಿವಕುಮಾರ್ ಅವರನ್ನು ಅಭಿನಂದಿಸಲಾಯಿತು. ಜನಶ್ರೀ ಯೋಜನೆಯಡಿ ತಾಲ್ಲೂಕಿನಾದ್ಯಂತ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ 350 ವಿದ್ಯಾರ್ಥಿಗಳಿಗೆ ತಲಾ 1200 ರೂಪಾಯಿ  ಚೆಕ್ ವಿತರಿಸಲಾಯಿತು.ಕೊಚಿಮುಲ್‌ನ ವ್ಯವಸ್ಥಾಪಕ ಕೆ.ವಿ.ನಾರಾಯಣಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ ಡಾ.ಗೋಪಾಲ್, ಉಪವ್ಯವಸ್ಥಾಪಕ ಡಾ.ವಿಶ್ವನಾಥ್, ವಿಸ್ತರಣಾಧಿಕಾರಿಗಳಾದ ಶ್ರೀಧರ್ ಮೂರ್ತಿ, ಪ್ರಕಾಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಟ್ಟಕೋಡಿ ಕೃಷ್ಣಾರೆಡ್ಡಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.