ಶುಕ್ರವಾರ, ಏಪ್ರಿಲ್ 23, 2021
23 °C

ರೈತರ ಸ್ಥಿತಿ- ಗತಿಗೆ ಹಳಹಳಿಸಿದ ಬಾಬಾಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲ್ಲಸರ್ಜ ವೇದಿಕೆ (ಚನ್ನಮ್ಮನ ಕಿತ್ತೂರು): ‘ಆಧುನಿಕ ಕಾಲದ ರೈತ ಕೇವಲ ಆರ್ಥಿಕವಾಗಿ ಮಾತ್ರ ಕಳೆದುಕೊಂಡಿಲ್ಲ. ಮೌಲ್ಯಗಳನ್ನೂ ಕಳೆದುಕೊಂಡು  ದಿಕ್ಕು ಕಾಣದಂತಾಗಿದ್ದಾನೆ’ ಎಂದು ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ ಕಳವಳ ವ್ಯಕ್ತಪಡಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶುಕ್ರವಾರ ನಡೆದ ಪರಿಸರ ಮತ್ತು ಕೃಷಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ‘ಬೇರೆ ಯಾರಿಂದಲೂ ಕಲಿಯುವಂತಹ ಶಾಸ್ತ್ರ ಕೃಷಿಯಲ್ಲ’ ಎಂದು ಅಭಿಪ್ರಾಯಪಟ್ಟರು.‘ಸಂಪ್ರದಾಯ ಬದ್ಧವಾಗಿ ಬೆಳೆದ ಜನ ರೈತರು. ದುರಾಸೆಗಾಗಿ ಅಥವಾ ಕುರ್ಚಿ ಆಸೆಗಾಗಿ ಎಲ್ಲ ಕಳೆದುಕೊಂಡಿದ್ದಾರೆ. ಆಹಾರ ಸಂಪತ್ತು ಇಲ್ಲದಾಗಿದೆ. ಜ್ಞಾನ ಸಂಪತ್ತು ಕಳೆದು ಹೋಗಿದೆ’ ಎಂದು ಹಳಹಳಿಸಿದರು.‘ಹೆಗ್ಗಣ ನೆಲವನ್ನು ಕೆದರಿದಂತೆ ರಾಜಕಾರಣಿಗಳು ಹಣ ಕೆದರುತ್ತಿದ್ದಾರೆ. ನೆಲ ಕೆದರುವ ಹೆಗ್ಗಣಕ್ಕೆ ನಾನೇಕೆ ಬಗೆಯುತ್ತಿರುವೆ ಎಂಬ ಕಲ್ಪನೆ ಇರುವುದಿಲ್ಲ. ದುಡ್ಡು ಬಳಿದುಕೊಳ್ಳುತ್ತಿರುವ ರಾಜಕಾರಣಿಗೂ ಅದರ ಕಲ್ಪನೆ ಇದ್ದಂತಿಲ್ಲ. ಇದರಿಂದ ಆತನಿಗೇನಾದರೂ ಸೌಖ್ಯವಿದೆಯೇ ಎಂದು ಕೇಳಿದರೆ ಆತನಿಗೂ ಇಲ್ಲ’ ಎಂದು ವಸ್ತುಸ್ಥಿತಿ ವಿವರಿಸಿದರು.‘ಪ್ರಸ್ತುತ ಆಹಾರ ಕಲುಷಿತವಾಗಿದೆ. ದೂರದ ಜಿನೇವಾ ದೇಶದಲ್ಲಿ ಕೈಗೊಂಡ ನಿರ್ಣಯಗಳು ಭಾರತದ ರೈತನನ್ನು ನಿಯಂತ್ರಣದಲ್ಲಿಟ್ಟುಕೊಂಡಿದೆ. ಕೃಷಿ ಸಂಸ್ಕೃತಿಯ ದೇಶದಲ್ಲಿ ಕೃಷಿಯೆಂಬುದು ವ್ಯಾಪಾರವಾಗಿದೆ. ಸಂಘಟನೆ ಶಕ್ತಿಯಲ್ಲಿಯ ದುರ್ಬಲತೆಯಿಂದ ಆತ ತೀವ್ರ ತೊಂದರೆಯಿಲ್ಲಿದ್ದಾನೆ’ ಎಂದು ಹೇಳಿದರು.‘ಕೃಷಿ ಚಿಂತನೆ ಎಂಬುದು ರೈತರಿಗೆ ಸೀಮಿತವಾದ ಸಂಗತಿಯಲ್ಲ. ಇದರಲ್ಲಿ ದೇಶದ ಅಳಿವು-ಉಳಿವಿನ ಪ್ರಶ್ನೆ ಅಡಗಿದೆ’ ಎಂದು ಬಾಬಾಗೌಡ ಎಚ್ಚರಿಸಿದರು.ಆಶಯ ಭಾಷಣ ಮಾಡಿದ ಕೃಷಿಚಿಂತಕ ಮತ್ತು ಬರಹಗಾರ ಈರಯ್ಯ ಕಿಲ್ಲೇದಾರ ಅವರು, ‘ಅಮ್ಮನಿಗೆ ಮೊಮ್ಮಗ ಕೆಮ್ಮು ಕಲಿಸಿದಂತೆ ಸಹಸ್ರಾರು ವರ್ಷಗಳ ಪರಂಪರೆಯಿರುವ ಭಾರತೀಯ ಕೃಷಿಕನಿಗೆ ವ್ಯವಸಾಯ ಕಲಿಸಲು ಎಂದು ಕೃಷಿ ವಿಜ್ಞಾನಿಗಳು ಬಂದರು’ ಎಂದು ತರಾಟೆಗೆ ತೆಗೆದುಕೊಂಡರು.‘ಕೂರಿಗೆ, ಕುಂಟಿ, ಎತ್ತು, ಚಕ್ಕಡಿ, ಮಳೆ, ಭೂಮಿ, ಗಿಡಗಳ ಬಗ್ಗೆ ಅಜ್ಜ-ಮುತ್ತಜ್ಜರಿಗೆ ಪೂಜ್ಯನೀಯ ಭಾವನೆಯಿತ್ತು. ಪರಿಸರ ಸ್ನೇಹಿ ಮತ್ತು ಸಾವಯವ ಕೃಷಿ ಅವರ ವಿಧಾನವಾಗಿತ್ತು. ಹಸಿರು ಕ್ರಾಂತಿ ಹೆಸರಿನಲ್ಲಿ ದಾಂಗುಡಿಯಿಟ್ಟ ಕೃಷಿ ವಿಜ್ಞಾನಿಗಳು ಇದೆಲ್ಲವನ್ನು ಹಾಳು ಮಾಡಿದರು’ ಎಂದು ದೂರಿದರು.‘ಇದರಿಂದಾಗಿಯೇ ಸಾವಿರಾರು ವರ್ಷಗಳ ವ್ಯವಸಾಯ ಪರಂಪರೆ ಹದಗೆಟ್ಟು ಹೋಗಿದೆ. ಭಾರತದ ಕೃಷಿ, ಇಲ್ಲಿನ ಪದ್ಧತಿ ಹಾಗೂ ಪರಿಸರದ ಮಾಹಿತಿ ವಿಜ್ಞಾನಿಗಳಿಗಿಲ್ಲ.ಹೊರದೇಶದ ಪದ್ಧತಿಯನ್ನೇ ಅವರು ಆಮದು ಮಾಡಿಕೊಂಡರು. ಹದ- ಹಂಗಾಮು ಇಲ್ಲದ, ಬೇಕಾದಾಗ ಬೇಕಾದ ಬೆಳೆ ತೆಗೆಯುವ ಕಾಲ ಈಗ ಬಂದಿತು’ ಎಂದು ಈರಯ್ಯ ವಿಶ್ಲೇಷಿಸಿದರು.ಪ್ರಾಣಿ ಪಕ್ಷಿ ವಿಷಯ ಕುರಿತು ಪರಿಸರ ಚಿಂತಕ ಆರ್.ಜಿ. ತಿಮ್ಮಾಪುರ, ನೆಲಜಲ ವಿಷಯವಾಗಿ ಲಿಂಗರಾಜ ಜಗಜಂಪಿ, ಕೃಷಿ ಮತ್ತು ಸಾವಯವ ಕೃಷಿ ಬಗ್ಗೆ ಕ್ರಮವಾಗಿ ಆನಂದ ಹಣಮಂತಗಡ, ಸುರೇಶ ದೇಸಾಯಿ ಉಪನ್ಯಾಸ ನೀಡಿದರು. ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಬಿ.ಎ. ಸನದಿ, ರಾಜಗುರು ಸಂಸ್ಥಾನ ಕಲ್ಮಠದ ಪೀಠಾಧಿಪತಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ರಾಜ್ಯ ಸಭಾ ಸದಸ್ಯ ಡಾ. ಪ್ರಭಾಕರ ಕೋರೆ ವೇದಿಕೆ ಮೇಲಿದ್ದರು. ಸಿ.ವೈ. ಪರೀಟ್, ಬಸವರಾಜ ಘೋಡಗೇರಿ ಗೋಷ್ಠಿ ನಿರೂಪಿಸಿದರು. ಪ್ರೊ.ಬಿ.ವಿ. ಮಂಗೇಶಕರ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.