ಮಂಗಳವಾರ, ಏಪ್ರಿಲ್ 20, 2021
24 °C

ರೈಲಿಗೆ ಮಹಾವೀರರ ಹೆಸರು: ರೈಲ್ವೆ ಸಚಿವ ಮುನಿಯಪ್ಪ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೈನ ಸಮಾಜದ ಬೇಡಿಕೆಯಂತೆ ನಗರದಿಂದ ಹೊರಡುವ ರೈಲೊಂದಕ್ಕೆ ‘ಮಹಾವೀರ ಎಕ್ಸ್‌ಪ್ರೆಸ್’ ಹೆಸರು ಇಡಲು ಕ್ರಮಕೈಗೊಳ್ಳಲಾಗುವುದು. ಈ ಕುರಿತು ಕೇಂದ್ರ ಸಚಿವೆ ಮಮತಾ ಬ್ಯಾನರ್ಜಿ ಅವರೊಂದಿಗೆ ಚರ್ಚಿಸಿ ನಾಮಕರಣ ಮಾಡುವುದನ್ನು ಅಂತಿಮಗೊಳಿಸಲಾಗುವುದು ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರು ಭರವಸೆ ನೀಡಿದರು.ಜೈನ ಯುವ ಸಂಘಟನೆಯು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಏರ್ಪಡಿಸಿದ್ದ ಮಹಾವೀರರ 2610ನೇ ಜನ್ಮ ಕಲ್ಯಾಣ ಮಹೋತ್ಸವದಲ್ಲಿ ಅವರು ಮಾತನಾಡಿದರು.‘ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ವಿಶ್ವಕ್ಕೆ ಶಾಂತಿ, ಅಹಿಂಸೆ ತತ್ವವನ್ನು ನೀಡಿದ್ದು ಜೈನ ಸಮಾಜ. ಇದೇ ತತ್ವಗಳನ್ನು ಅನುಸರಿಸಿ ಮಹಾತ್ಮಾ ಗಾಂಧಿ ಅಹಿಂಸಾ ಚಳವಳಿ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಇದಲ್ಲದೇ, 12ನೇ ಶತಮಾನದಲ್ಲಿ ಬಸವಣ್ಣ ಅವರು ಆರಂಭಿಸಿದ ಸಾಮಾಜಿಕ ಕ್ರಾಂತಿಗೂ ಈ ತತ್ವಗಳೇ ಪ್ರೇರಣೆಯಾಗಿದ್ದವು. ವಯಸ್ಸಾದ ಹಸುಗಳನ್ನು ಪಾಲನೆ ಮಾಡಲು ಗೋ ಶಾಲೆಗಳನ್ನು ನಡೆಸುತ್ತಿರುವ ಜೈನ ಸಂಘಟನೆಗಳ ಕ್ರಮ ಸ್ವಾಗತಾರ್ಹ ಎಂದು ಅವರು ಪ್ರಶಂಸಿಸಿದರು.ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ‘ರಾಜ್ಯ ಬಿಜೆಪಿ ಸರ್ಕಾರವು ಸರ್ವಧರ್ಮ, ಸಮನ್ವಯ, ಭಾತೃತ್ವದಲ್ಲಿ ನಂಬಿಕೆ ಇಟ್ಟಿದ್ದು, ಎಲ್ಲ ಮತ, ಧರ್ಮಗಳನ್ನು ಒಂದೇ ರೀತಿ ನೋಡುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದ್ದು, ಯಾವುದೇ ಕೋಮುಗಳಿಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ’ ಎಂದರು.‘ಭಗವಾನ್ ಮಹಾವೀರರ ಬೋಧನೆಗಳು ಸರ್ವಧರ್ಮಗಳ ಏಳಿಗೆಗೆ ಸ್ಫೂರ್ತಿದಾಯಕವಾಗಿವೆ. ಜೈನ ಧರ್ಮವು ರಾಜ್ಯದಲ್ಲಿ ಹಾಸುಹೊಕ್ಕಾಗಿದೆ. ಭರತ ಖಂಡವು ಹಲವು ಧರ್ಮಗಳಿಗೆ, ಮತಗಳಿಗೆ ಆಶ್ರಯ ನೀಡಿದ ಪುಣ್ಯ ಭೂಮಿಯಾಗಿದೆ’ ಎಂದು ತಿಳಿಸಿದರು. ಕುವೆಂಪು ಅವರ ಸರ್ವಜನಾಂಗಗಳ ಶಾಂತಿಯ ತೋಟ ಎನ್ನುವ ಮಾತನ್ನು ಉಲ್ಲೇಖಿಸಿದ ಅವರು, ‘ಈ ನಾಡಿನಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು, ಜೈನರು, ಬೌದ್ಧರು, ಸಿಖ್ಖರು ಹೀಗೆ ವಿವಿಧ ಮತ, ಧರ್ಮಗಳ ಜನರು ನೆಲೆಸಿದ್ದಾರೆ’ ಎಂದು ನುಡಿದರು.ಸಂಸದ ಡಿ.ಬಿ. ಚಂದ್ರೇಗೌಡ ಮಾತನಾಡಿ, ಕೆ.ಜಿ. ರಸ್ತೆಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ವೃತ್ತದ ಬಳಿ ನಿರ್ಮಾಣವಾಗಲಿರುವ ಮೆಟ್ರೊ ರೈಲು ನಿಲ್ದಾಣಕ್ಕೆ ಭಗವಾನ್ ಮಹಾವೀರ ಅವರ ಹೆಸರು ಇಡಲು ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಒತ್ತಡ ಹೇರುವುದಾಗಿ ಹೇಳಿದರು.ಅಶೋಕರತ್ನ ಸೂರೀಶ್ವರ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ಸಂಸದ ಪಿ.ಸಿ. ಮೋಹನ್, ಶಾಸಕರಾದ ದಿನೇಶ್ ಗುಂಡೂರಾವ್, ಹೇಮಚಂದ್ರ ಸಾಗರ್, ಮೇಯರ್ ಎಸ್.ಕೆ. ನಟರಾಜ್, ಜೈನ ಸಮಾಜದ ಅಧ್ಯಕ್ಷ ಸಜ್ಜನ್ ರಾಜ್ ಮೆಹ್ತಾ, ಸುರೇಶ್ ಡೋಕಾ, ಇತರರು ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುಂಚೆ ಗಾಂಧಿ ನಗರ, ಮೈಸೂರು ಬ್ಯಾಂಕ್ ವೃತ್ತ ಮೂಲಕ ಸ್ವಾತಂತ್ರ್ಯ ಉದ್ಯಾನದವರೆಗೆ ಧರ್ಮ ಸಹಿಷ್ಣುತೆ ಸಾರುವ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.