ಗುರುವಾರ , ಮೇ 26, 2022
22 °C

ರೈಲ್ವೆಗೇಟ್ ನಿರ್ಮಿಸಲು ಗ್ರಾಮಸ್ಥರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ತಾಲ್ಲೂಕಿನ ರಾಮಗಿರಿ ಹೋಬಳಿ ಅರಬಗಟ್ಟ ಸಮೀಪ ಇರುವ ರೈಲ್ವೇ ಕ್ರಾಸಿಂಗ್ ಬಳಿ ವಾಹನ ನಿಲುಗಡೆ ಗೇಟ್ ನಿರ್ಮಿಸಬೇಕು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಅರಬಗಟ್ಟ, ತಾಳಕಟ್ಟ, ಗಂಗಸಮುದ್ರ, ವಡೇರಹಳ್ಳಿ, ಹೊಸಹಟ್ಟಿ, ಬೊಮ್ಮನಹಳ್ಳಿ ಮತ್ತಿತರ ಗ್ರಾಮಗಳ ಜನ ಇದೇ ಸ್ಥಳದಲ್ಲಿ ರೈಲುಹಳಿ ದಾಟಿ ರಾಮಗಿರಿ, ಹೊಸದುರ್ಗ ರೋಡ್ ಮತ್ತಿತರ ಸ್ಥಳಗಳಿಗೆ ಹೋಗಬೇಕು.

ಇದೇ ಮಾರ್ಗದಲ್ಲಿ ಪ್ರತಿದಿನ ಐದಾರು ಬಾರಿ ಒಂದು ಪ್ರಯಾಣಿಕರ ಮಿನಿಬಸ್ ಕೂಡ ಸಂಚರಿಸುತ್ತದೆ. ಗೌಡಿಹಳ್ಳಿ-ರಾಮಗಿರಿ ರಸ್ತೆ ಹದಗೆಟ್ಟಿರುವುದರಿಂದ ಆ ಮಾರ್ಗದಲ್ಲಿ ಸಂಚರಿಸುವ ಕೆಲವು ವಾಹನಗಳೂ ಇದೇ ರಸ್ತೆಯಲ್ಲಿ ಬರುತ್ತವೆ. ಆದರೆ, ಇಲ್ಲಿ ರೈಲ್ವೇ ಗೇಟ್ ಇಲ್ಲದಿರುವುದರಿಂದ ಪ್ರಯಾಣಿಕರು ಸದಾ ಭಯದಲ್ಲೇ ಹಳಿ ದಾಟುವ ಪರಿಸ್ಥಿತಿ ಇದೆ.‘ಸುತ್ತಲಿನ ಗ್ರಾಮಸ್ಥರು ಹೊಲ, ತೋಟಗಳಿಗೆ ಇದೇ ಜಾಗದಲ್ಲಿ ದಾಟಿ ಹೋಗಬೇಕು. ಪ್ರತಿದಿನ ಬೇಸಾಯ, ಗಾಡಿ, ಜನ, ಜಾನುವಾರುಗಳು ಹಳಿ ದಾಟುತ್ತವೆ. ಆದರೆ, ಇಲ್ಲಿ ಗೇಟ್ ಇಲ್ಲದಿರುವುದರಿಂದ ರೈಲು ಬರುತ್ತಿರುವ ಮುನ್ಸೂಚನೆಯೇ ತಿಳಿಯುವುದಿಲ್ಲ. ಕಳೆದ ತಿಂಗಳು ಇದೇ ಜಾಗದಲ್ಲಿ ಒಂದು ಆಟೋ ರಿಕ್ಷಾದ ಮೇಲೆ ರೈಲು ಹರಿದು ಇಬ್ಬರು ಮೃತಪಟ್ಟಿದ್ದರು.ಹಿಂದೆ ಒಂದು ಜತೆ ಎತ್ತುಗಳೂ ರೈಲಿಗೆ ಸಿಕ್ಕಿ ಸಾವನ್ನಪ್ಪಿದ್ದವು. ಕೆಲವು ದಿನ ರಸ್ತೆಗೆ ಅಡ್ಡಲಾಗಿ ಒಂದು ರಾಡ್ ಹಾಕಿದ್ದರು. ಈಗ ಮತ್ತೆ ತೆಗೆದಿದ್ದಾರೆ. ಇದರಿಂದ ಇಲ್ಲಿನ ಜನರಿಗೆ ತೊಂದರೆಯಾಗಿದೆ’ ಎನ್ನುತ್ತಾರೆ ತಾಳಕಟ್ಟದ ಟಿ.ಆರ್. ಬಸವರಾಜಪ್ಪ, ಹಾಲೇಶ್, ವಡೇರಹಳ್ಳಿ ರಾಮಚಂದ್ರಪ್ಪ, ಗಂಗಸಮುದ್ರ ಗ್ರಾ.ಪಂ. ಅಧ್ಯಕ್ಷ ರಾಜಪ್ಪ, ಅರಬಗಟ್ಟ ಪರಮೇಶ್ವರಪ್ಪ.ಇಲ್ಲಿ ಹಳಿ ದಾಟುವ ರಸ್ತೆಯೂ ಎತ್ತರವಾಗಿದೆ.ಅವೈಜ್ಞಾನಿಕವಾಗಿ ಹಂಪ್ಸ್ ಹಾಕಲಾಗಿದ್ದು, ದ್ವಿಚಕ್ರವಾಹನಗಳು ಸಂಚರಿಸಲಾಗುತ್ತಿಲ್ಲ. ರಸ್ತೆ ಎತ್ತರ ಇರುವುದರಿಂದ ವಾಹನಗಳು ಹಳಿ ಸಮೀಪ ಹೋಗುತ್ತಿದ್ದಂತೆ ಎಂಜಿನ್ ಆಫ್ ಆಗಿ ನಿಲ್ಲುತ್ತವೆ. ಆಗ ಅಪಘಾತಗಳು ಆಗುವ ಸಂಭವ ಹೆಚ್ಚು. ಆದ್ದರಿಂದ ರೈಲ್ವೆ ಇಲಾಖೆ ಇತ್ತಕಡೆ ಗಮನ ಹರಿಸಿ ಶೀಘ್ರದಲ್ಲೇ ಗೇಟ್ ನಿರ್ಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಶೇ.100ರಷ್ಟು ಫಲಿತಾಂಶ

ಚಿತ್ರದುರ್ಗ: ಅಂತಿಮ ಬಿ.ಎ. 2010-11ನೇ ಸಾಲಿನಲ್ಲಿ ನಡೆದ 5ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಹಿರಿಯೂರು ತಾಲ್ಲೂಕು ಜವಗೊಂಡನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಶೇ.100ರಷ್ಟು ಫಲಿತಾಂಶ ದೊರೆತಿದೆ.

ವಿದ್ಯಾರ್ಥಿನಿ ಪಲ್ಲವಿ ಶೇ. 71ರಷ್ಟು ಅಂಕಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನದಲ್ಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.