ಮಂಗಳವಾರ, ಜೂನ್ 15, 2021
22 °C

ರೈಲ್ವೆ ಬಜೆಟ್: ಮಿಶ್ರ ಪ್ರತಿಕ್ರಿಯೆ-ಅಸಮಾಧಾನವೇ ಹೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಬುಧವಾರ ಮಂಡನೆಯಾಗಿರುವ ಕೇಂದ್ರ ರೈಲ್ವೆ ಬಜೆಟ್ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ಮೂಡಿಸಿದೆ. ಜಾರಿಯಲ್ಲಿರುವ ಹಳೆ ಯೋಜನೆಗಳನ್ನೆ ಮತ್ತೆ ಘೋಷಿಸಲಾಗಿದೆ ಎಂಬುದು ಹಲವರ ಅಭಿಪ್ರಾಯ. ಘೋಷಣೆಗೊಂಡ ಯೋಜನೆಗಳು ಕಾಲಮಿತಿಯಲ್ಲಿ ಶುರುವಾಗಿ ಪೂರ್ಣಗೊಳ್ಳಬೇಕು ಎಂಬುದು ಇದೇ ಸಂದರ್ಭದಲ್ಲಿ ಮೂಡಿಬಂದಿರುವ ಆಗ್ರಹ.ನಿರಾಸೆ ಮೂಡಿಸಿದೆ

ಜಿಲ್ಲೆ ಪಾಲಿಗೆ ರೈಲ್ವೆ ಬಜೆಟ್ ಸಂಪೂರ್ಣ ನಿರಾಸೆಯನ್ನುಂಟು ಮಾಡಿದೆ. ಇದು ಜನರನ್ನು ಯಾಮಾರಿಸುವ ಬಜೆಟ್. ಸಂಸತ್ತಿನಲ್ಲಿ ಕೋಲಾರ ಪ್ರತಿನಿಧಿಸುತ್ತಿರುವ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯಾವುದೇ ಹೊಸ ರೈಲ್ವೆ ಯೋಜನೆ ಮಂಜೂರು ಮಾಡಿಸದೆ ಹಳೆ ಯೋಜನೆಗಳನ್ನೇ ಹೊಸ ರೂಪದಲ್ಲಿ ಜನರ ಮುಂದಿಟ್ಟು ಯಾಮಾರಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ   ಆರ್.ವರ್ತೂರು ಪ್ರಕಾಶ್ ಟೀಕಿಸಿದ್ದಾರೆ.ಕಳೆದ ರೈಲ್ವೆ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ವ್ಯಾಗನ್ ತಯಾರಿಕಾ ಘಟಕ ಮಂಜೂರಾಗಿದೆಯೆಂದು ವ್ಯಾಪಕ ಪ್ರಚಾರ ಗಿಟ್ಟಿಸಿದ್ದ ಕೇಂದ್ರ ರೈಲ್ವೆ ಸಚಿವರು ಈ ಬಾರಿ ಕೋಲಾರಕ್ಕೆ ಕೋಚ್ ಕಾರ್ಖಾನೆ ಮಂಜೂರು ಮಾಡಿಸುವ ಮಾತಾಡಿದ್ದಾರೆ. ಅದೂ ರಾಜ್ಯ ಸರ್ಕಾರ ಸಹಕಾರ ನೀಡಿದರೆ ಮಾತ್ರ ಎಂಬ ಷರತ್ತು ಇಟ್ಟಿರುವುದು ರೈಲ್ವೆ ಸಚಿವರಿಗೆ ಕೋಲಾರ ಜಿಲ್ಲೆಯ ಜನರ ಮೇಲಿರುವ ಪ್ರೀತಿಯನ್ನು ಬಹಿರಂಗಪಡಿಸಿದೆ ಎಂದು ಟೀಕಿಸಿದ್ದಾರೆ.ಹಣ ಮೀಸಲಿಡಿ

94ರಲ್ಲಿ ಆರಂಭವಾದ ಕೋಲಾರ-ಚಿಕ್ಕಬಳ್ಳಾಪುರ ರೈಲ್ವೆ ಗೇಜ್ ಪರಿವರ್ತನೆ ಕಾರ್ಯ ಈಗ ನಡೆಯುತ್ತಿದೆ. ಮೊದಲು ಘೋಷಣೆಯಾದ ಕಾರ್ಯಕ್ರಮಗಳು ಸಮರ್ಪಕ ಅನುದಾನದ ಕೊರತೆಯಿಂದ ನಿಗಿದತ ವೇಳೆಗೆ ಶುರುವಾಗಲಿಲ್ಲ. ಮುಗಿದೂ ಇಲ್ಲ. ಹೀಗಾಗಿ, ಯೋಜನೆಗಳಿಗೆ ಬಜೆಟ್‌ನಲ್ಲಿ ಹಣ ಮೀಸಲಿಡದೆ ಯಾವ ಘೋಷಣೆ ಹೊರಡಿಸಿದರೂ ಪ್ರಯೋಜನವಾಗುವುದಿಲ್ಲ ಎಂಬುದು ಮಾಜಿ ಸಚಿವ ಕೆ.ಶ್ರೀನಿವಾಸಗೌಡರ ಅಭಿಪ್ರಾಯ.ಉತ್ತಮ; ತ್ವರಿತವಾಗಲಿ

ಜಿಲ್ಲೆಗೆ ಕೆ.ಎಚ್.ಮುನಿಯಪ್ಪ ಉತ್ತಮ ಕೊಡುಗೆ ನೀಡಿದ್ದಾರೆ. ಜಿಲ್ಲೆ ಜನರ ಋಣ ತೀರಿಸಲು ಸಚಿವರು ಪ್ರಾಮಾಣಿಕ ಯತ್ನ ನಡೆಸಿದ್ದಾರೆ. ಕೋಚ್  ಕಾರ್ಖಾನೆ ಸ್ಥಾಪನೆ, ಕೋಲಾರ-ವೈಟ್‌ಫೀಲ್ಡ್ ಮಾರ್ಗದಲ್ಲಿ ರೈಲು ಸಂಚಾರ ಸೇರಿದಂತೆ ಹಲವು ಹೊಸ ಮಾರ್ಗಗಳ ಅನುಷ್ಠಾನ ಸ್ವಾಗತಾರ್ಹ ವಿಷಯ. ಆದರೆ ಘೋಷಣೆಗೊಂಡ ಯೋಜನೆ ತ್ವರಿತವಾಗಿ ನಡೆಯಬೇಕಿದೆ. ಆ ಕಡೆಗೆ ಸಚಿವರು ಹೆಚ್ಚು ಗಮನ ಹರಿಸಬೇಕಾಗಿದೆ ಎನ್ನುತ್ತಾರೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಲ್.ಅನಿಲಕುಮಾರ್.ಪ್ರಯೋಜನವಿಲ್ಲ

ಕೋಲಾರದಲ್ಲಿ ಕೋಚ್ ಕಾರ್ಖಾನೆ ನಿರ್ಮಿಸುವ ವಿಷಯ ಸ್ವಾಗತಾರ್ಹ. ಆದರೆ ಅದನ್ನು ಕಳೆದ ವರ್ಷವೇ ಘೋಷಿಸಲಾಗಿತ್ತು. ಹಳೆ ವಿಷಯಗಳನ್ನೆ ಮತ್ತೆ ಮತ್ತೆ ಘೋಷಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಸ್ಥಳೀಯರಿಗೆ ಕೆಲಸ ಸಿಗುವ ಸಾಧ್ಯತೆ ಇರುವುದರಿಂದ ಕಾರ್ಖಾನೆ ಸ್ಥಾಪನೆ ಸ್ವಾಗತಿಸುತ್ತೇವೆ. ಸಾಧ್ಯವಾದಷ್ಟು ಬೇಗ ಕಾರ್ಖಾನೆ ಸ್ಥಾಪನೆಯಾಗುವಲ್ಲಿ ಸಚಿವ ಮುನಿಯಪ್ಪ ಕಾಳಜಿ ವಹಿಸಬೇಕಾಗಿದೆ ಎನ್ನುತ್ತಾರೆ ಸಿಪಿಎಂನ ಪ್ರಮುಖ ಸಂಪಂಗಿ.ಅನುಷ್ಠಾನಗೊಳ್ಳಲಿ

ಕಳೆದ ಬಾರಿ ಘೋಷಣೆಯಾದಂತೆ ಜಿಲ್ಲೆಯಲ್ಲಿ ಕೋಚ್ ನಿರ್ಮಾಣವಾಗಿಲ್ಲ. ಯೋಜನೆ ಅನುಷ್ಠಾನಗೊಂಡರಷ್ಟೆ ಜಿಲ್ಲೆಯ ಮಟ್ಟಿಗೆ ಸಂತೋಷ ಸಾಧ್ಯ. ಯೋಜನೆ ಘೋಷಿಸುವುದು, ನಂತರ ಜಾರಿಗೆ ತರದಿರುವುದು, ಮರು ವರ್ಷ ಮತ್ತೆ ಅದನ್ನೇ ಘೋಷಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಈಗಾಗಲೇ ಘೋಷಿಸಿರುವ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಗಂಭಿರ ಕ್ರಮ ಕೈಗೊಳ್ಳಬೇಕು ಎಂಬುದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಲಕ್ಷ್ಮಯ್ಯ ಅಭಿಪ್ರಾಯ.ರೈಲು ಬೋಗಿ ಘಟಕ ಸ್ಥಾಪನೆಗೆ ಸ್ವಾಗತ

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದ ಸಮೀಪ ಕೇಂದ್ರ ಸರ್ಕಾರ ರೈಲು ಬೋಗಿ ನಿರ್ಮಾಣ ಘಟಕ ಸ್ಥಾಪಿಸಲು ಮಂಜೂರಾತಿ ನೀಡಿರುವುದು ಸ್ವಾಗತಾರ್ಹ ಕ್ರಮ. ಇದಕ್ಕೆ ಕಾರಣರಾದ ರೈಲ್ವೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅಭಿನಂದನಾರ್ಹರು ಎಂದು ಡಾ.ಎಚ್.ಎನ್.ಜಗನ್ನಾಥರೆಡ್ಡಿ ತಿಳಿಸಿದ್ದಾರೆ.ರೈಲ್ವೆ ಬೋಗಿ ನಿರ್ಮಾಣ ಘಟಕಕ್ಕೆ ಅಗತ್ಯವಾದ ಭೂಮಿಯನ್ನು ರಾಜ್ಯ ಸರ್ಕಾರದಿಂದ ಮಂಜೂರು ಮಾಡಿಸಿಕೊಟ್ಟಿರುವ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರೂ ಸಹ ಅಭಿನಂದನಾರ್ಹರು ಎಂದು ತಿಳಿಸಿರುವ ಅವರು, ಈ ಘಟಕದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.