ಶನಿವಾರ, ಮೇ 15, 2021
24 °C

ರೊಳ್ಳಿ ಗ್ರಾಮದಲ್ಲಿ ಮಾದರಿ ಸಾಮೂಹಿಕ ವಿವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಳಗಿ (ಬಾಗಲಕೋಟೆ ಜಿಲ್ಲೆ): ಅದೊಂದು ಅಪರೂಪದ ಮದುವೆ ಸಮಾರಂಭ. ತಾಲ್ಲೂಕಿನ ರೊಳ್ಳಿ ಗ್ರಾಮದ ಶಿವಾನಂದ ನಿಂಗನೂರ ಅವರು ಶುಕ್ರವಾರ ಮಗನ ಮದುವೆ ಜೊತೆಗೆ 45 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.ಎಂ.ಬಿ.ಎ. ಪದವೀಧರ ಮಗನಿಗೆ ಎಂಜಿನಿಯರಿಂಗ್ ಪದವೀಧರೆ ವಧುವನ್ನು ಆರಿಸಿದ ಶಿವಾನಂದ ಮದುವೆ ಯನ್ನು ಅದ್ದೂರಿಯಾಗಿಯೇ ಮಾಡಿದರು. ಮಗನ ಮದುವೆಯೊಂದಿಗೆ ಸಾಮೂಹಿಕ ವಿವಾಹ ಮಾಡಬೇಕೆಂದು ತೀರ್ಮಾನಿಸಿದರು.

 

ತಮ್ಮ ನಿರ್ಧಾರವನ್ನು ಅನುಷ್ಠಾನಗೊಳಿಸಲು ಅವರು ಹಳ್ಳಿ ಹಳ್ಳಿ ತಿರುಗಿ, `ನನ್ನ ಮಗನ ಮದುವೆಯಲ್ಲಿಯೇ ನಿಮ್ಮ ಮಗನಿಗೂ ಅಕ್ಷತೆ ಹಾಕೋಣ, ದೊಡ್ಡ ದೊಡ್ಡ ಸ್ವಾಮೀಜಿಗಳು, ಜನಪ್ರತಿನಿಧಿಗಳು ಬರುತ್ತಾರೆ. ದೊಡ್ಡವರೆಲ್ಲಾ ಬಂದು ಅಕ್ಷತೆ ಹಾಕಿ ಆಶೀರ್ವದಿಸುತ್ತಾರೆ. ಮದುಮಕ್ಕಳನ್ನು ಕರೆದುಕೊಂಡು ಬನ್ನಿ~ ಎಂದು ಜನರನ್ನು ಕೋರಿಕೊಂಡರು.

 

ಶಿವಾನಂದ ಈ ಸಾಮೂಹಿಕ ವಿವಾಹದಲ್ಲಿ 250 ಜೋಡಿಗೆ ಮದುವೆ ಮಾಡಿಸುವ ಉದ್ದೇಶ ಹೊಂದಿದ್ದರು. ಆದರೆ ಬಂದವರು 45 ಜೋಡಿಗಳು ಮಾತ್ರ. ಮಾಂಗಲ್ಯ, ಕಾಲುಂಗುರ, ಸೀರೆ, ಖಣ, ಬಳೆ, ಧೋತರ, ಅಂಗಿ, ಶಲ್ಯ, ಟೊಪ್ಪಿಗೆ, ಬಾಸಿಂಗ, ಹೂವಿನ ಹಾರ ಎಲ್ಲವನ್ನೂ ಮೊದಲೇ ಜೋಡಿಸಿಟ್ಟು, ಯಾವುದೇ ಲೋಪ ಬರದಂತೆ ಮದುಮಕ್ಕಳ ಕೈಗೆ ಕೊಟ್ಟು ಹಸೆ ಮಣೆ ಏರಿಸಲಾಯಿತು.  ಮಠಾಧೀಶರು, ಹಾಲಿ, ಮಾಜಿ ಜನಪ್ರತಿನಿಧಿಗಳು ಬಂದು ಶುಭ ಹಾರೈಸಿದರು. ಮದುವೆಗೆ ಬಂದಿದ್ದ ಎಲ್ಲರಿಗೂ ರೊಟ್ಟಿ, ಚಪಾತಿ, ಕಾಯಿಪಲ್ಯೆ, ಚಟ್ನಿ, ಸಜ್ಜಕ, ಜಿಲೇಬಿ, ಅನ್ನ-ಸಾರು ಉಣಬಡಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.