ಸೋಮವಾರ, ಮೇ 25, 2020
27 °C

ರೌಡಿಗಳ ಚಲನವಲನದ ಮೇಲೆ ತೀವ್ರ ನಿಗಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರೌಡಿ ಪಟ್ಟಿಯಲ್ಲಿದ್ದ ಬಿಬಿಎಂಪಿ ಸದಸ್ಯ ದಿವಾನ್ ಅಲಿ ಕೊಲೆಯ ನಂತರ ರೌಡಿ ಚಟುವಟಿಕೆಗಳ ಮೇಲೆ ನಗರ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ. ನಗರದಲ್ಲಿ ಕುಕೃತ್ಯ ಮಾಡುತ್ತಿರುವ ಪ್ರಮುಖ ರೌಡಿ ತಂಡಗಳ ಚಲನವಲನಗಳ ಮೇಲೆ ಅವರು ಹದ್ದಿನ ಕಣ್ಣಿಟ್ಟಿದ್ದಾರೆ.ನಗರದ ಏಳೂ ಪೊಲೀಸ್ ವಿಭಾಗಗಳೂ ಸೇರಿ ಒಟ್ಟು 2,118 ರೌಡಿಗಳಿದ್ದಾರೆ. ಇವರಲ್ಲಿ 1,332 ಮಂದಿ ಜೈಲಿನಿಂದ ಹೊರಗಿದ್ದಾರೆ ಮತ್ತು ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ರೌಡಿಗಳು ಎಸಗುವ ಅಪರಾಧ ಕೃತ್ಯಗಳನ್ನು ಆಧರಿಸಿ ಅವರನ್ನು ಎ,ಬಿ,ಸಿ ಪಟ್ಟಿಯಲ್ಲಿಡಲಾಗಿದೆ. ವಾಸವಿರುವ ಪ್ರದೇಶದಲ್ಲೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಹಾಗೂ ಕೊಲೆ, ದರೋಡೆ, ಅಪಹರಣ ಕೃತ್ಯಗಳನ್ನು ಎಸಗುವವರನ್ನು ‘ಎ’ ಪಟ್ಟಿಯಲ್ಲಿಡಲಾಗಿದೆ. ಒಟ್ಟು 1,322 ಮಂದಿ ‘ಎ’ ಪಟ್ಟಿಯಲ್ಲಿದ್ದಾರೆ. ಒಂದು ಕಡೆ ನೆಲೆಸಿ ಇನ್ನೊಂದು ಕಡೆ ಅಪರಾಧ ಕೃತ್ಯ ಎಸಗುವವರನ್ನು ‘ಬಿ’ ಪಟ್ಟಿಯಲ್ಲಿಡಲಾಗಿದೆ. ಒಟ್ಟು 521 ಮಂದಿ ಈ ಪಟ್ಟಿಯಲ್ಲಿದ್ದಾರೆ.‘ಎ’ ಪಟ್ಟಿಯಲ್ಲಿರುವ ರೌಡಿಗಳಿಗಿಂತ ಇವರ ಚಟುವಟಿಕೆ ಕಡಿಮೆ ಇರುತ್ತದೆ. ಅಂತೆಯೇ ‘ಸಿ’ ಪಟ್ಟಿಯಲ್ಲಿ 275 ಮಂದಿ ರೌಡಿಗಳಿದ್ದಾರೆ. ಇವರಲ್ಲಿ 277 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೈಕಲ್ ರವಿ, ಸುನಿಲ, ಅರಸಯ್ಯ, ಮಾಹಿಮ್, ರಾಬರಿ ಗಿರಿ, ಆರೀಫ್, ಕವಳ, ಪುಷ್ಟಾ, ರಾಜಾಕುಟ್ಟಿ, ಹೆಬ್ಬೆಟ್ಟು ಮಂಜ, ಮುಲಾಮ, ಪಳನಿ, ಮಲಯಾಳಿ ಪ್ರವೀಣ ಪ್ರಮುಖ ರೌಡಿಗಳಾಗಿದ್ದಾರೆ. ಪ್ರತಿಯೊಬ್ಬ ರೌಡಿಗೂ ತನ್ನದೇಆದ ತಂಡವಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ‘ರೌಡಿಗಳ ಚಟುವಟಿಕೆ ಮೇಲೆ ಸದಾ ನಿಗಾ ವಹಿಸಲಾಗುತ್ತದೆ. ಅವರ ಚಲನವಲನಗಳ ಮೇಲೆ ಸಂಬಂಧಿಸಿದ ಠಾಣೆಯ ಪೊಲೀಸರು ಕಣ್ಣಿಟ್ಟಿರುತ್ತಾರೆ’ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.