ಭಾನುವಾರ, ಮೇ 16, 2021
28 °C

ರೌಡಿಗಳ ಮನೆಗಳ ಮೇಲೆ ಸಿಸಿಬಿ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿವಿಧ ಪೊಲೀಸ್ ಠಾಣೆಗಳ ರೌಡಿ ಪಟ್ಟಿಯಲ್ಲಿರುವ ಕುಖ್ಯಾತ ರೌಡಿಗಳ ಮನೆಗಳ ಮೇಲೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಹಾಗೂ ನಗರ ಪೊಲೀಸರು ಭಾನುವಾರ ಬೆಳಿಗ್ಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು.ನಗರದ ಉತ್ತರ, ದಕ್ಷಿಣ ಹಾಗೂ ಪಶ್ಚಿಮ ವಿಭಾಗದ ಠಾಣೆಗಳ ವ್ಯಾಪ್ತಿಯ 32ಕ್ಕೂ ಹೆಚ್ಚು ರೌಡಿಗಳ ಮನೆಗಳ ಮೇಲೆ ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ದಾಳಿ ನಡೆಸಿದ ಪೊಲೀಸರು ನಾಲ್ಕು ತಾಸಿಗೂ ಹೆಚ್ಚು ಕಾಲ ತಪಾಸಣೆ ನಡೆಸಿದರು.ಯಶವಂತಪುರದಲ್ಲಿರುವ ಜೇಡರಹಳ್ಳಿ ಕೃಷ್ಣ, ರಂಗನಾಥನಾಯ್ಡು, ಸುಬ್ರಹ್ಮಣ್ಯ ನಗರದಲ್ಲಿರುವ ಜಗದೀಶ ಅಲಿಯಾಸ್ ಜಗ್ಗಿ, ಕಾಟನ್‌ಪೇಟೆಯಲ್ಲಿರುವ ಕುಪ್ಪ, ಗೋಪಾಲಯ್ಯ, ಬಸವ, ಬನಶಂಕರಿಯಲ್ಲಿರುವ ಮಾಹಿಮ್, ಲಕ್ಷ್ಮಣ ಮತ್ತಿತರ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ವಾಹನಗಳು ಹಾಗೂ ಅವುಗಳ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಹಲವು ರೌಡಿಗಳ ಮನೆಯಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.`ನ್ಯಾಯಾಲಯದಿಂದ ಜಾಮೀನು ಪಡೆದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಹೊರ ಬಂದಿರುವ ಹಲವು ರೌಡಿಗಳು ಪುನಃ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ರೌಡಿಗಳು ಪುನಃ ಅಪರಾಧ ಕೃತ್ಯಗಳನ್ನು ಎಸಗುವುದನ್ನು ತಪ್ಪಿಸಲು ಹಾಗೂ ಅವರನ್ನು ನಿಯಂತ್ರಣದಲ್ಲಿಡುವ ಉದ್ದೇಶದಿಂದ ಅವರ ಮನೆಗಳ ಮೇಲೆ ಈ ರೀತಿ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು~ ಎಂದು ಅಧಿಕಾರಿಗಳು ಹೇಳಿದ್ದಾರೆ.`ದಾಳಿ ನಡೆಸಿದ ಸಂದರ್ಭದಲ್ಲಿ ಬಹುತೇಕ ರೌಡಿಗಳು ಮನೆಯಲ್ಲಿ ಇರಲಿಲ್ಲ. ರೌಡಿ ಕುಪ್ಪನ ಮನೆಯಲ್ಲಿ ಮಾರಕಾಸ್ತ್ರಗಳು ಸಿಕ್ಕಿದ್ದು, ಆತನನ್ನು ಬಂಧಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ~ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಬಂಧನ

ಪ್ರತಿಷ್ಠಿತ ಬಟ್ಟೆ ಕಂಪೆನಿಗಳ ಹೆಸರಿನಲ್ಲಿ ನಕಲಿ ಪ್ಯಾಂಟ್ ಮತ್ತು ಶರ್ಟ್‌ಗಳನ್ನು ಮಾರಾಟ ಮಾಡಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆರೋಪದ ಮೇಲೆ ಶೇಷಾದ್ರಿಪುರದ ರಾಮ್ (20) ಮತ್ತು ರಾಮಚಂದ್ರಪುರದ ಕೃಷ್ಣ (20) ಎಂಬುವರನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಶ್ರೀರಾಮಪುರ ಬಳಿಯ ರಾಮಚಂದ್ರಪುರದಲ್ಲಿ ಬಟ್ಟೆ ಅಂಗಡಿಗಳನ್ನು ಇಟ್ಟುಕೊಂಡಿದ್ದ ಆರೋಪಿಗಳು ಪೀಟರ್ ಇಂಗ್ಲೆಂಡ್ ಮತ್ತು ಲೂಯಿಸ್ ಫಿಲಿಪ್ಪೆ ಕಂಪೆನಿಗಳ ಹೆಸರಿನಲ್ಲಿ ನಕಲಿ ಪ್ಯಾಂಟ್ ಹಾಗೂ ಶರ್ಟ್‌ಗಳನ್ನು ಮಾರಾಟ ಮಾಡುತ್ತಿದ್ದರು.

 

ಈ ಬಗ್ಗೆ ಮಾಹಿತಿ ಕಲೆ ಹಾಕಿ ಅಂಗಡಿಗಳ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಗಳಿಂದ 4.70 ಲಕ್ಷ ರೂ ಮೌಲ್ಯದ ಬಟ್ಟೆಗಳನ್ನು ವಶಪಡಿಸಿಕೊಂಡು ಶ್ರೀರಾಮಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.