ಶನಿವಾರ, ಜೂನ್ 19, 2021
27 °C
ಅವಳಿನಗರ: ಚುನಾವಣೆಗೆ ಪೊಲೀಸರ ಸಿದ್ಧತೆ

ರೌಡಿಪಟ್ಟಿಯಲ್ಲಿ 1252 ಮಂದಿ, ಶೀಘ್ರ ಪರೇಡ್‌

ಪ್ರಜಾವಾಣಿ ವಾರ್ತೆ/ ವೆಂಕಟೇಶ್ ಜಿ.ಎಚ್ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾನೂನು–ಸುವ್ಯವಸ್ಥೆ ಪಾಲನೆಗೆ ಮುಂದಾ­ಗಿರುವ ಪೊಲೀಸ್‌ ಇಲಾಖೆ, ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ 1,252 ಮಂದಿ ರೌಡಿಗಳನ್ನು ಗುರುತಿಸಿ ಅವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಇಲಾಖೆ ಸಿದ್ಧಪಡಿಸಿದ ಪಟ್ಟಿಯಲ್ಲಿರುವ ರೌಡಿಗಳಲ್ಲಿ ಹೆಚ್ಚಿನವರು ಹುಬ್ಬಳ್ಳಿಯವರಾಗಿದ್ದು, ಇಲ್ಲಿನ ಉಪನಗರ , ಬೆಂಡಿಗೇರಿ, ಘಂಟಿಕೇರಿ, ಕಮರಿಪೇಟೆ ಹಾಗೂ ನಗರ ಠಾಣೆಯ ವ್ಯಾಪ್ತಿಯಲ್ಲಿ ನೆಲೆಸಿದ್ದಾರೆ.ಮುಚ್ಚಳಿಕೆ ಪತ್ರ: ರೌಡಿ ಪಟ್ಟಿಯಲ್ಲಿರುವವರಲ್ಲಿ 800 ಮಂದಿಯನ್ನು ಪ್ರತಿಬಂಧಕ ಕಾಯ್ದೆ (ಸಿಆರ್‌ಪಿಸಿ 107) ಅಡಿ  ಈಗಾಗಲೇ ಆಯಾ ಪೊಲೀಸ್‌ ಠಾಣೆಗಳಿಗೆ ಕರೆಸಿ ಬಾಂಡ್ ಬರೆಸಿಕೊಳ್ಳಲಾಗಿದೆ. ‘ಮುಂದಿನ ಒಂದು ವರ್ಷದ ಅವಧಿಯಲ್ಲಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅವರೆಲ್ಲಾ ಬರೆದುಕೊಟ್ಟಿದ್ದಾರೆ. ಉಳಿದವರನ್ನು ಕರೆದು ಲಿಖಿತ ಒಪ್ಪಿಗೆ ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಬಾಂಡ್‌ ಬರೆದುಕೊಟ್ಟ ನಂತರವೂ ಹಳೆಯ ಕೃತ್ಯ ಮುಂದುವರೆಸಿದಲ್ಲಿ ಗೂಂಡಾ ಕಾಯ್ದೆಯಡಿ ಬಂಧಿಸಿ ಅವರನ್ನು ಗಡಿಪಾರು ಮಾಡುವುದಾಗಿ’ ಪೊಲೀಸ್‌ ಆಯುಕ್ತ ರವೀಂದ್ರ ಪ್ರಸಾದ್ ಹೇಳುತ್ತಾರೆ.ಗೂಂಡಾ ಕಾಯ್ದೆ ಬಳಕೆ: ‘ಈಗಾಗಲೇ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ತಲಾ ಒಬ್ಬರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಬಳ್ಳಾರಿ ಹಾಗೂ ಗುಲ್ಬರ್ಗ ಜೈಲಿಗೆ ಕಳುಹಿಸಲಾಗಿದೆ. ಅವರ ಬಂಧನದ ಹಿಂದಿನ ಕಾರಣದ ಬಗ್ಗೆ ಹೈಕೋರ್ಟ್‌ಗೆ ವರದಿ ಸಲ್ಲಿಸಿ ಅನುಮೋದನೆ ಪಡೆಯಲಾಗಿದೆ. ಶೀಘ್ರ ಇನ್ನೂ ಐವರನ್ನು ಬಂಧಿಸಲು ಸಿದ್ಧತೆ ನಡೆದಿದೆ’ ಎಂದು ಪ್ರಸಾದ್ ತಿಳಿಸಿದರು.ಬಂದೂಕುಗಳು ವಶಕ್ಕೆ: ಅವಳಿ ನಗರದಲ್ಲಿ 836 ಮಂದಿ ಬಂದೂಕು ಹೊಂದಲು ಪರವಾನಗಿ ಪಡೆದಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ 600 ಮಂದಿ ಇಲಾಖೆಯ ವಶಕ್ಕೆ ಬಂದೂಕುಗಳನ್ನು ನೀಡಿದ್ದಾರೆ. ಬ್ಯಾಂಕ್‌ಗಳು ಹಾಗೂ ಸಾರ್ವಜನಿಕ ಕ್ಷೇತ್ರದ ಹಣಕಾಸು ಸಂಸ್ಥೆಗಳ ರಕ್ಷಣೆಗೆ ಬಳಸುವ ಆಯುಧಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.ವಿಶೇಷ ನಿಗಾ ತಂಡ: ಪೊಲೀಸ್‌ ಇಲಾಖೆ­ಯಿಂದ ಅವಳಿ ನಗರದ 13 ಕಡೆ ಚೆಕ್‌ಪೋಸ್ಟ್‌­ಗಳನ್ನು ಆರಂಭಿಸಲಾಗಿದೆ. 18 ವಿಡಿಯೋ ತಂಡ ರಚಿಸಲಾಗಿದ್ದು, ಅನುಮಾನಾಸ್ಪದ ವಾಹನಗಳ ತಪಾಸಣೆ ವೇಳೆ ಅದನ್ನು ಚಿತ್ರೀಕರಿಸಲು ವಿಡಿಯೋ ತಂಡಗಳು ನೆರವಾಗಲಿವೆ. ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಲಾದ 130 ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.ಶೀಘ್ರ ರೌಡಿಗಳ ಪರೇಡ್

ಚುನಾವಣೆ ಕಾರ್ಯ ನಿಮಿತ್ತ ಕೇಂದ್ರದಿಂದ ನಿಯೋಜನೆಗೊಂಡಿರುವ ಪೊಲೀಸ್‌ ವೀಕ್ಷಕರು ಇನ್ನೆರಡು ದಿನಗಳಲ್ಲಿ ನಗರಕ್ಕೆ ಬರಲಿದ್ದಾರೆ. ಅವರೊಂದಿಗೆ ಚರ್ಚಿಸಿ ಅವಳಿ ನಗರದಲ್ಲಿ ರೌಡಿಗಳ ಪಟ್ಟಿಯಲ್ಲಿರುವವರನ್ನು ಕರೆಸಿ ಪರೇಡ್‌ ನಡೆಸಲಾಗುವುದು. ಹೋಳಿ ಹಬ್ಬ ಮುಗಿದ ನಂತರ ಹುಬ್ಬಳ್ಳಿಯ ಸಿಎಆರ್‌ ಮೈದಾನದಲ್ಲಿ ಪರೇಡ್ ಆಯೋಜಿಸಲಾಗುವುದು ಎಂದು ರವೀಂದ್ರಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.ಎಸ್‌ಎಪಿ ತಂಡ ಇಂದು

ಚುನಾವಣೆ ಭದ್ರತೆಗಾಗಿ ಕೇಂದ್ರದಿಂದ ವಿಶೇಷ ಸಶಸ್ತ್ರ ಪೊಲೀಸ್‌ ಪಡೆಯ (ಎಸ್‌ಎಪಿ) ಮೊದಲ ಕಂಪೆನಿ ಇದೇ 22ರಂದು ಧಾರವಾಡಕ್ಕೆ ಬರಲಿದೆ. ಮೂರು ಪ್ಲಟೂನ್‌ಗಳ ಎಸ್‌ಎಪಿಯ ಯೋಧರು ಅವಳಿ ನಗರದಲ್ಲಿ ಭದ್ರತೆಗೆ ನಿಯೋಜನೆ­ಗೊಳ್ಳಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.