ಮಂಗಳವಾರ, ಮೇ 18, 2021
30 °C
ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್: ಬೌಲರ್‌ಗಳ ಸಮರ್ಥ ದಾಳಿ; ಮತ್ತೆ ಮಿಂಚಿದ ಧವನ್

ಲಂಕಾ ಪರಾಭವ; ಫೈನಲ್‌ಗೆ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಡಿಫ್: ಶಿಸ್ತಿನ ಬೌಲಿಂಗ್ ಹಾಗೂ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಶ್ರೀಲಂಕಾ ತಂಡವನ್ನು ಬಗ್ಗುಬಡಿದ ಭಾರತ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿತು.ಸೋಫಿಯಾ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ಬಳಗಕ್ಕೆ ಒಲಿದದ್ದು 8 ವಿಕೆಟ್‌ಗಳ ಭರ್ಜರಿ ಜಯ. ಸಂಘಟಿತ ಹೋರಾಟ ತೋರಿದ ಭಾರತ ಎದುರಾಳಿ ತಂಡವನ್ನು ಪಂದ್ಯದ ಎಲ್ಲ ವಿಭಾಗಗಳಲ್ಲೂ ಹಿಮ್ಮೆಟ್ಟಿಸಿ ಅಭಿಮಾನಿಗಳ ಮನಗೆದ್ದಿತು.ಮೊದಲು ಬ್ಯಾಟ್ ಮಾಡಿದ ಲಂಕಾ ತಂಡವನ್ನು 181 ರನ್‌ಗಳಿಗೆ ನಿಯಂತ್ರಿಸಿದ ದೋನಿ ಬಳಗ, 35 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 182 ರನ್ ಗಳಿಸಿ ಗೆಲುವಿನ ನಗು ಬೀರಿತು. ಲಂಕಾ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದ ಭುವನೇಶ್ವರ್ ಕುಮಾರ್ (18ಕ್ಕೆ 1), ಇಶಾಂತ್ ಶರ್ಮ (33ಕ್ಕೆ 3), ಆರ್. ಅಶ್ವಿನ್ (48ಕ್ಕೆ 3) ಹಾಗೂ ಬ್ಯಾಟಿಂಗ್‌ನಲ್ಲಿ ಮಿಂಚಿದ ಶಿಖರ್ ಧವನ್ (68, 92 ಎಸೆತ, 6 ಬೌಂ, 1 ಸಿಕ್ಸರ್) ಮತ್ತು ವಿರಾಟ್ ಕೊಹ್ಲಿ (ಅಜೇಯ 58, 64 ಎಸೆತ, 4 ಬೌಂ, 1 ಸಿಕ್ಸರ್) ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಬೌಲರ್‌ಗಳ ಮೆರೆದಾಟ: ಅತಿಮಹತ್ವದ ಟಾಸ್ ಗೆದ್ದ ದೋನಿ ಎರಡು ಬಾರಿ ಯೋಚಿಸದೆ ಫೀಲ್ಡಿಂಗ್ ಆಯ್ದುಕೊಂಡರು. ಬೆಳಿಗ್ಗೆ ಮಳೆ ಸುರಿದಿದ್ದ ಕಾರಣ ಔಟ್‌ಫೀಲ್ಡ್ ಒದ್ದೆಯಾಗಿತ್ತು. ಇದರಿಂದ ಪಂದ್ಯ ಅರ್ಧಗಂಟೆ ತಡವಾಗಿ ಆರಂಭವಾಯಿತು.ಮೋಡ ಕವಿದ ವಾತಾವರಣವಿದ್ದ ಕಾರಣ ಭಾರತದ ವೇಗಿಗಳು ಪರಿಸ್ಥಿತಿಯ ಲಾಭವನ್ನು ಚೆನ್ನಾಗಿಯೇ ಬಳಸಿಕೊಂಡರು. ಭುವನೇಶ್ವರ್ ಮತ್ತು ಉಮೇಶ್ ಅವರ ಮೊದಲ ಸ್ಪೆಲ್ ಅತ್ಯುತ್ತಮವಾಗಿತ್ತು. ಸತತ ಒಂಬತ್ತು ಓವರ್ ಎಸೆದ ಭುವನೇಶ್ವರ್ ಆರಂಭದಲ್ಲೇ ಲಂಕಾ ಮೇಲೆ ಒತ್ತಡ ಹೇರಿದರು.ಕುಸಾಲ್ ಪೆರೇರಾ (4) ವಿಕೆಟ್ ಪಡೆದ ಭುವನೇಶ್ವರ್ ಲಂಕಾಕ್ಕೆ ಮೊದಲ ಆಘಾತ ನೀಡಿದರು. ತಂಡದ ಮೊತ್ತ 17 ಆಗಿದ್ದಾಗ ತಿಲಕರತ್ನೆ ದಿಲ್ಶಾನ್ ಗಾಯಗೊಂಡು ಮರಳಿದರು. ಎರಡು ಬೌಂಡರಿ ಸಿಡಿಸಿ ಉತ್ತಮ ಆಟದ ಸೂಚನೆ ನೀಡಿದ್ದ ದಿಲ್ಶಾನ್ ಪೆವಿಲಿಯನ್‌ಗೆ ವಾಪಾಸಾದದ್ದು ತಂಡಕ್ಕೆ ಭಾರಿ ಹಿನ್ನಡೆ ಉಂಟುಮಾಡಿತು. ಏಳನೇ ವಿಕೆಟ್ ಬಿದ್ದ ಬಳಿಕ ದಿಲ್ಶಾನ್ ಕ್ರೀಸ್‌ಗಿಳಿದರಾದರೂ, ಇದರಿಂದ ತಂಡಕ್ಕೆ ಹೆಚ್ಚಿನ ಪ್ರಯೋಜನ ಲಭಿಸಲಿಲ್ಲ.ಮೊದಲ ಬದಲಾವಣೆ ರೂಪದಲ್ಲಿ ದಾಳಿಗಿಳಿದ ಇಶಾಂತ್ ಎದುರಾಳಿ ತಂಡಕ್ಕೆ ಅವಳಿ ಆಘಾತ ನೀಡಿದರು. ಅವರು ಕುಮಾರ ಸಂಗಕ್ಕಾರ (17) ಮತ್ತು ಲಾಹಿರು ತಿರಿಮನ್ನೆ (7) ವಿಕೆಟ್ ಪಡೆದರು. ಇಬ್ಬರೂ ಸುರೇಶ್ ರೈನಾಗೆ ಕ್ಯಾಚಿತ್ತು ನಿರ್ಗಮಿಸಿದರು. 44 ಎಸೆತಗಳನ್ನು ಎದುರಿಸಿದ ಸಂಗಕ್ಕಾರ ಕ್ರೀಸ್‌ನಲ್ಲಿದ್ದಷ್ಟು ಹೊತ್ತು ತಡಕಾಡಿದ್ದು ಮಾತ್ರ. ಮಾಹೇಲ ಜಯವರ್ಧನೆ (38, 63 ಎಸೆತ, 3 ಬೌಂಡರಿ) ಮತ್ತು ಏಂಜೆಲೊ ಮ್ಯಾಥ್ಯೂಸ್ (51, 89 ಎಸೆತ) ನಾಲ್ಕನೇ ವಿಕೆಟ್‌ಗೆ 78 ರನ್ ಸೇರಿಸಿದ್ದು ಲಂಕಾ ಪರ ಮೂಡಿಬಂದ ಅತ್ಯುತ್ತಮ ಜೊತೆಯಾಟ. ಅದರೆ ಇದಕ್ಕಾಗಿ 113 ಎಸೆತಗಳು ಬೇಕಾಗಿ ಬಂದವು.ಜಡೇಜ ಸೊಗಸಾದ ಎಸೆತದ ಮೂಲಕ ಜಯವರ್ಧನೆ ಅವರನ್ನು `ಕ್ಲೀನ್‌ಬೌಲ್ಡ್' ಮಾಡಿ ಈ ಜೊತೆಯಾಟ ಮುರಿದರು. ಆ ಬಳಿಕ ಲಂಕಾ ಚೇತರಿಸಿಕೊಳ್ಳಲೇ ಇಲ್ಲ. ಜಡೇಜ (33ಕ್ಕೆ 1) ಮತ್ತು ಅಶ್ವಿನ್ ವೈವಿಧ್ಯಮಯ ಎಸೆತಗಳಿಂದ ಎದುರಾಳಿ ರನ್ ವೇಗಕ್ಕೆ ಕಡಿವಾಣ ತೊಡಿಸಿದರು.ನಾಯಕ ದೋನಿ ನಾಲ್ಕು ಓವರ್ ಬೌಲ್ ಮಾಡುವ ಮೂಲಕ ಅಚ್ಚರಿ ಉಂಟುಮಾಡಿದರು. ಅವರು 17 ರನ್ ಬಿಟ್ಟುಕೊಟ್ಟರು. ಈ ಅವಧಿಯಲ್ಲಿ ವಿಕೆಟ್ ಕೀಪರ್‌ನ ಜವಾಬ್ದಾರಿ ನಿರ್ವಹಿಸಿದ್ದು ದಿನೇಶ್ ಕಾರ್ತಿಕ್. 

ಉತ್ತಮ ಆರಂಭ: ಸಾಧಾರಣ ಗುರಿ ಬೆನ್ನಟ್ಟಿದ ಭಾರತಕ್ಕೆ ಶಿಖರ್ ಧವನ್ ಮತ್ತು ರೋಹಿತ್ ಶರ್ಮ (33, 50 ಎಸೆತ, 4 ಬೌಂ) ಭದ್ರ ಬುನಾದಿ ಹಾಕಿಕೊಟ್ಟರು. ಮೊದಲ ವಿಕೆಟ್‌ಗೆ ಇವರು 17 ಓವರ್‌ಗಳಲ್ಲಿ 77 ರನ್ ಸೇರಿಸಿದರು. ತಾಳ್ಮೆಯಿಂದ ಆಡುತ್ತಿದ್ದ ರೋಹಿತ್, ಏಂಜೆಲೊ ಮ್ಯಾಥ್ಯೂಸ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದರು. ಆದರೆ ಚೆಂಡಿನ ಗತಿಯನ್ನು ಅಂದಾಜಿಸಲು ವಿಫಲವಾದ ಕಾರಣ `ಕ್ಲೀನ್‌ಬೌಲ್ಡ್' ಆದರು.ಕೊಹ್ಲಿ ಮತ್ತು ಧವನ್ ಎರಡನೇ ವಿಕೆಟ್‌ಗೆ 65 ರನ್ ಸೇರಿಸಿ ಭಾರತದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಬ್ಯಾಟಿಂಗ್ ಕಷ್ಟಕರವಾಗಿದ್ದ ಪಿಚ್‌ನಲ್ಲೂ ಧವನ್ ಛಲದ ಆಟ ತೋರಿದರು. ಲೀಗ್ ಹಂತದ ಮೂರು ಪಂದ್ಯಗಳಲ್ಲಿ ಕ್ರಮವಾಗಿ 114, ಅಜೇಯ 102 ಮತ್ತು 48 ರನ್ ಗಳಿಸಿದ್ದ ಅವರು ಮತ್ತೊಮ್ಮೆ ಅಮೋಘ ಆಟದ ಮೂಲಕ ಅಭಿಮಾನಿಗಳ ಹೃದಯ ಗೆದ್ದರು.ಧವನ್ ಔಟಾದಾಗ ಗೆಲುವಿಗೆ 40 ರನ್‌ಗಳು ಬೇಕಿದ್ದವು. ಸುರೇಶ್ ರೈನಾ (ಅಜೇಯ 7) ಅವರನ್ನು ಜೊತೆಗೂಡಿದ ಕೊಹ್ಲಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಬರ್ಮಿಂಗ್‌ಹ್ಯಾಂನಲ್ಲಿ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ದೋನಿ ಬಳಗ ಆತಿಥೇಯ ಇಂಗ್ಲೆಂಡ್‌ನ ಸವಾಲನ್ನು ಎದುರಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.