ಮಂಗಳವಾರ, ಜೂನ್ 22, 2021
22 °C

ಲಂಕಾ ವಿರುದ್ಧದ ನಿಲುವಳಿ: ರಾಜ್ಯಸಭೆಯಲ್ಲಿ ಗದ್ದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ, (ಪಿಟಿಐ): ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗದ ಮುಂದಿರುವ ಶ್ರೀಲಂಕಾದ ವಿರುದ್ಧದ ಗೊತ್ತುವಳಿ ಬಗೆಗಿನ ಕೇಂದ್ರದ ನಿಲುವಿನ ಕುರಿತು ಡಿಎಂಕೆ, ಎಐಎಡಿಎಂಕೆ ಪಕ್ಷಗಳು ಎಡ ಪಕ್ಷಗಳ ಬೆಂಬಲದಿಂದ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದಾಗ ಕೋಲಾಹಲ ಉಂಟಾಗಿ ರಾಜ್ಯ ಸಭೆಯ ಕಲಾಪವನ್ನು  ಮಧ್ಯಾಹ್ನದವರೆಗೆ ಮುಂದೂಡಲಾಯಿತು.

ಮಂಗಳವಾರ ಬೆಳಿಗ್ಗೆ  ಸದನದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಶ್ರೀಲಂಕಾದಲ್ಲಿ ನಡೆದ ಜನಾಂಗೀಯ ಅಂತಃಕಲಹದಲ್ಲಿ ಅಲ್ಲಿನ ಸರ್ಕಾರವು ಅಲ್ಲಿನ ತಮಿಳರ ಮೇಲೆ ನಡೆಸಿದ ದೌರ್ಜನ್ಯಗಳನ್ನು ಖಂಡಿಸಿ ಅಮೆರಿಕ, ಫ್ರಾನ್ಸ್ ಮತ್ತು ನಾರ್ವೆ ರಾಷ್ಟ್ರಗಳು ವಿಶ್ವ ಮಾನವ ಹಕ್ಕು ಆಯೋಗದ (ಯುಎನ್ಎಚ್ ಆರ್ ಸಿ)ದಲ್ಲಿ ಮಂಡಿಸಿರುವ ಗೊತ್ತುವಳಿಯನ್ನು ಕೇಂದ್ರ ಸರ್ಕಾರ ಬೆಂಬಲಿಸಬೇಕೆಂದು ಆಗ್ರಹಿಸಿ ಡಿಎಂಕೆ ಸದಸ್ಯರು ಬ್ಯಾನರ್ ಗಳನ್ನು ಪ್ರದರ್ಶಿಸಿದರು.

ಡಿಎಂಕೆಯನ್ನು ವಿರೋಧಿಸುವ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಸದಸ್ಯರೂ ಡಿಎಂಕೆ ಪಕ್ಷದ ಸದಸ್ಯರ ಬೇಡಿಕೆಗೆ ತಮ್ಮ ದನಿ ಕೂಡಿಸಿದರು. ಅವರೊಂದಿಗೆ ಸೇರಿಕೊಂಡ ಎಡ ಪಕ್ಷಗಳು ಯುಎನ್ಎಚ್ಆರ್ ಸಿಯಲ್ಲಿ ಶ್ರೀಲಂಕಾದ ವಿರುದ್ಧ ಮಂಡಿಸಿರುವ ಗೊತ್ತುವಳಿಯ ಕುರಿತು ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದವು.

ಸಭಾಪತಿ ಹಮೀದ್ ಅನ್ಸಾರಿ ಅವರು, ಅವರ ಆಗ್ರಹಕ್ಕೆ ಮಣಿಯದೇ ಪ್ರತಿಪಕ್ಷದ ನಾಯಕ ಅರುಣ್ ಜೈಟ್ಲಿ ಅವರು ಮಾತನಾಡಲು ಕೊರಿದ್ದಾರೆ ಎಂದಾಗ, ಅರುಣ್ ಜೈಟ್ಲಿ ಅವರು ಈ ವಿಷಯದ ಚರ್ಚೆಯ ನಂತರ ಮಾತನಾಡುವೆ ಎಂದರು. ನಂತರ ಶ್ರೀಲಂಕಾ ತಮಿಳರ ಸಮಸ್ಯೆಗಳ ಕುರಿತು ಚರ್ಚೆ ಆರಂಭವಾಯಿತು.

ಸಂಸದೀಯ ವ್ಯವಹಾರ ಖಾತೆ ಸಚಿವ ಬಿ.ಕೆ.ಬನ್ಸಾಲ್ ಅವರು, ಶ್ರೀಲಂಕಾದ ತಮಿಳರ ಪುನರ್ವಸತಿಯ ಬಗ್ಗೆ ಭಾರತ ಕೈಗೊಂಡ ಕ್ರಮಗಳನ್ನು ವಿವರಿಸಿ, ಗೊತ್ತುವಳಿ ಕುರಿತು ತಮಗೆ ಮಾಹಿತಿ ಇಲ್ಲ, ವಿದೇಶಾಂಗ ಖಾತೆ ಸಚಿವ ಎಸ್.ಎಂ.ಕೃಷ್ಣ ಅವರನ್ನು ಸಂಪರ್ಕಿಸಿ ಸರ್ಕಾರದ ನಿಲುವಿನ ಕುರಿತು ಹೇಳಿಕೆ ನೀಡುವುದಾಗಿ ತಿಳಿಸಿದರು. 

ಅದಕ್ಕೆ ಸಮಾಧಾನಗೊಳ್ಳದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಸದಸ್ಯರು  ಗದ್ದಲ ಆರಂಭಿಸಿದಾಗ, ನಿಗದಿತ ಪಟ್ಟಿಯಂತೆ ಕಲಾಪ ನಡೆಸಲಾಗದೇ ಸಭಾಪತಿ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದರು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.