ಗುರುವಾರ , ಏಪ್ರಿಲ್ 15, 2021
28 °C

ಲಂಡನ್ ತಲುಪಿದ ಕ್ರೀಡಾ ಜ್ಯೋತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಎಎಫ್‌ಪಿ): ಸುದೀರ್ಘ ಪಯಣದ ನಂತರ ಒಲಿಂಪಿಕ್ ಕ್ರೀಡಾ ಜ್ಯೋತಿಯು ಶುಕ್ರವಾರ ರಾತ್ರಿ ಲಂಡನ್ ತಲುಪಿತು.ಕೂಟದ ಉದ್ಘಾಟನೆಗೆ ಒಂದು ವಾರ ಬಾಕಿ ಇರುವಂತೆ ಜ್ಯೋತಿಯನ್ನು ಭಾರಿ ಭದ್ರತೆಯ ನಡುವೆ ಆತಿಥೇಯ ನಗರಕ್ಕೆ ಸ್ವಾಗತಿಸಲಾಯಿತು. ರಾಯಲ್ ಸೇನೆಯ ಯೋಧ ಮಾರ್ಟಿನ್ ವಿಲಿಯಮ್ಸ  ಲಾಟೀನನ್ನು ಸೊಂಟಕ್ಕೆ ಕಟ್ಟಿಕೊಂಡು `ಸೀ ಕಿಂಗ್~ ಹೆಲಿಕಾಪ್ಟರ್‌ನಿಂದ ರ‌್ಯಾಪಲಿಂಗ್ ಮಾಡಿಕೊಂಡು ಕೆಳಗಿಳಿದಾಗ ಭಾರಿ ಸಂಭ್ರಮ. ಹಾಲಿವುಡ್ ಆ್ಯಕ್ಷನ್ ಸಿನಿಮಾದ ದೃಶ್ಯದಂತಿತ್ತು ಆ ಕ್ಷಣ.ಆಗ ಲಂಡನ್ ಟವರ್‌ನಲ್ಲಿನ ಗಡಿಯಾರದಲ್ಲಿ ಸಾಂಕೇತಿಕವಾಗಿ ರಾತ್ರಿ 20:12 ಎಂದು ತೋರಿಸಲಾಗಿತ್ತು. ಸರಿಯಾಗಿ ಏಳು ದಿನ ಬಾಕಿ ಎಂದು ಈ ಮೂಲಕ ಸಾರಲಾಯಿತು.ಹೆಲಿಕಾಪ್ಟರ್‌ನಿಂದ ಹಗ್ಗ ಹಿಡಿದು ಜಾರಿದ 23 ವರ್ಷ ವಯಸ್ಸಿನ ಯೋಧ  ವಿಲಿಯಮ್ಸ 2008ರ ಆಫ್ಘಾನಿಸ್ತಾನ ಯುದ್ಧದಲ್ಲಿ ಗಾಯಗೊಂಡಿದ್ದ. ಈಗ ಮತ್ತೆ ಚೇತರಿಸಿಕೊಂಡಿದ್ದಾರೆ. ಅವರು ಜ್ಯೋತಿಯನ್ನು ಇಂಗ್ಲೆಂಡ್‌ನ ಖ್ಯಾತ ಅಥ್ಲೀಟ್ ಕೆಲ್ಲಿ ಹೋಮ್ಸ ಅವರಿಗೆ ನೀಡಿದರು. 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 800 ಮೀ. ಹಾಗೂ 1,500 ಮೀ. ಓಟದಲ್ಲಿ ಕೆಲ್ಲಿ ಸ್ವರ್ಣ ಪದಕ ಗೆದ್ದಿದ್ದರು.ಹೋಮ್ಸ ಅವರು ಲಾಟೀನ್‌ನಿಂದ ಜ್ಯೋತಿ ಹೊತ್ತಿಸಿಕೊಂಡರು. ಆನಂತರ ಮತ್ತೆ ಲಾಟೀನನ್ನು ಟವರ್ ಆಫ್ ಲಂಡನ್‌ನಲ್ಲಿ ಭದ್ರವಾಗಿ ಇಡಲಾಯಿತು. 11ನೇ ಶತಮಾನದ ಈ ಕೋಟೆಯಲ್ಲಿಯೇ ಇಂಗ್ಲೆಂಡ್ ರಾಣಿ ಎಲಿಜಬೆತ್-2 ಅವರ ಆಭರಣಗಳನ್ನು ಇಡಲಾಗುತ್ತದೆ. ಇಲ್ಲಿಯೇ ಒಲಿಂಪಿಕ್ ಕೂಟದ ಪದಕಗಳನ್ನು ಸಂಗ್ರಹಿಸಿ ಇಡಲಾಗಿದೆ.ಜುಲೈ 27ರಂದು ಉದ್ಘಾಟನಾ ಸಮಾರಂಭ ನಡೆಯುವ ಮುಖ್ಯ ಕ್ರೀಡಾಂಗಣ ಪ್ರವೇಶಿಸುವ ಮುನ್ನ ಕ್ರೀಡಾ ಜ್ಯೋತಿ ಆರು ದಿನಗಳ ಕಾಲ ಲಂಡನ್ ಸುತ್ತಲಿದೆ. ಇದನ್ನು ಇಲ್ಲಿನ ಕ್ರೀಡಾಪಟುಗಳು ವಿವಿಧ ಕ್ಷೇತ್ರದ ಸಾಧಕರು ಹಿಡಿಯುವ ಅವಕಾಶ ಪಡೆಯಲಿದ್ದಾರೆ. ಈ ಮಹಾನಗರದಲ್ಲಿನ ಐತಿಹಾಸಿಕ ಕೇಂದ್ರಗಳ ಮೂಲಕ ರಿಲೇ ಸಾಗಲಿದೆ.ಜ್ಯೋತಿ ಹಿಡಿದ 101 ವರ್ಷ ವಯಸ್ಸಿನ ಫೌಜಾ ಸಿಂಗ್

ಲಂಡನ್ (ಪಿಟಿಐ): ಪಂಜಾಬ್ ಮೂಲದ ಲಂಡನ್ ನಿವಾಸಿ 101 ವರ್ಷ ವಯಸ್ಸಿನ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ಅವರು ಒಲಿಂಪಿಕ್ ಕ್ರೀಡಾ ಜ್ಯೋತಿ ಹಿಡಿಯುವ ಅವಕಾಶ ಪಡೆದರು.ಫೌಜಾ ಅವರು ಜನಿಸಿದ್ದು 1911ರಲ್ಲಿ. ಆದರೆ ತಮ್ಮ 86ನೇ ವಯಸ್ಸಿನಲ್ಲಿ ಮ್ಯಾರಥಾನ್ ಓಟದಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದರು. ಈಗಲೂ ಅವರು ವಿವಿಧ ಮ್ಯಾರಥಾನ್‌ಗಳಲ್ಲಿ ಓಡುವ ಹವ್ಯಾಸ ಮುಂದುವರಿಸಿಕೊಂಡು ಬಂದಿದ್ದಾರೆ.ಈ ವಿಶಿಷ್ಟ ಸಾಧನೆಯನ್ನು ಗೌರವಿಸಲು ಒಲಿಂಪಿಕ್ ಸಂಘಟಕರು ಅವರಿಗೆ ಜ್ಯೋತಿ ಹಿಡಿಯುವ ಅವಕಾಶ ನೀಡಿದರು. ಅಥೆನ್ಸ್ ಕೂಟದ ಸಂದರ್ಭದಲ್ಲಿಯೂ ಫೌಜಾ ಇಂಥದೇ ಶ್ರೇಯಕ್ಕೆ ಪಾತ್ರರಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.