ಸೋಮವಾರ, ಜೂನ್ 14, 2021
27 °C

ಲಂಬಾಣಿ ಭಾಷೆ ಬೆಳವಣಿಗೆಗೆ ಎಲ್ಲರ ಶ್ರಮ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಲಂಬಾಣಿ ಸಾಹಿತ್ಯವನ್ನು ದಲಿತ ಸಾಹಿತ್ಯದ ಪರಿಭಾಷೆಯಲ್ಲಿ ಪರಿಗಣಿಸಿದಾಗ ಮಾತ್ರ ಅದಕ್ಕೊಂದು ವಿಶಾಲ ಅರ್ಥ ದೊರಕುತ್ತದೆ. ಭಾರತದ 17 ಭಾಷೆಗಳಲ್ಲಿಯೂ ಪ್ರಸ್ತುತ ದಲಿತ ಸಾಹಿತ್ಯ ಶ್ರಿಮಂತವಾಗಿ ಬೆಳೆದಿದೆ~ ಎಂದು ಚಿಂತಕಿ ವಿಮಲಾ ಥೋರಟ್ ಅಭಿಪ್ರಾಯಪಟ್ಟರು.ನಗರದ ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ `ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ~ ಮತ್ತು ಸಾಹಿತ್ಯ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಬಂಜಾರ ಭಾಷಾ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

`ಲಂಬಾಣಿ ಸಮುದಾಯವನ್ನು ಕೇವಲ ಪ್ರದರ್ಶನದ ವಸ್ತುಗಳಂತೆ ಕಾಣುತ್ತಿರುವುದು ದುಃಖಕರ ಸಂಗತಿ. ಲಂಬಾಣಿಗಳ ಗೋರ್ಬೋಲಿ ಭಾಷೆಯ ಬೆಳವಣಿಗೆಗಾಗಿ ಸಾಹಿತ್ಯ ಅಕಾಡೆಮಿಯ ಜತೆಗೆ ಎಲ್ಲ ಭಾಷಾ ಅಕಾಡೆಮಿಗಳು ಶ್ರಮಿಸಬೇಕಿದೆ~ ಎಂದು ಹೇಳಿದರು.`ದಲಿತ ಸಾಹಿತ್ಯದಲ್ಲಿರುವ ಆದಿವಾಸಿ, ಅಲೆಮಾರಿ, ಅರೆ ಅಲೆಮಾರಿ, ಸ್ತ್ರೀ ಸಾಹಿತ್ಯ ಮೊದಲಾದ ಪ್ರಕಾರಗಳಲ್ಲಿ ರಚನೆಯಾಗುತ್ತಿರುವ ಸಾಹಿತ್ಯಗಳು ಮುಖ್ಯವಾಹಿನಿಗೆ ಬರಬೇಕಿವೆ. ಭಾಷೆ ಬೆಳವಣಿಗೆ ಕಂಡರೆ ಮಾತ್ರ ಉತ್ತಮ ಸಾಹಿತ್ಯ ನಿರ್ಮಾಣಗೊಳ್ಳಲು ಸಾಧ್ಯವಿದೆ~ ಎಂದು ಹೇಳಿದರು.  ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, `ಭಾರತದ ಸಂಸ್ಕೃತಿಯನ್ನು ಸೂಚಿಸುವಾಗ ಲಂಬಾಣಿ ಮಹಿಳೆ ತೊಟ್ಟಿರುವ ಸಾಂಪ್ರದಾಯಿಕ ಉಡುಪನ್ನು ತಾಜ್‌ಮಹಲ್‌ನಂತೆ ತೋರಿಸಲಾಗುತ್ತಿದೆ, ಆದರೆ ಅವರ ಅಭಿವೃದ್ದಿ ಮತ್ತು ಭಾಷೆಯ ಬೆಳವಣಿಗೆ ಶೂನ್ಯವಾಗಿದೆ~ ಎಂದು ವಿಷಾದ ವ್ಯಕ್ತಪಡಿಸಿದ ಅವರು, `ಕೊಡವ ಭಾಷಾ ಸಮ್ಮೇಳನ ನಡೆಸಿದ ನಂತರ ಅಕಾಡೆಮಿ ಬಂಜಾರ ಭಾಷಾ ಸಮ್ಮೇಳನ ನಡೆಸುತ್ತಿರುವುದು ಉತ್ತಮ ಸಂಗತಿಯಾಗಿದೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಸ್.ಜಾಫೆಟ್, ಮರಾಠಿ ಸಾಹಿತಿ ಲಕ್ಷ್ಮಣ್ ಗಾಯಕ್‌ವಾಡ್, ಸಾಹಿತಿಗಳಾದ ಬಿ.ಟಿ.ಲಲಿತಾನಾಯಕ್, ಡಾ.ಎ.ಆರ್.ಗೋವಿಂದಸ್ವಾಮಿ, ಕೆ.ಶಿವಮೂರ್ತಿ, ಪಿ.ಕೆ.ಖಂಡೋಬಾ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.