ಶನಿವಾರ, ಮೇ 15, 2021
25 °C
ಬಿಹಾರ ರಾಜ್ಯ ವಾರ್ತೆ

ಲಾಲು ಎಣಿಕೆಗೆ ಮರ್ಮಾಘಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಲು ಎಣಿಕೆಗೆ ಮರ್ಮಾಘಾತ

ಪಟ್ನಾ: ಬಿಹಾರದ ಮಹಾರಾಜ್‌ಗಂಜ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಆರ್‌ಜೆಇಡಿ ಅಭ್ಯರ್ಥಿ ಗಮನಾರ್ಹ ಅಂತರದಿಂದ ಜಯಗಳಿಸುತ್ತಿದ್ದಂತೆಯೇ ರಾಜ್ಯದ ಜನತೆಯ ರಾಜಕೀಯ ಒಲವು ತಮ್ಮೆಡೆಗೆ ವಾಲುತ್ತಿದೆ ಎಂದು ಆ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಭಾವಿಸಿದ್ದರು.ಆದರೆ ಅವರ ಆ ಎಣಿಕೆ ಅಲ್ಪಾಯುವಾಗಿದೆ. ಕಳೆದ ಕೆಲವೇ ದಿನಗಳಲ್ಲಿ ಅವರಿಗೆ ಮೂರು ಹೊಡೆತಗಳು ಬಿದ್ದಿವೆ.

ಮೊದಲನೆಯದಾಗಿ, ಕೇವಲ 22 ಶಾಸಕರನ್ನು ಹೊಂದಿರುವ ಆರ್‌ಜೆಡಿ ಪ್ರತಿಪಕ್ಷದ ನಾಯಕನ ಸ್ಥಾನವನ್ನು  ಬಿಟ್ಟುಕೊಡಬೇಕಾಯಿತು. ಆ ಸ್ಥಾನ 91 ಶಾಸಕರ ಬಲವುಳ್ಳ, ಪ್ರಧಾನ ಪ್ರತಿಪಕ್ಷವಾದ ಬಿಜೆಪಿ ಯ ಪಾಲಾಯಿತು. ಎನ್‌ಡಿಎ ಕೂಟದ ಮಾಜಿ ಸಂಚಾಲಕರಾದ ನಂದ ಕಿಶೋರ್ ಯಾದವ್ ಅವರು ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದನ್ನು ಅವರು ಸಹಿಸಿಕೊಳ್ಳಬೇಕಾಯಿತು.ಇನ್ನು, ಕಾಂಗ್ರೆಸ್ಸಿನೊಂದಿಗೆ ಮಧುರ ಮೈತ್ರಿಯ ನಿರೀಕ್ಷೆಯಲ್ಲಿದ್ದಾಗಲೇ ಆ ಪಕ್ಷ ಒಳೇಟು ನೀಡಿದ್ದು ಲಾಲುಗೆ ಆದ ಎರಡನೆಯ ಆಘಾತ. ವಿಶ್ವಾಸಮತ ಸಾಬೀತು ಪಡಿಸುವ ಸಂದರ್ಭ ಎದುರಾದಾಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಬೆಂಬಲಿಸುವ ದಿಢೀರ್ ನಿರ್ಧಾರದ ಮೂಲಕ ಕಾಂಗ್ರೆಸ್ ಪಕ್ಷವು ಲಾಲು ಅವರಿಗೆ ಈ ಗುದ್ದು ನೀಡಿತು.ಲೋಕಸಭೆಯಲ್ಲಿ ತನ್ನ ನಾಲ್ವರು ಸಂಸದರನ್ನು ಹೊಂದಿ, ಯುಪಿಎ-2ರ ಅವಧಿಯ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡಿರುವ ಲಾಲು, ಇತ್ತೀಚಿನ ವರ್ಷಗಳಲ್ಲಿ ಸೋನಿಯಾ ಅವರನ್ನು ಗುಣಗಾನ ಮಾಡುವ ಯಾವ ಅವಕಾಶವನ್ನೂ ಬಿಟ್ಟುಕೊಟ್ಟಿಲ್ಲ. ಸೋನಿಯಾ ಅವರನ್ನು ಸಂತುಷ್ಟಗೊಳಿಸಲು ಇಷ್ಟೆಲ್ಲಾ ಯತ್ನಿಸುತ್ತಿದ್ದರೂ ಕಾಂಗ್ರೆಸ್ ಪಕ್ಷವು ಅವರನ್ನು ಇನ್ನೂ `ಕಾದು ನೋಡಬೇಕಾದವರ ಪಟ್ಟಿ'ಯಲ್ಲೇ ಇರಿಸಿಕೊಂಡು ಬಂದಿದೆ.ಈ ಗಾಯಗಳಿಗೆ ಉಪ್ಪು ಸವರುವಂತೆ, ತಮ್ಮ ಕಟ್ಟಾ ಎದುರಾಳಿಯಾದ ನಿತೀಶ್ ಕುಮಾರ್ ಅವರೊಂದಿಗಿನ ಮೈತ್ರಿಗೆ ಸಿದ್ಧ ಎಂಬ ಸುಳಿವುಗಳನ್ನು ಕಾಂಗ್ರೆಸ್ ರವಾನಿಸಿದೆ. ವಿಶ್ವಾಸಮತ ಕೋರಿಕೆ ವೇಳೆ ತನ್ನ ನಾಲ್ವರು ಶಾಸಕರ ಬೆಂಬಲವನ್ನು ನಿತೀಶ್‌ಗೆ ನೀಡುವ ಮೂಲಕ, `ಜೆಡಿಯು ಜತೆ ದೀರ್ಘಕಾಲೀನ ಮೈತ್ರಿಗೆ ತಾನು ಸಿದ್ಧ' ಎಂಬ ಇಂಗಿತವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ.ಜಿಗುಟು ಧೋರಣೆಯ ಮಮತಾ ಬ್ಯಾನರ್ಜಿ, `ಸೇರಿಗೆ ಸವ್ವಾಸೇರು' ಎನ್ನುವ ಮುಲಾಯಂ ಅಥವಾ ಮಾಯಾವತಿ ಅವರಿಗಿಂತ ಸಂವೇದನಾಶೀಲರಾದ ನಿತೀಶ್ ಅವರೊಂದಿಗಿನ ಸಖ್ಯದಲ್ಲಿ ಜಾಣ್ಮೆ ಅಡಗಿದೆ ಎಂದು ಕಾಂಗ್ರೆಸ್‌ಗೆ ಅನ್ನಿಸಿರುವುದು ಇದಕ್ಕೆ ಕಾರಣವಿರಬಹುದು.ಯುಪಿಎ ಸರ್ಕಾರದ ಮಹತ್ವಾಕಾಂಕ್ಷೆಯ ಆಹಾರ ಭದ್ರತಾ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲು ಜೆಡಿಯು ದ 20 ಸಂಸದರು ನೆರವಾಗಬಹುದು. ಅಲ್ಲದೇ, 2 ಜಿ ತರಂಗಾಂತರ ಹಗರಣದ ವಿಚಾರಣೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿಯಲ್ಲಿ (ಜೆಪಿಸಿ) ಆ ಪಕ್ಷಕ್ಕೆ ಸೇರಿದ ಇಬ್ಬರು ಸದಸ್ಯರಾಗಿರುವುದರಿಂದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವ ಚಿದಂಬರಂ ಅವರನ್ನು `ಕಳಂಕ ಮುಕ್ತರು' ಎಂದು ಘೋಷಿಸಲು ಇದು ನೆರವಾಗಬಹುದು ಎಂಬ ಲೆಕ್ಕಾಚಾರವೂ ಕಾಂಗ್ರೆಸ್ ತಲೆಯಲ್ಲಿ ಸುಳಿದಾಡುತ್ತಿರಬಹುದು.`ಕಾಂಗ್ರೆಸ್ ತಳೆದ ನಿಲುವಿನಿಂದಾಗಿ ಲಾಲು ಅವರಿಗೆ ನಷ್ಟವಾಗುವುದು ನಿಜ. ಕಾಂಗ್ರೆಸ್- ಜೆಡಿಯು ಸಖ್ಯ ಏರ್ಪಟ್ಟರೆ 2014ರ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರು ನಮ್ಮನ್ನು ಕೈಬಿಟ್ಟು, ನರೇಂದ್ರ ಮೋದಿ ಅವರನ್ನು ಸೋಲಿಸಬಲ್ಲ ಪರ್ಯಾಯ ಪ್ರಬಲ ಅಭ್ಯರ್ಥಿಯತ್ತ ಮುಖ ಮಾಡಬಹುದು' ಎಂದು ಲಾಲು ಅವರ ಒಬ್ಬ ಆಪ್ತ ನಾಯಕರೇ ಹೇಳಿದ್ದಾರೆ.`ಯಾವುದೇ ಮೈತ್ರಿಯ ಬಗ್ಗೆ ಈಗಲೇ ಹೇಳುವುದು ಅಪ್ರಬುದ್ಧ ಅನ್ನಿಸಿಕೊಳ್ಳುತ್ತದೆ' ಎಂದು ನಿತೀಶ್ ಹೇಳಿದ್ದರೂ, `ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ' ಎನ್ನುವ ಮೂಲಕ ಕಾಂಗ್ರೆಸ್‌ನೊಂದಿಗಿನ ಸಂಧಾನ ಸಾಧ್ಯತೆಯ ಬಗ್ಗೆಯೂ ಸುಳಿವು ನೀಡಿದ್ದಾರೆ.ಬಿಹಾರ ರಾಜ್ಯ ಕಾಂಗ್ರೆಸ್ ವಕ್ತಾರರಾದ ಪ್ರೇಮ್‌ಚಂದ್ರ ಮಿಶ್ರಾ ಕೂಡ ಇದಕ್ಕೆ ಪೂರಕವಾದ ಮಾತುಗಳನ್ನು ಆಡಿದ್ದಾರೆ. `ಲಾಲು ಅವರೊಂದಿಗಿನ ನಮ್ಮ ಮೈತ್ರಿ ಸಾಧ್ಯತೆ ತುಂಬ ಕ್ಷೀಣ. ನಾವು ಚುನಾವಣೆಗೆ ಏಕಾಂಗಿಯಾಗಿ ಅಥವಾ ಜೆಡಿಯು ಜತೆ ಕೈಜೋಡಿಸಿ ಹೋಗಲಿದ್ದೇವೆ. ಜೆಡಿಯು ಜತೆ ಕ್ಷೇತ್ರ ಹೊಂದಾಣಿಕೆ ನಮ್ಮ ಮುಂದಿರುವ ಮತ್ತೊಂದು ಆಯ್ಕೆ' ಎಂದು ಅವರು ದಾಳ ಉರುಳಿಸಿದ್ದಾರೆ.ಮತ್ತೊಂದೆಡೆ, ಎಲ್‌ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಅವರನ್ನೂ ಮೈತ್ರಿಗೆ ಸೆಳೆಯುವ ಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಅಂದರೆ, `ಕಾಂಗ್ರೆಸ್- ಜೆಡಿಯು- ಕಮ್ಯುನಿಸ್ಟರು- ಎಲ್‌ಜೆಪಿ'ಗಳ ವಿಶಾಲ ತಳಹದಿಯೊಂದಿಗೆ ಮೈತ್ರಿಕೂಟ ರಚಿಸುವುದು ಆ ಪಕ್ಷದ ಉದ್ದೇಶ.ಎಲ್‌ಜೆಪಿ ಜತೆ ಕೈಜೋಡಿಸುವುದು ನಿತೀಶ್‌ಗೆ ಸುತರಾಂ ಇಷ್ಟವಿಲ್ಲವಾದರೂ, ಲಾಲು ಹಾಗೂ ಪಾಸ್ವಾನ್ ನಡುವೆ ಕಂದಕ ಸೃಷ್ಟಿಸುವ ಯಾವ ಅವಕಾಶವನ್ನೂ ಕಳೆದುಕೊಳ್ಳಲಾಗದ ಸ್ಥಿತಿಯಲ್ಲಿ  ಅವರು ಈಗ ಇದ್ದಾರೆ.  ಮುಂಬರುವ ಚುನಾವಣೆಯಲ್ಲಿ ಲಾಲು ಜತೆಗೆ ಇಬ್ಬರು ಮೋದಿಗಳಾದ- ನರೇಂದ್ರ ಮೋದಿ ಮತ್ತು ಸುಶೀಲ್ ಮೋದಿ ಅವರನ್ನು ಎದುರಿಸಬೇಕಾದ ಸವಾಲು ನಿತೀಶ್‌ಗೆ ಎದುರಾಗಲಿದೆ. ಇದನ್ನು ಅವರು ಏಕಾಂಗಿಯಾಗಿ ಮಾಡಲು ಸಾಧ್ಯವಿಲ್ಲ.ಇದೇ ವೇಳೆ ಲಾಲು ಅವರನ್ನು ಈಗ ಮೂರನೆಯ ಚಿಂತೆಯೊಂದು ಬಾಧಿಸುತ್ತಿದೆ. 900 ಕೋಟಿ ರೂಪಾಯಿಗಳ 17 ವರ್ಷ ಹಳೆಯದಾದ ಮೇವು ಹಗರಣದ ಸಂಬಂಧ ಸಿಬಿಐ ನ್ಯಾಯಾಲಯ ಜುಲೈ 15ರಂದು ಏನು ತೀರ್ಪು ನೀಡಲಿದೆಯೋ ಎಂಬುದೇ ಈ ಚಿಂತೆ. ಲಾಲು ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತಹ ತೀರ್ಪು ಪ್ರಕಟವಾದರೆ ಅದು ಅವರ ರಾಜಕೀಯ ಭವಿಷ್ಯದ ಮೇಲೆ ಮಹತ್ವದ ಪರಿಣಾಮ ಬೀರಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.