ಸೋಮವಾರ, ಮಾರ್ಚ್ 27, 2023
21 °C

ಲಾಸಿಕ್ ಶಸ್ತ್ರಚಿಕಿತ್ಸೆ ನಿಮಗೆ ಗೊತ್ತೇ?

ಡಾ. ಬಾಲಕೃಷ್ಣ ಶೆಟ್ಟಿ,ನೇತ್ರ ವೈದ್ಯ Updated:

ಅಕ್ಷರ ಗಾತ್ರ : | |

ಲಾಸಿಕ್ ಶಸ್ತ್ರಚಿಕಿತ್ಸೆ ನಿಮಗೆ ಗೊತ್ತೇ?

ಣ್ಣಿನ ದೂರದೃಷ್ಟಿ ಅಥವಾ ಸಮೀಪ ದೃಷ್ಟಿ ದೋಷವನ್ನು ಸರಿಪಡಿಸುವ ಜನಪ್ರಿಯ ಚಿಕಿತ್ಸೆಯೇ ಲಾಸಿಕ್‌ ಶಸ್ತ್ರಚಿಕಿತ್ಸೆ. ಕನ್ನಡಕ ಬಳಸಲು ಇಷ್ಟಪಡದವರು ಅಥವಾ ಕಾಂಟ್ಯಾಕ್ಟ್ ಲೆನ್ಸ್ ಗೊಡವೆ ಬೇಡ ಎನ್ನುವವರು, ಅದರಲ್ಲೂ ಯುವಜನ  ಹೆಚ್ಚಾಗಿ ಈ ಚಿಕಿತ್ಸೆಯ ಮೊರೆ ಹೋಗುತ್ತಿದ್ದಾರೆ. ಬನ್ನಿ, ಈ ಅತ್ಯಾಧುನಿಕ ಚಿಕಿತ್ಸೆಯ ಸಾಧಕ– ಬಾಧಕ ಅರಿಯೋಣ.



ಲಾಸಿಕ್ ಎಂದರೇನು?

ಲಾಸಿಕ್  (Laser assisted in Situ Keratomileusis) ಎನ್ನುವುದು ಒಂದು ಮಾದರಿಯ ಶಸ್ತ್ರಚಿಕಿತ್ಸೆ. ದೃಷ್ಟಿ ಸಮಸ್ಯೆ ಹೊಂದಿರುವವರಿಗೆ ಈ ವಿಧಾನವನ್ನು ಬಳಸಿ ದೋಷವನ್ನು ಸರಿಪಡಿಸಲಾಗುತ್ತದೆ. ಲಾಸಿಕ್ ಶಸ್ತ್ರಚಿಕಿತ್ಸೆಯ ಮೂಲಕ ಕಣ್ಣಿನ ಗುಡ್ಡೆಯ ಕಾರ್ನಿಯಾ  ಭಾಗವನ್ನು ಮರು ಹೊಂದಿಸಲಾಗುತ್ತದೆ. ಅಂದಹಾಗೆ ಈ ಚಿಕಿತ್ಸೆಗಾಗಿ ಲೇಸರ್ ಕಿರಣಗಳನ್ನು ಬಳಸಿಕೊಳ್ಳಲಾಗುತ್ತದೆ.

ಲಾಸಿಕ್ ಚಿಕಿತ್ಸೆಯ ವಿಧಾನಗಳು ಯಾವುವು?

ಕಸ್ಟಮ್‌ ಲಾಸಿಕ್‌: ಈ ವಿಧಾನದ ಮೂಲಕ ಕಣ್ಣಿನ ಭಾಗದಲ್ಲಿನ ದೋಷಗ­ಳನ್ನು ಅಳತೆ ಮಾಡಿ ಅದನ್ನು ಸರಿಪಡಿಸಲಾಗುತ್ತದೆ. ಇದೊಂದು ಅತ್ಯಾಧುನಿಕ ಹಾಗೂ ಸುಸಜ್ಜಿತ ವಿಧಾನವಾಗಿದ್ದು, ವಿಶ್ವದಾದ್ಯಂತ ದೃಷ್ಟಿದೋಷ ಹೊಂದಿರುವ ಕೋಟ್ಯಂತರ ಮಂದಿಗೆ ಈ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. 

ಇಂಟ್ರಾಲೇಸ್ ವಿಧಾನ: ಈ ಚಿಕಿತ್ಸೆಯಲ್ಲಿ ಯಾವುದೇ ರೀತಿಯ ಬ್ಲೇಡ್‌ಗಳನ್ನು ಬಳಸದೆ, ಕಣ್ಣಿನ ಗುಡ್ಡೆಯ ಕಾರ್ನಿಯಲ್‌ ಫ್ಲಾಪ್‌ನಲ್ಲಿರುವ ದೋಷವನ್ನು ಸರಿಪಡಿಸಲಾಗುತ್ತದೆ. ಇದಕ್ಕಾಗಿ ವೈದ್ಯರು ಮೈಕ್ರೊ ಕೆರಾ­ಟೊಮ್ ಎಂಬ ಉಪಕರಣ ಬಳಸುತ್ತಾರೆ. ಇದು ಬ್ಲೇಡ್ ಮಾದರಿಯಲ್ಲಿ ಕೆಲಸ ಮಾಡಿ ಕಾರ್ನಿಯಲ್‌ ಫ್ಲಾಪ್ ಅನ್ನು ಕತ್ತರಿಸುತ್ತದೆ. ಇತ್ತೀಚೆಗಂತೂ ಅತ್ಯಂತ ತ್ವರಿತ ಕಾಲಾವಧಿಯಲ್ಲಿ ಈ ಚಿಕಿತ್ಸೆ ಪೂರ್ಣಗೊಳ್ಳುತ್ತದೆ.

ಲಾಸಿಕ್‌ ಚಿಕಿತ್ಸೆಯಿಂದ ಆಗುವ ಅನುಕೂಲಗಳೇನು?

* ಹೆಚ್ಚು ನೋವಿಲ್ಲದಂತೆ ನಡೆಯುವ ಶಸ್ತ್ರಚಿಕಿತ್ಸೆ ಇದು. ಕಣ್ಣಿನ ಭಾಗವನ್ನು ಜಡಗೊಳಿಸುವ ಡ್ರಾಪ್‌ ಬಳಸುವುದರಿಂದ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ನೋವಿನ ಅನುಭವ ಆಗುವುದಿಲ್ಲ.

* ಸಾಮಾನ್ಯವಾಗಿ ಕೆಲವೇ ನಿಮಿಷಗಳಲ್ಲಿ ಶಸ್ತ್ರಚಿಕಿತ್ಸೆ ಮುಗಿಯುವುದರಿಂದ ಎರಡು, ಮೂರು ಗಂಟೆಗಳಲ್ಲಿ ನಿಮ್ಮನ್ನು ಮನೆಗೆ ಕಳುಹಿಸಲಾಗುತ್ತದೆ.

* ಕೆಲವು ಪ್ರಕರಣಗಳಲ್ಲಿ ಮಾತ್ರ ಒಂದು ದಿನದ ಕಾಲಾವಧಿ ತೆಗೆದುಕೊಳ್ಳಲಾಗುತ್ತದೆ.

* ಯಾವುದೇ ರೀತಿಯ ಹೊಲಿಗೆ ಅಥವಾ ಬ್ಯಾಂಡೇಜ್‌ನ ಅಗತ್ಯವಿಲ್ಲ.

* ಶಸ್ತ್ರಚಿಕಿತ್ಸೆಯ ನಂತರ ಎಂದಿನಂತೆ ಓದಲು, ವಾಹನ ಚಾಲನೆ ಮಾಡಲು, ಯಾವುದೇ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ.

* ಈ ಚಿಕಿತ್ಸೆಯ ಬಳಿಕ ಶೇ 96ರಷ್ಟು ಮಂದಿ ನಿರೀಕ್ಷಿತ ಪ್ರಮಾಣದಲ್ಲಿ ತಮ್ಮ ದೃಷ್ಟಿದೋಷವನ್ನು ಪರಿಹರಿಸಿಕೊಂಡಿದ್ದಾರೆ.

* ವಯಸ್ಸಾದಂತೆ ದೃಷ್ಟಿಯಲ್ಲಿ ಬದಲಾವಣೆ ಕಂಡುಬಂದರೆ ಮತ್ತೆ ಅದಕ್ಕೆ ಚಿಕಿತ್ಸೆ ನೀಡುವ ಅವಕಾಶ ಇರುತ್ತದೆ.

* ಚಿಕಿತ್ಸೆ ಪಡೆದ ಬಳಿಕ ಸಾಕಷ್ಟು ಮಂದಿ ಕನ್ನಡಕ ಮತ್ತು ಕಾಂಟ್ಯಾಕ್‌್ಟ ಲೆನ್‌್ಸ ಮೇಲೆ ಹೆಚ್ಚು ಅವಲಂಬಿತರಾಗುವುದು ತಪ್ಪಿದೆ. ಇನ್ನು ಕೆಲವರು ಇವುಗಳ ಬಳಕೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ.

ಲಾಸಿಕ್‌ ಚಿಕಿತ್ಸೆಯ ಅನನುಕೂಲಗಳೇನು?

* ಈ ಶಸ್ತ್ರಚಿಕಿತ್ಸೆಯಿಂದ ಕೆಲವು ಅನನುಕೂಲಗಳೂ ಇವೆ.

* ಒಮ್ಮೆ ಕಾರ್ನಿಯಾದಲ್ಲಿ ಮಾಡಿದ ಬದಲಾವಣೆಯನ್ನು ಮತ್ತೆ ಮೊದಲಿನ ರೀತಿಗೆ ಬದಲಿಸಲು ಸಾಧ್ಯವಾಗುವುದಿಲ್ಲ.

* ಈ ಚಿಕಿತ್ಸೆ ತಾಂತ್ರಿಕವಾಗಿ ಸಂಕೀರ್ಣವಾದುದು. ಕಾರ್ನಿಯಾದ ಫ್ಲಾಪ್‌ ಅನ್ನು ಕತ್ತರಿಸುವಾಗ ಕೆಲವರಿಗೆ ಸಮಸ್ಯೆಗಳು ಉಂಟಾಗಬಹುದು.

* ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮೊದಲ 24ರಿಂದ 48 ಗಂಟೆಗಳ ಅವಧಿ­ಯಲ್ಲಿ ಕೆಲವು ರೋಗಿಗಳಿಗೆ ಇರುಸುಮುರುಸಿನ ಅನುಭವ ಆಗಬಹುದು.

* ಕೆಲವು ಪ್ರಕರಣಗಳಲ್ಲಿ ನಿರೀಕ್ಷಿತ ಪ್ರಮಾಣದಷ್ಟು ದೃಷ್ಟಿ ಪಡೆಯಲು ಸಾಧ್ಯವಾಗದೇ ಇರಬಹುದು.

* ಅತ್ಯಂತ ಅಪರೂಪವಾಗಿ ಕಾಣಿಸಿಕೊಳ್ಳಬಹುದಾದ ಇತರ ಅಡ್ಡಪರಿಣಾಮ­ಗಳೆಂದರೆ ಕಣ್ಣು ಕುಕ್ಕಿದಂತೆ ಆಗುವುದು, ರಾತ್ರಿ ವೇಳೆ ವಾಹನ ಚಾಲನೆ ಕಷ್ಟ ಆಗುವುದು, ದೃಷ್ಟಿಯಲ್ಲಿ ವ್ಯತ್ಯಾಸ, ಶುಷ್ಕ ಕಣ್ಣು.

ಯಾರೆಲ್ಲ ಈ ಚಿಕಿತ್ಸೆ ಪಡೆಯಲು ಅರ್ಹರು?

18 ವರ್ಷ ದಾಟಿದವರು ಹಾಗೂ ಕಳೆದ 12 ತಿಂಗಳಿನ ಅವಧಿಯಲ್ಲಿ ದೃಷಿಯಲ್ಲಿ ಯಾವುದೇ ಬದಲಾವಣೆ ಕಾಣಿಸಿಕೊಳ್ಳದೇ ಇದ್ದವರು ಈ ಶಸ್ತ್ರಚಿಕಿತ್ಸೆ  ಪಡೆದುಕೊಳ್ಳಲು ಅರ್ಹರು. 40 ವರ್ಷ ದಾಟಿದವರಿಗೆ ಮಾತ್ರ ಈ ಚಿಕಿತ್ಸೆ ಸೂಕ್ತ ಎಂಬ ನಂಬಿಕೆ ಸರಿಯಲ್ಲ.

ಲಾಸಿಕ್‌ ಶಸ್ತ್ರಚಿಕಿತ್ಸೆಗೆ ಸಿದ್ಧರಾಗುವುದು ಹೇಗೆ?

ಶಸ್ತ್ರಚಿಕಿತ್ಸೆಗೆ ಮುನ್ನ ಮತ್ತು ನಂತರ ಮಾಡಿಕೊಳ್ಳಬೇಕಾದ ಸಿದ್ಧತೆಯ ಬಗ್ಗೆ ವೈದ್ಯರೊಂದಿಗೆ ಮೊದಲೇ ಚರ್ಚಿಸಬೇಕು. ಈ ಸಂದರ್ಭದಲ್ಲಿ ನಿಮ್ಮ ವೈದ್ಯಕೀಯ ಇತಿಹಾಸವನ್ನು ಅರಿಯುವ ವೈದ್ಯರು, ನಿಮ್ಮ ಕಣ್ಣನ್ನು ಸಂಪೂರ್ಣ­ವಾಗಿ ಪರೀಕ್ಷಿಸುತ್ತಾರೆ. ಕಾರ್ನಿಯಾ ಸೇರಿದಂತೆ ಕಣ್ಣಿನ ಆರೋಗ್ಯ ಸ್ಥಿತಿಯನ್ನು ಅರಿಯುತ್ತಾರೆ. ಬಳಿಕ ನೀವು ಶಸ್ತ್ರಚಿಕಿತ್ಸೆಗೆ ಅರ್ಹರೆಂದು ಕಂಡುಬಂದರೆ ನಿಮ್ಮ  ಪ್ರಶ್ನೆಗಳಿಗೆ ನೀವು ಅವರಿಂದ ಸೂಕ್ತ ಉತ್ತರವನ್ನು ಕೇಳಿ ತಿಳಿಯಬಹುದು.

ಯಾರ ಬಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಒಳ್ಳೆಯದು?

ನೀವು ಲಾಸಿಕ್ ಶಸ್ತ್ರಚಿಕಿತ್ಸೆಗೆ ಒಳಪಡಲು ಮುಂದಾಗಿರುವ ಆಸ್ಪತ್ರೆ ಹಾಗೂ ಅಲ್ಲಿನ ವೈದ್ಯರ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಳ್ಳಿ. ನಿಮಗೆ ಚಿಕಿತ್ಸೆ ನೀಡಲಿರುವ ತಜ್ಞರು ಉತ್ತಮ ಅನುಭವ ಮತ್ತು ಒಳ್ಳೆಯ ಕೆಲಸ ಮಾಡಿದ ಹಿನ್ನೆಲೆ ಉಳ್ಳವರಾಗಿರಬೇಕು. ಮುಖ್ಯವಾಗಿ, ಚಿಕಿತ್ಸೆ ಮುಗಿದ ಬಳಿಕ ಅವರು ನಿಮ್ಮ ಪರೀಕ್ಷೆಗೆ ಲಭ್ಯರಾಗುತ್ತಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.