ಭಾನುವಾರ, ಜೂನ್ 13, 2021
21 °C

ಲಿಂಗತ್ವ ಅಲ್ಪಸಂಖ್ಯಾತರಿಗೆ ಮತದಾನ ಅರಿವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಲಿಂಗತ್ವ ಅಲ್ಪಸಂಖ್ಯಾತರು ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಮತದಾರರ ಜಾಗೃತಿ ಆಭಿಯಾನ ಸಮಿತಿಯಿಂದ ನಗರದ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಗುರುವಾರ ವಿಶೇಷ ಸಭೆ ನಡೆಯಿತು.ಜಿಲ್ಲಾ ಮತದಾರರ ಜಾಗೃತಿ ಅಭಿಯಾನ ಸಮಿತಿ ಆಧ್ಯಕ್ಷ ಡಾ.ಕೆ.ಎಚ್. ನರಸಿಂಹಮೂರ್ತಿ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕೇಂದ್ರ ಚುನಾವಣಾ ಆಯೋಗವು ಹೆಚ್ಚಿನ ಒತ್ತು ನೀಡಿದೆ. ಈ ಅವಕಾಶ ಬಳಸಿಕೊಳ್ಳಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ಮತದಾನದ ಹಕ್ಕು ಚಲಾಯಿಸಬೇಕು ಎಂದರು.ಸಮಾಜದ ಇತರೇ ಜನಸಾಮಾನ್ಯರಂತೆ ದೇಶದ ಪ್ರಜೆಗಳಾಗಿ ತಮ್ಮ ಹಕ್ಕು ಚಲಾಯಿಸುವ ಅವಕಾಶವನ್ನು ಲಿಂಗತ್ವ ಅಲ್ಪಸಂಖ್ಯಾತರು ಕೂಡ ಹೊಂದಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು. ಚುನಾವಣೆ ದಿನದಂದು ಮತ ಚಲಾಯಿಸುವ ಮೂಲಕ ರಾಜ್ಯದ ಇತರೇ ಜಿಲ್ಲೆಗಳಿಗೆ ಮಾದರಿಯಾಗಬೇಕು ಎಂದರು.ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ವೇಳೆ ಎದುರಾಗುವ ಸಮಸ್ಯೆ ಕುರಿತು ಸಭೆಯಲ್ಲಿ ಭಾಗವಹಿಸಿದ ಲಿಂಗತ್ವ ಅಲ್ಪ ಸಂಖ್ಯಾತ ಸಮುದಾಯದವರು ಚರ್ಚಿಸಿದರು.ಇದಕ್ಕೆ ಪ್ರತಿಕ್ರಿಯೆ ನರಸಿಂಹಮೂರ್ತಿ, ಆಯೋಗದ ಸೂಚನೆಗೆ ಅನುಸಾರವಾಗಿ ಜಾರಿಗೆ ಬಂದಿರುವ ಹಲವು ಸುಧಾರಣೆ ಕುರಿತು ಮಾಹಿತಿ ನೀಡಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ ಮಾತನಾಡಿ, ಮತದಾರರ ಪಟ್ಟಿಗೆ ಹೆಸರು ನೋಂದಣಿ, ತಿದ್ದುಪಡಿ ಹಾಗೂ ಪಟ್ಟಿಯಲ್ಲಿ ಹೆಸರು ಕೈಬಿಟ್ಟು ಹೋಗಿದ್ದರೆ ಸೇರ್ಪಡೆ ಮಾಡುವ ಪ್ರಕ್ರಿಯೆಗೆ ಮಾ. 16ರವರೆಗೆ ಆಯೋಗವು ಅವಕಾಶ ಕಲ್ಪಿಸಿದೆ. ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ನಮೂನೆ– 6, ಹೆಸರು ತೆಗೆದು ಹಾಕಲು ನಮೂನೆ– 7, ತಿದ್ದುಪಡಿ ಮಾಡಲು ನಮೂನೆ– 8 ಹಾಗೂ ವರ್ಗಾವಣೆಗೊಳಿಸಲು ನಮೂನೆ– 8(ಓ) ತಾಲ್ಲೂಕು ಕಚೇರಿಗಳಲ್ಲಿ ಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಮುನಿರಾಜಪ್ಪ, ಮುಖ್ಯ ಯೋಜನಾಧಿಕಾರಿ ವಸುಂಧರಾ ದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜು, ಜಿಲ್ಲಾ ಮತದಾರ ಜಾಗೃತಿ ಸಮಿತಿ ಸದಸ್ಯ ಸದಾನಂದ ಹಾಜರಿದ್ದರು.ಅಬಕಾರಿ ನಿಯಂತ್ರಣ ಕೊಠಡಿ ಸ್ಥಾಪನೆ

ಚಾಮರಾಜನಗರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಮಾರಾಟ, ತಯಾರಿಕೆ, ದಾಸ್ತಾನು, ಸಾಗಾಣಿಕೆ ತಡೆಗಟ್ಟಲು ಅಬಕಾರಿ ಇಲಾಖೆಯಿಂದ ದಿನದ 24 ಗಂಟೆ ಕಾರ್ಯ ನಿರ್ವಹಿಸಲು ಜಿಲ್ಲಾ ಮತ್ತು ತಾಲ್ಲೂಕುಮಟ್ಟದಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ.

ಜಿಲ್ಲಾಮಟ್ಟದಲ್ಲಿ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ನಿಯಂತ್ರಣಾ ಕೊಠಡಿ (ಕಂಟ್ರೋಲ್ ರೂಂ) ತೆರೆಯಲಾಗಿದೆ. ದೂರವಾಣಿ ಸಂಖ್ಯೆ 08226– 224776ಕ್ಕೆ ಕರೆ ಮಾಡಿ ಸಾರ್ವಜನಿಕರು ದೂರು ದಾಖಲಿಸಬಹುದು.(ಅಬಕಾರಿ ಉಪ ಅಧೀಕ್ಷಕರ ಕಚೇರಿ, ಚಾಮರಾಜ ಉಪ ವಿಭಾಗ: ದೂರವಾಣಿ ಸಂಖ್ಯೆ 08226- 224892). ತಾಲ್ಲೂಕುಮಟ್ಟದಲ್ಲಿ ಚಾಮರಾಜ ನಗರ ಮತ್ತು ಯಳಂದೂರು ತಾಲ್ಲೂಕು ಸೇರಿದಂತೆ ಚಾಮರಾಜನಗರದ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ದೂರವಾಣಿ ಸಂಖ್ಯೆ 08226– 223821.ಜತೆಗೆ, ಕೊಳ್ಳೇಗಾಲ ವಲಯ ಅಬಕಾರಿ ನಿರೀಕ್ಷಕರ ಕಚೇರಿ(ದೂರವಾಣಿ ಸಂಖ್ಯೆ 08224– 252433) ಮತ್ತು ಗುಂಡ್ಲುಪೇಟೆ ವಲಯ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ನಿಯಂತ್ರಣ ಕೊಠಡಿ(ದೂರವಾಣಿ ಸಂಖ್ಯೆ 08229– 223289) ತೆರೆಯಲಾಗಿದೆ ಎಂದು ಅಬಕಾರಿ ಇಲಾಖೆಯ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.