ಸೋಮವಾರ, ಮೇ 17, 2021
23 °C

ಲಿಂ.ಚನ್ನಬಸವ ಪಟ್ಟದ್ದೇವರ 13ನೇ ಸ್ಮರಣೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಲ್ಕಿ: ನಾಡಿನ ಉದ್ದಗಲಕ್ಕೂ ನೂರಾರು ಮಠಗಳಿವೆ. ಅನೇಕ ಮಠಗಳು ಕೋಟಿ ಕೋಟಿ ಸಂಪಾದನೆಯ ಮೂಲ ತಳಹದಿ ಹೊಂದಿವೆ. ಸಮಾಜ ಸೇವೆ, ಶಿಕ್ಷಣ, ದಾಸೋಹಗಳಲ್ಲಿ ತೊಡಗಿಕೊಂಡು ತನ್ನದೇ ಆದ ದಾರಿಯನ್ನು ಕಂಡುಕೊಳ್ಳುವ ಮೂಲಕ ಹೆಸರನ್ನು ಮಾಡಿವೆ.ಇಂಥದರಲ್ಲಿ ಹಿಂದುಳಿದ ಭಾಗದ ಉತ್ತರದ ತುದಿಯಲ್ಲಿದ್ದುಕೊಂಡು ಕರಾಳ ಬಡತನವನ್ನು ಎದುರಿಸಿಯೂ ನೂರಾರು ಸಮಾಜಸೇವಾ ವಿಧಾಯಕ ಕಾರ್ಯಗಳನ್ನು ಮಾಡುವ ಮೂಲಕ ಭಾಲ್ಕಿ ಹಿರೇಮಠ ಸಂಸ್ಥಾನ ಅನ್ಯ ಮಠಗಳಿಂತಲೂ ಭಿನ್ನವೆನಿಸಿದೆ. ಆಂಧ್ರ ಮತ್ತು ಮಹಾರಾಷ್ಟ್ರದ ಗಡಿಯಲ್ಲಿ ವ್ಯವಹಾರದ ಮರಾಠಿ ಭಾಷೆ, ಅಡಳಿತದ ಉರ್ದು ಭಾಷೆಗಳ ನಡುವೆ ಕೋಮಾ ಸ್ಥಿತಿಯಲ್ಲಿದ್ದ ಕನ್ನಡವನ್ನು ಬೆಳೆಸುವಲ್ಲಿ ವಿಶಿಷ್ಟ ಪಾತ್ರ ವಹಿಸಿದೆ.ಬಡತನದಲ್ಲೂ ದಾಸೋಹ: 1936ರ ಸಮಯದಲ್ಲಿ ಅತ್ಯಂತ ಬಡತನದಲ್ಲಿದ್ದ ಭಾಲ್ಕಿ ಮಠಕ್ಕೆ ಹೇಳಿಕೊಳ್ಳುವಂಥ ಯಾವುದೇ ಆದಾಯವಿರಲಿಲ್ಲ. ಮಠದಲ್ಲಿದ್ದ ನೂರಾರು ಬಡ ಮಕ್ಕಳಿಗೆ ಗಂಜಿ ಕುಡಿಸಬೇಕೆಂದರೆ ಭಕ್ತರ ಮನೆಗಳಲ್ಲಿ ಜೋಳಿಗೆಯನ್ನು ಕಟ್ಟಿಡಲಾಗುತ್ತಿತ್ತು. ದಿನಕೊಂದು ಹಿಡಿ ಹಿಟ್ಟು ಅಥವಾ ಧಾನ್ಯಗಳನ್ನು ಆ ದಾಸೋಹದ ಜೋಳಿಗೆಯಲ್ಲಿ ಸಂಗ್ರಹಿಸಲಾಗುತ್ತಿತ್ತು. ಇದನ್ನು ಚನ್ನಬಸವ ಪಟ್ಟದ್ದೇವರು ಮುಷ್ಠಿ ಫಂಡ್ ಎಂದು ದೇಸಿ ಭಾಷೆಯನ್ನು ಕರೆದಿದ್ದರು. ಸಂಗ್ರಹಿಸಿದ್ದ ಹಿಟ್ಟು, ಧಾನ್ಯಗಳನ್ನು ಸ್ವತ: ಚನ್ನಬಸವರು ಕುದುರೆಯ ಮೇಲೆ ತಂದು ಬಡ ಮಕ್ಕಳಿಗೆ ಊಟ ಬಡಿಸಿದ್ದನ್ನು ಈಗಲೂ ಹಿರಿಯರು ಸ್ಮರಿಸಿಕೊಳ್ಳುತ್ತಾರೆ.ಆಗ ಈ ಭಾಗವನ್ನು ಆಳುತ್ತಿದ್ದ ನಿಜಾಮಶಾಹಿ ವ್ಯವಸ್ಥೆಯಲ್ಲಿ ಉರ್ದು ಆಡಳಿತ ಭಾಷೆಯಾಗಿತ್ತು. ಮರಾಠಿ ಇಲ್ಲಿನ ವ್ಯವಹಾರದ ಭಾಷೆಯಾಗಿತ್ತು. ಕನ್ನಡಿಗರಿದ್ದರೂ ಸಹ ಕನ್ನಡ ಭಾಷೆ ಬರವಣಿಗೆಯಲ್ಲಿ ಇರಲಿಲ್ಲ. ಇದನ್ನು ಮನಗಂಡ ಚನ್ನಬಸವ ಪಟ್ಟದ್ದೇವರು ಸಂಗಮದ ಮಾಂಜ್ರಾ ನದಿಯ ದಡದಲ್ಲಿನ ಆಶ್ರಮದ ಹೊರಗೆ ಉರ್ದು ನಾಮ ಫಲಕ ಹಾಕಿಸಿ ಒಳಗೆ ಕನ್ನಡವನ್ನು ಕಲಿಸಿದ್ದರು.ಸಾಮಾಜಿಕ ನ್ಯಾಯದ ದಾರಿಯಲ್ಲಿ: ಆಗಿನ ಕ್ಲಿಷ್ಟ ಪರಿಸ್ಥಿತಿಯಲ್ಲೂ ಚನ್ನಬಸವಪಟ್ಟದ್ದೇವರು ಅಂತರ್ಜಾತಿ ವಿವಾಹಗಳನ್ನು ಮಾಡಿಸುವ ಮೂಲಕ ಸಮಾಜವನ್ನು ಎದುರು ಹಾಕಿಕೊಂಡಿದ್ದರು. ದಲಿತರ ಕೇರಿಗಳಲ್ಲಿ ವಾರಗಟ್ಟಲೇ ಉಳಿದುಕೊಂಡು ಅವರಿಗೆ ಲಿಂಗ ದೀಕ್ಷೆ, ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ನೀಡಿದ್ದಾರೆ. ಅಡುಗೆ ಮನೆಯಿಂದ ಹೊರ ಬರಲಾಗದಂಥ ಮಹಿಳೆಯರಿಗಾಗಿ ಪ್ರತ್ಯೇಕ ಶಾಲಾ ಕಾಲೇಜುಗಳನ್ನು ತೆರೆದಿದ್ದಾರೆ.ಮಠದಲ್ಲಿ ಉಚಿತ ಪ್ರಸಾದ ನಿಲಯ ಸ್ಥಾಪಿಸಿ ಬಡವರು, ನಿರ್ಗತಿಕ ಮಕ್ಕಳಿಗೆ ಆಶ್ರಯ ಕಲ್ಪಿಸಿಕೊಟ್ಟಿದ್ದಾರೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಓಡಾಡಿದ್ದ ಬಸವ ಕಲ್ಯಾಣದಲ್ಲಿ ಸ್ವತ: ಕಲ್ಲು ಮಣ್ಣು ಹೊತ್ತು ನೂತನ ಅನುಭವ ಮಂಟಪದ ಸ್ಥಾಪನೆ ಮಾಡಿದ್ದಾರೆ.ಕನ್ನಡ, ಮರಾಠಿ, ತೆಲುಗು ಸಾಹಿತ್ಯ ಪ್ರಕಟಣೆ: ಬಸವಾದಿ ಶರಣರ ವಚನ ಸಾಹಿತ್ಯವು ವಿಶ್ವ ಭಾತೃತ್ವ, ಸಾಮಾಜಿಕ ನ್ಯಾಯದ ತತ್ವ ಹೊಂದಿದ್ದರೂ ಕೂಡ ಕೆಲವರ ಸಂಕುಚಿತತೆಯಿಂದಾಗಿ ಕರ್ನಾಟಕದ ಹೊರಗೆ ಕೂಡ ದಾಟಿಸಲು ಸಾಧ್ಯವಾಗಿಲ್ಲ ಎಂಬ ಆರೋಪವಿದೆ. ಈ ನಿಟ್ಟಿನಲ್ಲಿ ಯೋಚಿಸುವದಾದರೆ ಭಾಲ್ಕಿ ಹಿರೇಮಠ ಸಂಸ್ಥಾನವು ಕನ್ನಡ ಭಾಷೆ ಮತ್ತು ವಚನ ಸಾಹಿತ್ಯದ ಪ್ರಚಾರ ಮತ್ತು ಪ್ರಸಾರದ ಉದ್ದೇಶದಿಂದ ಚನ್ನಬಸವರಿದ್ದಾಗಲೇ ಶಾಂತಿ ಕಿರಣ ಮಾಸ ಪತ್ರಿಕೆ ಪ್ರಕಟಗೊಳ್ಳುತ್ತಿತ್ತು.ಈಗಿನ ಪೀಠಾಧಿಪತಿ ಡಾ. ಬಸವಲಿಂಗ ಪಟ್ಟದ್ದೇವರು ತಮ್ಮ ಸದ್ಗುರುಗಳ ಸನ್ಮಾರ್ಗದಲ್ಲಿ ನಡೆಯುವ ಮೂಲಕ ಶರಣ ಸಾಹಿತ್ಯವನ್ನು ಕನ್ನಡದ ಜೊತೆಗೆ ಮರಾಠಿ ಮತ್ತು ತೆಲುಗಿನಲ್ಲಿ ಪ್ರಕಟಿಸುತ್ತಿದ್ದಾರೆ. ಆಂದ್ರ ಪ್ರದೇಶ ಬಸವ ಪರಿಷತ್ ಮತ್ತು ಮಹಾರಾಷ್ಟ್ರ ಬಸವ ಪರಿಷತ್‌ಗಳನ್ನು ಸ್ಥಾಪಿಸಿ ಅಲ್ಲಿನ ಭಾಷೆಯಲ್ಲೇ ನೂರಾರು ಪುಸ್ತಕಗಳು ಪ್ರಕಟಗೊಂಡು ನೆರೆಯ ರಾಜ್ಯಗಳಲ್ಲಿ ಪ್ರಸಾರ ಹೊಂದುತ್ತಿವೆ.ಶರಣರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆಗಳಿಂದ ಹೊರ ಹೊಮ್ಮಿದ ವಚನಗಳನ್ನು ಕನ್ನಡಿಗರೇತರರಿಗೂ ಮುಟ್ಟಿಸಲಾಗುತ್ತಿದೆ. ಭಾಲ್ಕಿ ಮಠದ ಬಸವ ಧರ್ಮ ಪ್ರಸಾರ ಸಂಸ್ಥೆಯಿಂದ ಪ್ರಕಟಿಸಿ ಓದುಗರ ಕೈಗೆ ಸುಲಭ ಬೆಲೆಯಲ್ಲಿ ಸಿಗುವಂತೆ ಮಾಡಲಾಗಿದೆ.ಸಾವಿರಾರು ವಿದ್ಯಾರ್ಥಿಗಳಿಗೆ ಆಶ್ರಯ:  ಶ್ರೀ ಚನ್ನಬಸವೇಶ್ವರ ಗುರುಕುಲವು ಹಿರೇಮಠ ಸಂಸ್ಥಾನ ವಿದ್ಯಾಪೀಠದ ಆರಂಭಿಕ ಕೂಸು. ದಶಕಗಳಲ್ಲೇ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ರಾಜ್ಯದಲ್ಲೇ ಉತ್ತಮ ಹೆಸರು ಗಳಿಸಿದೆ. ಜಿಲ್ಲೆಯಷ್ಟೇ ಅಲ್ಲ ನೆರೆಯ ಜಿಲ್ಲೆ ಮತ್ತು ರಾಜ್ಯಗಳಲ್ಲಿ 40ಕ್ಕೂ ಅಧಿಕ ಶಾಲಾ ಕಾಲೇಜುಗಳು ಈಗ ಕಾರ್ಯ ಮಾಡುತ್ತಿವೆ. ಉಚಿತ ಹಾಸ್ಟೆಲ್‌ಗಳು, ಅನಾಥಾಲಯಗಳು ಇವೆ.ಸಾವಿರಾರು ಬಡವರು, ವಿಧವೆಯರು, ನಿರ್ಗತಿಕ ನಿರುದ್ಯೋಗಿಗಳಿಗೆ ಇಲ್ಲಿ ಕೆಲಸ ಕೊಡಲಾಗಿದೆ. ಆ ಮೂಲಕ ಎಲ್ಲ ಜಾತಿ, ಜನ, ವರ್ಗಗಳ ಮಾನವ ಸಂಪನ್ಮೂಲವನ್ನು ಮೇಲೆತ್ತುವ ಮೂಲಕ ಮುಖ್ಯ ವಾಹಿನಿಗೆ ತರುವ ಕಾರ್ಯ ಈ ಸಂಸ್ಥಾನ ಮಾಡುತ್ತಿದೆ. ಹೀಗಾಗಿ ಸಾಮಾಜಿಕ ನ್ಯಾಯದಲ್ಲಿ ಅನ್ಯ ಮಠಗಳಿಗಿಂತಲೂ ಭಾಲ್ಕಿ ಮಠ ಭಿನ್ನ ಮತ್ತು ವಿಶಿಷ್ಟವೆನಿಸಿದೆ. ಏ.21 ಮತ್ತು 22ರಂದು ಲಿಂ.ಡಾ. ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ ಅರ್ಥಪೂರ್ಣವಾಗಿ ನಡೆಸಲಾಗುತ್ತಿದೆ.

-   

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.