ಮಂಗಳವಾರ, ಜನವರಿ 28, 2020
18 °C

ಲೈಂಗಿಕ ಕಿರುಕುಳ: ಪ್ರೊ.ಶಿವಬಸವಯ್ಯಗೆ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸಂಶೋಧನಾ ವಿದ್ಯಾರ್ಥಿನಿ ಸರಿತಾಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಶಿವಬಸವಯ್ಯನವರ ಒಂಬತ್ತು ಇಂಕ್ರಿಮೆಂಟ್‌ಗಳನ್ನು ಕಡಿತಗೊಳಿಸಿ, ಚಾಮರಾಜನಗರ ಸ್ನಾತಕೋತ್ತರ ಕೇಂದ್ರದ ಸಂಯೋಜಕರಾಗಿ ವರ್ಗಾವಣೆ ಮಾಡಲಾಗಿದೆ.ಜ.21 ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಮೈಸೂರು ವಿವಿ ಮಹಿಳಾ ದೌರ್ಜನ್ಯ ದೂರು ಸಮಿತಿ ವರದಿ ಆಧಾರ ಹಾಗೂ ಸರ್ಕಾರದ ನಿರ್ದೇಶನದಂತೆ ಪ್ರೊ.ಶಿವಬಸವಯ್ಯನವರಿಗೆ ಈ ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ಕುಲಪತಿ ಪ್ರೊ.ವಿ.ಜಿ.ತಳವಾರ್ ಮಂಗಳವಾರ ಪತ್ರಕರ್ತರಿಗೆ ತಿಳಿಸಿದರು.2003 ರಲ್ಲಿ ಶಿವಬಸವಯ್ಯ ನೇರವಾಗಿ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದರು. ಹೀಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸುತ್ತೋಲೆ ಪ್ರಕಾರ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದರೆ ಅಂಥವರನ್ನು ಕನಿಷ್ಠ ಕಾಲ ವೇತನ ಶ್ರೇಣಿಗೆ ಇಳಿಸಬಹುದಾಗಿದೆ. ಆದ್ದರಿಂದ ಶಿವಬಸವಯ್ಯನವರ 9 ಇಂಕ್ರಿಮೆಂಟ್‌ಗಳನ್ನು ಕಡಿತಗೊಳಿಸಲಾಗಿದೆ.

 

ಇದು ಇಂತಹ ಆರೋಪಕ್ಕೆ ಗರಿಷ್ಠ ಶಿಕ್ಷೆಯಾಗಿದೆ ಎಂದವರು ಸಿಂಡಿಕೇಟ್ ಸಭೆಯಲ್ಲಿ ಸತತ ನಾಲ್ಕು ಗಂಟೆ ಕಾಲ ಈ ವಿಷಯವಾಗಿ ಚರ್ಚೆ ನಡೆಯಿತು. ಎಲ್ಲ ರೀತಿಯ ಸಾಧಕ ಬಾಧಕಗಳನ್ನು ಪರಿಶೀಲಿಸಿದ ನಂತರ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.ಲೈಂಗಿಕ ಕಿರುಕುಳ ಆರೋಪ ಮಾಡಿರುವ ಸಂಶೋಧನಾ ವಿದ್ಯಾರ್ಥಿನಿ ಮೈಸೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿದ್ದಾರೆ. ಆದ್ದರಿಂದ ಅವರಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣದಿಂದ ಪ್ರೊ.ಶಿವಬಸವಯ್ಯನವರನ್ನು ಚಾಮರಾಜನಗರ ಸ್ನಾತಕೋತ್ತರ ಕೇಂದ್ರದ ಸಂಯೋಜಕರನ್ನಾಗಿ ವರ್ಗಾವಣೆ ಮಾಡಲಾಗಿದೆ. ಈ ನಿರ್ಧಾರವನ್ನು ಸರ್ಕಾರ ತಿಳಿಸಲಾಗಿದೆ ಹಾಗೂ ಪ್ರೊ.ಶಿವಬಸವಯ್ಯನವರಿಗೆ ಆದೇಶ ನೀಡಲಾಗಿದೆ ಎಂದರು.

ಪತಿಯಿಂದ ಗಲಾಟೆ

ಕುಲಪತಿ ಪ್ರೊ.ವಿ.ಜಿ.ತಳವಾರ್ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ನುಗ್ಗಿದ ಸರಿತಾ ಪತಿ ಡಾ.ವಿಜಯ್, ~ನೀವು ನನ್ನ ಪತ್ನಿಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದೀರಿ, ಜಾತಿವಾದಿಯಾಗಿದ್ದೀರಿ, ನನ್ನ ಪತ್ನಿ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ನಿಮ್ಮ ಹೆಂಡತಿ, ಮಕ್ಕಳಿಗೆ ಆಗಿದ್ದರೆ ನೀವು ಏನು ಮಾಡುತ್ತಿದ್ದೀರಿ~ ಎಂದು ಕೂಗಾಡಿದರು. ಅನಿರೀಕ್ಷಿತವಾಗಿ ನಡೆದ ಘಟನೆಯಿಂದ ತೀವ್ರ ವಿಚಲಿತರಾದ ಕುಲಪತಿ ತಳವಾರ್, ವಿಜಯ್ ಅವರಿಂದ ಮನವಿ ಪತ್ರ ಪಡೆದು ಹೊರಟು ಹೋದರು.ವಿಜಯ್ ಅವರ ವರ್ತನೆಗೆ ಸ್ಥಳದಲ್ಲಿದ್ದ ಪ್ರಾಧ್ಯಾಪಕರು, ವಿವಿ ಅಧಿಕಾರಿಗಳು, ಸಿಬ್ಬಂದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)