ಸೋಮವಾರ, ಮೇ 17, 2021
31 °C

ಲೋಕಸರ: ಕಾಲುವೆ ಕಾಮಗಾರಿ ಕಳಪೆ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ:  ನಾಲೆಯ ಆಧುನೀಕರಣ ಕಾಮಗಾರಿಯನ್ನು ಕಳಪೆ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಮಂಡ್ಯ ತಾಲ್ಲೂಕಿನ ಲೋಕಸರ ಮುಖ್ಯ ಹಾಗೂ ವಿತರಣಾ ಕಾಲುವೆ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.ಕಾಮಗಾರಿ ಗುಣಮಟ್ಟ ಸರಿಯಾಗಿಲ್ಲ. ಸೂಳೆಕೆರೆಯ ಕಳಪೆ ಗುಣಮಟ್ಟದ ಮರಳನ್ನು ಕಾಮಗಾರಿಗೆ ಬಳಸಲಾಗುತ್ತಿದೆ. ಕ್ಯೂರಿಂಗ್ ಅನ್ನೂ ಸಹ ಸರಿಯಾಗಿ ಮಾಡುತ್ತಿಲ್ಲ ಎಂದು ಆರೋಪಿಸಿದರು.ಈಗ ಮಾಡಿರುವ ಕಾಮಗಾರಿಯ ಸಿಮೆಂಟ್ ಮುಟ್ಟಿದರೆ ಉದುರಿ ಬೀಳುತ್ತಿದೆ. ಕೆಲವು ಕಡೆಗಳಲ್ಲಿ ಕಲ್ಲುಗಳ  ಜೋಡಿಕೆ ಸರಿಯಾಗಿಲ್ಲ. ಸಿಮೆಂಟ್ ಹಾಗೂ ಉಸುಕಿನ ಬಳಕೆಯ ಪ್ರಮಾಣವೂ ಸರಿಯಾಗಿಲ್ಲ ಎಂದು ದೂರಿದರು.ರೈತ ಸಂಘದ ಮುಖಂಡ ಕೆ.ಎಸ್. ನಂಜುಂಡೇಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಕೊಣಸಾಲೆ ನರಸರಾಜು, ಶಂಭೂನಹಳ್ಳಿ ಸುರೇಶ್, ಹನಿಯಂಬಾಡಿ ನಾಗರಾಜು ಮತ್ತಿತರರು ಕಾರ್ಯಕರ್ತರೊಂದಿಗೆ ಕಾಲುವೆಯ ಕಾಮಗಾರಿಯನ್ನು ಪರಿಶೀಲಿಸಿ, ಗುಣಮಟ್ಟದ ಬಗೆಗೆ ಅಸಮಾಧಾನ ವ್ಯಕ್ತಪಡಿಸಿದರು.ರೈತ ಮುಖಂಡರು ಆಗಮಿಸಿರುವ ಸುದ್ದಿ ತಿಳಿದ ಕಾವೇರಿ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಕೆ. ಬಸವರಾಜೇಗೌಡ ಸ್ಥಳಕ್ಕೆ ಆಗಮಿಸಿದರು. ಕಾಮಗಾರಿ ಸರಿಯಾಗಿ ಆಗುತ್ತಿಲ್ಲ. ಅಧಿಕಾರಿಗಳೂ ಸರಿಯಾಗಿ ನಿಗಾ ವಹಿಸುತ್ತಿಲ್ಲ. ಕಾಮಗಾರಿಯ ಬಗೆಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ರೈತರು ಅವರ ಬಳಿ ಹೇಳಿಕೊಂಡರು.ಕಾಮಗಾರಿಗೆ ಬಳಸುತ್ತಿರುವ ಮರಳು ಗುಣಮಟ್ಟದ್ದಾಗಿಲ್ಲ. ಕೆಲವೆಡೆ ಮಣ್ಣಿನ ಮೇಲೆಯೇ ಸಿಮೆಂಟ್ ಮಾಡಲಾಗುತ್ತಿದೆ. ಈಗ ಮಾಡಿರುವ ಕಾಮಗಾರಿಯೂ ಕಳಪೆ ಮಟ್ಟದ್ದಾಗಿದೆ ಎಂದು ಮುಖಂಡ ಕೆ.ಎಸ್. ನಂಜುಂಡೇಗೌಡ ಆರೋಪಿಸಿದರು.ಎಂಜಿನಿಯರ್ ಕೆ. ಬಸವರಾಜೇಗೌಡ ಮಾತನಾಡಿ, ಕಳಪೆ ಮಟ್ಟದ ಮರಳು ಉಪಯೋಗಿಸಿದ್ದರೂ ಕ್ರಮ ಕೈಗೊಳ್ಳದ ಕಿರಿಯ ಎಂಜಿನಿಯರ್ ಈರಣ್ಣ ಅವರನ್ನು ತರಾಟೆಗೆ ತೆಗೆದುಕೊಂಡರು. `ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಿ' ಎಂದು ಬಿಸಿ ಮುಟ್ಟಿಸಿದರು.ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಪೂರಿಗಾಲಿಯಿಂದ ಮರಳು ಕೊಡಿಸಲು ವ್ಯವಸ್ಥೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅದೇ ಮರಳನ್ನು ಉಪಯೋಗಿಸಲಿದ್ದಾರೆ ಎಂದು ರೈತ ಮುಖಂಡರಿಗೆ ತಿಳಿಸಿದರು.ಈಗಾಗಲೇ ಆಗಿರುವ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಲಾಗುವುದು. ಸರಿಯಿಲ್ಲದಿದ್ದರೆ ಮತ್ತೊಮ್ಮೆ ಮಾಡಿಸುತ್ತೇನೆ. ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುವುದು ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.