ಶುಕ್ರವಾರ, ಮೇ 20, 2022
27 °C

ಲೋಕಾಯುಕ್ತ ವರದಿ ಅನುಷ್ಠಾನಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಅಕ್ರಮ ಗಣಿಗಾರಿಕೆ ಸೇರಿದಂತೆ ವಿವಿಧ ಹಗರಣಗಳ ಕುರಿತು ಮಾಹಿತಿಯನ್ನು ಹೊಂದಿರುವ ಲೋಕಾಯುಕ್ತ ವರದಿಯನ್ನು ಅನುಷ್ಠಾನಕ್ಕೆ ತರಬೇಕು, ಅದರಲ್ಲಿನ ಶಿಫಾರಸುಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ಸಿಪಿಎಂ ಮುಖಂಡರು ಮತ್ತು ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, `ವರದಿಯಲ್ಲಿನ ಅಂಶಗಳನ್ನು ಜಾರಿ ತರುವುದರ ಬದಲು ಸರ್ಕಾರ ವಿನಾಕಾರಣ ಕಾಲಹರಣ ಮಾಡುತ್ತಿದೆ. ವರದಿಯಲ್ಲಿ ಸೂಚಿಸಲಾಗಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಹಕರಿಸುವುದರ ಬದಲು ನಿರ್ಲಕ್ಷ್ಯ ತೋರಲಾಗುತ್ತಿದೆ~ ಎಂದು ಆರೋಪಿಸಿದರು.ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, `ಎನ್.ಸಂತೋಷ್ ಹೆಗ್ಡೆಯವರು ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ ವರದಿಯನ್ನು ಸಿದ್ಧಪಡಿಸಿದ್ದಾರೆ. ಅಕ್ರಮ ಗಣಿಗಾರಿಕೆ, ರಾಜಕಾರಣಿಗಳು ಮತ್ತು ಅಧಿಕಾರಿಗಳು ಶಾಮೀಲಾಗಿರುವುದು, ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವುದು ಸೇರಿದಂತೆ ಹಲವು ವಿಷಯಗಳನ್ನು ವರದಿಯು ಒಳಗೊಂಡಿದೆ. ವರದಿಯನ್ನು ಗಂಭೀರವಾಗಿ ಪರಿಗಣಿಸದ ಸರ್ಕಾರ ಅದರತ್ತ ನಿರಾಸಕ್ತಿ ತೋರುತ್ತಿದೆ~ ಎಂದರು.`ಅಕ್ರಮ ಗಣಿಗಾರಿಕೆ ಸೇರಿದಂತೆ ಇತರ ಹಗರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರನ್ನು ಬೆದರಿಸುತ್ತಿದ್ದಾರೆ. ಲೋಕಾಯುಕ್ತ ವರದಿಯನ್ನು ಒಪ್ಪಿದ್ದಲ್ಲಿ, ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರಲ್ಲಿ ಭೀತಿ ಮೂಡಿಸುತ್ತಿದ್ದಾರೆ. ಸರ್ಕಾರವು ಯಾವುದೇ ಕಾರಣಕ್ಕೂ ವರದಿಯನ್ನು ಒಪ್ಪದಂತೆ ಸಂಚು ರೂಪಿಸಲಾಗುತ್ತಿದೆ~ ಎಂದು ಹೇಳಿದರು.`ಸಚಿವರಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಈಗಾಗಲೇ ಜೈಲು ಸೇರಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಎಚ್. ಡಿ. ಕುಮಾರಸ್ವಾಮಿಯವರು ಜೈಲುಪಾಲಾಗುವ ಆತಂಕದಲ್ಲಿದ್ದಾರೆ. ಹಗರಣದಲ್ಲಿ ಭಾಗಿಯಾಗಿರುವವರು ಸಹ ಇದೇ ರೀತಿಯ ಆತಂಕದಲ್ಲಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು~ ಎಂದರು.`ಲೋಕಾಯುಕ್ತ ವರದಿಯನ್ನು ಸರ್ಕಾರ ಸ್ವೀಕರಿಸುವವರೆಗೆ ಸಿಪಿಎಂ ತನ್ನ ಹೋರಾಟ ಮುಂದುವರೆಸಲಿದೆ. ಎರಡನೇ ಹಂತದ ಹೋರಾಟದ ರೂಪದಲ್ಲಿ ಬಳ್ಳಾರಿಯಲ್ಲಿ  ಅಕ್ಟೋಬರ್ 21ರಂದು ಭಾರಿ ಪ್ರತಿಭಟನೆ ನಡೆಸಲಾಗುವುದು.  ಅಕ್ರಮ  ಗಣಿಗಾರಿಕೆ ಸೇರಿದಂತೆ ಇತರ ಹಗರಣಗಳಲ್ಲಿ  ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರ ಲಾಗುವುದು~ ಎಂದು ಅವರು ತಿಳಿಸಿದರು.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಬಿ.ಸಾವಿತ್ರಮ್ಮ, ಸಿಪಿಎಂ ಮುಖಂಡ ರಾದ ಎಂ.ಪಿ.ಮುನಿ ವೆಂಕಟಪ್ಪ, ಚನ್ನರಾಯಪ್ಪ, ಮಂಜುನಾಥ್ ರೆಡ್ಡಿ, ಗೋಪಿನಾಥ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.