ಸೋಮವಾರ, ಜುಲೈ 26, 2021
25 °C

ವಂಚನೆ; ಎರಡು ಲಕ್ಷ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಗ್ರಾಹಕರಿಬ್ಬರಿಗೆ ನಿವೇಶನ ನೀಡುವುದಾಗಿ ವಂಚಿಸಿದ್ದ ಎರಡು ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ತಲಾ ಒಂದೊಂದು ಲಕ್ಷ ರೂಪಾಯಿ ದಂಡ ವಿಧಿಸಿ ಗ್ರಾಹಕರ ವೇದಿಕೆ ಆದೇಶಿಸಿದೆ.ಈ ಹಣವನ್ನು ಪರಿಹಾರದ ರೂಪದಲ್ಲಿ ಅರ್ಜಿದಾರರಿಗೆ ನೀಡುವಂತೆ  ‘ಅಮರಜ್ಯೋತಿ ಗೃಹ ನಿರ್ಮಾಣ ಸಹಕಾರ ಸಂಘ’ ಹಾಗೂ ಬನಶಂಕರಿ 2ನೇ ಹಂತದಲ್ಲಿನ ‘ಸಾಯಿ ಶ್ರೀನಿಧಿ ಪ್ರಾಜೆಕ್ಟ್’ ಸಂಘಕ್ಕೆ ವೇದಿಕೆ ಆದೇಶಿಸಿದೆ‘ಅಮರಜ್ಯೋತಿ’ ವಿರುದ್ಧ ಇಂದಿರಾನಗರದ ನಿವಾಸಿ ಎಂ.ಎಸ್.ರೆಡ್ಡಪ್ಪ ಅವರು ಸಲ್ಲಿಸಿದ್ದ ದೂರಿನ ವಿಚಾರಣೆಯನ್ನು 4ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷ ಡಿ.ಕೃಷ್ಣಪ್ಪ ನೇತೃತ್ವದ ಪೀಠ ನಡೆಸಿತು. ಈ ಪ್ರಕರಣದಲ್ಲಿ ದೊಮ್ಮಲೂರು 2ನೇ ಹಂತದಲ್ಲಿ 40/60 ಅಡಿ ನಿವೇಶನವನ್ನು ನೀಡುವುದಾಗಿ ವಾಗ್ದಾನ ಮಾಡಿದ್ದ  ಸಂಘವು, 1986ರಲ್ಲಿ ಅರ್ಜಿದಾರರಿಂದ 80 ಸಾವಿರ ರೂಪಾಯಿ ಹಣ ಪಡೆದುಕೊಂಡಿತ್ತು. ಹಲವು ವರ್ಷ ಕಳೆದರೂ ನಿವೇಶನ ನೀಡದ ಹಿನ್ನೆಲೆಯಲ್ಲಿ ಅರ್ಜಿದಾರರು ವೇದಿಕೆ ಮೊರೆ ಹೋಗಿದ್ದರು.ಅರ್ಜಿದಾರರು ನೀಡಿರುವ ಸಂಪೂರ್ಣ ಹಣವನ್ನು ಅವರು ಹಣ ನೀಡಿದ ದಿನದಿಂದ ಅನ್ವಯ ಆಗುವಂತೆ ಶೇ 10ರ ಬಡ್ಡಿದರಲ್ಲಿ ಒಂದು ಲಕ್ಷ ರೂಪಾಯಿ ಪರಿಹಾರ ಸಹಿತ ನೀಡುವಂತೆ ವೇದಿಕೆ ಆದೇಶಿಸಿದೆ.

ಎರಡನೇ ಪ್ರಕರಣದಲ್ಲಿ ‘ಸಾಯಿ ಶ್ರೀನಿಧಿ ಪ್ರಾಜೆಕ್ಟ್’ ಸಂಘದ ವಿರುದ್ಧ ರಾಜಾಜಿನಗರದ ನಿವಾಸಿ ಉಮೇಶ್ ಕಾಕಡೆ ದಾಖಲಿಸಿದ್ದ ದೂರಿನ ವಿಚಾರಣೆಯನ್ನು 2ನೇ ಹೆಚ್ಚುವರಿ  ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷ ಎಸ್.ಎಸ್.ನಾಗರಾಳೆ ನೇತೃತ್ವದ ಪೀಠ ನಡೆಸಿತು.ಈ ಪ್ರಕರಣದಲ್ಲಿ ಅರ್ಜಿದಾರರಿಗೆ ಸಂಘವು 2007ರಲ್ಲಿ ಕೆಂಗೇರಿ ಬಳಿ ನಿವೇಶನ ನೀಡುವುದಾಗಿ ವಾಗ್ದಾನ ಮಾಡಿ 19.80 ಲಕ್ಷ ರೂಪಾಯಿ ಪಡೆದುಕೊಂಡಿತ್ತು. ಆದರೆ ಹಲ ವರ್ಷ ಕಳೆದರೂ ನಿವೇಶನ ಅರ್ಜಿದಾರರ ಕೈಸೇರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ವೇದಿಕೆ ಮೊರೆ ಹೋಗಿದ್ದರು.ಕೆಂಗೇರಿ ಬಳಿಯ ಚೈತನ್ಯ ನಗರದಲ್ಲಿ ಅರ್ಜಿದಾರರಿಗೆ ನಿವೇಶನ ನೀಡುವಂತೆ ಅಥವಾ ಅರ್ಜಿದಾರರು ಇಚ್ಛಿಸಿದರೆ ನಿವೇಶನದ ಬದಲು ಅವರ ಹಣವನ್ನು ಶೇ 18ರ ಬಡ್ಡಿದರದಲ್ಲಿ ವಾಪಸು ನೀಡುವಂತೆ ವೇದಿಕೆ ಆದೇಶಿಸಿದೆ.ಇದರ ಜೊತೆಗೆ ಅರ್ಜಿದಾರರಿಗೆ ವಿನಾ ಕಾರಣ ತೊಂದರೆ ನೀಡಿದ ಹಿನ್ನೆಲೆಯಲ್ಲಿ. ಒಂದು ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ಆದೇಶಿಸಲಾಗಿದೆ.ಏರ್ ಇಂಡಿಯಾ’ದಿಂದ ಕರ್ತವ್ಯಲೋಪ

ನಗರದ ಗ್ರಾಹಕರೊಬ್ಬರಿಗೆ ಮಾನಸಿಕವಾಗಿ ತೊಂದರೆ ನೀಡಿದ ‘ಏರ್ ಇಂಡಿಯಾ ಲಿಮಿಟೆಡ್’ ಸಂಸ್ಥೆಗೆ 30 ಸಾವಿರ ರೂಪಾಯಿ ದಂಡ ವಿಧಿಸಿ 2ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.ಅರ್ಜಿದಾರ ಎಸ್.ಸುಕುಮಾರನ್ ಅವರಿಗೆ ಈ ಹಣವನ್ನು ಪರಿಹಾರದ ರೂಪದಲ್ಲಿ ನೀಡುವಂತೆ ವೇದಿಕೆ ಅಧ್ಯಕ್ಷ ಎಸ್.ಎಸ್.ನಾಗರಾಳೆ ನೇತೃತ್ವದ ಪೀಠ ಆದೇಶಿಸಿದೆ.ಸುಕುಮಾರನ್ ಅವರು 2010ರ ಮೇ ತಿಂಗಳಿನಲ್ಲಿ ‘ಏರ್ ಇಂಡಿಯಾ’ ವಿಮಾನದ ಮೂಲಕ ಅಮೆರಿಕಕ್ಕೆ ತೆರಳಲು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿದ್ದರು. ಅವರು ತೆಗೆದುಕೊಂಡು ಹೋಗಿದ್ದ ಲಗೆಜ್ ನಿಗದಿತ ತೂಕಕ್ಕಿಂತ ಹೆಚ್ಚು ಭಾರ ಇದ್ದ ಕಾರಣ, ಅದಕ್ಕೆ ಅವರು ಪ್ರತ್ಯೇಕವಾಗಿ 13 ಸಾವಿರ ರೂಪಾಯಿ ತೆರಬೇಕಾಯಿತು.ಆದರೆ ಅವರ ಬಳಿ ಭಾರತೀಯ ಹಣ (ರೂಪಾಯಿ) ಇರಲಿಲ್ಲ.ಈ ಹಿನ್ನೆಲೆಯಲ್ಲಿ ಅವರು ‘ಅಮೆರಿಕನ್ ಎಕ್ಸ್‌ಪ್ರೆಸ್ ಕ್ರೆಡಿಟ್ ಕಾರ್ಡ್’ ನೀಡಿದರು. ಆದರೆ ಇದನ್ನು ಸ್ವೀಕರಿಸಲು ‘ಏರ್ ಇಂಡಿಯಾ’ ಸಿಬ್ಬಂದಿ ನಿರಾಕರಿಸಿದರು. ತಮ್ಮದು ಭಾರತೀಯ ವಿಮಾನವಾದ ಕಾರಣ, ಅಮೆರಿಕದ ಕ್ರೆಡಿಟ್ ಕಾರ್ಡ್ ಪಡೆಯುವುದಿಲ್ಲ ಎಂದು ಸಿಬ್ಬಂದಿ ತಿಳಿಸಿದರು.ಬೇರೆ ದಾರಿ ಕಾಣದೆ ಅರ್ಜಿದಾರರು ಪ್ರಯಾಸದಿಂದ ಪರಿಚಯಸ್ಥರ ಬಳಿ ಹಣ ಹೊಂದಿಸಿ ನೀಡಿ ಪ್ರಯಾಣ ಬೆಳೆಸಿದರು. ಆದರೆ ತಮಗೆ ಮಾನಸಿಕವಾಗಿ ಯಾತನೆ ನೀಡಿದ ಕಾರಣ ‘ಏರ್ ಇಂಡಿಯಾ’ ವಿರುದ್ಧ ಗ್ರಾಹಕರ ವೇದಿಕೆ ಮೊರೆ ಹೋಗಿದ್ದರು. ‘ಏರ್ ಇಂಡಿಯಾ’ ಕರ್ತವ್ಯಲೋಪ ಎಸಗಿದೆ ಎಂದು ವೇದಿಕೆ ಅಭಿಪ್ರಾಯ ಪಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.