ವಂಚನೆ: ಮಹಿಳೆ ಮೇಲೆ ಹಲ್ಲೆ
ಬೆಂಗಳೂರು: ಸಾಲದ ಹಣ ಹಿಂದಿರುಗಿಸದ ಮಹಿಳೆಗೆ ಅಕ್ಕಪಕ್ಕದ ಮನೆಯ ಮಹಿಳೆಯರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಕಾಮಾಕ್ಷಿಪಾಳ್ಯದಲ್ಲಿ ಶನಿವಾರ ನಡೆದಿದೆ.
ಹಲ್ಲೆಗೊಳಗಾಗಿರುವ ಗೌರಮ್ಮ ಎಂಬ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಕಾಮಾಕ್ಷಿಪಾಳ್ಯ ಒಂಬತ್ತನೇ ಅಡ್ಡರಸ್ತೆ ನಿವಾಸಿಯಾದ ಗೌರಮ್ಮ, ನೆರೆಹೊರೆಯ ಮಹಿಳೆಯರಿಂದ ಸಾಲ ಪಡೆದು ಹಿಂದಿರುಗಿಸಿರಲಿಲ್ಲ. ಅಲ್ಲದೇ ಬ್ಯಾಂಕ್ಗಳಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಕೆಲ ಮಹಿಳೆಯರಿಂದ ಹಣ ಪಡೆದು ದೊಡ್ಡಬಳ್ಳಾಪುರಕ್ಕೆ ಹೋಗಿ ತಲೆಮರೆಸಿಕೊಂಡಿದ್ದರು ಎಂದು ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದ್ದಾರೆ.
ಗೌರಮ್ಮ ನಾಲ್ಕು ತಿಂಗಳ ನಂತರ ಶನಿವಾರ ಬೆಳಿಗ್ಗೆ ಕಾಮಾಕ್ಷಿಪಾಳ್ಯದ ತನ್ನ ಮನೆಗೆ ಬಂದಿದ್ದರು. ಈ ವಿಷಯ ತಿಳಿದ ನೆರೆಹೊರೆಯ ಮಹಿಳೆಯರು ಅವರ ಮನೆಗೆ ಹೋಗಿ ಸಾಲ ವಾಪಸ್ ನೀಡುವಂತೆ ಕೇಳಿದರು. ಈ ವೇಳೆ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆದು ಜಗಳವಾಯಿತು. ಇದರಿಂದ ಕೋಪಗೊಂಡ ಮಹಿಳೆಯರು, ಅವರನ್ನು ರಸ್ತೆಗೆ ಎಳೆದುಕೊಂಡು ಬಂದು ಮನಬಂದಂತೆ ಥಳಿಸಿ ಠಾಣೆಗೆ ಕರೆದುಕೊಂಡು ಬಂದರು ಎಂದು ಪೊಲೀಸರು ಹೇಳಿದ್ದಾರೆ. ಗೌರಮ್ಮನ ವಿರುದ್ಧ ರತ್ನಮ್ಮ ಮತ್ತು ಜಯಮ್ಮ ಎಂಬುವರು ದೂರು ಕೊಟ್ಟಿದ್ದಾರೆ. ಅಂತೆಯೇ ಹಲ್ಲೆ ನಡೆದಿರುವ ಸಂಬಂಧ ಗೌರಮ್ಮ ದೂರು ನೀಡಿದ್ದಾರೆ.
ಮಹಿಳೆ ಆತ್ಮಹತ್ಯೆ: ಪರಪ್ಪನ ಅಗ್ರಹಾರ ಸಮೀಪದ ಡಾಕ್ಟರ್ಸ್ ಲೇಔಟ್ ನಿವಾಸಿ ಶ್ರೀಧರ್ ಎಂಬುವರ ಪತ್ನಿ ಸಂಗೀತಾ (39) ಅವರು ಶುಕ್ರವಾರ ಸಂಜೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು ಸಿದ್ಧ ಉಡುಪು ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರು. ಶ್ರೀಧರ್ ಸೆಂಟ್ರಿಂಗ್ ಕೆಲಸ ಮಾಡುತ್ತಾರೆ. ಪತಿ ಮನೆಯಿಂದ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಸಂಗೀತಾ ಅವರು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಅವರ ಚೀರಾಟ ಕೇಳಿದ ಅಕ್ಕಪಕ್ಕದ ಮನೆಯವರು ಬೆಂಕಿ ನಂದಿಸಿ ರಕ್ಷಿಸಲು ಯತ್ನಿಸಿದ್ದಾರೆ.
ಆದರೆ, ತೀವ್ರ ಸುಟ್ಟ ಗಾಯಗಳಾಗಿ ಅಸ್ವಸ್ಥಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣ್ಣು ಕುಸಿತ, ಸಾವು: ನೀರಿನ ಕೊಳವೆ (ಪೈಪ್) ದುರಸ್ತಿ ಕಾರ್ಯದ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವನ್ನಪ್ಪಿ, ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ನಗರದ ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿಯಲ್ಲಿ ಶನಿವಾರ ನಡೆದಿದೆ.
ಆಂಧ್ರಪ್ರದೇಶ ಮೂಲದ ಅಕ್ಷಯನಗರ ನಿವಾಸಿ ಆಂಜನೇಯಲು (24) ಸಾವನ್ನಪ್ಪಿದವರು. ಸುರೇಶ್ (19) ಎಂಬ ಕೂಲಿ ಕಾರ್ಮಿಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಜಲಮಂಡಳಿಯು ಬಿಳೇಕಹಳ್ಳಿಯಲ್ಲಿ ಮೂರು ತಿಂಗಳಿಂದ ನೀರಿನ ಕೊಳವೆ ದುರಸ್ತಿ ಕಾಮಗಾರಿ ನಡೆಸುತ್ತಿದೆ. ಭರತ್ರೆಡ್ಡಿ ಎಂಬುವರು ಆ ಕಾಮಗಾರಿಯ ಗುತ್ತಿಗೆದಾರರು. ಭರತ್ರೆಡ್ಡಿ, ಮುರಳಿ ಎಂಬುವರನ್ನು ಕಾಮಗಾರಿಯ ಮೇಲ್ವಿಚಾರಣೆಗೆ ನೇಮಿಸಿ ಆಂಧ್ರಪ್ರದೇಶಕ್ಕೆ ಹೋಗಿದ್ದರು.
ಸ್ಥಳದಲ್ಲಿ ಆಂಜನೇಯಲು ಮತ್ತು ಸುರೇಶ್ ಸಂಜೆ 4.30ರ ಸುಮಾರಿಗೆ ಕೆಲಸದಲ್ಲಿ ನಿರತರಾಗಿದ್ದಾಗ ಮಣ್ಣು ಕುಸಿದು ಅವರ ಮೇಲೆ ಬಿದ್ದಿತು. ಈ ವೇಳೆ ಸ್ಥಳದಲ್ಲಿದ್ದ ಇತರೆ ಕಾರ್ಮಿಕರು, ಮಣ್ಣನ್ನು ತೆರವುಗೊಳಿಸಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ತೀವ್ರ ಗಾಯಗೊಂಡಿದ್ದ ಆಂಜನೇಯಲು ರಾತ್ರಿ ಏಳು ಗಂಟೆ ಸುಮಾರಿಗೆ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.