ಸೋಮವಾರ, ಜೂನ್ 14, 2021
24 °C

ವಕೀಲರಿಗೆ ಕಠಿಣ ಶಿಕ್ಷೆ: ಖಟ್ಜು ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆದ ಹಲ್ಲೆಯನ್ನು ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಖಂಡಿಸಿದ್ದು, ಹಲ್ಲೆ ನಡೆಸಿದ ವಕೀಲರಿಗೆ ಕಾನೂನಿನ್ವಯ ಕಠಿಣ ಶಿಕ್ಷೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.ಬೆಂಗಳೂರಿನ ಕೆಲ ವಕೀಲರು ಕಾನೂನು ಕೈಗೆತ್ತಿಕೊಂಡಿದ್ದು ಮಾಧ್ಯಮ ಪ್ರತಿನಿಧಿಗಳ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಇದು ಆಕ್ಷೇಪಾರ್ಹ ಹಾಗೂ ಖಂಡನಾರ್ಹ. ಯಾವುದೇ ಘಟನೆಯನ್ನು ವರದಿ ಮಾಡದಂತೆ ತಡೆಯುವ ಹಕ್ಕು ವಕೀಲರಿಗಿಲ್ಲ. ಅದು ಅವರ ಕೆಲಸವೂ ಅಲ್ಲ. ಈ ಪ್ರಕರಣದಲ್ಲಿ ವಕೀಲರತ್ತ ಯಾವುದೇ ದಯೆ ತೋರುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.`ಬೆಂಗಳೂರಿನ ಕೆಲ ವಕೀಲರ ಬಳಿ ನಾನು ಮಾತನಾಡಿದ್ದೇನೆ. ಮಾಧ್ಯಮ ಪ್ರತಿನಿಧಿಗಳೇ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ, ಟಿವಿಯಲ್ಲಿ ಗಾಯಗೊಂಡ ಪತ್ರಕರ್ತರಷ್ಟೇ ಕಾಣುತ್ತಿದ್ದಾರೆ. ಜನಾರ್ದನ ರೆಡ್ಡಿ ಕೋರ್ಟ್‌ನಲ್ಲಿ ಹಾಜರಾಗುವುದನ್ನು ವರದಿ ಮಾಡಲು ಪತ್ರಕರ್ತರು ಅಲ್ಲಿಗೆ ಬಂದಿದ್ದರು. ಪತ್ರಿಕಾ ಸ್ವಾತಂತ್ರ್ಯ ಸಂವಿಧಾನ ಬದ್ಧ ಹಕ್ಕಾಗಿರುವುದರಿಂದ ಅದರಲ್ಲಿ ತಪ್ಪೇನೂ ಇಲ್ಲ~ ಎಂದು ಖಟ್ಜು ತಿಳಿಸಿದ್ದಾರೆ.ದೆಹಲಿ ಪತ್ರಕರ್ತರ ಖಂಡನೆ:  ಈ ಘಟನೆ ಖಂಡಿಸಿ ಕರ್ನಾಟಕ ಮೂಲದ ದೆಹಲಿ ಪತ್ರಕರ್ತರು ಪ್ರತಿಭಟನಾ ಸಭೆ ನಡೆಸಿದರು. ಹಿರಿಯ ಪತ್ರಕರ್ತರಾದ ಗಿರೀಶ್ ನಿಕ್ಕಂ, ಡಿ. ಉಮಾಪತಿ, ಪ್ರಶಾಂತ್ ನಾಥೂ ಮಾತನಾಡಿದರು. ಬಿ.ಎಸ್.ಅರುಣ್ ಇತರರು ಹಾಜರಿದ್ದರು. ಸಭೆಯ ನಂತರ ಖಟ್ಜು ಅವರಿಗೆ ಮನವಿ ಸಲ್ಲಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.