ಮಂಗಳವಾರ, ಆಗಸ್ಟ್ 11, 2020
27 °C

ವರ್ಕಶಾಪ್ ಗುಂಡಿ: ಅತಿಕ್ರಮಣ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ನಗರದ ವರ್ಕ್‌ಶಾಪ್ ಗುಂಡಿಯಲ್ಲಿ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದ ಜಾಗವನ್ನು ಮಂಗಳವಾರ ನಗರಸಭೆಯವರು ತೆರವುಗೊಳಿಸಿದರು.ಹಳೆಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಲ್ಲಿಯ ವ್ಯಾಪಾರಿಗಳು ಮಾರಾಟದ ವಸ್ತುಗಳನ್ನೆಲ್ಲ ಅಂಗಡಿಯ ಹೊರಗೇ ಇಟ್ಟಿದ್ದರಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಹಲವು ವರ್ಷಗಳಿಂದ ದೂರುತ್ತಿದ್ದರು. ಮಾತ್ರವಲ್ಲದೆ ನೀರು ಹರಿದುಹೋಗಲು ಸಹ ವ್ಯವಸ್ಥೆ ಇಲ್ಲದೆ ಮಳೆಗಾಲದಲ್ಲಿ ಇಲ್ಲಿ ಕಾಲಿಡುವುದೇ ಕಷ್ಟವಾಗುತ್ತಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗೆ ಬಿಟ್ಟಿದ್ದ ಜಾಗವೂ ಅತಿಕ್ರಮಣಗೊಂಡಿದ್ದರಿಂದ ಇಲ್ಲಿ ಸಮಸ್ಯೆ ನಿರ್ಮಾಣವಾಗಿತ್ತು.ಮಂಗಳವಾರ ಮಧ್ಯಾಹ್ನ ಜೆಸಿಬಿ ಯಂತ್ರ ಹಾಗೂ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದ ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್, ರಸ್ತೆಯ ಅತಿಕ್ರಮಣ ತೆರವಿಗೆ ಮುಂದಾದರು. ಆದರೆ ರಸ್ತೆ ಬದಿಯಲ್ಲಿ ಇಟ್ಟಿರುವ ವಸ್ತುಗಳನ್ನು ತೆರವುಗೊಳಿಸುವಂತೆ ಮೊದಲೇ ವ್ಯಾಪಾರಿಗಳಿಗೆ ಸೂಚನೆ ನೀಡಿ, ಅದಕ್ಕಾಗಿ ಕಾಲಾವಕಾಶವನ್ನೂ ನೀಡಿದರು. ಇದರ ಹೊರತಾಗಿಯೂ ಕೆಲವು ವ್ಯಾಪಾರಿಗಳು ನಗರಸಭೆಯ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದರು.

 

ವ್ಯಾಪಾರಿಯೊಬ್ಬರು ತನ್ನ ಅಂಗಡಿ ಮುಂದಿನಿಂದಲೇ ಕೆಲಸವನ್ನು ಯಾಕೆ ಆರಂಭಿಸುತ್ತಿದ್ದೀರಿ ? ಮೊದಲು ಉಳಿದವರು ಮಾಡಿರುವ ಅತಿಕ್ರಮಣ ತೆರವು ಮಾಡಿಬನ್ನಿ ಎಂದು ಅಧ್ಯಕ್ಷರ ಜತೆ ವಾಗ್ವಾದಕ್ಕೆ ಇಳಿದರು.ಮಾತ್ರವಲ್ಲದೆ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿ ಜೆಸಿಬಿ ಮುಂದೆ ಕುಳಿತರು. ಈ ಸಂದರ್ಭದಲ್ಲಿ ಅಧ್ಯಕ್ಷರು ಮತ್ತು ಕೆಲವು ವ್ಯಾಪಾರಿಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು.ಅಧ್ಯಕ್ಷರಿಗೆ ಬೆಂಬಲ ನೀಡಿದ ನಗರಸಭೆ ಸದಸ್ಯ ಬಂಗಾರಿ ಮಂಜು ಅವರೂ ವ್ಯಾಪಾರಿಗಳೊಡನೆ ವಾಗ್ವಾದ ನಡೆಸಿದರು. ವ್ಯಾಪಾರಿಗಳ ವಿರೋಧ ತೀವ್ರಗೊಂಡ ಪರಿಣಾಮ ಶಂಕರ್ ಅವರು ಪೊಲೀಸರನ್ನು ಕರೆಸಿದರು. ಕೊನೆಗೆ ವ್ಯಾಪಾರಿಗಳ ಹಿತಕ್ಕಾಗಿಯೇ ಕಾರ್ಯಾಚರಣೆ ಹಮ್ಮಿಕೊಂಡಿದ್ದೇವೆ, ರಸ್ತೆ ಸುಧಾರಣೆಯಾದರೆ ಜನರಿಗೂ ವ್ಯಾಪಾರಿ ಗಳಿಗೂ ಉಪಯೋಗವಾಗುತ್ತದೆ ಎಂದು ಸಮಾಧಾ ಪಡಿಸಿದ ಬಳಿಕ ಕಾರ್ಯಾಚರಣೆ ಸುಗಮವಾಗಿ ನಡೆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.