ಶನಿವಾರ, ಏಪ್ರಿಲ್ 17, 2021
30 °C

ವರ್ಗಾವಣೆಯಾದ ಶಿಕ್ಷಕರ ಬಿಡುಗಡೆ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಉಂಟಾಗಿರುವ ಶಿಕ್ಷಕರ ಕೊರತೆಯ ಬಗ್ಗೆ ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.ಸೋಮವಾರ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಸಿದ್ಧನಗೌಡ ಪೊಲೀಸ್‌ಪಾಟೀಲ, ಪ್ರತಿ ವರ್ಷ ಶಿಕ್ಷಕರ ವರ್ಗಾವಣೆ ಆಗುತ್ತದೆ. ಆದರೆ ಖಾಲಿ ಆದ ಹುದ್ದೆಗಳಿಗೆ ಶಿಕ್ಷಕರು ಬರುತ್ತಿಲ್ಲ. ಇದರಿಂದ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗುತ್ತಿದೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಈ ರೀತಿಯಾದರೆ ಜಿಲ್ಲೆಯ ಫಲಿತಾಂಶ ಸುಧಾರಣೆ ಆಗುವುದಾದರೂ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದರು.ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರ ವರ್ಗಾವಣೆ ಆಗಿಲ್ಲ. ಪ್ರೌಢಶಾಲೆಯ 21 ಶಿಕ್ಷಕರು ವರ್ಗಾವಣೆ ಹೊಂದಿದ್ದಾರೆ ಎಂದು ಶಿಕ್ಷಣ ಇಲಾಖೆಯ ಎಂ. ನಾಸೀರುದ್ದೀನ್ ಉತ್ತರಿಸಿದರು.ಈ ಬಾರಿ ವರ್ಗಾವಣೆಯಾಗಿರುವ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬೇಡಿ. ಜಿಲ್ಲೆಯ ಮಕ್ಕಳ ಭವಿಷ್ಯವನ್ನು ಕತ್ತಲೆಗೆ ದೂಡಿ, ಶಿಕ್ಷಕರ ವರ್ಗಾವಣೆ ಮಾಡುವುದಾದರೆ ಅದರ ಪ್ರಯೋಜನವಾದರೂ ಏನು? ಕೂಡಲೇ ಎಲ್ಲ ಶಿಕ್ಷಕರ ಬಿಡುಗಡೆಯನ್ನು ತಡೆ ಹಿಡಿಯುವಂತೆ ಸಿದ್ಧನಗೌಡ ಸೂಚಿಸಿದರು.ಶಿಕ್ಷಕರ ಅಮಾನತು ಹಾಗೂ ಮರು ನಿಯುಕ್ತಿಯನ್ನು ಮಾಡುವವರು ಯಾರು? ಗ್ರಾಮೀಣ ಭಾಗಗಳಲ್ಲಿ ಇರುವ ಶಿಕ್ಷಕರು ಉದ್ದೇಶಪೂರ್ವಕವಾಗಿ ಅಮಾನತುಗೊಳ್ಳುತ್ತಿದ್ದು, ನಂತರ ತಮಗೆ ಬೇಕಾದ ಸ್ಥಳದಲ್ಲಿ ಮರು ನಿಯುಕ್ತಿ ಪಡೆಯುತ್ತಿದ್ದಾರೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಗೌಡ ಮರಕಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಶಿಕ್ಷಕರ ಅಮಾನತು ಹಾಗೂ ಮರು ನಿಯುಕ್ತಿ ಪ್ರಕ್ರಿಯೆಗಳ ಬಗ್ಗೆ ಸ್ಥಾಯಿ ಸಮಿತಿ ಗಮನಕ್ಕೆ ತರಬೇಕು. ಅಥವಾ ಸಮಿತಿಯ ಕಾರ್ಯದರ್ಶಿಗಳ ಗಮನಕ್ಕಾದರೂ ತರುವಂತೆ ಹನುಮೇಗೌಡ ಮರಕಲ್ ಸೂಚನೆ ನೀಡಿದರು.ಡಿಡಿಪಿಐ ಕಚೇರಿ ಯಾರ ವ್ಯಾಪ್ತಿಯಲ್ಲಿದೆ?: ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಯಾರ ವ್ಯಾಪ್ತಿಯಲ್ಲಿದೆ ಎನ್ನುವುದೇ ತಿಳಿಯದಂತಾಗಿದೆ ಎಂದು ಸ್ಥಾಯಿ ಸಮಿತಿ ಕಾರ್ಯದರ್ಶಿ ಬಿ.ವಿ. ಭೋಸಲೆ ಅಸಮಾಧಾನ ವ್ಯಕ್ತಪಡಿಸಿದರು.ಶಿಕ್ಷಣ ಇಲಾಖೆಯಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಜಿಲ್ಲಾ ಪಂಚಾಯಿತಿಯ ಗಮನಕ್ಕೆ ಬರುತ್ತಿಲ್ಲ. ಶಿಕ್ಷಣ ಇಲಾಖೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆಯೋ ಅಥವಾ ಜಿಲ್ಲಾ ಪಂಚಾಯಿತಿಯೇ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುತ್ತದೆಯೋ ತಿಳಿಯದಾಗಿದೆ ಎಂದು ಹೇಳಿದರು.ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸರ್ಕಾರೇತರ ಸಂಸ್ಥೆಗಳ ಆಯ್ಕೆ ಪ್ರಕ್ರಿಯೆಯನ್ನು ಸ್ಥಾಯಿ ಸಮಿತಿಯ ಗಮನಕ್ಕೆ ತರುವಂತೆಯೂ ಸೂಚನೆ ನೀಡಲಾಯಿತು. ಅಲ್ಲದೇ ಗುಣಮಟ್ಟದ ಪೀಠೋಪಕರಣ ಖರೀದಿ ಮಾಡದೇ ಇರುವ ಎಸ್‌ಡಿಎಂಸಿ ಹಾಗೂ ಶಾಲಾ ಮುಖ್ಯಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸದಸ್ಯ ಸಿದ್ಧನಗೌಡ ಪೊಲೀಸ್‌ಪಾಟೀಲ, ಸರ್ವ ಶಿಕ್ಷಣ ಅಭಿಯಾನದ ಅಧಿಕಾರಿಗಳಿಗೆ ಸೂಚಿಸಿದರು.ಅಸಮಾಧಾನ: ಜಿಲ್ಲೆಯ ಬಿಸಿಯೂಟದ ಅಧಿಕಾರಿಗಳ ಕಾರ್ಯವೈಖರಿಗೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು. ಅಕ್ಷರ ದಾಸೋಹಕ್ಕೆ ಸಂಬಂಧಿಸಿದ ಯಾವುದೇ ಕಡತಗಳು ತಮ್ಮ ಗಮನಕ್ಕೆ ಬರುತ್ತಿಲ್ಲ ಎಂದು ಸ್ವತಃ ಕಾರ್ಯದರ್ಶಿ ಬಿ.ವಿ. ಭೋಸಲೆ ಹೇಳಿದರು.ಜಿಲ್ಲೆಯ ವಿಭಜನೆ ಆಗುವ ಮೊದಲು ಯಾದಗಿರಿ ಜಿಲ್ಲೆಯ 434 ಅಡುಗೆ ಕೋಣೆಗಳ ನಿರ್ಮಾಣಕ್ಕಾಗಿ ರೂ.2 ಕೋಟಿಗೂ ಹೆಚ್ಚು ಹಣ ಗುಲ್ಬರ್ಗ ಜಿಲ್ಲಾ ಪಂಚಾಯಿತಿಗೆ ಬಿಡುಗಡೆ ಆಗಿತ್ತು. ಈಗಲೂ ಈ ಹಣ ಗುಲ್ಬರ್ಗ ಜಿಲ್ಲಾ ಪಂಚಾಯಿತಿಯಲ್ಲಿಯೇ ಇದೆ. ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಹನುಮೇಗೌಡ ಮರಕಲ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಬಿಸಿಯೂಟ ಅಧಿಕಾರಿ ನಾಟೇಕಾರ, ಎರಡು ಬಾರಿ ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಅಧಿಕಾರಿಗಳನ್ನು ಭೇಟಿ ಮಾಡಿ ಬಂದಿರುವುದಾಗಿ ಹೇಳಿದರು.ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹನುಮೇಗೌಡ ಮರಕಲ್, ತಾವೇ ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಹಣ ಬಿಡುಗಡೆ ಮಾಡಲು ಸಿದ್ಧರಿರುವುದಾಗಿ ಹೇಳಿದ್ದಾರೆ. ಆದರೆ ಇಲ್ಲಿನ ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾದರೆ ಜಿಲ್ಲೆಯ 434 ಅಡುಗೆ ಕೋಣೆಗಳ ನಿರ್ಮಾಣ ಮಾಡುವುದಾದರೂ ಯಾವಾಗ ಎಂದು ಕೇಳಿದರು.ಈ ಬಗ್ಗೆ ಕ್ರಮ ಕೈಗೊಂಡಿರುವ ಬಗ್ಗೆ ತಮ್ಮ ಗಮನಕ್ಕೆ ತಂದಿದ್ದೀರಾ ಎಂದು ಪ್ರಶ್ನಿಸಿದ ಕಾರ್ಯದರ್ಶಿ ಬಿ.ವಿ. ಭೋಸಲೆ, ಅಕ್ಷರ ದಾಸೋಹದ ಯಾವ ಕಡತಗಳು ತಮ್ಮ ಗಮನಕ್ಕೆ ಬರುತ್ತಿಲ್ಲ. ಏನಾದರೂ ತೊಂದರೆ ಆದರೆ ಅದಕ್ಕೆ ಅವರೇ ಜವಾಬ್ದಾರರಾಗುತ್ತಾರೆ. ಅಕ್ಷರ ದಾಸೋಹದ ಅಧಿಕಾರಿಗಳು ನಾಮಕೆವಾಸ್ತೆ ಅಧಿಕಾರಿಯಾಗಿ ಬಂದಿದ್ದಾರೆ. ಯಾವುದೇ ಕೆಲಸ ಮಾಡುತ್ತಿಲ್ಲ. ಈ ಕುರಿತು ಸರ್ಕಾರಕ್ಕೆ ವರದಿ ಕಳುಹಿಸುವುದಾಗಿ ತಿಳಿಸಿದರು.ಸ್ಥಾಯಿ ಸಮಿತಿ ಹಾಗೂ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳ ಗಮನಕ್ಕೆ ತರದೇ ಇಲಾಖೆಯ ಕಾರ್ಯಕ್ರಮ ಅನುಷ್ಠಾನಕ್ಕೆ ತರುತ್ತಿದ್ದೀರಾ? ನಿಮ್ಮ ಇಲಾಖೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆಯೋ ಅಥವಾ ಸ್ವತಂತ್ರ ಇಲಾಖೆಯೋ ಎಂದು ಹನುಮೇಗೌಡ ಮರಕಲ್ ಹಾಗೂ ಸಿದ್ಧನಗೌಡ ಪೊಲೀಸ್‌ಪಾಟೀಲ ಖಾರವಾಗಿ ಪ್ರಶ್ನಿಸಿದರು.

ನಂತರ ಶಾಲಾ ಕಟ್ಟಡಗಳ ನಿರ್ಮಾಣ, ಆರೋಗ್ಯ ಇಲಾಖೆಯ ಕಾರ್ಯಕ್ರಮಗಳು, ಸರ್ವ ಶಿಕ್ಷಣ ಅಭಿಯಾನದ ಯೋಜನೆಗಳ ಕುರಿತು ಪರಿಶೀಲನೆ ನಡೆಸಲಾಯಿತು.

ಸದಸ್ಯರಾದ ಭೀಮರಾಯ ಕಂದಕೂರ, ಪಾರ್ವತೆಮ್ಮ ಕಾಡಂನೋರ್, ಶರಣಮ್ಮ ಸಾಹುಕಾರ, ಮಲ್ಲಮ್ಮ ಕಣೇಕಲ್ ಸಭೆಯಲ್ಲಿ ಪಾಲ್ಗೊಂಡಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.