ಸೋಮವಾರ, ಮೇ 23, 2022
20 °C

ವರ್ಚಸ್ಸಿಗಾಗಿ ಕಸರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿಯ ಹಿರಿಯ ನಾಯಕ ಲಾಲಕೃಷ್ಣ ಅಡ್ವಾಣಿ ಅವರ 38 ದಿನಗಳ `ಜನಚೇತನ ಯಾತ್ರೆ~ ಮಸುಕಾಗಿರುವ ತಮ್ಮ ವರ್ಚಸ್ಸನ್ನು ಮರಳಿ ಪಡೆಯುವ ಕಸರತ್ತು. ಭ್ರಷ್ಟಾಚಾರ ಮತ್ತು ಕಪ್ಪುಹಣ ಕುರಿತಾಗಿ ಜನಜಾಗೃತಿ ಮೂಡಿಸಲು ಕೈಗೊಳ್ಳಲು ಉದ್ದೇಶಿಸಿರುವ ಯಾತ್ರೆ ಅವರನ್ನು ಪ್ರಧಾನಿ ಹುದ್ದೆಯ ಹೊಸ್ತಿಲಿಗೆ ತಂದು ನಿಲ್ಲಿಸುವುದೆಂದು ಹೇಳಲಾಗದು. ದೇಶದ ಪ್ರಧಾನ ಪ್ರತಿಪಕ್ಷವಾಗಿ ಬಿಜೆಪಿಯು, ಯುಪಿಎ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಅವಕಾಶವನ್ನು ಕಳೆದ ಏಳು ವರ್ಷಗಳಲ್ಲಿ ಬಳಸಿಕೊಂಡಿಲ್ಲ ಎಂಬುದನ್ನು ದೇಶದ ಜನತೆ ಪ್ರತ್ಯಕ್ಷವಾಗಿ ಕಂಡಿದ್ದಾರೆ. ತರಂಗಾಂತರ ಹಂಚಿಕೆ, ಕಾಮನ್ವೆಲ್ತ್ ಕ್ರೀಡಾಕೂಟದ ವ್ಯವಹಾರ ಮೊದಲಾದ ಲಕ್ಷಾಂತರ ಕೋಟಿ ರೂಪಾಯಿಗಳ ಹಗರಣಗಳು ಬಯಲಾಗಿ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಒಳಪಡುವಂತೆ ಆಗಿರುವುದಕ್ಕೆ ಮಹಾ ಲೇಖಪಾಲರ ವರದಿ, ನಾಗರಿಕ ಸಮಾಜ ಮತ್ತು ಮಾಧ್ಯಮಗಳ ಬೆಂಬಿಡದ ಪ್ರಚಾರ ಕಾರಣವೆಂಬುದನ್ನು ಬಿಜೆಪಿ ಕೂಡ ಅಲ್ಲಗಳೆಯಲಾಗದು. ತರಂಗಾಂತರ ಹಂಚಿಕೆ ಹಗರಣದ ಬೇರುಗಳು ಎನ್‌ಡಿಎ ಆಳ್ವಿಕೆಯ ಕಾಲದಲ್ಲಿ ಮೂಡಿದ್ದು ಕೂಡ ಸುಪ್ರೀಂ ಕೋರ್ಟ್ ಉಸ್ತುವಾರಿಯ ತನಿಖೆಯ ವ್ಯಾಪ್ತಿಗೆ ಒಳಪಟ್ಟಿರುವುದನ್ನು ಜನ ಮರೆತಿಲ್ಲ. ಕೇಂದ್ರದಲ್ಲಿ ಒಂದು ಅವಧಿಯಲ್ಲಿ ಮತ್ತು ಹಲವು ರಾಜ್ಯಗಳಲ್ಲಿ ಕೆಲವು ದಶಕಗಳಿಂದ ಅಧಿಕಾರ ನಡೆಸಿರುವ ಬಿಜೆಪಿ ಈಗ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ನೈತಿಕತೆಯನ್ನು ಉಳಿಸಿಕೊಂಡಿಲ್ಲ ಎಂಬುದಕ್ಕೆ ಅದರ ಆಡಳಿತದ ಅವಧಿಯಲ್ಲಿ ಬಯಲಾಗಿರುವ ಹಗರಣಗಳೇ ಸಾಕ್ಷಿಯಾಗಿವೆ.

ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಧಿಕಾರ ಹಿಡಿದ ಬಿಜೆಪಿ ಕಳೆದ ಮೂರು ವರ್ಷಗಳಲ್ಲಿಯೇ ಗಂಭೀರ ಸ್ವರೂಪದ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದೆ. ಹಲವು ಸಚಿವರು ಭ್ರಷ್ಟಾಚಾರ ಆರೋಪಗಳ ಕಾರಣದಿಂದ ರಾಜೀನಾಮೆ ನೀಡಿದ್ದಾರೆ. ಅವರಲ್ಲಿ ಇಬ್ಬರು ಜೈಲು ಸೇರಿದ್ದಾರೆ. ಪಕ್ಷ ಅಧಿಕಾರದಲ್ಲಿದ್ದಾಗ ಆಡಳಿತದಲ್ಲಿ ಭ್ರಷ್ಟಾಚಾರ ತಡೆಯಲು ಪಕ್ಷದ ಹಿರಿಯರಾಗಿ ಅಸಮರ್ಥರಾಗಿದ್ದ ಅಡ್ವಾಣಿ ಅವರು ಈಗ ಯಾತ್ರೆ ನಡೆಸಿ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸಲು ಹೊರಟಿರುವುದು ಆತ್ಮವಂಚನೆಯ ಪ್ರದರ್ಶನ. ವಿದೇಶಿ ಬ್ಯಾಂಕುಗಳಲ್ಲಿ ದೇಶದ ಭ್ರಷ್ಟ ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳು ಕಪ್ಪುಹಣವನ್ನು ಇರಿಸಿದ್ದಾರೆಂಬ ಸಂಗತಿ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಆಗಿರುವ ಬೆಳವಣಿಗೆಯಲ್ಲ. ಎನ್‌ಡಿಎ ಅಧಿಕಾರದಲ್ಲಿ ಇದ್ದಾಗಲೂ ಈ ಪ್ರಶ್ನೆ ಜೀವಂತವಾಗಿತ್ತು. ಎನ್‌ಡಿಎ ಸರ್ಕಾರದಲ್ಲಿ ಉಪಪ್ರಧಾನಿಯೇ ಆಗಿದ್ದ ಸಂದರ್ಭದಲ್ಲಿ ಕಪ್ಪುಹಣವನ್ನು ದೇಶಕ್ಕೆ ಮರಳಿ ತರುವುದಕ್ಕೆ ಅವಶ್ಯಕವಾದ ಪ್ರಯತ್ನವನ್ನು ತಾವು ಯಾಕೆ ಮಾಡಲಿಲ್ಲ ಎಂಬುದಕ್ಕೆ ಅಡ್ವಾಣಿಯವರು ಜನತೆಗೆ ಉತ್ತರಿಸಬೇಕಾಗಿದೆ. ವಾಸ್ತವವಾಗಿ ಈ ಯಾತ್ರೆ ಪಕ್ಷದಲ್ಲಿ ತಮ್ಮ ವರ್ಚಸ್ಸನ್ನು ಮರಳಿ ಗಳಿಸಿಕೊಳ್ಳಲು ಅಡ್ವಾಣಿ ಅವರು ನಡೆಸುತ್ತಿರುವ ಪ್ರಯತ್ನ. ಅವರ ಹೋರಾಟದ ಪ್ರಾಮಾಣಿಕತೆ ಬಗ್ಗೆ ಜನತೆಯಲ್ಲಿ ವಿಶ್ವಾಸ ಮೂಡುತ್ತಿಲ್ಲ. ರಾಮಮಂದಿರ ನಿರ್ಮಾಣದ ಉದ್ದೇಶ ಇಟ್ಟುಕೊಂಡು ಇಪ್ಪತ್ತೆರಡು ವರ್ಷಗಳ ಹಿಂದೆ ನಡೆಸಿದ್ದ ರಥಯಾತ್ರೆ ಜನತೆಯಲ್ಲಿ ಧಾರ್ಮಿಕ ಭಾವನೆಯನ್ನು ಪ್ರಚೋದಿಸಿ ಕೋಮು ವೈಷಮ್ಯಕ್ಕೆ ಕಾರಣವಾಗಿತ್ತು. ಈ ಸಲದ ಯಾತ್ರೆಗೆ ಧಾರ್ಮಿಕ ಭಾವನೆಯ ಪ್ರಚೋದನೆಯ ಉದ್ದೇಶ ಇಲ್ಲದಿರುವುದರಿಂದ ಕಾನೂನು ವ್ಯವಸ್ಥೆಗೆ ಬಾಧಕವಾಗಲಾರದು. ಅದೊಂದೇ ಸಮಾಧಾನದ ಸಂಗತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.