ಗುರುವಾರ , ಮೇ 19, 2022
21 °C
ಮಾತ್ ಮಾತಲ್ಲಿ

`ವರ್ತಮಾನದ ಚಂದಿರನೇ ತಂಪು'

ನಿರೂಪಣೆ: ರೂಪಾ ಕೆ.ಎಂ. Updated:

ಅಕ್ಷರ ಗಾತ್ರ : | |

`ವರ್ತಮಾನದ ಚಂದಿರನೇ ತಂಪು'

ಅತಿ ಕಷ್ಟದ ಕೆಲಸವೆಂದರೆ ಮಾತು ಹಾಗೂ ಬದುಕಿನ ವ್ಯಾಪ್ತಿಯನ್ನು ವ್ಯಾಖ್ಯಾನಿಸುವುದು. ಸುಮ್ಮನೆ ಎರಡೇ ಸಾಲಿನಲ್ಲಿ ಇವೆರಡರ ಅರ್ಥ ಕಟ್ಟಿಕೊಡಲು ಸಾಧ್ಯವೇ ಆಗದು. ಹೀಗಿದ್ದರೂ ಮಾತೇ ನನ್ನ ಪ್ರಪಂಚ. ನಿರೂಪಣಾ ವೃತ್ತಿಯ ಹೂರಣವೇ ಮಾತು. ಹಾಗಾಗಿ ನಾನು ಮಾತನಾಡುತ್ತಲೇ ಹೋದೆ. ಮಾತಿನಿಂದ ಬದುಕಿನಲ್ಲಿ ಹಲವರನ್ನು ಪಡೆದುಕೊಂಡಿದ್ದೇನೆ, ಕೆಲವರನ್ನು ಕಳೆದುಕೊಂಡಿದ್ದೇನೆ. ಹಾಗೆಂದು ಮನಬಂದತೆ, ಎಲ್ಲರೊಂದಿಗೆ ಸುಖಾಸುಮ್ಮನೆ ಹರಟುವುದೆಂದರೆ ನನಗೆ ಆಗದು. ಆಂತರ್ಯಕ್ಕೆ ಹಿಡಿಸಿದವರ ಅಂತರಂಗವನ್ನು ಮಾತಿನಿಂದ ತಟ್ಟುವುದು ಪ್ರಿಯವಾದ ಕೆಲಸ.ಚಿತ್ರದುರ್ಗದ ಹೊಳಲ್ಕೆರೆ ನನ್ನೂರು. ನಿರೂಪಕಿಯಾಗಬೇಕು, ಟಿ.ವಿ. ಪರದೆಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಯಾವ ಕನಸೂ ನನ್ನಲ್ಲಿ  ಮೊಳೆತಿರಲಿಲ್ಲ. ಆಕಸ್ಮಿಕವಾಗಿ ಸಿಕ್ಕ ಅವಕಾಶಗಳನ್ನು ಅಳೆದೂ ತೂಗಿ ಪಡೆಯುತ್ತಲೇ ಹೋದೆ. ಪಿಯುಸಿ ಓದುತ್ತಿರುವ ಹೊತ್ತಿನಲ್ಲಿ ಒಂದು ಮಧ್ಯಾಹ್ನ ಟಿ.ವಿ. ನೋಡುತ್ತಿದ್ದವಳ ಮನಸ್ಸಿನಲ್ಲಿ ಯಾಕಿಷ್ಟು ಸಮಯವನ್ನು ವ್ಯರ್ಥ ಮಾಡುತ್ತಿದ್ದೇನೆ? ನಿರೂಪಕಿಯಾಗಿ ಕೆಲಸ ಮಾಡಿದರೆ ಪಾಕೆಟ್ ಮನಿ ಜತೆಗೆ ಸಮಯವನ್ನು ಬಳಸಿಕೊಂಡ ಸಾರ್ಥಕತೆ ಸಿಗುತ್ತದೆಯಲ್ಲ? ಎಂಬ ಯೋಚನೆ ಹೊಳೆದಿದ್ದೇ ತಡ ಅದನ್ನೇ ಅಪ್ಪನಲ್ಲಿ ಉಸುರಿದೆ.ಅಪ್ಪ ಚಂದ್ರಶೇಖರ ತಾಳ್ಯ ಸಾಹಿತಿ. ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ಸಖ್ಯವಿದ್ದರಿಂದ ಅವರ ಮೂಲಕ `ಈ-ಟೀವಿ'ಯಲ್ಲಿ  ನಿರೂಪಕಳಾಗುವ ಅವಕಾಶ ದಕ್ಕಿತು. ಅಲ್ಲಿಂದ ನಿರೂಪಣಾ ಪಯಣ ಆರಂಭವಾಯಿತು. ಆಮೇಲೆ ಬಹುತೇಕ ಖಾಸಗಿ ಚಾನೆಲ್‌ಗಳಲ್ಲಿ ನಿರೂಪಣೆ ಮಾಡಿ ಸೈ ಅನಿಸಿಕೊಂಡೆ. ಸದ್ಯ `ಯೂ2' ಚಾನೆಲ್‌ನಲ್ಲಿ ಹಳೆಯ ಗೀತೆಗಳನ್ನು ಆಧರಿಸಿದ `ಬೆಳ್ಳಿತೆರೆ' ಹಾಗೂ ಸಿನಿಮಾ ತಾರೆಗಳ `ಸಿನಿಮಾ ಝಲಕ್' ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದೇನೆ.ಯಾವುದೇ ಅಂಜಿಕೆ, ಅಳುಕು ಇಲ್ಲದೇ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದೆ. ಪ್ರತಿದಿನವೂ ಕಲಿಕೆಯ ಭಾಗ; ಜೀವನವೆಂಬ ಹೊತ್ತಿಗೆಯ ಒಂದು ಪುಟ. ಹಾಗಾಗಿ ಎಲ್ಲವನ್ನು ಸಮಚಿತ್ತದಿಂದಲೇ ಸರಿದೂಗಿಸಿಕೊಂಡು ಹೋಗುತ್ತೇನೆ. ಅಪ್ಪನಿಗೆ `ಮಹಾಭಾರತ'ವೆಂದರೆ ಬಹಳ ಇಷ್ಟ. ಹಾಗಾಗಿ ಸ್ವಾಭಿಮಾನದ ದ್ಯೋತಕದಂತಿರುವ ಪಂಚ ಪಾಂಡವರ ಪತ್ನಿ `ಪಾಂಚಾಲಿ'ಯ ಹೆಸರನ್ನೇ ನನಗೆ ಇಟ್ಟರು.ಬಾಲ್ಯವೆಂಬುದು ಕುತೂಹಲ ಹಾಗೂ ಸಂಭ್ರಮದ ಹೂಗುಚ್ಛ. ಸದಾ ಬೀದಿ ಬದಿಯಲ್ಲಿ ಗೆಳೆಯರ ಬಳಗವನ್ನು ಕಟ್ಟಿಕೊಂಡು ಆಟವಾಡುತ್ತಿದ್ದೆ. ಅಪ್ಪ ಸಾಹಿತ್ಯಪ್ರಿಯರಾಗಿದ್ದರಿಂದ ಮನೆಯ ತುಂಬಾ ಬರೀ ಅಕ್ಷರ ಮೇಳ. ಇಂದಿಗೂ ನನಗೆ ಓದುವುದೆಂದರೆ ಬಹಳ ಇಷ್ಟ. ಆದರೆ ಬರವಣಿಗೆಯೆಂಬುದು ಮರೀಚಿಕೆ. ಇಂದಿಗೂ ಎಚ್.ಎಸ್.ವೆಂಕಟೇಶಮೂರ್ತಿ, ಕುವೆಂಪು, ಬೇಂದ್ರೆ ಅವರ ಕಾವ್ಯ, ಕತೆ, ಕಾದಂಬರಿಗಳನ್ನು ಪುಟಗಳನ್ನು ಅಗಾಗ್ಗೆ ತಿರುವಿ ಹಾಕುತ್ತಲೇ ಇರುತ್ತೇನೆ.ಚಿಕ್ಕವಳಿದ್ದಾಗ ಕೆಲವು ನಾಟಕಗಳಲ್ಲಿ ಅಭಿನಯಿಸಿದ್ದು, ನೃತ್ಯ ಪ್ರದರ್ಶನ ನೀಡಿದ್ದು ಬಿಟ್ಟರೆ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದು ಕಡಿಮೆಯೇ. ಹೀಗಿದ್ದರೂ ನನಗೆ ಸಭಾ ಕಂಪನವೆಂಬುದು ದೂರವೇ. ಟಿ.ಎನ್.ಸೀತಾರಾಂ ಅವರ `ಮುಕ್ತ'ಧಾರವಾಹಿಯ ಕೆಲವು ಕಂತುಗಳಲ್ಲಿಯೂ ನಟಿಸಿದ್ದೇನೆ.ಸಿನಿಮಾಗಳಲ್ಲಿ ನಟಿಸುವ ಅವಕಾಶ ಬಂದಿದೆಯಾದರೂ ತುಸು ಯೋಚಿಸಿ ನಿರ್ಧಾರ ಕೈಗೊಳ್ಳುವ ಮನಸ್ಸು ಮಾಡಿದ್ದೇನೆ. ಗಾಂಧಿನಗರದಲ್ಲಿರುವ ಮನಸ್ಸುಗಳನ್ನು ಅರ್ಥಮಾಡಿಕೊಳ್ಳುವುದು ನಿಜಕ್ಕೂ ಕಷ್ಟ. `ಅಹಂ' ತುಂಬಿರುವ ಜನರ ನಡುವೆ ಮಾನವೀಯತೆಯನ್ನು ಕಂಡುಕೊಳ್ಳುವುದು ಇನ್ನೂ ಕಷ್ಟ.ಇವೆಲ್ಲದರ ನಡುವೆ ಈಸಬೇಕು, ಇದ್ದು ಜಯಿಸಬೇಕು. ಕಲಾವಿದರ ಬದುಕು ನೀರ ಮೇಲಿನ ಗುಳ್ಳೆಯಂತೆ. ಹಾಗಾಗಿ ಅತಿ ನಿರೀಕ್ಷೆ ಇಟ್ಟುಕೊಂಡವರಿಗೆ ಹತಾಶೆ ಕಾಡುತ್ತದೆ. ಬಗೆಬಗೆಯ ಅಡುಗೆಗಳನ್ನು ಮಾಡಿ ಬಡಿಸುವುದರಲ್ಲಿ ಸಿದ್ಧಹಸ್ತಳು. ವಾದ್ಯಗೋಷ್ಠಿಗಳು ಸದಾ ಕೈ ಬೀಸಿ ಕರೆಯುತ್ತವೆ.ಜೀವನದಲ್ಲಿ ಇದೇ ಆಗಬೇಕು ಎಂದುಕೊಂಡು ಹೆಜ್ಜೆ ಇಟ್ಟವಳೇ ಅಲ್ಲ. ಪ್ರತಿದಿನವೂ ನನಗೆ ಹುರುಪಿನ ದ್ಯೋತಕ. ಅನಿರೀಕ್ಷಿತ ತಿರುವುಗಳು, ಎದುರಾಗುವ ಆಕಸ್ಮಿಕವನ್ನು ನಗುಮೊಗದಿಂದಲೇ ಸ್ವೀಕರಿಸುವುದನ್ನು ಕಲಿತಿದ್ದೇನೆ. ಹಾಗಾಗಿ `ಇಂದು ಇಂದಿಗೆ ನಾಳೆ ನಾಳೆಗೆ' ಎಂಬ ಪಕ್ಕಾ, ಅನುಸರಿಸಬಲ್ಲ ಜೀವನ ಸೂತ್ರವೊಂದನ್ನು ರೂಪಿಸಿಕೊಂಡಿದ್ದೇನೆ.ಭವಿಷ್ಯದಲ್ಲಿ ಮೂಡುವ ನಕ್ಷತ್ರಗಳನ್ನು ಎಣಿಸುವುದಕ್ಕಿಂತ ವರ್ತಮಾನದಲ್ಲಿ ಆಕಾಶದಗಲ ಹರಡಿಕೊಂಡಿರುವ ಚಂದ್ರನ ತಂಪನ್ನು ಸುಮ್ಮನೆ ಸವಿಯುವುದರಲ್ಲಿ ಹೆಚ್ಚಿನ ಮಜವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.