ಸೋಮವಾರ, ಏಪ್ರಿಲ್ 19, 2021
27 °C

ವಲಸೆ ತಡೆಗೆ ಕೈಗಾರಿಕಾ ವಲಯ ಸ್ಥಾಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಲಸೆಯನ್ನು ತಡೆಗಟ್ಟಲು ಬೀದರ್‌ನಿಂದ ಬೆಂಗಳೂರಿನವರೆಗೆ 6 ಲೇನ್ ರಸ್ತೆ ನಿರ್ಮಿಸಿ ಪ್ರತಿ 50 ಕಿ,ಮೀ. ಗಳಿಗೆ ಒಂದೊಂದರಂತೆ ಕೈಗಾರಿಕಾ ವಲಯಗಳನ್ನು ಸ್ಥಾಪಿಸಬೇಕು’ ಎಂದು ಇನ್ಫೋಸಿಸ್ ಟೆಕ್ನಾಲಜೀಸ್‌ನ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಟಿ.ವಿ.ಮೋಹನದಾಸ ಪೈ ಅಭಿಪ್ರಾಯಪಟ್ಟರು.ನಗರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ‘ಗ್ಲೋಬಲ್ ಇನಿಷಿಯೇಟಿವ್ ಫಾರ್ ರೀಸ್ಟ್ರಕ್ಚರಿಂಗ್ ಎನ್ವಿರಾನ್‌ಮೆಂಟ್ ಅಂಡ್ ಮ್ಯಾನೇಜ್‌ಮೆಂಟ್’ (ಜಿರೆಮ್)ನ ಎರಡನೇ ಶೃಂಗಸಭೆಯಲ್ಲಿ ನಗರ ಯೋಜನೆ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು. ‘ಸುವರ್ಣ ಕರ್ನಾಟಕ ಎಕ್ಸ್‌ಪ್ರೆಸ್ ವೇ’ ಎಂಬ ಯೋಜನೆ ರೂಪಿಸಿ ಬೀದರ್‌ನಿಂದ ಬೆಂಗಳೂರಿನವರೆಗೆ 1000 ಕಿ.ಮೀ. ಉದ್ದದ ರಸ್ತೆ ನಿರ್ಮಿಸಬೇಕು. ಉತ್ತರ ಕರ್ನಾಟಕದಲ್ಲಿ ಭೂಮಿ ಹಾಗೂ ಕಾರ್ಮಿಕರು ಕಡಿಮೆ ವೆಚ್ಚದಲ್ಲಿ ದೊರೆಯುವುದರಿಂದ ಅಲ್ಲಿಯೂ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಆಗ ವಲಸೆಯನ್ನು ತಪ್ಪಿಸಬಹುದು ಎಂದರು.ಬೆಂಗಳೂರು ನಗರದ ಅಭಿವೃದ್ಧಿಗೆ ಸರಿಯಾದ ಯೋಜನೆ ಹಾಕಿಕೊಂಡಿಲ್ಲ. ರಾಜ್ಯದ ಶೇ 65ರಷ್ಟು ತೆರಿಗೆ ಬೆಂಗಳೂರು ನಾಗರಿಕರಿಂದಲೇ ಸಂದಾಯವಾಗುತ್ತದೆ. ಆದರೆ ಕೇವಲ ಶೇ 25 ಮಾತ್ರ ಬೆಂಗಳೂರು ಅಭಿವೃದ್ಧಿಗೆ ಬಳಕೆಯಾಗುತ್ತಿದೆ.ನಗರ ಯೋಜನೆಯ ನಿರೂಪಕರಲ್ಲಿ ದೂರದೃಷ್ಟಿಯ ಕೊರತೆ ಇರುವುದರಿಂದ ಬೆಂಗಳೂರು ಅಡ್ಡಾದಿಡ್ಡಿಯಾಗಿ ಬೆಳೆದಿದೆ. ಪೀಣ್ಯ ಮತ್ತು ವೈಟ್‌ಫೀಲ್ಡ್ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಆದ್ದರಿಂದ ಮುಂದಿನ 25 ವರ್ಷಗಳನ್ನು ಗಮನದಲ್ಲಿ ಇಟ್ಟುಕೊಂಡು ನಗರಾಭಿವೃದ್ಧಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ಸಲಹೆ ನೀಡಿದರು.ನಗರದ ಬೆಳವಣಿಗೆಯ ಬಗ್ಗೆ ಕಾಳಜಿ ಇರುವ ನಾವು ಪ್ರಮುಖ ಸಲಹೆಗಳೊಂದಿಗೆ ಸಚಿವರು, ಅಧಿಕಾರಿಗಳನ್ನು ಭೇಟಿ ಮಾಡಬೇಕು. ಅವರಿವರಿಗೆ ಹೇಳುವ ಬದಲು ನಾವೇ ನಗರ ಸ್ವಚ್ಛತೆಗೆ ಮುಂದಾಗುವ ಮೂಲಕ ಮಾದರಿಯಾಗಬೇಕು ಎಂದು ಹೇಳಿದರು. ಅಭಿವೃದ್ಧಿಗೆ ಹಣ- ಶ್ಲಾಘನೆ: ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ನಗರಗಳಲ್ಲೂ ಉತ್ತಮ ನಗರ ಯೋಜನೆಗಳು ಜಾರಿಯಲ್ಲಿ ಬರಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 10 ನಗರಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿರುವುದು ಶ್ಲಾಘನೀಯ ಕ್ರಮ ಎಂದು ಅಭಿಪ್ರಾಯಪಟ್ಟರು.ನಗರಾಭಿವೃದ್ಧಿ ಕುರಿತು ಹಿರಿಯ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್ ನೇತೃತ್ವದ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿದ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು. ಪರಿಸರ ಸ್ನೇಹಿ ಕ್ರಮ: ವಿದ್ಯುತ್ ಹಾಗೂ ನೀರು ಉಳಿತಾಯ ಮಾಡಲು ಇನ್ಫೋಸಿಸ್ ತನ್ನ ಎಲೆಕ್ಟ್ರಾನಿಕ್ ಸಿಟಿ ಆವರಣದಲ್ಲಿ ಪರಿಸರ ಸ್ನೇಹಿ ಕಟ್ಟಡದ ಮೂಲಕ ಶೇ 15ರಷ್ಟು ವಿದ್ಯುತ್ ಉಳಿತಾಯ ಮಾಡಲಾಗುತ್ತಿದೆ. ಇದೇ ಮಾದರಿಯಲ್ಲಿ ನೀರಿನ ಬಳಕೆ ಮಾಡಲಾಗುತ್ತಿದೆ ಎಂದು ಪೈ ಅವರು ಹೇಳಿದರು.ಜಿರೆಮ್‌ನ ಅಧ್ಯಕ್ಷ ಶ್ಯಾಮಸುಂದರ್ ಅವರು ನಗರದ ವಿವಿಧೆಡೆ ಉತ್ತಮ ಸಾರಿಗೆ ಸಂಪರ್ಕಕ್ಕಾಗಿ ಬಿಎಂಟಿಸಿ ಬಸ್ ನಿಲ್ದಾಣಗಳನ್ನು ನಿರ್ಮಿಸುವುದು ಸೇರಿದಂತೆ ನಗರಾಭಿವೃದ್ಧಿಗೆ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.