ಭಾನುವಾರ, ಮೇ 16, 2021
29 °C

ವಸತಿರಹಿತರ ಸಮೀಕ್ಷೆ: ಸಚಿವ ರಾಮದಾಸ್ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮಹಾನಗರ ಪಾಲಿಕೆಯಲ್ಲಿ ಸಮಗ್ರ ವಸತಿ ನೀತಿ ರೂಪಿಸಲು ಪಾಲಿಕೆಯಲ್ಲಿನ ವಸತಿ ರಹಿತರನ್ನು ಮೂರು ತಿಂಗಳ ಒಳಗಾಗಿ ಗುರುತಿಸಿ ಪಟ್ಟಿ ಸಿದ್ಧಪಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಬುಧವಾರ ಸೂಚಿಸಿದರು.ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಸ್ವಾಮಿ ವಿವೇಕಾನಂದ ನಾಯಕತ್ವ ಅಭಿವೃದ್ಧಿ ತರಬೇತಿ ಸಂಸ್ಥೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಈ ಸೂಚನೆ ನೀಡಿದ ಅವರು ವಸತಿ ಯೋಜನೆ ಅನುಷ್ಠಾನಗೊಳಿಸುತ್ತಿರುವ ವಿವಿಧ ಇಲಾಖೆಗಳು, ಸಂಸ್ಥೆಗಳು ಸಮನ್ವಯದದಿಂದ ಕೆಲಸ ನಿರ್ವಹಿಸುವ ಮೂಲಕ ವಸತಿ ರಹಿತರಿಗೆ ಸೌಲಭ್ಯ ಕಲ್ಪಿಸಬೇಕು ಎಂದರು.ಒಬ್ಬರೇ ವ್ಯಕ್ತಿ ವಿವಿಧ ವಸತಿ ಯೋಜನೆಗಳ ಸೌಲಭ್ಯ ಪಡೆಯುವುದು, ಅರ್ಹರಿಗೆ ಅವಕಾಶ ಸಿಗದೇ ಇರುವುದು ಇಂತಹ ಹಲವಾರು ನ್ಯೂನತೆಗಳು ಇದ್ದು, ಲೋಪಗಳಿಗೆ ಅವಕಾಶವಾಗದ ರೀತಿಯಲ್ಲಿ ವಸತಿ ರಹಿತರ ಪಟ್ಟಿ ತಯಾರಾಗಬೇಕು. ಇದಕ್ಕಾಗಿ ಆಧಾರ್ ಗುರುತಿನ ಚೀಟಿಯ ನೆರವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.ಪ್ರಸ್ತುತ ಮೈಸೂರು ನಗರದಲ್ಲಿ 52 ಸಾವಿರ ಮನೆಗಳಿಗೆ ಬೇಡಿಕೆ ಇದ್ದು, 24,052 ಮನೆಗಳನ್ನು ನಿರ್ಮಿಸಲಾಗಿದೆ. ವಿವಿಧ ಯೋಜನೆಗಳಡಿ 11,548 ಮನೆಗಳನ್ನು ಒದಗಿಸಲಾಗಿದೆ. ಇನ್ನು 16,400 ಮನೆಗಳ ಅವಶ್ಯಕತೆ ಇದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ವಿವರಿಸಿದರು.ಆಶ್ರಯ ಯೋಜನೆಯಡಿ ನಗರ ವ್ಯಾಪ್ತಿಯ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮಹಾನಗರ ಪಾಲಿಕೆ ವ್ಯಾಪ್ತಿಯ 10 ಗ್ರಾಮಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಎಲ್ಲ ರೀತಿಯ ನಾಗರಿಕ ಸೌಲಭ್ಯಗಳನ್ನು ಒದಗಿಸಲಾಗಿದ್ದು ಒಟ್ಟಾರೆ 47.4 ಕೋಟಿ ರೂ. ವೆಚ್ಚವಾಗಲಿದೆ. ರಮ್ಮನಹಳ್ಳಿಯಲ್ಲಿ 915 ಮನೆ, ಭರತ್ ನಗರದಲ್ಲಿ 415, ನೆಹರೂ ನಗರದಲ್ಲಿ 512, ರಮಾಬಾಯಿ ನಗರದಲ್ಲಿ 1000, ಮಂಡಕಳ್ಳಿಯಲ್ಲಿ 425 ಈ ರೀತಿ ಒಟ್ಟಾರೆ 7,180 ಮನೆಗಳನ್ನು 47.4 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.ಆಶ್ರಯ ಯೋಜನೆಯನ್ನು ನಗರ ಪ್ರದೇಶದಲ್ಲಿ ಸ್ಥಗಿತಗೊಳಿಸಿ ಗುಂಪು ವಸತಿ ಸೌಲಭ್ಯ ಕಲ್ಪಿಸುವ ದಿಸೆಯಲ್ಲಿ ಇನ್ನುಮುಂದೆ ಯೋಜನೆ ರೂಪಿಸಲಾಗಿದೆ ಎಂದು ನಗರಪಾಲಿಕೆ ಅಧಿಕಾರಿಗಳು ಹೇಳಿದರು.ಆರ್ಥಿಕವಾಗಿ ಹಿಂದುಳಿದವರಿಗೆ ನಗರದ ಅಭಿವೃದ್ಧಿ ಹೊಂದಿದ ಪ್ರದೇಶದಲ್ಲಿ ಗುಂಪು ವಸತಿ ಸಮುಚ್ಚಯಗಳ ನಿರ್ಮಾಣ ಯೋಜನೆಯನ್ನು ನಗರಾಭಿವೃದ್ಧಿ ಪ್ರಾಧಿಕಾರದಿಂದ ರೂಪಿಸಲಾಗಿದೆ. ಪ್ರತಿ ಮನೆಗೆ ಅಂದಾಜು ವೆಚ್ಚ 5.50 ಲಕ್ಷ ರೂ.ನಂತೆ 2000 ಮನೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದು ವಿವರಿಸಲಾಯಿತು.ಜಿಲ್ಲಾಧಿಕಾರಿ ಪಿ.ಎನ್. ವಸ್ತ್ರದ್, ನಗರಪಾಲಿಕೆ ಆಯುಕ್ತ ಕೆ.ಎಸ್. ರಾಯ್ಕರ್, ಮುಡಾ ಆಯುಕ್ತ ಸಿ.ಜಿ. ಬೆಟಸೂರಮಠ್, ರಾಜೀವ್ ಗಾಂಧಿ ಗ್ರಾಮೀಣ ವಸತಿ  ನಿಗಮದ ಜನರಲ್ ಮೇನೇಜರ್ ಮಹದೇವ ಪ್ರಸಾದ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.