ಮಂಗಳವಾರ, ಫೆಬ್ರವರಿ 18, 2020
27 °C

ವಾಜಪೇಯಿಗೆ ಬಾಂಗ್ಲಾದೇಶದ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಜಪೇಯಿಗೆ ಬಾಂಗ್ಲಾದೇಶದ ಗೌರವ

ಢಾಕಾ (ಪಿಟಿಐ): ಭಾರತದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜ­ಪೇಯಿ ಅವರನ್ನು ‘ಬಾಂಗ್ಲಾ ವಿಮೋ­ಚನಾ ಯುದ್ಧದಲ್ಲಿ ಬೆಂಬಲ ನೀಡಿ­ದವರಿಗೆ’ ನೀಡುವ ಪ್ರಶಸ್ತಿ ಕೊಡುವ ಮೂಲಕ ಗೌರವಿಸಲು ಬಾಂಗ್ಲಾದೇಶ ಸರ್ಕಾರ ನಿರ್ಧರಿಸಿದೆ.

ಬಾಂಗ್ಲಾದೇಶ ಸ್ವಾತಂತ್ರ್ಯ ಹೊಂದಲು ಬೆಂಬಲ ನೀಡಿದ ವಿದೇಶಿಯರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಪಾಕಿಸ್ತಾನದ ಹಿಡಿತದಲ್ಲಿದ್ದ  ಬಾಂಗ್ಲಾವು 1971ರಲ್ಲಿ ಸ್ವತಂತ್ರ ರಾಷ್ಟ್ರವಾಯಿತು. ಆ ಸಮಯದಲ್ಲಿ ವಾಜಪೇಯಿ ಅವರು ಲೋಕಸಭಾ ಸದಸ್ಯರಾಗಿದ್ದರು. ಬಾಂಗ್ಲಾದ ವಿಮೋ­ಚ­ನೆ­ಯನ್ನು ವಾಜಪೇಯಿ ಬೆಂಬಲಿಸಿದ್ದರು.

‘ಜೂನ್‌ ಆರರಿಂದ ಬಾಂಗ್ಲಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಾಜಪೇಯಿ ಪರವಾಗಿ ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ’ ಎಂದು ಬಾಂಗ್ಲಾ ವಿದೇಶಾಂಗ ಸಚಿವಾಲಯದ ವಕ್ತಾರರು ಸೋಮವಾರ ಹೇಳಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿರುವ ವಾಜಪೇಯಿ ಅವರಿಗೆ ಬಾಂಗ್ಲಾಕ್ಕೆ ತೆರ­ಳಲು ಸಾಧ್ಯವಾಗುತ್ತಿಲ್ಲ. ‘ವಾಜಪೇಯಿ ಬಾಂಗ್ಲಾ ವಿಮೋ­ಚನಾ ಹೋರಾಟಕ್ಕೆ ಆರಂಭದಿಂದಲೇ ಬೆಂಬಲ ನೀಡಿದ್ದರು.  ಭಾರತೀಯ ಜನ­ಸಂಘದ ಅಧ್ಯಕ್ಷರು ಮತ್ತು ಲೋಕಸಭಾ ಸದಸ್ಯರಾಗಿದ್ದು­ಕೊಂಡು ಅವರು ಭಾರತ ಹಾಗೂ ಅಂತರ­ರಾಷ್ಟ್ರೀಯ ವಲಯದಲ್ಲಿ ಬಾಂಗ್ಲಾ ಜನರ ಹಕ್ಕುಗಳಿಗೆ ಹೋರಾಟ ನಡೆಸಿದ್ದರು’ ಎಂದು ಬಾಂಗ್ಲಾ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಬಾಂಗ್ಲಾದ ಸ್ವಾತಂತ್ರ್ಯ ಹೋರಾ­ಟದ ವೇಳೆ ಪ್ರಾಣ ತೆತ್ತ ಭಾರತದ ಸೈನಿಕರ ಕುಟುಂಬದ ಸದಸ್ಯರನ್ನು ಗೌರವಿಸುವ ಪ್ರಸ್ತಾಪಕ್ಕೆ ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಅವರು ಒಪ್ಪಿಗೆ ಸೂಚಿಸಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನೂ ಬಾಂಗ್ಲಾ ಸರ್ಕಾರ ಈ ಪ್ರಶಸ್ತಿ ನೀಡಿ ಗೌರವಿಸಿತ್ತು. ಇಂದಿರಾ ಗಾಂಧಿ ಪರವಾಗಿ ಸೋನಿಯಾ ಗಾಂಧಿ 2012 ರಲ್ಲಿ ಪ್ರಶಸ್ತಿ ಸ್ವೀಕರಿಸಿದ್ದರು. ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೂ ಈ ಗೌರವ ಲಭಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)