ಭಾನುವಾರ, ಜನವರಿ 19, 2020
19 °C
ಶಾಸಕ ಸಂಭಾಜಿ ಪಾಟೀಲರ ಅಣಕು ಶವಯಾತ್ರೆ

ವಾಟಾಳ್‌ ಸೇರಿ ಹಲವರು ಬಂಧನ, ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಗ್ಗಾವಿ: ಎಂಇಎಸ್‌ ಶಾಸಕರ ವಿರುದ್ಧ ಪ್ರತಿಭಟನೆ ನಡೆಸಲು ಬೆಳಗಾವಿಗೆ ತೆರಳುತ್ತಿದ್ದ ಕನ್ನಡ ಚಳವಳಿ ವಾಟಾಳ್‌ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ವಾಟಾಳ್ ನಾಗರಾಜ್‌ ಸೇರಿದಂತೆ ಹಲವರನ್ನು ಪೊಲೀಸರು ಬುಧವಾರ ತಾಲ್ಲೂಕಿನ ಬಂಕಾಪುರ ಟೋಲ್‌ ನಾಕಾ ಬಳಿ ಬಂಧಿಸಿ, ನಂತರ ಬಿಡುಗಡೆ ಮಾಡಿದರು.ಮಾರ್ಗ ಮಧ್ಯದಲ್ಲಿಯೇ ತಮ್ಮನ್ನು ತಡೆದು ಬಂಧಿಸಿದ್ದನ್ನು ಖಂಡಿಸಿ ವಾಟಾಳ್‌ ನಾಗರಾಜ್‌ ಮತ್ತವರ ಬೆಂಬಲಿಗರು ಪ್ರತಿಭಟನೆ ನಡೆಸಿದರು.‘ರಾಜ್ಯ ಸರ್ಕಾರದ  ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಮತ್ತು ಅರವಿಂದ ಪಾಟೀಲ ಹೇಳಿಕೆ ಖಂಡಿಸಿ  ಬೆಂಗಳೂರಿನಿಂದ ಬೆಳಗಾವಿವರೆಗೆ ಎಂಇಎಸ್‌ ಶಾಸಕರ ಅಣಕು ಶವಯಾತ್ರೆ ಚಳವಳಿಯನ್ನು ವಾಟಾಳ್‌ ಹಮ್ಮಿಕೊಂಡಿದ್ದರು.ಸುವರ್ಣ ಸೌಧದ ಎದುರು ಶವದ ಪ್ರತಿಕೃತಿ ದಹಿಸುವ ಉದ್ದೇಶ ಹೊಂದಿದ್ದರು. ಆದರೆ, ಮುಂಜಾಗೃತಾ ಕ್ರಮವಾಗಿ ಪೊಲೀಸರು ಬಂಕಾಪುರ ಟೋಲ್‌ ನಾಕಾ ಬಳಿ ಅವರನ್ನು ಬಂಧಿಸಿದರು.ಬೆಳಗಾವಿಗೆ ಹೋಗಲು ಅವಕಾಶ ನೀಡುವುದಿಲ್ಲ ಎಂದು ಹೇಳಿದಾಗ ಅಲ್ಲಿಯೇ ಸಂಭಾಜಿ ಪಾಟೀಲ ಹಗೂ ಅರವಿಂದ ಪಾಟೀಲ ಶವದ ಪ್ರತಿಕೃತಿಯನ್ನು ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್‌ ನಾಗರಾಜ್‌, ‘ಸಂಭಾಜಿ ರಾಜ್ಯ ವಿಧಾನಸಭಾ ಸದಸ್ಯರಾಗಿ ಇಲ್ಲಿನ ನೆಲ, ಜಲ ಹಾಗೂ ಭಾಷೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದು ಸರಿಯಲ್ಲ. ಅವರನ್ನು ಗಡಿಪಾರು ಮಾಡಬೇಕು. ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಕನ್ನಡದ ಬಗ್ಗೆ ಹಗುರವಾಗಿ ಮಾತನಾಡುವವರನ್ನು ಬಂಧಿಸದೇ ಕನ್ನಡ ಪರ ಚಳವಳಿಗಾರರನ್ನು ಬಂಧಿಸುತ್ತಿರುವ ಸರ್ಕಾರಕ್ಕೆ ನಾಚಿಕೆಯಾಗಬೇಕು’  ಎಂದರು.

ಪ್ರತಿಕ್ರಿಯಿಸಿ (+)