ಭಾನುವಾರ, ಮೇ 22, 2022
21 °C

ವಾಣಿಜ್ಯ, ವಿಜ್ಞಾನ ಪದವಿಗೆ ಹೆಚ್ಚಿದ ಬೇಡಿಕೆ

ಪ್ರಜಾವಾಣಿ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಕೋಲಾರ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾದ ಎರಡು ವಾರಗಳ ಬಳಿಕ ಪದವಿ ತರಗತಿಗಳಿಗೆ ನಗರದಲ್ಲಿ ಪ್ರವೇಶ ಪ್ರಕ್ರಿಯೆ ಶುರುವಾಗಿದೆ. ಜೂನ್ 15ರಿಂದ  ಪ್ರಥಮ ದರ್ಜೆ ಕಾಲೇಜುಗಳು ಪುನರಾರಂಭಗೊಳ್ಳಲಿವೆ.

 

ಇದೇ ವೇಳೆ, ಬಹಳಷ್ಟು ಕಾಲೇಜುಗಳಲ್ಲಿ, ಅದರಲ್ಲೂ ಸರ್ಕಾರಿ ಕಾಲೇಜುಗಳಲ್ಲಿ ಬಿ,ಎಸ್‌ಸಿ, ಬಿಕಾಂಗೆ ನೂಕುನುಗ್ಗಲು ಏರ್ಪಟ್ಟಿದೆ. ನಿರೀಕ್ಷೆಗೂ ಮೀರಿ ಜಿಲ್ಲೆಯ ವಿವಿಧ ತಾಲ್ಲೂಕಿನ ಹೆಚ್ಚು ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ ಬಿ.ಎ ಪದವಿ ತರಗತಿಗಳಿಗೆ ಸೇರುವವರ ಸಂಖ್ಯೆಯಲ್ಲಿ ಹೆಚ್ಚೂ ಆಗಿಲ್ಲ, ಕಡಿಮೆಯೂ ಆಗಿಲ್ಲ.ಮೂಲವಿಜ್ಞಾನ ಅಧ್ಯಯನಕ್ಕೆ ಅವಕಾಶವಿರುವ ಬಿಎಸ್‌ಸಿ ಮತ್ತು ವಾಣಿಜ್ಯಶಾಸ್ತ್ರ ಅಧ್ಯಯನದ ಬಿಕಾಂ ಪದವಿ ತರಗತಿಗಳಿಗೆ ಸೇರಲು ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಬಾಲಕರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಚ್ಚು ವಿದ್ಯಾರ್ಥಿಗಳು ಆಸಕ್ತರಾಗಿರುವುದು ಕಂಡು ಬಂದಿದೆ.ಬಹಳಷ್ಟು ಕಾಲೇಜುಗಳಲ್ಲಿ ವಂತಿಗೆ, ಹೆಚ್ಚು ಶುಲ್ಕ ಪಾವತಿಸಬೇಕಾಗಿರುವುದು ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಕೇವಲ ಶುಲ್ಕ ಮಾತ್ರ ಪಾವತಿಸಿ ಪ್ರವೇಶ ಪಡೆಯಲು ಅವಕಾಶ ಇರುವುದರಿಂದ ಬಹುತೇಕ ವಿದ್ಯಾರ್ಥಿಗಳು ಮತ್ತು ಪೋಷಕರು ಸರ್ಕಾರಿ ಕಾಲೇಜುಗಳೆಡೆಗೆ ನಡೆದಿದ್ದಾರೆ.ಸರ್ಕಾರದ ಆದೇಶದ ಪ್ರಕಾರ ಯಾವ ವಿದ್ಯಾರ್ಥಿಗೂ ಪ್ರವೇಶ ನಿರಾಕರಿಸುವಂತಿಲ್ಲ. ಹೀಗಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಪ್ರವೇಶ ನೀಡಿದರೆ ಸ್ಥಳಾವಕಾಶ ಸಾಕಾಗದೆ ನೆಲದಲ್ಲಿ ಕುಳ್ಳಿರಿಸಿ ಪಾಠ ಹೇಳಬೇಕಾದ ಸನ್ನಿವೇಶವೂ ಮಹಿಳಾ ಕಾಲೇಜಿನಲ್ಲಿ ನಿರ್ಮಾಣವಾಗುವ ಸಾಧ್ಯತೆ ಇದೆ. ಬಾಲಕರ ಕಾಲೇಜಿನ ವಾಣಿಜ್ಯ ವಿಭಾಗದಲ್ಲೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗುವ ನಿರೀಕ್ಷೆ ಇದೆ.ಮಹಿಳಾ ಕಾಲೇಜು:
ನಮ್ಮ ಕಾಲೇಜಿನಲ್ಲಿ ಬಿಕಾಂಗೆ ನಿಗದಿ ಇರುವುದು 100 ಸೀಟು ಮಾತ್ರ. ಆದರೆ ಕಳೆದ ವರ್ಷ 350 ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಲಾಯಿತು. ಈ ವರ್ಷ ಬೇಡಿಕೆ ಇನ್ನೂ ಹೆಚ್ಚಿದೆ. ಈಗಾಗಲೇ 500-550 ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಿದ್ದಾರೆ. ಅವರನ್ನೆಲ್ಲ ಸೇರಿಸಿಕೊಂಡರೆ ತರಗತಿಗಳನ್ನು ಹೇಗೆ ನಡೆಸುವುದು ಎನ್ನುತ್ತಾರೆ ಪ್ರಾಂಶುಪಾಲ ಎಸ್.ರಾಮೇಗೌಡ.ಕಳೆದ ವರ್ಷವೂ ಅರ್ಜಿ ಸಲ್ಲಿಸಿದವರೆಲ್ಲರಿಗೂ ಪ್ರವೇಶ ನೀಡಲಾಗಿತ್ತು. ಈ ವರ್ಷವೂ ಎಲ್ಲರಿಗೂ ಪ್ರವೇಶ ಕೊಟ್ಟರೆ ಮಕ್ಕಳನ್ನು ನೆಲದ ಮೇಲೆ ಕುಳ್ಳಿರಿಸಬೇಕಾಗುತ್ತದೆ. ಕೊಠಡಿಗಳ ಕೊರತೆ ಈ ಬಾರಿ ದೊಡ್ಡ ಸಮಸ್ಯೆಯಾಗಲಿದೆ ಎಂಬುದು ಅವರ ಆತಂಕ.ಬಿಎಸ್‌ಸಿಗೂ ಕಾಲೇಜಿನಲ್ಲಿ ಅಧಿಕ ವಿದ್ಯಾರ್ಥಿಗಳಿದ್ದಾರೆ. ಅದರಲ್ಲೂ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಅಧ್ಯಯನಕ್ಕೆ ಹೆಚ್ಚು ಬೇಡಿಕೆ ಇದೆ. ಎರಡು ವರ್ಷದ ಹಿಂದೆ 150 ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಲಾಗಿತ್ತು. ಈ ವರ್ಷವೂ ಬೇಡಿಕೆ ಹೆಚ್ಚಿದೆ. ಬಿಎಗೆ ಸೇರುವವರ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ. ಕಳೆದ ವರ್ಷ ಈ ಕಾಲೇಜಿನಲ್ಲಿ ಒಟ್ಟು 2700 ವಿದ್ಯಾರ್ಥಿನಿಯರಿದ್ದರು. ಈ ವರ್ಷ ಅದು ಮೂರು ಸಾವಿರ ದಾಟುತ್ತದೆ ಎನ್ನುತ್ತಾರೆ ಅವರು.ಬಾಲಕರ ಕಾಲೇಜು: ಪ್ರತಿ ವರ್ಷವೂ ಬಿಕಾಂ ಪ್ರವೇಶ ಪಡೆಯುವವರ ಸಂಖ್ಯೆ ನಗರದ ಬಾಲಕರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಚ್ಚುತ್ತಿದೆ ಎನ್ನುತ್ತಾರೆ ಕಾಲೇಜಿನ ವಾಣಿಜ್ಯ, ನಿರ್ವಹಣಾ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಎಸ್. ಮುರಳೀಧರ್.2 ವರ್ಷದ ಹಿಂದೆ ಈ ವಿಭಾಗದಲ್ಲಿ 100 ವಿದ್ಯಾರ್ಥಿಗಳಿದ್ದರು. ಕಳೆದ ವರ್ಷ 200 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿತ್ತು. ಈ ವರ್ಷ ಈ ಸಂಖ್ಯೆ 300ಕ್ಕೆ ಏರಲಿದೆ ಎಂಬುದು ಅವರ ಅಂದಾಜು.ಜಿಲ್ಲಾ ಕೇಂದ್ರವಷ್ಟೆ ಅಲ್ಲದೆ, ಹೋಬಳಿ ಕೇಂದ್ರಗಳಲ್ಲೂ ಕಾಲೇಜುಗಳಲ್ಲಿ ಬಿಕಾಂಗೆ ಪ್ರವೇಶ ಹೆಚ್ಚಿದೆ. ಕಲಾ ವಿಭಾಗ ಮತ್ತು ವಿಜ್ಞಾನ ವಿಭಾಗದ ನಡುವೆ ವಾಣಿಜ್ಯ ವಿಭಾಗ ಶೈಕ್ಷಣಿಕ ಅನನ್ಯತೆ ಮತ್ತು ಔದ್ಯೋಗಿಕ ಮಹತ್ವವನ್ನು ದಿನೇದಿನೇ ಹೆಚ್ಚಿಸಿಕೊಳ್ಳುತ್ತಿದೆ. ಬಿಕಾಂ, ಬಿಬಿಎಂನಲ್ಲಿ ಕಾಲಕ್ಕೆ ತಕ್ಕಂತೆ ಹೊಸ ಪಠ್ಯಕ್ರಮಗಳನ್ನು ರೂಪಿಸಿ ಬೋಧಿಸುತ್ತಿರುವುದು ಅದರ ಜನಪ್ರಿಯತೆಗಿರುವ ಕಾರಣಗಳಲ್ಲಿ ಒಂದು ಎನ್ನುತ್ತಾರೆ ಅವರು.3-4 ವರ್ಷದ ಹಿಂದಿನ ಸನ್ನಿವೇಶಕ್ಕೆ ಹೋಲಿಸಿದರೆ ಈಗ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ. ಉತ್ತಮ ಫಲಿತಾಂಶವೂ ಬರುತ್ತಿದೆ ಎನ್ನುತ್ತಾರೆ ಅದೇ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಎನ್. ಪದ್ಮಾ. ಮೂಲವಿಜ್ಞಾನ ಅಧ್ಯಯನದ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸುವಂತೆ ಪದವಿಪೂರ್ವ ಹಂತದಲ್ಲೆ ಅರಿವು ಮೂಡಿಸಬೇಕು ಎನ್ನುತ್ತಾರೆ ಅವರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.