ಸೋಮವಾರ, ಮೇ 17, 2021
25 °C

ವಾರ್ಡ್ ಮೀಸಲು: 18 ಆಕ್ಷೇಪಣೆ ಸಲ್ಲಿಕೆ

ಶ್ರೀಕಾಂತ ಕಲ್ಲಮ್ಮನವರ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾರ್ಡ್ ಮೀಸಲು: 18 ಆಕ್ಷೇಪಣೆ ಸಲ್ಲಿಕೆ

ಮಡಿಕೇರಿ: ಮಂಜಿನನಗರಿ ಮಡಿಕೇರಿ ನಗರಸಭೆ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿದ್ದು, ಸರ್ಕಾರ ಪ್ರಕಟಿಸಿರುವ ವಾರ್ಡ್ ಮೀಸಲಾತಿಗೆ ಒಟ್ಟು 18 ಜನರು ಆಕ್ಷೇಪಣೆ ಸಲ್ಲಿಸಿದ್ದಾರೆ. ಸದ್ಯದಲ್ಲಿಯೇ ತೀರ್ಪು ಪ್ರಕಟಗೊಳ್ಳುವ ಸಂಭವ ಇದೆ.ಹೈಕೋರ್ಟ್ ಆದೇಶದ ಅನ್ವಯ ಸರ್ಕಾರವು 31 ವಾರ್ಡ್‌ಗಳನ್ನು ಮೊದಲಿದ್ದಂತೆ 23 ವಾರ್ಡ್‌ಗಳನ್ನಾಗಿ ಮರುವಿಂಗಡಣೆ ಮಾಡಿ, ಕಳೆದ ತಿಂಗಳು ಮೀಸಲಾತಿಯನ್ನು ಪ್ರಕಟಿಸಿತ್ತು. ರಾಜ್ಯದ ಕಾಂಗ್ರೆಸ್ ಸರ್ಕಾರ ತಮ್ಮ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ತಮಗಿಷ್ಟ ಬಂದಂತೆ ಮೀಸಲಾತಿ ಪ್ರಕಟಿಸಿದೆ ಎಂದು ಕೆಲವರು ಆರೋಪಿಸಿದ್ದಾರೆ.ಆಕ್ಷೇಪಣೆ ಸಲ್ಲಿಸಿರುವ ಪೈಕಿ ಒಬ್ಬರಾಗಿರುವ ಜಿಲ್ಲಾ ಜೆಡಿಎಸ್ ಅಧ್ಯಕ್ಷ ವಿ.ಪಿ. ಶಶಿಧರ್ ಪ್ರತಿಕ್ರಿಯೆ ನೀಡಿದ್ದು, ಮಹಿಳಾ ಮೀಸಲಾತಿಯನ್ನು ನಗರದ ವಿವಿಧ ಭಾಗಗಳಲ್ಲಿ  ಬರುವ ವಾರ್ಡ್‌ಗಳಲ್ಲಿ ಹಂಚಬೇಕಿತ್ತು. ಆದರೆ, ಇಲ್ಲಿ ನಗರದ ಹೃದಯಭಾಗದಲ್ಲಿರುವ 1ರಿಂದ 9 ವಾರ್ಡ್‌ಗಳಿಗೆ ಮಹಿಳಾ ಮೀಸಲಾತಿ ಪ್ರಕಟಿಸ ಲಾಗಿದೆ. ಒಂದೇ ಭಾಗದಲ್ಲಿ ಮಹಿಳೆ ಯರಿಗೆ ನೀಡಿದರೆ, ಅಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊ ಳ್ಳಲು ತೊಂದರೆಯುಂಟಾಗಬಹುದು ಎಂದು ಹೇಳಿದ್ದಾರೆ.`ಕಳೆದ ಚುನಾವಣೆಯಲ್ಲಿ ನೀಡಲಾಗಿದ್ದ ಮೀಸಲಾತಿಯನ್ನು ಕೆಲವು ವಾರ್ಡ್‌ಗಳಲ್ಲಿ ಮುಂದುವರಿಸಲಾಗಿದೆ. ಇವುಗಳನ್ನು ಸರಿಪಡಿಸು ವಂತೆ ಜಿಲ್ಲಾ ಚುನಾವಣಾಧಿಕಾರಿ ಅವರಿಗೆ ಆಕ್ಷೇಪಣೆ ಸಲ್ಲಿಸಿದ್ದೇವೆ' ಎಂದು ಹೇಳಿದರು. ನಗರಸಭೆಯ ನಿರ್ಗಮಿತ ಸದಸ್ಯ ಟಿ.ಎಂ. ಅಯ್ಯಪ್ಪ ಮಾತನಾಡಿ, ಮಹಿಳಾ ಮೀಸಲಾತಿ ಬಗ್ಗೆ ನಮಗೆ ಅಭ್ಯಂತರವಿಲ್ಲ. ಆದರೆ, ಒಂದೇ ಭಾಗದಲ್ಲಿ ಏಕೆ ನೀಡಬೇಕು? ನಗರದ ವಿವಿಧ ಭಾಗಗಳಲ್ಲಿ ಇದನ್ನು ಹರಿದುಹಂಚಬಹು ದಿತ್ತಲ್ಲವೇ? ಎಂದು ಪ್ರಶ್ನಿಸಿದರು.ವಿಧಾನಸಭೆ ಚುನಾವಣೆಯಲ್ಲಿ ಮಾಡಿದಂತೆ ಮೊದಲು ವಾರ್ಡ್‌ವಾರು ಮತದಾರರ ಪಟ್ಟಿ ಪ್ರಕಟಿಸಿ, ನಂತರ ವಾರ್ಡ್ ಮೀಸಲಾತಿಯನ್ನು ಪ್ರಕಟಿಸಬೇಕಿತ್ತು. ಆದರೆ, ಇಲ್ಲಿ ಇದುವರೆಗೆ ಮತದಾರರ ಪರಿಷ್ಕೃತಪಟ್ಟಿ ಪ್ರಕಟಿಸುವ ಮೊದಲೇ ಮೀಸಲಾತಿಯನ್ನು ಪ್ರಕಟಿಸಲಾಗಿದೆ ಎಂದು ಅವರು ಆಕ್ಷೇಪಿಸಿದರು.

31 ವಾರ್ಡ್‌ಗಳನ್ನಾಗಿ ವಿಂಗಡಿಸಿದ್ದ ಹಿಂದಿನ ಚುನಾವಣೆ (2007) ಕ್ರಮ ಸರಿಯಾದುದಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದ ನಂತರ ಅದರ ಮೀಸಲಾತಿಯನ್ನು ಕೂಡ ಗಣನೆಗೆ ತೆಗೆದುಕೊಳ್ಳಬಾರದು. ಆದರೆ, ಇಲ್ಲಿ 2007ರ ಮೀಸಲಾತಿಯನ್ನು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.ಮಹಿಳೆಯರಿಗೆ 50ರಷ್ಟು ಮೀಸಲಾತಿ: ಇದೇ ಪ್ರಥಮ ಬಾರಿಗೆ ಮಡಿಕೇರಿ ನಗರಸಭೆ ಚುನಾವಣೆ ಯಲ್ಲಿ ಮಹಿಳೆ ಯರಿಗೆ ಶೇ 50ರಷ್ಟು ಸ್ಥಾನಗಳನ್ನು ಮೀಸಲು ಇಡಲಾಗಿದೆ. ಇದರ ಅನ್ವಯ 23 ವಾರ್ಡ್‌ಗಳ ಪೈಕಿ 12 ವಾರ್ಡ್‌ಗಳಲ್ಲಿ ಮಹಿಳೆಯರು ಕಣಕ್ಕೆ ಇಳಿಯಲಿದ್ದಾರೆ.ಮೊದಲಿದ್ದಂತೆ 23 ವಾರ್ಡ್: 2007ರಲ್ಲಿ ಮಡಿಕೇರಿ ಪುರಸಭೆಯನ್ನು ನಗರಸಭೆಗೆ ಏರಿಸಿದ್ದಲ್ಲದೇ 23 ವಾರ್ಡ್ 31ವಾರ್ಡ್‌ಗಳನ್ನಾಗಿ ಪರಿವರ್ತಿಸಲಾಗಿತ್ತು. ನಂತರ ನಡೆದ ಬೆಳವಣಿಗೆಯಲ್ಲಿ ಈ ಪ್ರಕರಣವು ಹೈಕೋರ್ಟ್ ಮೆಟ್ಟಿಲೇರಿತು. ವಿಚಾರಣೆಯ ನಂತರ ಮಡಿಕೇರಿ ನಗರಸಭೆಯನ್ನು ಜನಸಂಖ್ಯೆ ಆಧಾರದ ಮೇಲೆ ಮೊದಲಿದ್ದಂತೆ 23 ವಾರ್ಡ್‌ಗಳನ್ನಾಗಿ ಪರಿವರ್ತಿಸ ಬೇಕೆಂದು ಹೈಕೋರ್ಟ್ ತೀರ್ಪು ನೀಡಿತು. ಹೀಗಾಗಿ 2007ರ ಜನಸಂಖ್ಯೆಯ ಅಂಕಿಅಂಶ 2013ರಲ್ಲಿ ಬಳಸಲು ಸಾಧ್ಯವಾಗಿರಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.