ಶುಕ್ರವಾರ, ಮಾರ್ಚ್ 5, 2021
27 °C

ವಾಹ್‌! ಓಹ್‌! ಸಿನಿಮಾ!

ಪ್ರಶಾಂತ್ ಪಂಡಿತ್ Updated:

ಅಕ್ಷರ ಗಾತ್ರ : | |

ವಾಹ್‌! ಓಹ್‌! ಸಿನಿಮಾ!

ಸ್ವೀಡನ್‌ನ ಪ್ರಖ್ಯಾತ ನಿರ್ದೇಶಕ ಇಂಗ್ಮರ್‌ ಬರ್ಗ್‌ಮನ್‌ನ ಸಿನಿಮಾಗಳ ಬಗ್ಗೆ, ಚಿತ್ರಜಗತ್ತಿನ ಮೇಲೆ ಆತನ ಪ್ರಭಾವದ ಬಗ್ಗೆ, ಆತನ ಹಲವಾರು ಪ್ರೇಯಸಿಯರ ಬಗ್ಗೆ ಹರಟುತ್ತ ಗೆಳೆಯ ದೇವು ಮತ್ತು ನಾನು ಆಗಾಗ ಕಿಟಕಿಯಿಂದ ಹೊರಗೆ ನೋಡುತ್ತ ತಣ್ಣಗಿನ ಟ್ರೇನಿನಲ್ಲಿ ಕುಳಿತಿದ್ದಾಗ ಇಂತಹದ್ದೊಂದು ಘಟನೆಯನ್ನು ಊಹಿಸಲೂ ಸಾಧ್ಯವಿರಲಿಲ್ಲ. ನಾವು ಹೊರಟಿದ್ದು ಸ್ಟಾಕ್‌ಹೋಮ್‌ನಿಂದ, ಫಾರೋ ದ್ವೀಪದಲ್ಲಿ ನಡೆಯುವ ಚಿತ್ರೋತ್ಸವಕ್ಕೆ. ಈ ಫಾರೋ ದ್ವೀಪದಲ್ಲೇ ಆತ ತನ್ನ ಹಲವಾರು ಚಿತ್ರಗಳನ್ನು ನಿರ್ಮಿಸಿ ಕೊನೆಗಾಲದವರೆಗೂ ಅಲ್ಲಿಯೇ ವಾಸವಾಗಿದ್ದ. ಹಾಗಾಗಿ ಅದಕ್ಕೆ ‘ಬರ್ಗ್‌ಮನ್‌ನ ದ್ವೀಪ’ ಎಂಬ ಹೆಸರೂ ಇದೆ. ಸ್ವೀಡಿಷ್ ಭಾಷೆಯಲ್ಲಿ ನಿಲ್ದಾಣದ ಹೆಸರು ಹೇಳುತ್ತಿದ್ದ ಉದ್ಘೋಷಕಿ– ‘ನೀನಾಸಂ’ ಎಂದಂತಾಗಿ ಕಿವಿ ನೆಟ್ಟಗಾಯಿತು. ಅರಿಯದ ಭಾಷೆಯ ಯಾವುದೋ ಉಚ್ಚಾರಗಳು ಕೆಲವೊಮ್ಮೆ ನಮಗೆ ತೀರ ಪರಿಚಿತ ಶಬ್ದದಂತೆ ಕೇಳುವುದು ಸಾಧ್ಯ ಎಂದು ಅಚ್ಚರಿಯಿಂದ ಕುಳಿತಿದ್ದೆವು. ಅಷ್ಟರಲ್ಲಿ ನಾವು ಇಳಿದು ಹಡಗನ್ನೇರಬೇಕಿರುವ ರೇವು ಪಟ್ಟಣ ಅದೇ ಎಂದು ತಿಳಿದು ಇಳಿದೆವು.ಸ್ವೀಡಿಷ್ ಭಾಷೆಯಲ್ಲಿ Nynashamn ಎಂದು ಬೋರ್ಡ್ ಇದ್ದ ಆ ಊರಿನ ಹೆಸರಿನ ಉಚ್ಚಾರ ‘ನೀನಾಸಂ’ ಎಂದೇ! ಒಮ್ಮೆಲೇ ಕಣ್ಣಮುಂದೆ ಬರ್ಗ್‌ಮನ್‌ನ ಸಿನಿಮಾಗಳು, ಕೆ.ವಿ. ಸುಬ್ಬಣ್ಣ ಅವರ ಬರಹಗಳು ಹಾದುಹೋದವು. ಬರ್ಗ್‌ಮನ್‌, ಡಿಸಿಕಾ, ಕುರಸಾವಾ ಮುಂತಾದ ಹೆಸರುಗಳನ್ನು ನಾನು ಮೊದಲು ಓದಿದ್ದೇ ಸುಬ್ಬಣ್ಣನವರ ಬರಹಗಳಲ್ಲಿ. ಎಲ್ಲಿಯ ಸುಬ್ಬಣ್ಣ. ಎಲ್ಲಿಯ ಬರ್ಗ್‌ಮನ್‌? ಎಲ್ಲಿಯ ಸ್ವೀಡನ್, ಎಲ್ಲಿಯ ನೀನಾಸಂ? ಕಣ್ಣೆದುರೇ ‘ಮ್ಯಾಜಿಕ್ ರಿಯಲಿಸಂ’ ರೀತಿಯ ಘಟನೆಯೊಂದು ನಡೆದುಹೋಗಿತ್ತು.ನಿಘಂಟಿನ ಪ್ರಕಾರ ಪರಿಚಿತ ಪರಿಸರದಲ್ಲಿ ತರ್ಕಕ್ಕೆ ನಿಲುಕದ, ನಂಬಲಸಾಧ್ಯವಾದ ಘಟನೆಯೊಂದು ಘಟಿಸಿದರೆ ಅದೇ ಮ್ಯಾಜಿಕ್ ರಿಯಲಿಸಂ ಅಥವಾ ಮಾಯಾವಾಸ್ತವ. 19ನೇ ಶತಮಾನದ ಆರಂಭದಲ್ಲಿ ಜನ್ಮತಳೆದ ‘ಸಿನಿಮಾ’ ಎಂಬ ಕಲಾಪ್ರಕಾರದ ಆವಿಷ್ಕಾರ ಕೂಡ ಇಂತಹ ಒಂದು ಮಾಯಾವಾಸ್ತವದ ಘಟನೆ. ದೊಡ್ಡ ಪರದೆಯ ಮೇಲೆ ನಮ್ಮ ಸುತ್ತಲಿನ ಜಗತ್ತನ್ನೇ ಪವಾಡ ಸದೃಶವಾಗಿ, ಜೀವಂತವಾಗಿ ಕಾಣುವುದನ್ನು ಅಲ್ಲಿಯವರೆಗೆ ಊಹಿಸಲೂ ಸಾಧ್ಯವಿರಲಿಲ್ಲ. ಸರಿಸುಮಾರು 120 ವರ್ಷಗಳಿಂದ ನಮ್ಮೆಲ್ಲರನ್ನೂ ಬೆರಗುಗೊಳಿಸುತ್ತ, ನಮ್ಮ ಭಾವಲೋಕದ ದಿಗಂತಗಳನ್ನು ವಿಸ್ತರಿಸುತ್ತ, ಕನಸು ಮತ್ತು ವಾಸ್ತವದ ನಡುವಿನ ಕೊಂಡಿಯಂತೆ ಈ ಕಲೆಯು ನಮ್ಮೆಲ್ಲರನ್ನು ಪ್ರಭಾವಿಸುತ್ತಲೇ ಇದೆ. ಬರ್ಗ್‌ಮನ್‌ ಮಾತಿನಲ್ಲಿ ಹೇಳುವುದಾದರೆ– ‘‘ಸಂಗೀತದಂತೆ, ಕನಸಿನಂತೆ ನೇರವಾಗಿ ನಮ್ಮ ಅಂತರಂಗದ ಆಳಕ್ಕಿಳಿದು ಪ್ರಭಾವಿಸುವ ಶಕ್ತಿಯಿರುವುದು ಸಿನಿಮಾಕ್ಕೆ ಮಾತ್ರ’’.ತೀರದ ಅಚ್ಚರಿಗಳ ಅಕ್ಷಯಪಾತ್ರೆ

2016ರಲ್ಲಿ ನಿಂತು ಒಮ್ಮೆ ಹಿಂತಿರುಗಿ ನೋಡಿದರೆ ಈ ಕಲಾಪ್ರಕಾರದ ಹುಟ್ಟು, ಬೆಳವಣಿಗೆ, ಇದರ ವ್ಯಾಪ್ತಿ, ಇತರ ಕಲಾಪ್ರಕಾರಗಳೊಂದಿಗಿನ ಕೊಡುಕೊಳೆಯ ಸಂಬಂಧ ಎಲ್ಲ ಅಚ್ಚರಿ ಮೂಡಿಸುವಂತಿವೆ. ಮನುಕುಲದ ಬೆಳವಣಿಗೆಯ ವಿವಿಧ ಘಟ್ಟಗಳಲ್ಲಿ ಹುಟ್ಟಿದ ಸಂಗೀತ, ಶಿಲ್ಪ, ಕಾವ್ಯ ಮುಂತಾದ ಕಲಾಪ್ರಕಾರಗಳನ್ನು ಇಂತಹ ಕಾಲದಲ್ಲಿಯೇ ಹುಟ್ಟಿತೆಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಸಿನಿಮಾದ ಹುಟ್ಟನ್ನು ಮಾತ್ರ ನಿಖರವಾಗಿ ಬಲ್ಲೆವು. ತಂತ್ರಜ್ಞಾನ, ಚಿತ್ರಕಲೆ, ಸಂಗೀತ, ಸಾಹಿತ್ಯಗಳ ಸಂಗಮವಾದ ಸಿನಿಮಾ ಆಧುನಿಕ ಕಾಲದ ‘ಬಂಡವಾಳ ಮೂಲದ’ ರೋಗರುಜಿನಗಳನ್ನು ಒಡಲಲ್ಲಿ ಹೊತ್ತುಕೊಂಡೇ ಹುಟ್ಟಿತ್ತು.ಸಾಹಿತ್ಯ, ನಾಟ್ಯಗಳಲ್ಲಿ ಸಾಧ್ಯವಿಲ್ಲದ ಅಭಿವ್ಯಕ್ತಿಯನ್ನು ಸಾಧ್ಯವಾಗಿಸುತ್ತ ಸಿನಿಮಾಕಲೆ ಬೆಳೆಯುತ್ತ ಹೋದಂತೆ ಅದ್ಭುತ ಕಲಾಕೃತಿಗಳ ಸೃಷ್ಟಿಯಾಗಿದೆ. ಹಾಗೆಯೇ ಒಡಲೊಳಗಿಲಿನ ರೋಗ ಆಗಾಗ ಉಲ್ಬಣಿಸುತ್ತ ‘ಇದೂ ಒಂದು ಕಲೆಯೇ’ ಎಂದು ಪ್ರಶ್ನಿಸುವಂತಹ ಚಿತ್ರಗಳ ನಿರ್ಮಾಣವೂ ಆಗಿದೆ. ಈ ರೋಗಕ್ಕಿನ್ನೂ ಸೂಕ್ತ ಚಿಕಿತ್ಸೆ ಸಿಕ್ಕಿಲ್ಲ. ಚಿತ್ರಕೃತಿಯ ಕಟ್ಟುವಿಕೆಯಲ್ಲಿ ಮೂಕಿ ಚಿತ್ರಗಳಿಂದ ಹಿಡಿದು ಇಂದಿನ ‘3ಡಿ’ ಚಿತ್ರಗಳವರೆಗೆ ಆದ ಬೆಳವಣಿಗೆ ಅಗಾಧ. ಪೌರಾಣಿಕ ಕಥೆಗಳನ್ನು ರಸವತ್ತಾಗಿ ಹೇಳುತ್ತಿದ್ದ ಕಾಲದಿಂದ ಶುರುವಾದ ಈ ಪಯಣದಲ್ಲಿ ಇಂದು ಐಡಿಯಾವೊಂದನ್ನು ಅಥವಾ ತೀವ್ರವಾದ ಅನುಭವವೊಂದನ್ನು ಯಾವುದೇ ಕಥಾನಕದ ಹಂಗಿಲ್ಲದೆ ಚಿತ್ರಿಸಲು ಸಾಧ್ಯವಿದೆ, ಸಾಧ್ಯವಾಗಿದೆ.ಕೇವಲ ಕಥೆ ಹೇಳುವುದೇ ಉದ್ದೇಶವಾಗದೆ ಒಳ್ಳೆಯ ಕಾವ್ಯವೊಂದರ ಗುಣವನ್ನು ಹೊಂದಿದ ಚಿತ್ರಗಳನ್ನು ಕಟ್ಟುವುದು ಸಾಧ್ಯವಾಗಿದೆ. ಮೂರ್ನಾಲ್ಕು ತಾಸುಗಳ ಎಪಿಕ್ ಕೃತಿಗಳನ್ನು, ಕೆಲವೇ ನಿಮಿಷಗಳ ಕಿರುಚಿತ್ರಗಳನ್ನು, ಹಾಡು–ನೃತ್ಯಗಳೇ ಪ್ರಧಾನವಾದ ಗೀತಚಿತ್ರಗಳು, ವಾಸ್ತವದ ಚಿತ್ರಣವುಳ್ಳ ಡಾಕ್ಯುಮೆಂಟರಿಗಳು– ಹೀಗೆ ನಾನಾ ರೂಪ, ನಾನಾ ಶೈಲಿಯ ಚಿತ್ರಗಳು ಇಂದು ನೋಡಲು ಸಿಗುತ್ತವೆ. ಸ್ಪೆಷಲ್ ಎಫೆಕ್ಟ್‌ನಂತಹ ತಂತ್ರಜ್ಞಾನಾಧಾರಿತ ಮೈನವಿರೇಳಿಸುವ ಚಿತ್ರಗಳು ಇಂದು ಹಾಲಿವುಡ್ಡಿಗಷ್ಟೇ ಸೀಮಿತವಾಗಿಲ್ಲ. ‘ಐಮ್ಯಾಕ್ಸ್’ ಎಂಬ ತಂತ್ರಜ್ಞಾನದ ಮೂಲಕ ಸಾಧಾರಣ ಚಿತ್ರಗಳಿಗಿಂತ ಹಲವು ಪಟ್ಟು ದೊಡ್ಡ ಗಾತ್ರದಲ್ಲಿ ಚಿತ್ರೀಕರಿಸಿ ನಂತರ ಅದಕ್ಕೆಂದೇ ವಿಶೇಷವಾಗಿ ವಿನ್ಯಾಸ ಮಾಡಲಾದ ಚಿತ್ರಮಂದಿರದಲ್ಲಿ ನೋಡುಗ ದೃಶ್ಯಸಾಗರದಲ್ಲಿ ಮುಳುಗಿಹೋಗುವಂತೆ ಪ್ರದರ್ಶಿಸಬಲ್ಲ ವ್ಯವಸ್ಥೆಯೂ ಬಂದಿದೆ.ಚಲನಚಿತ್ರಗಳನ್ನು ಥಿಯೇಟರುಗಳಲ್ಲಿ ಪ್ರದರ್ಶಿಸಲಾಗುತ್ತಿದ್ದ ದಿನಗಳಿಂದ ಬಹುದೂರ ಸಾಗಿಬಂದಿರುವ ನಾವು ಇಂದು ಮನೆಯಲ್ಲಿ ಕುಳಿತು ಟೀವಿ, ಕಂಪ್ಯೂಟರ್– ಅಷ್ಟೇ ಏಕೆ, ಅಂಗೈಮೇಲಿನ ಸ್ಮಾರ್ಟ್ ಫೋನುಗಳಲ್ಲಿಯೂ ಸಿನಿಮಾ ನೋಡುವುದು ಸಾಧ್ಯವಾಗಿದೆ. ಹಾಸ್ಯ, ಸಾಹಸ, ಥ್ರಿಲ್ಲರ್ ಮುಂತಾಗಿ ಕೆಲವೇ ಶೈಲಿಗಳಾಗಿ ಗುರುತಿಸಲಾಗುತ್ತಿದ್ದ ಚಿತ್ರಗಳೀಗ ನೋಡುಗರ ಸಂಖ್ಯೆ ಹೆಚ್ಚಿದಂತೆ, ಅವರ ಅಭಿರುಚಿಯ ವೈವಿಧ್ಯಕ್ಕನುಗುಣವಾಗಿ ಇನ್ನಷ್ಟು ಸೂಕ್ಷ್ಮ ಗುಣವ್ಯತ್ಯಾಸಗಳಿರುವ ಅನೇಕ ಶೈಲಿಗಳಾಗಿ ಮರುವಿಂಗಡಣೆಗೊಂಡಿವೆ. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಪ್ರಭಾವಶಾಲಿಯಾಗಿ ಚಲನಚಿತ್ರ ಕಲಾಪ್ರಕಾರ ಬೆಳೆದು ನಿಂತದ್ದೇ ಒಂದು ಮಾಯಾವಾಸ್ತವ!ಸಾಧ್ಯತೆಗಳ ನಿರಂತರ ಹುಡುಕಾಟ

ಸಿನಿಮಾ ಕಲೆಯ ಉದ್ದೇಶವೇನು ಎಂಬ ಪ್ರಶ್ನೆಗೆ ಚಿತ್ರನಿರ್ಮಾಣವನ್ನು ಉದ್ಯಮವಾಗಿ ಬೆಳೆಸಿದ ಮಂದಿ ಕೊಡುವ ಸಿದ್ಧ ಉತ್ತರ– ಮನರಂಜನೆ ಮತ್ತು ಲಾಭ. ಆದರೆ ಸಿನಿಮಾವನ್ನು ಇತರೆಲ್ಲ ಕಲೆಗಳಂತೆ ಎಂದುಕೊಂಡ ಕಲಾವಿದರು ಕೊಡುವ ಉತ್ತರ ಇದಕ್ಕಿಂತ ಭಿನ್ನ. ಅವರಿಗೆ ಚಿತ್ರಕೃತಿಯೊಂದು ಜೀವನದ ಪ್ರತಿಬಿಂಬ ಅಥವಾ ಜನಸಮುದಾಯದ ಆಶಯಗಳ ಅಭಿವ್ಯಕ್ತಿ ಅಥವಾ ಕಂಗೆಡಿಸುವ ಪ್ರಶ್ನೆಗಳಿಗೆ ಉತ್ತರಗಳ ಹುಡುಕಾಟ. ಇಂಥದ್ದೊಂದು ಬಿರುಕು ಅಥವಾ ಭಿನ್ನದಾರಿಗಳ ಪಯಣ ಇತರೆಲ್ಲ ಕಲಾಪ್ರಕಾರಗಳಲ್ಲಿ ಕಂಡುಬಂದರೂ ಸಿನಿಮಾದ ಸಂದರ್ಭದಲ್ಲಿ ಇದು ಚರ್ಚೆಗೊಳಗಾದಷ್ಟು, ಜಗಳಗಳಿಗೆ ಕಾರಣವಾದಷ್ಟು ಬೇರೆಡೆ ಕಾಣಸಿಗದು. ಅಷ್ಟರಮಟ್ಟಿಗೆ ಸಿನಿಮಾದ ಪರಿಣಾಮ ಮತ್ತು ಪ್ರಸ್ತುತತೆ ಪ್ರಶ್ನಾತೀತ.ತೆರೆಕಂಡ ಚಿತ್ರವೊಂದು ನೂರಾರು ದಿನಗಳ ಕಾಲ ಪ್ರದರ್ಶನಗೊಂಡು ನೋಡುಗರನ್ನು ರಂಜಿಸಿ, ದೊಡ್ಡ ಲಾಭ ಗಳಿಸಿ, ಸ್ಟಾರುಗಳ ವಿಜಯಕ್ಕೆ ಸಂಕೇತವಾಗುವ ವಿದ್ಯಮಾನವನ್ನು ಉದ್ಯಮದ ಮಂದಿ ‘ಯಶಸ್ಸು’ ಎಂದು ಕರೆದರೆ; ಭಿನ್ನದಾರಿಯ ಕಲಾವಿದರು ಚಿತ್ರೋತ್ಸವಗಳಲ್ಲಿ ಭಾಗವಹಿಸಿ ಮನ್ನಣೆ, ಪುರಸ್ಕಾರಗಳನ್ನು ಪಡೆದು ಒಂದು ವಲಯದಲ್ಲಿ ಚರ್ಚೆಗೆ ಕಾರಣವಾಗುವುದನ್ನು ‘ಯಶಸ್ಸು’ ಎಂದು ಪರಿಗಣಿಸುವುದು ಕಾಣುತ್ತದೆ. ಇದು ಕೇವಲ ನಮ್ಮ ದೇಶದ ಕಥೆಯಲ್ಲ. ಚಿತ್ರ ನಿರ್ಮಾಣದಲ್ಲಿ ತೊಡಗಿರುವ ಎಲ್ಲ ದೇಶಗಳಲ್ಲಿಯೂ ಈ ವಿಭಜನೆ ಕಂಡುಬರುತ್ತದೆ.ಆದರೆ ನಮ್ಮಲ್ಲಿ ನೋಡುಗರಿಗೆ ಆಯ್ಕೆಯೇ ಇಲ್ಲದಂತೆ ವ್ಯಾಪಾರಿ ಚಿತ್ರಗಳ ಭರಾಟೆ, ಅದಕ್ಕೆ ಪೂರಕವಾಗಿ ಕೆಲಸ ಮಾಡುವ ಪ್ರದರ್ಶನ ವ್ಯವಸ್ಥೆ ಚಾಲ್ತಿಯಲ್ಲಿದೆ. ವಿದೇಶಗಳಲ್ಲಿ ಕಲಾಚಿತ್ರಗಳನ್ನು ‘ಆರ್ಟ್ ಹೌಸ್’ ಎಂದು ಕರೆಯಲಾಗುವ ಪ್ರತ್ಯೇಕ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತದೆ. ನಾನು ಪ್ಯಾರಿಸ್‌ನ ಇಂತಹದ್ದೊಂದು ‘ಆರ್ಟ್ ಹೌಸ್’ ಥಿಯೇಟರಿಗೆ ಭೇಟಿಕೊಟ್ಟಾಗ ಅಲ್ಲಿನ ವ್ಯವಸ್ಥೆ ಕಂಡು ಅಚ್ಚರಿಯಾಗಿತ್ತು.ಖ್ಯಾತ ಫ್ರೆಂಚ್ ನಿರ್ದೇಶಕ ತ್ರೂಫೋನ ಹೆಸರಿದ್ದ ಆ ಥಿಯೇಟರಿನಲ್ಲಿ ಸುಮಾರು ನೂರಿನ್ನೂರು ಜನ ಕೂರಬಹುದಾದ ಪುಟ್ಟ ಪರದೆಗಳುಳ್ಳ ಎರಡು ಹಾಲ್‌ಗಳಲ್ಲಿ ಸಿನಿಮಾ ಪ್ರದರ್ಶನ ನಡೆಯುತ್ತಿತ್ತು. ಪಕ್ಕದಲ್ಲಿಯೇ ಲೈಬ್ರರಿಯಿದ್ದು, ಅಲ್ಲಿ ಪುಸ್ತಕಗಳಷ್ಟೇ ಅಲ್ಲದೆ ತಮ್ಮ ಆಯ್ಕೆಯ ಚಿತ್ರಗಳನ್ನು ನೋಡಲು ಸಾಲಾಗಿ ಟೀವಿ ಮತ್ತು ಇಯರ್ ಫೋನಿನ ವ್ಯವಸ್ಥೆಯುಳ್ಳ ಕೌಂಟರುಗಳಿದ್ದವು. ಇದರ ಜೊತೆಗೆ ಯುರೋಪಿನ ಹಲವೆಡೆ ದೊಡ್ಡ–ಸಣ್ಣ ಚಿತ್ರೋತ್ಸವಗಳು ವರ್ಷಾದ್ಯಂತ ನಡೆಯುತ್ತಿರುತ್ತವೆ.ನಮ್ಮಲ್ಲಿ ಟೀವಿ ಬಂದ ಹೊಸದರಲ್ಲಿ ಪರ್ಯಾಯ ಪ್ರದರ್ಶನ ವ್ಯವಸ್ಥೆಯೊಂದು ಸಿಗುತ್ತದೆ ಎಂದೇ ನಂಬಲಾಗಿತ್ತು. ಸರ್ಕಾರಿ ಒಡೆತನದ ದೂರದರ್ಶನ ಹೊರತುಪಡಿಸಿದರೆ ನೂರಾರು ಖಾಸಗಿ ಟೀವಿಗಳ ಭರಾಟೆಯಲ್ಲಿ ಮತ್ತದೇ ವ್ಯಾಪಾರಿ ಚಿತ್ರಗಳ ವಿಜೃಂಭಣೆ ಮುಂದುವರೆದಿದೆ. ಹೊಸಕಾಲದ ಆವಿಷ್ಕಾರವಾದ ಇಂಟರ್ನೆಟ್ ಇನ್ನೂ ದೊಡ್ಡ ಊರುಗಳ ಕೆಲವೇ ನೋಡುಗರ ಆಸರೆಯಲ್ಲಿದ್ದು ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಬೇಕಿದೆ.ಹಲವಾರು ಕಲಾವಿದರ, ತಂತ್ರಜ್ಞರ ಸಮಯ, ಶ್ರಮ ಮತ್ತು ಸಾಕಷ್ಟು ದೊಡ್ಡ ಪ್ರಮಾಣದ ಬಂಡವಾಳ ಬೇಡುವ ಚಿತ್ರನಿರ್ಮಾಣ ಕ್ರಿಯೆ ಅಂತಿಮವಾಗಿ ಕೃತಿಯ ನಿರ್ಮಾಣವಾದ ಮೇಲೆ ತನ್ನ ಉದ್ದೇಶಿತ ಗುರಿಯನ್ನು ಮುಟ್ಟುವಲ್ಲಿ ಸಫಲವಾದದ್ದಕ್ಕಿಂತ ವಿಫಲವಾದ ಉದಾಹರಣೆಗಳು ಈ ಎರಡೂ ದಾರಿಗಳಲ್ಲಿ ಹೇರಳವಾಗಿವೆ. ಇಷ್ಟಾಗಿ ನಮ್ಮಲ್ಲಿ ಪ್ರತಿವರ್ಷ ನಿರ್ಮಾಣವಾಗುತ್ತಿರುವ ಚಿತ್ರಗಳ ಸಂಖ್ಯೆ ಏರುತ್ತಲೇ ಇರುವುದು ಈ ಕಲಾಪ್ರಕಾರದ ಪ್ರಭಾವ ಗಾಢವಾಗಿರುವುದನ್ನು ಹೇಳುತ್ತಿರುವಂತಿದೆ.

ಅಥವಾ ಕಾವ್ಯ, ಸಂಗೀತ, ಶಿಲ್ಪ ಮುಂತಾದ ಕಲಾಪ್ರಕಾರಗಳಿಗೆ ಬೇಕಾದ ‘ಪ್ರವೇಶ’, ಸೂಕ್ತ ತರಬೇತಿ ಸಿನಿಮಾಕ್ಕೆ ಬೇಕಿಲ್ಲ ಎಂಬ ಸಾರ್ವತ್ರಿಕ ನಂಬುಗೆ ನಮ್ಮಲ್ಲಿ ಎಲ್ಲ ಬಗೆಯ ಜನರನ್ನು ಚಿತ್ರನಿರ್ಮಾಣದತ್ತ ಸೆಳೆಯಲು ಕಾರಣವಾಗಿರಬಹುದು. ಮಾಧ್ಯಮಗಳಲ್ಲಿ ಸಿಗುವ ಪ್ರಚಾರ, ಚಿತ್ರ ಯಶಸ್ವಿಯಾದರೆ ದಿಢೀರನೆ ಸಿಗುವ ಲಾಭ– ಇವೇ ಲೆಕ್ಕಾಚಾರಗಳೂ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರಬಹುದು.

ಆರ್ಟ್ಸ್ ಮತ್ತು ಸೈನ್ಸ್ (ಕಲೆ ಮತ್ತು ವಿಜ್ಞಾನ) ಎಂಬ ಕೃತಕ ವಿಭಜನೆ ಇರುವ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಇವೆರಡೂ ಜ್ಞಾನಧಾರೆಗಳ ಸಮಂಜಸ ಅರಿವು ಇದ್ದರೆ, ಚಲನಚಿತ್ರದಂತಹ ಕಲಾಪ್ರಕಾರದಲ್ಲಿ ಕೃಷಿಸಾಧ್ಯ ಎಂಬ ಅರಿವಾದಾಗ ಹೊಸದೇನಾದರೂ ಸೃಷ್ಟಿಸಲು ಸಾಧ್ಯ. ಈ ಕೊರತೆಗಳು ಕೇವಲ ನಮ್ಮ ದೇಶದ ಪರಿಸ್ಥಿತಿ ಎನ್ನುವುದು ಚಿತ್ರೋತ್ಸವಗಳಲ್ಲಿ ವಿದೇಶಿ ಚಿತ್ರಗಳ ಜೊತೆಗೆ ನಮ್ಮ ಚಿತ್ರಗಳನ್ನು ತುಲನೆಮಾಡಿ ನೋಡಿದಾಗ ತಿಳಿಯುತ್ತದೆ. ಇದು ಚಿತ್ರವಿಮರ್ಶಕರಿಗೂ ಅನ್ವಯಿಸುವ ಮಾತು. ಚಿತ್ರವೆಂದರೆ ಕೇವಲ ಅದರ ಕಥೆಯಲ್ಲ, ನಟರ ನಟನೆಯಲ್ಲ, ವಸ್ತುವಿನ ನಿರೂಪಣೆ ಮತ್ತು ದೃಶ್ಯಸಾಧ್ಯತೆಯನ್ನು ಬಳಸಿಕೊಂಡಿರುವ ರೀತಿ ಎಂಬುದನ್ನು ವಿಮರ್ಶೆಯು ಒಳಗೊಳ್ಳುವಂತಾದರೆ ಚಿತ್ರಕೃತಿಗೆ ನ್ಯಾಯ ಒದಗುತ್ತದೆ.ಸಿದ್ಧಸೂತ್ರಗಳ ಮೀರಿದ ವ್ಯಾಕರಣ

ನಮ್ಮ ತಲೆಮಾರನ್ನು ಗಾಢವಾಗಿ ಪ್ರಭಾವಿಸಿರುವ ಕಲೆಯಾಗಿ ಸಿನಿಮಾ ತನ್ನ ಪ್ರಸ್ತುತತೆಯನ್ನು ಮತ್ತು ಪರಿಣಾಮವನ್ನು ಉಳಿಸಿಕೊಂಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ನಾವು ಎಲ್ಲಿ ನಿಂತು ಈ ಪ್ರಶ್ನೆ ಕೇಳುತ್ತಿದ್ದೇವೆ ಎಂಬುದರ ಮೇಲೆ ಉತ್ತರ ಬದಲಾಗುತ್ತದೆ.ಚಿತ್ರ ನಿರ್ಮಾಣದಲ್ಲಿ ತೊಡಗಿರುವವರ ಉತ್ತರ ಬೇರೆಯಾದರೆ, ನೋಡುಗರ ಉತ್ತರ ಬೇರೆಯಾಗಿರುತ್ತದೆ. ನನ್ನ ಪ್ರಕಾರ ಸಾಹಿತ್ಯದಂತೆ ಸಿನಿಮಾವನ್ನು ಕಲಾಪ್ರಕಾರವೆಂದು ಪರಿಗಣಿಸಿ ಗಂಭೀರವಾಗಿ ಚರ್ಚಿಸುವ, ವಿಮರ್ಶಿಸುವ ಸಾಧ್ಯತೆ ನಮ್ಮಲ್ಲಿ ಕಡಿಮೆಯಿರುವುದರಿಂದ ಹಾಗೂ ವಾರಾಂತ್ಯದ ರಿವ್ಯೂ, ಸ್ಟಾರ್ ರೇಟಿಂಗ್ ಎಂಬ ಪದ್ಧತಿಯೇ ಪ್ರಚಲಿತದಲ್ಲಿ ಇರುವುದರಿಂದ ನಿಜವಾದ ಚರ್ಚೆ ಸಾಧ್ಯವಾಗುವುದೇ ಇಲ್ಲ. ಸಿನಿಮಾಕ್ಕೆಂದೇ ಮೀಸಲಾದ ಪತ್ರಿಕೆಗಳೂ ಗಾಸಿಪ್ ಮತ್ತಿತರ ಮಸಾಲೆಯನ್ನು ಉಣಬಡಿಸಲೆಂದೇ ಇರುವ ಮಾರುಕಟ್ಟೆಯ ಸರಕುಗಳು; ಮತ್ತು ಇವುಗಳ ಕಣ್ಣಿರುವುದು ವ್ಯಾಪಾರಿ ಚಿತ್ರಗಳ ಮೇಲೆ.ನಮ್ಮ ಸಿನಿಮಾ ಪ್ರದರ್ಶನ ವ್ಯವಸ್ಥೆಯಲ್ಲಿನ ಮಿತಿ ಹಾಗೂ ಲೋಪದೋಷಗಳಿಂದಾಗಿ ವ್ಯಾಪಾರಿ ಚಿತ್ರಗಳಿಗಿರುವ ಪ್ರಚಾರ ಪರ್ಯಾಯ ಚಿತ್ರಗಳಿಗಿಲ್ಲ. ಇತ್ತೀಚೆಗೆ ಚರ್ಚೆಯಲ್ಲಿರುವ ಮರಾಠಿ ಚಿತ್ರ ‘ಕೋರ್ಟ್’ನ ಉದಾಹರಣೆಯನ್ನೇ ನೋಡಬಹುದು. ನಮ್ಮ ನ್ಯಾಯಾಂಗ ವ್ಯವಸ್ಥೆಯ ವೈಫಲ್ಯವನ್ನು ಈ ಚಿತ್ರ ಯಾವುದೇ ಉದ್ವೇಗವಿಲ್ಲದೆ, ನಿರುಮ್ಮಳವಾಗಿ ಹಾಗೂ ವಿವರವಾಗಿ ಕಟ್ಟಿಕೊಡುತ್ತದೆ. ಸರಿಸುಮಾರು ಎಲ್ಲ ಭಾರತೀಯ ಭಾಷೆಗಳ ನೂರಾರು ಚಿತ್ರಗಳಲ್ಲಿ ಕೋರ್ಟ್‌ ಕಲಾಪಗಳ ಚಿತ್ರಣವಿದ್ದರೂ ಅವು ಹೆಚ್ಚಾಗಿ ಕೇವಲ ಭಾವಾವೇಶದ ಸಂಭಾಷಣೆಗೆ ಇಲ್ಲವೇ ಅಸಂಬದ್ಧ ತರ್ಕಮಂಡಣೆಗೆ ಸೀಮಿತವಾಗಿರುವುದನ್ನು ಕಾಣಬಹುದು.ಸಿನಿಮಾ ಕಲೆಯ ಸಾಧ್ಯತೆಗಳನ್ನು ದುಡಿಸಿಕೊಳ್ಳುತ್ತ ಗಟ್ಟಿಯಾದ ವಿಷಯ ನಿರೂಪಣೆಯ ಕಡೆಗೆ ಅವು ಗಮನಹರಿಸಿರುವುದು ಕಡಿಮೆ. ದೇಶ ವಿದೇಶಗಳ ಅನೇಕ ಚಿತ್ರೋತ್ಸವಗಳಲ್ಲಿ ಭಾಗವಹಿಸಿ ಮನ್ನಣೆ ಗಳಿಸಿದ ಮೇಲೆ ‘ಕೋರ್ಟ್’ ಚಿತ್ರವನ್ನು ದೇಶದಾದ್ಯಂತ ತೆರೆಕಾಣಿಸುವ ಪ್ರಯತ್ನ ಆಯಿತು. ಆದರೆ ಹೆಚ್ಚೇನೂ ಪ್ರೇಕ್ಷಕರನ್ನು ಸೆಳೆಯದೆ ಅಷ್ಟೇ ಬೇಗ ಚಿತ್ರಮಂದಿರಗಳಿಂದ ಪ್ರದರ್ಶನ ರದ್ದಾಯಿತು. ಇಲ್ಲಿ ಕೇವಲ ಚಿತ್ರದ ಪರಿಣಾಮ ಅಥವಾ ಪ್ರಸ್ತುತತೆಯನ್ನು ಪ್ರಶ್ನಿಸಲಾಗದು. ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಅಭಿರುಚಿ, ಸಹೃದಯತೆಯ ಕುರಿತೂ ನಾವು ಪ್ರಶ್ನಿಸಿಕೊಳ್ಳಬೇಕು.‘ನಾವು ಒಳ್ಳೆಯ ಪ್ರೇಕ್ಷಕರನ್ನು ತಯಾರು ಮಾಡದೆ ಒಳ್ಳೆಯ ಚಿತ್ರಗಳನ್ನು ನಿರ್ಮಿಸಲಾಗದು’ ಎಂಬ ಫ್ರೆಂಚ್ ಕಲಾವಿದ, ಚಿಂತಕ ಆಂದ್ರೆ ಮಾರ್ಲಾಕ್ಸ್‌ನ ಮಾತುಗಳು ಸಾರ್ವಕಾಲಿಕ ಸತ್ಯ. ಮಾರುಕಟ್ಟೆಯ ಲಾಭ–ನಷ್ಟದ ಲೆಕ್ಕಾಚಾರದಲ್ಲಿ, ‘ಕೋರ್ಟ್’ನಂತಹ ಚಿತ್ರಗಳು ಅಯಶಸ್ವಿ ಎನ್ನುವ ಹಣೆಪಟ್ಟಿ ಹಚ್ಚಿಕೊಳ್ಳುತ್ತವೆ. ಇಂಟರ್ನೆಟ್‌ ಮೂಲಕ ಚಿತ್ರಗಳನ್ನು ನೋಡುವ, ಡೌನ್‌ಲೋಡ್ ಮಾಡುವ ಸಾಧ್ಯತೆಯಿರುವ ಈ ಕಾಲದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಜನರನ್ನು ‘ಕೋರ್ಟ್’ನಂತಹ ಚಿತ್ರಗಳು ಇಂದಲ್ಲ ನಾಳೆ ತಲುಪಬಹುದು ಎಂಬುದೇ ಸಮಾಧಾನದ ಅಂಶ. ಇಂತಹ ಅವಕಾಶ ಕಳೆದ ದಶಕಗಳಲ್ಲಿ ತೆರೆಕಾಣಲಾಗದ ಚಿತ್ರಗಳಿಗೆ ಇರಲಿಲ್ಲ ಎಂಬುದನ್ನು ಗಮನಿಸಿದರೆ ಇದರ ಮಹತ್ವ ತಿಳಿಯುತ್ತದೆ.ಒಳ್ಳೆಯ ದಿನಗಳು!

ಈ ಮಾಯಾವಾಸ್ತವದಲ್ಲಿ ಇದೀಗ ಹೊಸಬಗೆಯ ಸಂಚಲನ ಸಾಧ್ಯವಾಗಿದೆ. ಸಿನಿಮಾ ಕಲೆಯ ಕುರಿತು ನಿಜವಾದ ಆಸಕ್ತಿ, ಕಲಾಪ್ರಕಾರದ ವಿವಿಧ ಸಾಧ್ಯತೆಗಳ ಕುರಿತು ಒಲವಿರುವವರಿಗೆ ಇದು ಒಳ್ಳೆಯ ಕಾಲ. ಇಂಟರ್ನೆಟ್ ಎಂಬ ಮಾಯಾಜಾಲದಲ್ಲಿ ನೋಡುವ, ಕಲಿಯುವ, ಕಲಿತು ಪ್ರಯೋಗಿಸುವ, ನಂತರ ಸಮಾನಮನಸ್ಕರ ಜೊತೆ ಹಂಚಿಕೊಳ್ಳುವ ವಿಫುಲ ಅವಕಾಶಗಳಿವೆ. ಭಾಷೆಯ ತೊಡಕಿಲ್ಲದಿದ್ದರೆ ವಿದೇಶದ ಚಿತ್ರನಿರ್ಮಾಪಕರಿಂದ ಹಿಡಿದು ನೋಡುಗರವರೆಗೆ ಎಲ್ಲ ಬಗೆಯ ಜನರೊಂದಿಗೆ ಸಂಪರ್ಕ ಸಾಧ್ಯವಿದೆ.ಮುಂದುವರೆದು, ಅಲ್ಲಿನ ಕಲಾವಿದ ಅಥವಾ ತಂತ್ರಜ್ಞರೊಂದಿಗಿನ ಸಹಯೋಗದೊಂದಿಗೆ ಚಿತ್ರನಿರ್ಮಾಣ, ಪ್ರದರ್ಶನ ಮತ್ತು ಮಾರಾಟದಂತಹ ಸಾಧ್ಯತೆಗಳೂ ಇವೆ. ಇವೆಲ್ಲ ಈಗೀಗ ಒದಗಿಬರುತ್ತಿರುವ ಅನುಕೂಲಗಳಾದ್ದರಿಂದ ಅಡೆತಡೆ, ಗೊಂದಲ, ಇತ್ಯಾದಿಗಳು ಇರುವುದು ಸಹಜ. ಕ್ರಮೇಣ ಇಂತಹ ಸಾಧ್ಯತೆಗಳೇ ಮುಂದಿನ ದಿನಗಳಲ್ಲಿ ಮುಖ್ಯವಾಹಿನಿ ಆಗಬಹುದು. ಸೃಷ್ಟಿ ಮತ್ತು ವಿನಾಶದ ಶಕ್ತಿ ಎರಡೂ ಮೇಳೈಸಿರುವ ಸಿನಿಮಾ ಎಂಬ ಕಲೆ ಇನ್ನಿಲ್ಲದಂತೆ ನಮ್ಮ ತಲೆಮಾರನ್ನು ಆವರಿಸಿರುವ ಈ ಹೊತ್ತಿನಲ್ಲಿ ಚಿತ್ರನಿರ್ಮಾಣದಲ್ಲಿ ತೊಡಗಬಯಸುವವರಿಗೆ ಎಂತೋ ಅಂತೆಯೇ ನೋಡುಗರಿಗೂ ಗುರುತರವಾದ ಜವಾಬ್ದಾರಿಯಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.