ವಿಂಬಲ್ಡನ್ ಟೆನಿಸ್: ವೀನಸ್ಗೆ ಆಘಾತ
ಲಂಡನ್ (ಐಎಎನ್ಎಸ್): ಪ್ರದರ್ಶನ ಮಟ್ಟದಲ್ಲಿ ಮತ್ತೆ ಚೈತನ್ಯ ಮೂಡಿಲ್ಲ. ಆದ್ದರಿಂದ ಅಮೆರಿಕಾದ ವೀನಸ್ ವಿಲಿಯಮ್ಸ ಈ ಸಾಲಿನ ಮತ್ತೊಂದು ಗ್ರ್ಯಾನ್ ಸ್ಲಾಮ್ನಲ್ಲಿ ಬಹುಬೇಗ ಮುಗ್ಗರಿಸಿದ್ದಾರೆ.
ರೋಲೆಂಡ್ ಗ್ಯಾರೊಸ್ನಲ್ಲಿ ಎರಡನೇ ಸುತ್ತಿನಲ್ಲಿಯೇ ನಿರಾಸೆ ಹೊಂದಿದ್ದ ವೀನಸ್ಗೆ ವಿಂಬಲ್ಡನ್ನಲ್ಲಿ ಎರಡನೇ ಸುತ್ತಿಗೆ ಅರ್ಹತೆ ಪಡೆಯಲು ಕೂಡ ಆಗಲಿಲ್ಲ. ಹೀಗೆ ಬಂದು ಹಾಗೆ ಹೊರಟುಬಿಟ್ಟರು. ಅಷ್ಟು ಬೇಗ ಮುಗಿಯಿತು ಹೋರಾಟ.
ಸೋಮವಾರ ಆರಂಭವಾದ ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ನ ಪಂದ್ಯದಲ್ಲಿ ವೀನಸ್ 1-6, 3-6ರಲ್ಲಿ ರಷ್ಯಾದ ಎಲೆನಾ ವೆಸ್ನಿನಾ ವಿರುದ್ಧ ಸೋಲನುಭವಿಸಿದರು. ತಂತ್ರಗಾರಿಕೆಯ ಆಟವಾಡುವಲ್ಲಿ ವಿಫಲರಾಗುತ್ತಿರುವ ಈ ಖ್ಯಾತ ಟೆನಿಸ್ ತಾರೆಯು ನಿರ್ಗಮಿಸಿದ್ದು ಪ್ರೇಕ್ಷಕರಿಗೆ ಅಚ್ಚರಿ ಎನಿಸಲಿಲ್ಲ.
ಪುರುಷರ ಸಿಂಗಲ್ಸ್ನಲ್ಲಿ ವಿಶ್ವ ಮೊದಲ ಕ್ರಮಾಂಕದ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಯಶಸ್ಸಿನ ಹೆಜ್ಜೆ ಇಟ್ಟರು. ಅವರು 6-3, 6-3, 6-1ರಲ್ಲಿ ಸ್ಪೇನ್ನ ಜುವಾನ್ ಕಾರ್ಲೊಸ್ ಫೆರೆರೊ ವಿರುದ್ಧ ಸುಲಭವಾಗಿ ಗೆಲುವು ಪಡೆದರು. ಜೊಕೊವಿಚ್ ಎರಡನೇ ಸುತ್ತಿನಲ್ಲಿ ಅಮೆರಿಕಾದ ರ್ಯಾನ್ ಹ್ಯಾರಿಸನ್ ಇಲ್ಲವೆ ತೈವಾನ್ನ ಪ್ಲಾವಿಯಾ ಪೆನ್ನೆಟಾ ವಿರುದ್ಧ ಆಡುವರು.
ಅಗ್ರಶ್ರೇಯಾಂಕದ ಆಟಗಾರ್ತಿ ರಷ್ಯಾದ ಮರಿಯಾ ಶರ್ಪೊವಾ 6-2, 6-3ರಲ್ಲಿ ಆಸ್ಟ್ರೇಲಿಯಾದ ಅನಾಸ್ತಾಸಿಯಾ ರಾಡಿಯೊವಾ ವಿರುದ್ಧ ಗೆದ್ದರು. ಮುಂದಿನ ಸುತ್ತಿನಲ್ಲಿ ಅವರಿಗೆ ಬಲ್ಗೇರಿಯಾದ ಸ್ವೆತಾನಾ ಪಿರೊಂಕೊವಾ ಎದುರಾಗುವರು.
ಆಸ್ಟ್ರೇಲಿಯಾದ ಸಮಂತಾ ಸ್ಟೊಸರ್ ಎರಡನೇ ಸುತ್ತಿಗೆ ರಹದಾರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಟೊಸರ್ 6-1, 6-3ರಲ್ಲಿ ಹಾಲೆಂಡ್ನ ಅರಾನ್ಸಾ ರಸ್ ಅವರನ್ನು ತೀರ ಸುಲಭವಾಗಿ ಮಣಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.