ವಿಕಾಸ್ ಗೌಡಗೆ ನಿರಾಸೆ

ರಿಯೊ ಡಿ ಜನೈರೊ : ಒಲಿಂಪಿಕ್ ಕೂಟದ ಅಥ್ಲೆಟಿಕ್ಸ್‌ನಲ್ಲಿ ಮೊದಲ ದಿನ ಭಾರತಕ್ಕೆ ನಿರಾಸೆ ಎದುರಾಗಿದ್ದು, ಡಿಸ್ಕಸ್ ಥ್ರೋ ಸ್ಪರ್ಧಿ ವಿಕಾಸ್ ಗೌಡ ಸೇರಿದಂತೆ ಮೂವರು ಅಥ್ಲೀಟ್‌ಗಳು ಅರ್ಹತಾ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.
ಸತತ ನಾಲ್ಕನೇ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಕರ್ನಾಟಕದ ವಿಕಾಸ್ ಡಿಸ್ಕ್‌ಅನ್ನು 58.99 ಮೀ. ದೂರ ಮಾತ್ರ ಎಸೆಯುವಲ್ಲಿ ಯಶ ಕಂಡರು. ಕಣದಲ್ಲಿದ್ದ 34 ಸ್ಪರ್ಧಿಗಳಲ್ಲಿ ಅವರು 28ನೇ ಸ್ಥಾನ ಪಡೆದರು.
ವಿಕಾಸ್ ಅವರು 66.28 ಮೀ ಎಸೆದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಆದರೆ ರಿಯೊದಲ್ಲಿ 60 ಮೀ. ಗಿಂತ ದೂರ ಎಸೆಯುವಲ್ಲೂ ವಿಫಲರಾದರು.
ಭುಜದ ಗಾಯದ ಸಮಸ್ಯೆಗೆ ಒಳಗಾಗಿದ್ದ ವಿಕಾಸ್ ತಕ್ಕ ಸಿದ್ಧತೆ ಇಲ್ಲದೆ ರಿಯೊಗೆ ಬಂದಿದ್ದರು. 2015ರ ಸೆಪ್ಟೆಂಬರ್ ಬಳಿಕ ಅವರು ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿರಲಿಲ್ಲ.
ವಿಕಾಸ್ ಮೊದಲ ಪ್ರಯತ್ನದಲ್ಲಿ ಡಿಸ್ಕ್‌ಅನ್ನು 57.59 ಮೀ. ಎಸೆದರು. ಎರಡನೇ ಅವಕಾಶದಲ್ಲಿ 58.99 ಹಾಗೂ ಕೊನೆಯ ಪ್ರಯತ್ನದಲ್ಲಿ 58.70 ಮೀ. ಸಾಧನೆ ತೋರಿದರು.
ತಮ್ಮ ನಾಲ್ಕು ಒಲಿಂಪಿಕ್ ಕೂಟಗಳಲ್ಲಿ ವಿಕಾಸ್ ಅವರ ಅತ್ಯಂತ ನೀರಸ ಪ್ರದರ್ಶನ ಇದಾಗಿದೆ. 2004 ಮತ್ತು 2008 ರ ಕೂಟದಲ್ಲಿ ಅವರು ಫೈನಲ್ ಪ್ರವೇಶಿಸಲು ವಿಫಲರಾಗಿದ್ದರು. ಆದರೆ ನಾಲ್ಕು ವರ್ಷಗಳ ಹಿಂದೆ ಲಂಡನ್‌ನಲ್ಲಿ ನಡೆದಿದ್ದ ಕೂಟದಲ್ಲಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದರು.
‘ಇಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲನಾಗಿದ್ದೇನೆ. ಈ ವರ್ಷ ನನ್ನನ್ನು ಕಾಡಿರುವುದು ದುರದೃಷ್ಟ ಮಾತ್ರ. ಒಲಿಂಪಿಕ್ಸ್ ಆರಂಭಕ್ಕೆ ಮೂರದಿಂದ ನಾಲ್ಕು ವಾರಗಳು ಇದ್ದಾಗ ನಾಲ್ಕು ಅಭ್ಯಾಸ ಆರಂಭಿಸಿದ್ದೆ. ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸಲು ಈ ಅವಧಿ ಸಾಲದು’ ಎಂದು ವಿಕಾಸ್ ಪ್ರತಿಕ್ರಿಯಿಸಿದ್ದಾರೆ.
ಚಿನ್ನ ಗೆಲ್ಲುವ ನೆಚ್ಚಿನ ಸ್ಪರ್ಧಿ ಪೋಲೆಂಡ್‌ನ ಪಿಯೊಟರ್ ಮಲಚೊವ್‌ಸ್ಕಿ (65.89) ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದರು. ಆಸ್ಟ್ರಿಯದ ಲೂಕಾಸ್ ವೆಸ್‌ಹೈಡಿಂಗರ್ (65.86) ಮತ್ತು ಜರ್ಮನಿಯ ಕ್ರಿಸ್ಟೋಫರ್ ಹರ್ಟಿಂಗ್ (65.41) ಮೂರನೇ ಸ್ಥಾನ ಪಡೆದರು.
ಲಂಡನ್‌ನಲ್ಲಿ ಚಿನ್ನ ಗೆದ್ದಿದ್ದ ಜರ್ಮನಿಯ ರಾಬರ್ಟ್ ಹರ್ಟಿಂಗ್ (62.21) ಅರ್ಹತಾ ಸುತ್ತಿನಲ್ಲಿ 15ನೇ ಸ್ಥಾನ ಪಡೆದು, ಫೈನಲ್‌ಗೆ ಪ್ರವೇಶ ಪಡೆಯಲು ವಿಫಲರಾದರು.
ಮನ್‌ಪ್ರೀತ್‌ಗೆ ನಿರಾಸೆ: ಮನ್‌ಪ್ರೀತ್ ಕೌರ್ ಮಹಿಳೆಯರ ಷಾಟ್‌ಪಟ್ ಸ್ಪರ್ಧೆಯಲ್ಲಿ 35 ಸ್ಪರ್ಧಿಗಳಲ್ಲಿ 23ನೇ ಸ್ಥಾನ ಪಡೆದರು. ಅವರು ಕಬ್ಬಿಣದ ಗುಂಡನ್ನು 17.06 ಮೀ. ದೂರ ಎಸೆದರು.
ಜಿನ್ಸನ್ ವಿಫಲ: ಪುರುಷರ 800 ಮೀ. ಓಟದಲ್ಲಿ ಜಿನ್ಸನ್ ಜಾನ್ಸನ್ ಸೆಮಿಫೈನಲ್ ಪ್ರವೇಶಿಸಲು ವಿಫಲರಾದರು. ಮೂರನೇ ಹೀಟ್‌ನಲ್ಲಿ ಪಾಲ್ಗೊಂಡ ಅವರು 1 ನಿಮಿಷ 47.27 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಐದನೇ ಸ್ಥಾನ ಪಡೆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.