ಗುರುವಾರ , ಮೇ 19, 2022
23 °C
ಪೂವಮ್ಮಗೆ ಕೈತಪ್ಪಿದ ಚಿನ್ನ, ಸಹನಾ ಕುಮಾರಿಗೆ ನಾಲ್ಕನೇ ಸ್ಥಾನ

ವಿಕಾಸ್ ಗೌಡ ಬಂಗಾರದ ಸಂಭ್ರಮ

ಪ್ರಜಾವಾಣಿ ವಾರ್ತೆ / ಪಿ.ಜಿ.ವಿಜು ಪೂಣಚ್ಚ Updated:

ಅಕ್ಷರ ಗಾತ್ರ : | |

ಪುಣೆ: ಕೊನೆಗೂ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ಜನಗಣಮನ ರಾಷ್ಟ್ರಗೀತೆ ಮೊಳಗಿತು. ವಿಕಾಸ್ ಗೌಡ ಅವರು ಡಿಸ್ಕಸ್ ಎಸೆತದಲ್ಲಿ ಎಲ್ಲರಿಗಿಂತಲೂ ದೂರ ಡಿಸ್ಕಸ್ ಎಸೆದಿರುವ ಸಿಹಿಸುದ್ದಿ ಎಲೆಕ್ಟ್ರಾನಿಕ್ ಬೋರ್ಡ್‌ನಲ್ಲಿ ರಾರಾಜಿಸುತ್ತಿದ್ದಂತೆ ಗ್ಯಾಲರಿಯಲ್ಲಿದ್ದ ಸಾವಿರಾರು ಮಂದಿ ಎದ್ದು ನಿಂತು ಚಪ್ಪಾಳೆ ತಟ್ಟಿದರು.ಮೈಸೂರಿನ ಶಿವೇಗೌಡರ ಪುತ್ರ ವಿಕಾಸ್ ಗೌಡ ತಮ್ಮ ನಾಲ್ಕನೇ ಯತ್ನದಲ್ಲಿ 64.90 ಮೀಟರ್ಸ್ ದೂರ ಡಿಸ್ಕಸ್ ಎಸೆದು ಈ ಸಾಮರ್ಥ್ಯ ತೋರಿದರು. ಇವರು ತಮ್ಮ ಮೊದಲ ಯತ್ನದಲ್ಲಿ 58.64ಮೀಟರ್ಸ್ ದೂರ ಎಸೆದಿದ್ದರೆ, ಎರಡನೇ ಯತ್ನದಲ್ಲಿ ಫೌಲ್ ಎಸಗಿದರು. ಆದರೆ ಮೂರನೇ ಯತ್ನದಲ್ಲಿ 61.93ಮೀಟರ್ಸ್ ದೂರ ಎಸೆದು ತಮ್ಮ ಸಾಮರ್ಥ್ಯ ವೃದ್ಧಿಸಿಕೊಂಡರು. ನಾಲ್ಕನೇ ಯತ್ನದಲ್ಲಿ ಅವರಿಂದ ಅತ್ಯುತ್ತಮ ಎಸೆತ ಮೂಡಿ ಬಂದಿತು. ನಂತರ ಎರಡು ಯತ್ನಗಳಲ್ಲಿ ಕ್ರಮವಾಗಿ 62.40ಮೀಟರ್ಸ್ ಮತ್ತು 63.26ಮೀಟರ್ಸ್ ದೂರ ಎಸೆಯಲಷ್ಟೇ ಶಕ್ತರಾದರು.ಸ್ಪರ್ಧೆಯ ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ವಿಕಾಸ್ `ಮುಂದಿನ ತಿಂಗಳು ಮಾಸ್ಕೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ನಲ್ಲಿ  ಉತ್ತಮ ಸಾಮರ್ಥ್ಯ ತೋರಲು ಇದು ಉತ್ತೇಜನಕಾರಿಯಾಗಿದೆ' ಎಂದರು.`ನಾನು ಚಿಕ್ಕವನಿದ್ದಾಗಿನಿಂದಲೂ ಕಾರ್ಲ್ ಲೂಯಿಸ್ ಓಡುವುದನ್ನು ನೋಡುತ್ತಾ ಬೆಳೆದವನು. ಆತನೇ ನನಗೆ ಆದರ್ಶ. ಇಂತಹ ಸಾಧನೆಗಳ ಹಿಂದೆ ಆತನ ಸ್ಫೂರ್ತಿ ನನಗಿದ್ದೇ ಇದೆ' ಎಂದರು.ನಂತರ `ಪ್ರಜಾವಾಣಿ' ಜತೆಗೆ ಮಾತನಾಡುತ್ತಾ `ನಾನು ಏಷ್ಯಾದಲ್ಲಿ ಭಾರತವನ್ನು ಪ್ರತಿನಿಧಿಸಿ ಗೆದ್ದ ಬಗ್ಗೆ ಖುಷಿ ಎನಿಸಿದೆ. ಆದರೆ ನಾನು ಮುಂದಿನ ದಿನಗಳಲ್ಲಿ ಸಾಧಿಸುವುದು ಬಹಳ ಇದೆ' ಎಂದರು.ಶಿವೇಗೌಡರು ಅಮೆರಿಕಾದಿಂದ `ಪ್ರಜಾವಾಣಿ'ಯನ್ನು ಸಂಪರ್ಕಿಸಿ ಮಾತನಾಡಿ `ಶುಕ್ರವಾರ ಅವನ 30ನೇ ಹುಟ್ಟುಹಬ್ಬ. ಈ ಸಲ ಈ ಹಬ್ಬವನ್ನು ನಾವು ಏಷ್ಯಾ ಚಿನ್ನದ ಸಡಗರದ ಜತೆಗೆ ಆಚರಿಸುತ್ತೇವೆ. ನನ್ನ ಮಗ ಏಷ್ಯಾ ಖಂಡದಲ್ಲಿ ಮೊದಲಿಗನಾಗಿದ್ದು ಅತೀವ ಸಂತಸ ಎನಿಸಿದೆ. ಆತನಿಗೆ ಪ್ರೋತ್ಸಾಹ ನೀಡಿದ ಕನ್ನಡನಾಡಿನ ಪ್ರತಿಯೊಬ್ಬರಿಗೂ ಕೃತಜ್ಞತೆ ಹೇಳಲೇ ಬೇಕು' ಎಂದರು.`ವಿಕಾಸ್ ದೀರ್ಘ ಪ್ರಯಾಣ ಮಾಡಿ ಒಂದು ದಿನ ಮೊದಲಷ್ಟೇ ಪುಣೆಗೆ ತಲುಪಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು 64.90 ಮೀಟರ್ಸ್ ದೂರ ಎಸೆತದ ಸಾಮರ್ಥ್ಯ ತೋರಿದ್ದು ನಿಜಕ್ಕೂ ಅತ್ಯುತ್ತಮ ಪ್ರಯತ್ನವೇ ಆಗಿದೆ' ಎಂದರು.ಮಹಿಳಾ ವಿಭಾಗದ 400ಮೀಟರ್ಸ್ ಓಟದಲ್ಲಿ ಭಾರತದ ಮಚ್ಚೇಟಿರ ರಾಜು ಪೂವಮ್ಮ ಎರಡನೇ ಸ್ಥಾನಕ್ಕೆ (53.37ಸೆ.) ತೃಪ್ತಿ ಪಡಬೇಕಾಯಿತು. ಈಚೆಗೆ ಮೂರೂ ಏಷ್ಯನ್ ಗ್ರ್ಯಾನ್ ಪ್ರಿಗಳಲ್ಲಿ ಚಿನ್ನ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದ ಪೂವಮ್ಮ, ಚೆನ್ನೈನಲ್ಲಿ ಕಳೆದ ತಿಂಗಳು ಓಡಿದ್ದ ಸಾಮರ್ಥ್ಯ(52.85ಸೆ.)ವನ್ನು ಇಲ್ಲಿ ತೋರಲಾಗಲಿಲ್ಲ. ಅವರಿಂದ ಇಲ್ಲಿ ಬಂಗಾರದ ಸಾಮರ್ಥ್ಯ ನಿರೀಕ್ಷಿಸಲಾಗಿತ್ತು.ಸ್ಪರ್ಧೆಯ ನಂತರ `ಪ್ರಜಾವಾಣಿ'ಯ ಜತೆಗೆ ಮಾತನಾಡಿದ ಪೂವಮ್ಮ “ಬುಧವಾರ ನಡೆದ ಹೀಟ್ಸ್‌ನಲ್ಲಿಯೇ ಚೆನ್ನಾಗಿ ಓಡಿದ್ದೆ. ಇವತ್ತು ನಿರೀಕ್ಷಿತ ಸಾಮರ್ಥ್ಯ ತೋರಲಾಗಲಿಲ್ಲ' ಎಂದರು.ಇವತ್ತು ನಾಲ್ಕನೇ ಲೇನ್‌ನಲ್ಲಿ ಓಡಿದ ಪೂವಮ್ಮ ಕೊನೆಯ ತಿರುವಿನಲ್ಲಿ ವೇಗ ಹೆಚ್ಚಿಸಿಕೊಳ್ಳುವಾಗ ಬಳಲಿದಂತೆ ಕಂಡು ಬಂದರು. ಸುಮಾರು 300ಮೀಟರ್‌ಗಳ ವರೆಗೂ ಅವರು ಅತ್ಯುತ್ತಮವಾಗಿಯೇ ಓಡಿದರು. ಆದರೆ ಆರಂಭದಿಂದಲೂ ಉತ್ತಮವಾಗಿಯೇ ಓಡಿದ್ದ ಚೀನಾದ ಯಾನ್‌ಮಿನ್ ಕೊನೆಯ 40 ಮೀಟರ್‌ಗಳಲ್ಲಿ ವೇಗ ಹೆಚ್ಚಿಸಿಕೊಂಡ ಪರಿ ರೋಚಕವಾಗಿತ್ತು.ಈ ಸ್ಪರ್ಧೆಯಲ್ಲಿ ಭಾರತದ ಅನು ಮರಿಯಮ್ ಜೋಸ್ (53.49ಸೆ.) ಮತ್ತು ನಿರ್ಮಲ (55.40ಸೆ.) ಕ್ರಮವಾಗಿ 4 ಮತ್ತು 7ನೇ ಸ್ಥಾನಗಳಿಗೆ ಇಳಿದರು.ಮಹಿಳಾ ವಿಭಾಗದ ಹೈಜಂಪ್‌ನಲ್ಲಿ ಭಾರತದ ಸಹನಾ ಕುಮಾರಿ 1.86 ಮೀಟರ್ಸ್ ಎತ್ತರ ಜಿಗಿಯಲಷ್ಟೇ ಶಕ್ತರಾಗಿ ನಾಲ್ಕನೇ ಸ್ಥಾನಕ್ಕಿಳಿದರು.ಮಂಗಳೂರಿನ ಸಹನಾ ಕಳೆದ ತಿಂಗಳು ಚೆನ್ನೈನಲ್ಲಿ ಜಿಗಿದಷ್ಟು ಎತ್ತರ (1.88ಮಿ.)ವನ್ನು ಒಂದಿಷ್ಟು ಸುಧಾರಿಸಿಕೊಂಡಿದ್ದರೂ ಅವರಿಗೆ ರಜತ ಪದಕ ಖಚಿತವಿತ್ತು. ಸಹನಾ ಕುಮಾರಿ ಅವರು 1.81ಮೀ, 1.84ಮೀ. ಮತ್ತು 1.86ಮೀಟರ್ ಎತ್ತರವನ್ನು ಲೀಲಾಜಾಲವಾಗಿ ದಾಟಿದರಾದರೂ, 1.88 ಮೀಟರ್ಸ್ ಎತ್ತರವನ್ನು ಜಿಗಿಯಲು ನಡೆಸಿದ ಎಲ್ಲಾ ಯತ್ನಗಳಲ್ಲಿಯೂ ವಿಫಲರಾದರು.ಪುರುಷರ ವಿಭಾಗದ 400ಮೀಟರ್ಸ್ ಓಟದಲ್ಲಿ ಸೌದಿ ಅರೆಬಿಯಾದ ಯೂಸುಫ್ ಅಹಮ್ಮದ್ ಅತ್ಯುತ್ತಮವಾಗಿ ಓಡಿ ಮೊದಲಿಗರಾಗಿ ಗುರಿ ಮುಟ್ಟಿದರು. ಆದರೆ ಈ ಸ್ಪರ್ಧೆಯಲ್ಲಿದ್ದ ಭಾರತದ ಕುಂಞಿ ಮಹಮ್ಮದ್ (46.61ಸೆ.) ಮತ್ತು ಆರೋಕ್ಯ ರಾಜೀವ್ (46.63ಸೆ.) ಗಮನಾರ್ಹ ಸಾಮರ್ಥ್ಯ ತೋರಿದರು.ಪುರುಷರ ವಿಭಾಗದ ನೂರು ಮೀಟರ್ಸ್‌ನಲ್ಲಿ ಚೀನಾದ ಸು ಬಿಂಗ್‌ಟಿಯಾನ್  ಮತ್ತು ಕತಾರ್‌ನ ಸ್ಯಾಮುಯೆಲ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಗೂ ಬಿಂಗ್‌ಟಿಯಾನ್ (10.17ಸೆ.) ಗುರಿ ಮುಟ್ಟಿದರು. ಈ ಸ್ಪರ್ಧೆಯಲ್ಲಿ ಭಾರತದ ಅನಿರುದ್ಧ್ ಕಾಳಿದಾಸ್ ಮೊದಲ ಹೀಟ್ಸ್‌ನಲ್ಲಿಯೇ 5ನೇ ಸ್ಥಾನಕ್ಕಿಳಿದು (10.59ಸೆ.) ಫೈನಲ್ ತಲುಪಲಾಗಲಿಲ್ಲ.ಮಹಿಳಾ ವಿಭಾಗದ 100 ಮೀಟರ್ಸ್ ಓಟದಲ್ಲಿ ಭಾರತದ ಓಟಗಾರ್ತಿಯರ ವೇಗ ಫೈನಲ್ ತಲುಪಲೂ ಸಾಧ್ಯವಾಗಲಿಲ್ಲ. ಮೊದಲ ಹೀಟ್ಸ್‌ನಲ್ಲಿ ಆಶಾರಾಯ್ 11.94 ಸೆಕೆಂಡುಗಳಲ್ಲಿ ಕ್ರಮಿಸಿ 5ನೇಯವರಾಗಿ ಗುರಿ ತಲುಪಿದರೆ, ಎರಡನೇ ಹೀಟ್ಸ್‌ನಲ್ಲಿ 11.92 ಸೆಕೆಂಡುಗಳಲ್ಲಿ ಓಡಿದ ಮರ್ಲಿನ್ ಜೋಸೆಫ್ ಮೂರನೆಯವರಾಗಿ ಗುರಿ ಮುಟ್ಟಿದರು. ಮೂರನೇ ಹೀಟ್ಸ್‌ನಲ್ಲಿ ಶಾರದಾ ನಾರಾಯಣನ್ (13.51ಸೆ.) ಆರನೇಯವರಾಗಿ ಗುರಿ ತಲುಪಿದರು.ಫಲಿತಾಂಶಗಳು ಇಂತಿವೆ

ಪುರುಷರ ವಿಭಾಗ:100ಮೀ. ಓಟ: ಸ್ಯು ಬಿಂಗ್‌ಟಿಯಾನ್ (ಚೀನಾ) (ಕಾಲ: 10.17ಸೆ.)-1, ಸ್ಯಾಮುಯೆಲ್ ಅದೆಲೆಬರಿ (ಕತಾರ್) (ಕಾಲ: 10.27ಸೆ.)-2, ಬರಾಕತ್ ಅಲ್ ಹರಾತಿ (ಒಮಾನ್) (10.30ಸೆ.)-3.400ಮೀ. ಓಟ: ಯೂಸುಫ್ ಅಹಮ್ಮದ್ ಮಸ್ರಾಹಿ (ಸೌದಿ ಅರೆಬಿಯಾ) (ಕಾಲ: 45.08ಸೆ.)-1, ಅಲಿ ಖಾಮಿಸ್ (ಬಹರೇನ್) (ಕಾಲ: 45.65ಸೆ.)-2, ಯೂಜೊ ಕನೆಮರು (ಜಪಾನ್) (ಕಾಲ: 45.95ಸೆ.)-3.10000ಮೀ. ಓಟ: ಅಲೆಮು ಬೆಕೆಲೆ ಜೆಬ್ರ (ಕಾಲ: 28ನಿ.47.26ಸೆ.)-1,ಬಿಲಿಸುಮಾ ಶುಗಿ ಗೆಲಾಸ್ (ಕಾಲ: 28ನಿ.58.67ಸೆ.)-2, ರತಿರಾಮ್ ಸೈನಿ (ಭಾರತ) (ಕಾಲ: 29ನಿ.35.42ಸೆ.)-3, ಖೇತಾರಾಮ್ (ಭಾರತ) (ಕಾಲ: 29ನಿ.35.72ಸೆ.)-4, ಜಿ.ಲಕ್ಷ್ಮಣನ್ (ಭಾರತ) (ಕಾಲ: 30ನಿ.46.45ಸೆ.)-5.ಡಿಸ್ಕಸ್ ಎಸೆತ: ವಿಕಾಸ್ ಗೌಡ (ಭಾರತ), (ದೂರ: 64.90ಮೀ.)-1, ಮಹಮ್ಮದ್ ಸಮಿಮಿ (ಇರಾನ್) (ದೂರ: 61.93ಮೀ.)-2, ಅಹಮ್ಮದ್ ಮೊಹಮ್ಮದ್ ದೀ (ಕತಾರ್) (ದೂರ: 60.82ಮೀ.)-3.ಮಹಿಳಾ ವಿಭಾಗ: 100ಮೀ. ಓಟ: ವೆಯ್ ಯಾಂಗ್ಲಿ (ಚೀನಾ) (ಕಾಲ: 11.29ಸೆ.)-1, ಚಿಸಾತೊ ಫುಕುಶಿಮಾ (ಜಪಾನ್) (ಕಾಲ: 11.53ಸೆ.)-2, ತಾವೊ ಯೂಜಿಯ (ಚೀನಾ) (ಕಾಲ: 11.63ಸೆ.)-3.400ಮೀ. ಓಟ: ಜಾವೊ ಯಾನ್‌ಮಿನ್ (ಚೀನಾ)(ಕಾಲ:52.49ಸೆ.)-1, ಎಂ.ಆರ್.ಪೂವಮ್ಮ (53.37ಸೆ.)-2, ತಸ್ಲಾಕಿಯಾನ್ ಗ್ರೆಟಾ (ಲೆಬನಾನ್) (ಕಾಲ: 53.43ಸೆ.)-3.ಹೈಜಂಪ್: ನಾಡಿಯಾ ದುಸನೋವಾ (ಎತ್ತರ: 1.90ಮೀ.)-1, ಸ್ವೆತ್ಲಾನಾರ್ಯಾಡ್‌ಜಿವಿಲ್ (ಎತ್ತರ: 1.88ಮೀ)-2 (ಇಬ್ಬರೂ ಉಜ್‌ಬೆಕಿಸ್ತಾನ), ಮರಿನಾ ಐತೋವಾ (ಕಜಕಸ್ತಾನ) (ಎತ್ತರ: 1.88ಮೀ.)-3, ಸಹನಾ ಕುಮಾರಿ (ಭಾರತ) (ಎತ್ತರ: 1.86ಮೀ.)-4.ಪುಣೆಯಲ್ಲಿ ನಡೆಯುತ್ತಿರುವ ಏಷ್ಯಾ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಮೊದಲ ಬಂಗಾರ ತಂದುಕೊಟ್ಟ ವಿಕಾಸ್ ಗೌಡ ಡಿಸ್ಕಸ್ ಎಸೆಯಲು ಸಜ್ಜಾದ ಕ್ಷಣ  -ಪಿಟಿಐ ಚಿತ್ರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.