ಬುಧವಾರ, ಮೇ 18, 2022
25 °C

ವಿಕೋಪಕ್ಕೆ ತಿರುಗಿದ ಭಿನ್ನಮತ; ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನರಾಯಪಟ್ಟಣ: ಪಟ್ಟಣದ ಮಿನಿ ವಿಧಾನಸೌಧದಲ್ಲಿ ಸೋಮವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ/ವರ್ಗದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ದಲಿತ ಸಂಘಟನೆಯ ನಾಯಕರಲ್ಲಿ ಭಿನ್ನಮತ ಕಾಣಿಸಿದ್ದರಿಂದ ಕಚೇರಿ ಹೊರಗಡೆ ಎರಡು ಗುಂಪಿನ ನಡುವೆ ಬಿರುಸಿನ ಮಾತಿನ ಚಕಮಕಿ ನಡೆಯಿತು.ತಹಶೀಲ್ದಾರ್ ಬಿ.ಎನ್. ವರಪ್ರಸಾದರೆಡ್ಡಿ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ವರ್ಗದ ಹಿತರಕ್ಷಣಾ ಸಮಿತಿ ಸಭೆ ಕರೆಯಲಾಗಿತ್ತು. ಶಾಸಕ ಸಿ.ಎಸ್. ಪುಟ್ಟೇಗೌಡ  ಸೇರಿದಂತೆ ಅಧಿಕಾರಿಗಳು, ದಲಿತ ಮುಖಂಡರು ಭಾಗವಹಿಸಿದ್ದರು.ಕೊಳಚೆ ನಿರ್ಮೂಲನಾ ಪ್ರದೇಶದಲ್ಲಿ ವಾಸಿಸುವ ಜನತೆ ಹೆಚ್ಚಾಗಿ ಆಗಮಿಸಿದ್ದರಿಂದ ಸಭೆ ನಡೆಯುವ ಆವರಣ ಭರ್ತಿಯಾಯಿತು.  ದಲಿತ ಮುಖಂಡ ಸಿ.ಎನ್. ಮಂಜುನಾಥ್ ಮಾತನಾಡಿ, ಕೊಳಚೆ ನಿರ್ಮೂಲನಾ ಪ್ರದೇಶದಲ್ಲಿ ವಾಸಿಸುವ ಬಡಾವಣೆಯಲ್ಲಿ ಕುಡಿಯುವ ನೀರು, ಸಮರ್ಪಕ ರಸ್ತೆ, ಬೀದಿದೀಪದ ವ್ಯವಸ್ಥೆ ಇಲ್ಲ ಎಂದು ದೂರಿದರು.ಇದನ್ನು ಆಕ್ಷೇಪಿಸಿದ ಮುಖಂಡರಾದ ಬಿ. ರಂಗಪ್ಪ, ನೇರಲಕೆರೆ ಮಂಜಣ್ಣ, ನಾಗೇಶ್, ಅನಗತ್ಯವಾಗಿ ಜನತೆಯನ್ನು ಸಭೆಗೆ ಕರೆತರಲಾಗಿದೆ. ನೊಂದ ಜನರ ಪರವಾಗಿ ಮುಖಂಡರು ಮಾತನಾಡಬಹುದಿತ್ತು. ಅದನ್ನು ಬಿಟ್ಟು ಎಲ್ಲರನ್ನು ಸೇರಿಸಿಕೊಂಡು ಚರ್ಚಿಸಿದರೆ ಪ್ರಯೋಜನವಿಲ್ಲ. ಸಭೆಗೆ ಮಹತ್ವವಿರುವುದಿಲ್ಲ. ಮೊದಲು ಕೊಳಚೆ ಪ್ರದೇಶದ ಜನರ ಸಮಸ್ಯೆ ಚರ್ಚಿಸಿ ಆ ಮೇಲೆ ನಾವು ಸಭೆಗೆ ಬರುತ್ತೇವೆ ಎಂದು ಸಭೆ ಯಿಂದ ಹೊರನಡೆದರು. ಶಾಸಕರು, ತಹಶೀಲ್ದಾರ್, ಸಮಾಧಾನಪಡಿಸಲು ಯತ್ನಿಸಿದ್ದು ಫಲ ನೀಡಲಿಲ್ಲ.ಕೊಳಚೆ ನಿರ್ಮೂಲನಾ ಪ್ರದೇಶದ ಮುಖಂಡರು ಮಾತನಾಡಿ, ಸಭೆಯಿಂದ ಹೊರ ಹೋಗುವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಇವರೆಲ್ಲ ಶಾಸಕರು, ಅಧಿಕಾರಿಗಳ ಪರ ಲಾಭಿ ಮಾಡುತ್ತಾರೆ ಎನ್ನುತ್ತಿದ್ದಂತೆ ಕೆಲವರು ಅದನ್ನು ಆಕ್ಷೇಪಿಸಿದರು. ಸಭೆಯಿಂದ ಹೊರ ಹೋದ ಮುಖಂಡರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಶಾಸಕರು, ವಾಪಸು ಬರುವಂತೆ ಕೇಳಿಕೊಂಡರು ಪ್ರಯೋಜನವಾಗಲಿಲ್ಲ.ಅಷ್ಟರಲ್ಲಿ ಮಂಜುನಾಥ್, 6 ತಿಂಗಳಿಂದ ಸಭೆ ಕರೆದಿಲ್ಲ. ಕೊಳಚೆ ನಿರ್ಮೂಲನಾ ಪ್ರದೇಶದ ಜನ ಎದುರಿಸುತ್ತಿರುವ ಸಮಸ್ಯೆ ಪರಿಹರಿಸಬೇಕಿದೆ. ಆದರೆ, ಕೆಲವರಿಗೆ ಆಸಕ್ತಿ ಇಲ್ಲ ಎಂದು ದೂರಿದರು. ಒತ್ತಡದಲ್ಲಿ ಚರ್ಚಿಸುವುದು ಸರಿಯಲ್ಲ ಎಂದು ಸಭಾತ್ಯಾಗ ಮಾಡಿದರು. ಅವರನ್ನು ಕೊಳಚೆ ನಿರ್ಮೂಲನಾ ಪ್ರದೇಶದ ಜನರು  ಹಿಂಬಾಲಿಸಿದರು.

ಮಿನಿ ವಿಧಾನಸೌಧದ ಆವರಣದಲ್ಲಿ ಮಂಜುನಾಥ್ ಮತ್ತು ನಾಗೇಶ್ ಗುಂಪಿನ ನಡುವೆ ಏರಿದ ಧನಿಯಲ್ಲಿ ಮಾತಿನ ಚಕಮಕಿ ನಡೆಯಿತು. ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್, ಇಬ್ಬರನ್ನು ಸಮಾಧಾನಪಡಿಸಲು ಯತ್ನಿಸಿದರು.ಮಧ್ಯಾಹ್ನ ಕೊಳಚೆ ನಿರ್ಮೂಲನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಭರವಸೆ ಕೊಟ್ಟರು. ನಂತರ ಸಮಿತಿ ಸಭೆ ಮುಂದುವರೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.