ಗುರುವಾರ , ಮೇ 19, 2022
21 °C

ವಿಕ್ಷಿಪ್ತ ಸರ್ವಾಧಿಕಾರಿಯ ದುರಂತ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟ್ರಿಪೋಲಿ (ಪಿಟಿಐ, ಐಎಎನ್‌ಎಸ್):  ವಿಕ್ಷಿಪ್ತ ಸ್ವಭಾವದ ವರ್ಣರಂಜಿತ ವ್ಯಕ್ತಿತ್ವದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಜಗತ್ತಿನ ಚರಿತ್ರೆಯಲ್ಲಿ ತಮ್ಮದೇ ಆದ ವಿಶಿಷ್ಟ ಪುಟಗಳಲ್ಲಿ ಹೊಳೆಯುತ್ತಿರುವವರು.ಆಫ್ರಿಕಾ ಖಂಡ ಮತ್ತು ಅರಬ್ ಲೋಕದಲ್ಲಿ ದೀರ್ಘಕಾಲ ಆಡಳಿತ ನಡೆಸಿದ ಹೆಗ್ಗಳಿಕೆ ಹೊಂದಿರುವ ಗಡಾಫಿ 1969ರಲ್ಲಿ ನಡೆದ ರಕ್ತರಹಿತ ಕ್ರಾಂತಿಯ ಮೂಲಕ ಅಧಿಕಾರದ ಗದ್ದುಗೆ ಏರಿದವರು. ಆಗ ಇವರಿಗೆ ಕೇವಲ 27ರ ಹರೆಯ.ಲಿಬಿಯಾದ ಸಿದ್ರಾ ಮರುಭೂಮಿ ಪ್ರದೇಶದ ಬೆಡುವಿಯನ್ ಬುಡಕಟ್ಟಿಗೆ ಸೇರಿದ ಗಡಾಫಿಯ ಹೆತ್ತವರು ನಿರಂತರವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ವಲಸೆ ಹೋಗುತ್ತಾ, ತಾತ್ಕಾಲಿಕ ಡೇರೆಗಳಲ್ಲೇ ಬದುಕು ಕಟ್ಟಿಕೊಂಡಿದ್ದವರು. ಒಂಟೆಗಳನ್ನು ಸಾಕುವುದೂ ಅವರ ಮುಖ್ಯ ಕಾಯಕಗಳಲ್ಲಿ ಒಂದು. ಅಂತಹದ್ದೊಂದು ಡೇರೆಯಲ್ಲಿ 1942ರಲ್ಲಿ ಹುಟ್ಟಿದ ಗಡಾಫಿ ಎಳವೆಯಲ್ಲೇ ಸಹಜವಾಗಿ ಒರಟು ಸ್ವಭಾವವನ್ನೇ ಮೈಗೂಡಿಸಿಕೊಂಡಿದ್ದರು. ಇಸ್ಲಾಂ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ಅವರಿಗೆ ಆಗಿನಿಂದಲೂ ಅರಬ್ ರಾಜಕಾರಣದ ಬಗ್ಗೆ ಆಸಕ್ತಿ. ಮಿಸ್ರತ್‌ನಲ್ಲಿ ಪ್ರೌಢ ಶಿಕ್ಷಣ ಪಡೆಯುವಾಗ ಚರಿತ್ರೆಯನ್ನೇ ಮುಖ್ಯ ವಿಷಯವಾಗಿ ಓದಿದ್ದರು. ಹೀಗಾಗಿ ತಮ್ಮ ಮುಂದಿನ ಬದುಕಿನುದ್ದಕ್ಕೂ ಅವರು ಅರಬ್ ರಾಜಕಾರಣವನ್ನು ಇತಿಹಾಸದ ಹಿನ್ನೆಲೆಯಲ್ಲಿಯೇ ವಿಶ್ಲೇಷಿಸುತ್ತಾ, ಜಗತ್ತಿನಾದ್ಯಂತ ಸಾಮ್ರಾಜ್ಯಷಾಹಿಗಳ ವಿರುದ್ಧ ನಡೆದ ಸಮರಗಳನ್ನೇ ಲಿಬಿಯಾ ಜನರ ಮುಂದಿಡುತ್ತಾ ತಮ್ಮ ಪಟ್ಟವನ್ನು ಗಟ್ಟಿಯಾಗಿಟ್ಟುಕೊಂಡರು. ಸಾಮ್ರಾಜ್ಯಷಾಹಿಗಳ ವಿರುದ್ಧದ ಹೋರಾಟ ಗಡಾಫಿಗೆ ಹೊಸತೇನೂ ಅಲ್ಲ. ಇಟಲಿಯ ಸೈನಿಕರು ಲಿಬಿಯಾ ನೆಲದಲ್ಲಿ ತಮ್ಮ ಆಟಾಟೋಪ ತೋರಲು ಯತ್ನಿಸಿದಾಗ 1911ರಲ್ಲಿ ಅವರ ವಿರುದ್ಧ ಹೋರಾಡಿ ಮಡಿದವರಲ್ಲಿ ಗಡಾಫಿಯ ಮುತ್ತಜ್ಜನೂ ಪ್ರಮುಖ. ಅಂತಹ ಪರಂಪರೆಯ ಗಡಾಫಿ 1961ರಲ್ಲಿ ಲಿಬಿಯಾ ಸೇನಾ ಅಕಾಡೆಮಿಗೆ ಸೇರಿ, ಪದವಿ ಗಳಿಸಿದರು. ನಂತರ ಲಂಡನ್‌ನಲ್ಲಿ ಕೆಲವು ಸಮಯವಿದ್ದು ಮತ್ತೆ ಟ್ರಿಪೋಲಿಗೆ ವಾಪಸಾಗಿ ಸೇನೆಯಲ್ಲಿ ಕಿರಿಯ ಅಧಿಕಾರಿಯಾಗಿದ್ದರು. ಆ ದಿನಗಳಲ್ಲಿ ಈಜಿಪ್ಟ್‌ನ ಅಧ್ಯಕ್ಷ ನಾಸೆರ್‌ನ ಪ್ರಭಾವ ಅರಬ್‌ದಾದ್ಯಂತ ಇತ್ತು. ಅಂತಹ ಪ್ರಭಾವಲಯದಲ್ಲಿದ್ದ ಹಲವು ಕಿರಿಯ ಸೇನಾಧಿಕಾರಿಗಳೆಲ್ಲಾ ಒಗ್ಗೂಡಿ ಆಂದೋಲನವೊಂದನ್ನು ಹುಟ್ಟು ಹಾಕಿದರು. ಪ್ರಜಾಸತ್ತೆಯ ಕುರಿತಾದ ಕ್ರಾಂತಿಕಾರಿ ವಿಚಾರಧಾರೆಗಳು ಜನರಿಗೆ, ಯೋಧರಿಗೆ ಆಕರ್ಷಕವಾಗಿಯೇ ಕಂಡಿತ್ತು. 1969ರಲ್ಲಿ ಅದೊಂದು ದಿನ ಅರಸ ಇದ್ರಿಸ್ ಟರ್ಕಿಗೆ ತೆರಳಿ ಚಿಕಿತ್ಸೆಗಾಗಿ ಅಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಗಡಾಫಿ ನೇತೃತ್ವದ ಕಿರಿಯ ಸೇನಾಧಿಕಾರಿಗಳ ತಂಡ ಅರಸೊತ್ತಿಗೆಯನ್ನು ಕೊನೆಗಾಣಿಸಿ, ಇಸ್ಲಾಮ್ ಸಮಾಜವಾದದ ಕನಸು ನೀಡುತ್ತಾ `ಲಿಬಿಯಾ ಅರಬ್ ಗಣರಾಜ್ಯ~ವನ್ನು ಘೋಷಿಸಿತು. ಆಗ ಸೇನೆಯಲ್ಲಿ ಕೇವಲ ಲೆಫ್ಟಿನೆಂಟ್ ಆಗಿದ್ದ ಗಡಾಫಿ ತಮ್ಮನ್ನು `ಕರ್ನಲ್~ ಎಂದು ಕರೆದುಕೊಂಡರು. ಆ ನಂತರದ ನಾಲ್ಕು ದಶಕಗಳ ಲಿಬಿಯಾ ಚರಿತ್ರೆ ಎಂದರೆ ಅದು ಗಡಾಫಿಯ ಕಥೆಯೇ ಆಗಿ ಹೋಯಿತು.ತಮ್ಮ ಕೈಗೆ ಅಧಿಕಾರ ಬಂದಾಗ ಗಡಾಫಿ ಹಳ್ಳಿ ಹಳ್ಳಿಗಳಲ್ಲೂ ಕ್ರಾಂತಿ ಸಮಿತಿಗಳನ್ನು ರಚಿಸಿ, ಅವುಗಳಲ್ಲೆಲ್ಲಾ ತಮ್ಮ ನಂಬಿಕಸ್ತರನ್ನೇ ನೇಮಕ ಮಾಡಿಕೊಂಡು ಇಡೀ ದೇಶವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಲಿಬಿಯಾದಾದ್ಯಂತ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಅವರು, ದೊಡ್ಡ ಮಟ್ಟದ ತೈಲ ಶ್ರೀಮಂತಿಕೆಯನ್ನು ದೇಶದ ಪ್ರಗತಿಗೆ ಬಳಸಿಕೊಂಡರು. ಜತೆಗೆ ತಾವೂ ಐಷಾರಾಮಿ ಬದುಕನ್ನು ರೂಢಿಸಿಕೊಂಡರು. ಅಂದ ಚೆಂದದ ಟೊಪ್ಪಿಗೆಗಳು, ಆಕರ್ಷಕ ಸೇನಾ ಉಡುಗೆಯೊಂದಿಗೆ ಹೊರ ಜಗತ್ತಿಗೆ ತಮ್ಮನ್ನು ಪ್ರದರ್ಶಿಸಿಕೊಳ್ಳುತ್ತಾ ಹೋದ ಇವರು ತಮ್ಮ ಸುತ್ತಲೂ ಸುಂದರ ಅಂಗರಕ್ಷಕಿಯರನ್ನಿಟ್ಟುಕೊಂಡಿದ್ದರು. ಬಾಲ್ಯದಲ್ಲಿ ತಾವು ಡೇರೆಗಳಲ್ಲಿಯೇ ಬದುಕಿದ ನೆನಪುಗಳು ಅವರನ್ನು ದಟ್ಟವಾಗಿ ಕಾಡುತಿತ್ತು. ಜತೆಗೆ ಆ ಸಂಸ್ಕೃತಿಯ ಬಗ್ಗೆ ಅವರಿಗೆ ಅಪಾರ ಹೆಮ್ಮೆಯೂ ಇತ್ತು. ಹೊರ ದೇಶಗಳಿಗೆ ಹೋದರೆ ತಾರಾ ಹೋಟೆಲುಗಳಲ್ಲಿ ಇಳಿದುಕೊಳ್ಳದೆ, ತಾವೇ ತಾತ್ಕಾಲಿಕ ಡೇರೆಯ ಸರಕುಗಳನ್ನು ಕೊಂಡೊಯ್ದು, ಅಲ್ಲಿ ಡೇರೆ ಕಟ್ಟಿಕೊಂಡು ಅದರಲ್ಲಿಯೇ ಇಳಿದುಕೊಳ್ಳುತ್ತಿದ್ದರು. ಆ ಡೇರೆಗಳ ಒಳಗೆ ಚಕ್ರವರ್ತಿಗಳೂ ನಾಚಿಕೊಳ್ಳುವಂತಹ ಐಷಾರಾಮಿ ವ್ಯವಸ್ಥೆ ತುಂಬಿಕೊಂಡಿರುತಿತ್ತು. ಲಿಬಿಯಾದಲ್ಲಂತೂ ಇವರು ಹತ್ತಾರು ಭವ್ಯ ಅರಮನೆಗಳನ್ನು ಕಟ್ಟಿಸಿ ಸುದ್ದಿಯಾಗಿದ್ದರು.ದಿನಕ್ಕೊಂದು ವಿವಾದಾತ್ಮಕ ಹೇಳಿಕೆ ನೀಡುವುದು, ಹೊಸ ಯೋಜನೆಗಳನ್ನು ಪ್ರಕಟಿಸುವುದು, ಅಮೆರಿಕಾದಂತಹ ದೇಶಗಳ ಮೇಲೆ ಹರಿಹಾಯುವುದು, ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿದ್ದರು. ಇಸ್ರೇಲ್ ಮತ್ತು ಈಜಿಪ್ಟ್ ನಡುವಣ 1978ರ ಕ್ಯಾಂಪ್ ಡೇವಿಡ್ ಶಾಂತಿ ಒಪ್ಪಂದಕ್ಕೆ ಅರಬರೆಲ್ಲರೂ ಒಗ್ಗೂಡಿ ವಿರೋಧಿಸುವುದಕ್ಕೆ ಗಡಾಫಿಯೇ ಮುನ್ನುಡಿ ಬರೆದದ್ದು. ಪಾಶ್ಚಾತ್ಯ ಶಿಕ್ಷಣ, ವೈಜ್ಞಾನಿಕ ಮನೋಭಾವ, ಪ್ರಗತಿಪರ ಚಿಂತನೆಗಳನ್ನು ಜನಮನದಲ್ಲಿ ಬೇರೂರಿಸುತ್ತಲೇ ಅವಕಾಶ ಸಿಕ್ಕಿದಾಗಲೆಲ್ಲಾ ಅಮೆರಿಕಾ ವಿರುದ್ಧ ಕೆಂಡ ಕಾರತೊಡಗಿದರು.ಜಗತ್ತಿನ ದೇಶಗಳನ್ನು ಅಮೆರಿಕಾದ ವಿರುದ್ಧ ಧ್ವನಿ ಏರಿಸಲು ಹುರಿದುಂಬಿಸುತ್ತಿದ್ದರು. ಇಸ್ರೇಲ್ ವಿರುದ್ಧ ಪ್ಯಾಲೆಸ್ತೇನ್ ನಡೆಸುತ್ತಿದ್ದ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತರು. ಪಾಕಿಸ್ತಾನದಿಂದ ಪರಮಾಣು ಬಾಂಬು ಪಡೆಯಲೂ ಯತ್ನಿಸಿದ್ದರು.  `ಯನೈಟೆಡ್ ಸ್ಟೇಟ್ಸ್ ಆಫ್ ಆಫ್ರಿಕ~ ಪರಿಕಲ್ಪನೆಗೂ ಜೀವ ನೀಡಿದರು. ಆಫ್ರಿಕಾ ಖಂಡದ ಎಲ್ಲಾ ದೇಶಗಳು ಸೇರಿ ಒಂದು ಸೇನೆ ಕಟ್ಟುವುದು, ಒಂದೇ ಮಾದರಿಯ ಕರೆನ್ಸಿ ನೋಟನ್ನು ಬಳಸುವುದು, ಆ ಖಂಡದಾದ್ಯಂತ ಎಲ್ಲರೂ ಒಂದೇ ಮಾದರಿಯ ಪಾಸ್‌ಪೋರ್ಟ್ ಹೊಂದುವುದು ಇತ್ಯಾದಿ ಐಕ್ಯ ಆಫ್ರಿಕಾ ಕನಸು ಕಂಡಿದ್ದ ಗಡಾಫಿ ಆ ಮೂಲಕ ಅಮೆರಿಕಕ್ಕೆ ಸೆಡ್ಡು ಹೊಡೆಯಲು ಹೊರಟ್ಟಿದ್ದೂ ಗಮನಾರ್ಹ.ಹೀಗಾಗಿಯೇ ಕಳೆದ ನಾಲ್ಕು ದಶಕಗಳಲ್ಲಿ ಅಮೆರಿಕಾದ ಎಲ್ಲಾ ಅಧ್ಯಕ್ಷರುಗಳೂ ಗಡಾಫಿ ವಿರುದ್ಧ ಕಿಡಿ ಕಾರಿದ್ದರು. ರೊನಾಲ್ಡ್ ರೇಗನ್ ಅವರಂತೂ `ಗಡಾಫಿ ಹುಚ್ಚು ನಾಯಿ~ ಎಂದು ಜರೆದಿದ್ದರು. ಅಮೆರಿಕಾದ ಕೆಲವು ಮಿತ್ರ ದೇಶಗಳು ಲಿಬಿಯಾ ವಿರುದ್ಧ ಆರ್ಥಿಕ ದಿಗ್ಬಂಧನ ಹೇರಿದ್ದರೂ ಗಡಾಫಿ ತನ್ನದೇ ಬೆಂಬಲಿಗ ದೇಶಗಳ ಕೂಟ ಕಟ್ಟಲು ಯತ್ನಿಸಿದ್ದರು. ಆದರೆ ದೇಶದೊಳಗೆ ಗಡಾಫಿ ಅಧಿಕಾರದ ಮತ್ತಿನಿಂದ ವರ್ತಿಸತೊಡಗಿದರು. ಪ್ರಜಾಸತ್ತೆಯ ಮಾತನಾಡುತ್ತಲೇ ಇವರು ದೇಶದೊಳಗೆ ತಮ್ಮ ವಿರುದ್ಧ ಸೊಲ್ಲೆತ್ತಿದ್ದವರನ್ನೆಲ್ಲಾ ನಿರ್ನಾಮ ಮಾಡಿದರು. ಮಾಧ್ಯಮಗಳನ್ನೂ ಸರ್ಕಾರದ ಹಿಡಿತಕ್ಕೆ ತೆಗೆದುಕೊಂಡರು. ಸರ್ವಾಧಿಕಾರದ ವಿರುದ್ಧ ಮಾತನಾಡಿದ ಸಾವಿರಾರು ಜನರನ್ನು ಬಂಧಿಸಿದರು, ಕಗ್ಗೊಲೆ ನಡೆಸಿದರು.ಹೀಗಾಗಿ ಲಿಬಿಯಾದಾದ್ಯಂತ ಗಡಾಫಿ ವಿರುದ್ಧ ಜನಾಂದೋಲನ ಭುಗಿಲಾಗತೊಡಗಿತು. ಇದೇ ವರ್ಷ ಫೆಬ್ರವರಿಯಿಂದ ಈ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಾಗ, ಅಮೆರಿಕಾ ಪ್ರತಿಭಟನಾಕಾರರನ್ನು ಬೆಂಬಲಿಸಿತು. ಜಗತ್ತಿನಾದ್ಯಂತ ಗಡಾಫಿ ವಿರುದ್ಧ ಜನಾಭಿಪ್ರಾಯ ಮೂಡಿಸಿತು. ಆಗಸ್ಟ್‌ನಲ್ಲಿ ಗಡಾಫಿ ತನ್ನ ಅರಮನೆಯಿಂದ ಪರಾರಿಯಾಗಲೇ ಬೇಕಾಯಿತು. ಆಗಲೇ ಗಡಾಫಿಯ ಐಷಾರಾಮಿ ಬದುಕಿನ ಇನ್ನೊಂದು ಮುಖ ಮತ್ತು ಆತ ದೇಶದ ಖಜಾನೆಯನ್ನೇ ಲೂಟಿ ಮಾಡಿದ್ದು ಬಯಲುಗೊಂಡಿತು. ಇಟಲಿಯ ಪ್ರತಿಷ್ಠಿತ ಜ್ಯುವೆಂಟಸ್ ಫುಟ್‌ಬಾಲ್ ಕ್ಲಬ್‌ನಲ್ಲಿ ಅಪಾರ ಷೇರುಗಳನ್ನು ಹೊಂದಿರುವುದೇ ಅಲ್ಲದೆ, ಜಗತ್ತಿನ ಹಲವು ದೇಶಗಳಲ್ಲಿ ಭಾರಿ ಆಸ್ತಿಪಾಸ್ತಿಗಳನ್ನು ಅವರು ಮಾಡಿದ್ದೂ ಗೊತ್ತಾಯಿತು. ಗಡಾಫಿಯ ಇಬ್ಬರು ಪತ್ನಿಯರ ಎಂಟು ಮಂದಿ ಮಕ್ಕಳು ದೇಶದ ಹಲವು ಉನ್ನತ ಸ್ಥಾನಗಳಲ್ಲಿ ಕುಳಿತು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದೂ ಬಯಲುಗೊಂಡಿತು.ಇದೀಗ ಜಗತ್ತು ಕಂಡ ಪಾದರಸದಂತಹ ಚಟುವಟಿಕೆಯ ವಿಕ್ಷಿಪ್ತ ಸರ್ವಾಧಿಕಾರಿಯೊಬ್ಬರು ದುರಂತ ಅಂತ್ಯ ಕಂಡ ಕಥೆ ಚರಿತ್ರೆಯ ಪುಟಗಳಲ್ಲಿ ಸೇರಿ ಹೋಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.