ಮಂಗಳವಾರ, ಮೇ 11, 2021
24 °C

ವಿಚಿತ್ರ ನಾಮದ ಬಲ ಸಂಗೀತ ಕಟ್ಟುವ ಛಲ

ಸುಮಲತಾ ಎನ್. Updated:

ಅಕ್ಷರ ಗಾತ್ರ : | |

ವಿಚಿತ್ರ ನಾಮದ ಬಲ ಸಂಗೀತ ಕಟ್ಟುವ ಛಲ

`ಸಂಗೀತಕ್ಕೆ ಶಾಸ್ತ್ರೀಯ, ಪಾಶ್ಚಾತ್ಯ ಎಂದು ಕಟ್ಟಿಹಾಕಬೇಡಿ. ಸುಂದರವಾಗಿದ್ದರೆ, ಹಾಡಿ ಆನಂದಿಸಿ' ಎನ್ನುವುದು ಈ ತಂಡದವರ ವ್ಯಾಖ್ಯಾನ. ಸಂಗೀತದ ಬಗ್ಗೆ ಪೂರ್ವಗ್ರಹ ಇಟ್ಟುಕೊಳ್ಳುವುದೇ ತಪ್ಪು ಎನ್ನುವ ಈ ಬ್ಯಾಂಡ್ ಹಲವು ತಿದ್ದುಪಡಿ ತರುವ ಹಂಬಲದಲ್ಲಿದೆ. ಅದೇ ಹುರುಪಿನಲ್ಲಿಯೇ ತಂಡಕ್ಕೆ `ಡಿಪಾರ್ಟ್‌ಮೆಂಟ್ ಆಫ್ ಕರೆಕ್ಷನ್ಸ್' (ತಿದ್ದುಪಡಿಗಳ ಇಲಾಖೆ ಎಂದು ಅರ್ಥ) ಎಂದು ಹೆಸರಿಟ್ಟಿದೆ.2010ರಲ್ಲಿ ಶುರುವಾದ ಈ ಬ್ಯಾಂಡ್‌ನ ಹಾದಿಯನ್ನು ತೆರೆದಿಟ್ಟಿದ್ದು ತಂಡದ ಸದಸ್ಯ ಕಿರಣ್ ಕುಮಾರ್. ಸಂಗೀತ ಕುರಿತ ಅವರ ವ್ಯಾಖ್ಯಾನ ಹೀಗಿದೆ...`ಮನುಷ್ಯನ ಭಾವನೆಗಳೇ ಸಂಗೀತಕ್ಕೆ ಮೂಲ. ಅದು ಪಾಶ್ಚಾತ್ಯವೇ ಇರಬೇಕು, ಶಾಸ್ತ್ರೀಯವೇ ಇರಬೇಕು ಎಂದರೆ ಲೆಕ್ಕಾಚಾರವೆನಿಸುತ್ತದೆ. ಭಾವನೆಗಳಿಗೆ ಲೆಕ್ಕಾಚಾರ ಬೆರೆಸಿದರೆ ಹೇಗೆ ಹೇಳಿ? ಸಂಗೀತ ಅನುಭವದಿಂದ ಸ್ಫುರಿಸಬೇಕು' ಎನ್ನುತ್ತಲೇ ತಂಡದ ಸಂಗೀತದ ಬಗೆಗಿನ ಪ್ರೀತಿಯನ್ನು ವ್ಯಕ್ತಪಡಿಸಿದರು.ತಂಡದ ಐವರೂ ಬೇರೆ ಬೇರೆ ಉದ್ಯಮದಲ್ಲಿರುವವರು. ಸಾಫ್ಟ್‌ವೇರ್ ಲೋಕದಲ್ಲಿ ತಮ್ಮತನವನ್ನು ಕಳೆದುಕೊಳ್ಳಲು ಬಯಸದೇ ಸಂಗೀತದ ಸೆಳೆತಕ್ಕೆ ಮಾರುಹೋದವರು. ತಂಡದ ಸದಸ್ಯರಲ್ಲಿ ಶುಬ್ರೊ ಪ್ರಕಾಶ್ ಚಕ್ರವರ್ತಿ ಗಾಯಕರಾಗಿದ್ದು, ಟಾಟಾ ಇನ್‌ಸ್ಟಿಟ್ಯೂಟ್‌ನಲ್ಲಿ ವಿಜ್ಞಾನಿಯಾಗಿದ್ದಾರೆ. ಅನಿರ್ಬನ್ ರಾಯ್ ರಿದಂ ಗಿಟಾರಿಸ್ಟ್. ಎಚ್.ಪಿ. ಕಂಪೆನಿಯಲ್ಲಿ ಅವರು ಸಾಫ್ಟ್‌ವೇರ್ ಎಂಜಿನಿಯರ್. ಇನ್ನು ತತ್ವಶಾಸ್ತ್ರದಲ್ಲಿ ಎಂ.ಎ ಮಾಡಿರುವ ಕಿರಣ್ ಕುಮಾರ್ ವಾಣಿಜ್ಯೋದ್ಯಮಿ. ಅವರು ಬ್ಯಾಂಡ್‌ನ ಲೀಡ್ ಗಿಟಾರಿಸ್ಟ್. ಉತ್ಸವ್ ಕೂಡ ಎಚ್.ಪಿ.ಯಲ್ಲಿ ಎಂಜಿನಿಯರ್ ಆಗಿದ್ದು, ಇಲ್ಲಿ ಬೇಸ್ ಗಿಟಾರ್ ಪ್ಲೇಯರ್, ಬಿ.ಕಾಂ ಓದುತ್ತಿರುವ ಜೆಫನಾಯ್ ಜೋರ್ಡನ್ ಡ್ರಮ್ಮರ್.ಗಿಟಾರ್ ತಯಾರಿಸುವ ಬಾಬಿ ಎಂಬುವರ ಬಳಿ ಬರುತ್ತಿದ್ದ ಈ ಹುಡುಗರು ಒಬ್ಬೊರಿಗೊಬ್ಬರು ಪರಿಚಯವಾಗಿ ಬ್ಯಾಂಡ್ ಹುಟ್ಟುಹಾಕುವ ಕನಸು ಕಂಡರು. ಗಾಯಕನ ಹುಡುಕಾಟದಲ್ಲಿದ್ದ ತಂಡಕ್ಕೆ ಆಕಸ್ಮಿಕವಾಗಿ ಸಿಕ್ಕವರು ಗಾಯಕ ಶುಬ್ರೊ ಪ್ರಕಾಶ್. ಅಂದಿನಿಂದ ಶುರುವಾದ ಇವರ ಸಂಗೀತ ಪಯಣ ಹಲವು ಕನಸುಗಳೊಂದಿಗೆ ಹೆಜ್ಜೆ ಹಾಕುತ್ತಾ ಬಂದಿದೆ.ಇಂಥದ್ದೇ ಸಂಗೀತಕ್ಕೆ ಒಗ್ಗಿಕೊಳ್ಳಲು ಬಯಸದ ಈ ತಂಡ ಹಾರ್ಡ್ ರಾಕ್, ಹೆವಿ ಮೆಟಲ್, ರಾಕ್ ಸಂಗೀತ, ಬ್ಲೂಸ್, ಜಾಸ್, ಶಾಸ್ತ್ರೀಯ ಹೀಗೆ ತರಹೇವಾರಿ ರಾಗಗಳನ್ನು ನುಡಿಸುತ್ತದಂತೆ. ಒಮ್ಮೆ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗವೊಂದನ್ನು ಹಾರ್ಡ್ ರಾಕ್‌ಗೆ ಸೇರಿಸಿ ಹಾಡು ಕಟ್ಟಿದ ಹೊಸ ಪ್ರಯೋಗವೂ ಫಲ ನೀಡಿತು ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ.ಹೊಸತನಕ್ಕೆ ಸದಾ ತುಡಿಯುವ ಇವರು ಪ್ರತಿನಿತ್ಯ ನೂತನ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾರೆ. ಕಿರಣ್ ಕುಮಾರ್ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದರೆ, ಅನಿರ್ಬನ್ ಬ್ಲೂಸ್ ಮತ್ತು ಜಾಸ್ ಶೈಲಿ ಅಭ್ಯಾಸ ಮಾಡುತ್ತಿದ್ದಾರೆ. ಶುಬ್ರೊ ವೇಕನ್ ಶೈಲಿಯಲ್ಲಿ ಹಾಡುವುದನ್ನು ಕಲಿಯುತ್ತಿದ್ದಾರೆ. ಉತ್ಸವ್ ಸೂಫಿ ಸಂಗೀತದ ಆರಾಧಕ.ಹತ್ತು ವರ್ಷದಿಂದ ನಗರದಲ್ಲಿರುವ ಅನಿರ್ಬನ್‌ಗೆ ಸಂಗೀತದ ಘಮಲು ಹತ್ತಿದ್ದು ಕಾಲೇಜಿನಲ್ಲಿದ್ದಾಗ. ಬ್ಯಾಂಡ್ ಎಂದಾಕ್ಷಣ ಉಲ್ಲಾಸಗೊಳ್ಳುವ ಅವರು ತಮ್ಮ ಅನುಭವ ತೆರೆದಿಟ್ಟಿದ್ದು ಹೀಗೆ...`ಮೂರು ವರ್ಷದಿಂದ ಬ್ಯಾಂಡ್ ಹಲವು ಬದಲಾವಣೆಗೆ ಕಂಡಿತು. ಒಂದಿಬ್ಬರು ಬಿಟ್ಟುಹೋಗಿದ್ದೂ ಇದೆ. ಅಷ್ಟೇ ಅಲ್ಲ, ಎಲ್ಲರ ಮನೆಯಲ್ಲೂ ಬ್ಯಾಂಡ್ ಕಟ್ಟಿಕೊಂಡವರು ಊರೂರು ತಿರುಗುತ್ತಾರೆ, ಇದರ ಸಹವಾಸವೇ ಬೇಡ ಎನ್ನುತ್ತಿದ್ದರು. ಆದರೆ ನಮ್ಮ ಆಸಕ್ತಿ ಸಾಬೀತಾದಾಗಿನಿಂದ ಬೆಂಬಲ ನೀಡುತ್ತಿದ್ದಾರೆ. ಮೊದಲು ಬೇರೆಯವರ ಹಾಡುಗಳನ್ನು ಹಾಡುತ್ತಿದ್ದೆವು. ಈಗ ನಮ್ಮದೇ ಸಂಗೀತ ರಚನೆಯಲ್ಲಿ ತೊಡಗಿಕೊಂಡಿದ್ದೇವೆ'.ಸಂಗೀತ ಎಲ್ಲರನ್ನೂ ಮುಟ್ಟಬೇಕು ಎಂಬ ಉದ್ದೇಶ ಹೊಂದಿರುವ ಈ ತಂಡ, ಮಗುವಿನಿಂದ ಹಿಡಿದು ವಯೋವೃದ್ಧರೂ ತನ್ನ ಸಂಗೀತಕ್ಕೆ ಕಿವಿಗೊಡಬೇಕು ಎಂದು ಬಯಸುತ್ತದೆ. ಎಲ್ಲಾ ಹೋಟೆಲ್‌ಗಳಲ್ಲೂ ಒಂದೇ ರುಚಿ ಇರಲು ಸಾಧ್ಯವೇ ಎಂದು ಪ್ರಶ್ನಿಸುತ್ತಲೇ, `ವಿಭಿನ್ನತೆ ಇದ್ದರೆ ಮಾತ್ರ ಗೆಲುವು ಸಾಧ್ಯ' ಎಂಬ ಸರಳ ಸೂತ್ರವನ್ನು ಅಳವಡಿಸಿಕೊಂಡಿದೆ.`ಕೆಲಸಕ್ಕೆ ಸೇರಿದ ಮೇಲೆ ಸಮಯ ನಿಭಾಯಿಸುವುದು ಕಷ್ಟವಾಗುತ್ತದೆ. ಆದರೆ ಮನದಲ್ಲಿನ ಸಂಗೀತ ಹೊರ ಹೊಮ್ಮಲೇಬೇಕು. ಆದ್ದರಿಂದ ವೀಕೆಂಡ್‌ನಲ್ಲಿ ವಿದ್ಯಾರಣ್ಯಪುರದಲ್ಲಿನ ಜ್ಯಾಮ್ ಬಾಕ್ಸ್‌ನಲ್ಲಿ ವಾರಕ್ಕೊಮ್ಮೆ ಎಲ್ಲರೂ ಕೂಡಿ ಅಭ್ಯಾಸ ಮಾಡುತ್ತೇವೆ' ಎನ್ನುತ್ತಾರೆ ಉತ್ಸವ್.ಕನ್ನಡ, ಇಂಗ್ಲಿಷ್, ಬಂಗಾಳಿ ಹಾಡುಗಳನ್ನೂ ಸಂಯೋಜಿಸುವ ಯೋಜನೆ ಹಾಕಿಕೊಂಡಿರುವ ಬ್ಯಾಂಡ್ ಇದುವರೆಗೂ ಹಲವು ಕಾರ್ಯಕ್ರಮಗಳನ್ನು ನೀಡಿದೆ. `ಶೋಲೆ', `ಓಹ್ ಓಹ್ ತುಮ್', `ಮೌಸಮ್', `ಹಮ್ ಕೋ ಬದಲ್ ನಾ ಪಡೇಗಾ'  ಹೀಗೆ ಹಲವು ಸುಂದರ ಹಾಡುಗಳನ್ನು ಹೊರತಂದಿದೆ. ಇದೇ ಆಗಸ್ಟ್‌ನಲ್ಲಿ ಆಲ್ಬಂ ಅನ್ನೂ ಬಿಡುಗಡೆ ಮಾಡುವ ತವಕದಲ್ಲಿದೆ.

ಮಾಹಿತಿಗೆ: 88923 80475

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.