ಭಾನುವಾರ, ಏಪ್ರಿಲ್ 11, 2021
20 °C

ವಿಜಯಪುರ ಭವಿಷ್ಯದಲ್ಲಿ ವಿದ್ಯುನ್ಮಾನ ನಗರಿ: ಮೊಯಿಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ ಭವಿಷ್ಯದಲ್ಲಿ ವಿದ್ಯುನ್ಮಾನ ನಗರಿ: ಮೊಯಿಲಿ

ವಿಜಯಪುರ: ಭವಿಷ್ಯದಲ್ಲಿ ವಿಜಯಪುರ ಪಟ್ಟಣವನ್ನು ಮಹತ್ವದ ವಿದ್ಯುನ್ಮಾನ ಕೈಗಾರಿಕಾ ಪ್ರದೇಶವಾಗಿ ರೂಪುಗೊಳಿಸಲಾಗುವುದು ಹಾಗೂ ಈ ಪ್ರದೇಶದಲ್ಲಿ ಏಷ್ಯಾದಲ್ಲೇ ಅತಿ ದೊಡ್ಡ ವಿಜ್ಞಾನ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಖಾತೆ ಸಚಿವ ಎಂ.ವೀರಪ್ಪ ಮೊಯಿಲಿ ತಿಳಿಸಿದರು.ಪಟ್ಟಣದ ಸಂತೆ ಮೈದಾನದಲ್ಲಿ ಪುರಸಭಾ ವತಿಯಿಂದ ನಿರ್ಮಿಸಿದ ಹೋಟೆಲ್ ಮತ್ತು ವಾಣಿಜ್ಯ ಮಳಿಗೆಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪವಿರುವ ವಿಜಯಪುರ ಪಟ್ಟಣವನ್ನು ಭವಿಷ್ಯದ ಪ್ರಮುಖ ಕೇಂದ್ರ ಸ್ಥಳವನ್ನಾಗಿ ರೂಪಿಸುವ ಉನ್ನತ ಯೋಜನೆಗಳು ರೂಪುಗೊಳ್ಳುತ್ತಿವೆ. ಈ ದಿಸೆಯಲ್ಲಿ ಇಲ್ಲಿಯ ಎಲ್ಲಾ ಜನರು ಶಿಕ್ಷಣಕ್ಕೆ ಒತ್ತುಕೊಡುವುದರಿಂದ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.ಪಟ್ಟಣದ ಸುತ್ತಮುತ್ತ 8 ಸಾವಿರ ಕೋಟಿ ರೂ ಬಂಡವಾಳ ಹೂಡಿ ದಕ್ಷಿಣ ಕೊರಿಯಾದವರ ಸಹಭಾಗಿತ್ವದಲ್ಲಿ ಕೈಗಾರಿಕೆ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಪ್ರದೇಶದ ಯುವಜನತೆ ಯೋಜನಾ ಬದ್ಧವಾಗಿ ಇಲ್ಲಿನ ಭೌತಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಬೇಕು ಹಾಗೂ ಇಲ್ಲಿನ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ಸೂಚಿಸಿದರು.ಈ ಭಾಗದ ಜನರಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಲು ಡಿಸೆಂಬರ್ 1ರಂದು ನೀರಾವರಿ ಸಚಿವ ಬಸವರಾಜ್ ಬೊಮ್ಮಾಯಿ ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ಶಂಕುಸ್ಥಾಪನೆ ನೆರವೇರಿಸಲ್ದ್ದಿದಾರೆ. ಇನ್ನೆರಡು ವರ್ಷಗಳಲ್ಲಿ ಇಲ್ಲಿನ ಕೆರೆಗಳು ತುಂಬಲು ಪ್ರಾರಂಭವಾಗುತ್ತವೆ ಎಂದು ಮೊಯಿಲಿ ತಿಳಿಸಿದರು.ಕಾರ್ಮಿಕ ಹಾಗೂ ರೇಷ್ಮೆ ಖಾತೆ ಸಚಿವ ಬಿ.ಎನ್. ಬಚ್ಚೇಗೌಡ ಮಾತನಾಡಿ, ನಗರೋತ್ಥಾನ ಯೋಜನೆಯಡಿ 1768 ಕೋಟಿ ಬಿಡುಗಡೆ ಮಾಡಿದ್ದು ರಾಜ್ಯದ ಎಲ್ಲಾ ಪುರಸಭೆಗಳಿಗೂ 5 ಕೋಟಿ ಅನುದಾನ ಬಿಡುಗಡೆಯಾಗಿರುವುದಾಗಿ ತಿಳಿಸಿದರು.12 ನೇ ಪಂಚವಾರ್ಷಿಕ ಯೋಜನೆಯಡಿ ರೇಷ್ಮೆ ಬೆಳೆಗಾರರಿಗೆ 15 ಕೋಟಿ ರೂಗಳ ವಿಶೇಷ ಪ್ಯಾಕೇಜ್ ತಂದಿದ್ದು, ಇನ್ನೈದು ವರ್ಷಗಳಲ್ಲಿ ರೇಷ್ಮೆ ಬೆಳೆ ಮತ್ತು ಹಾಲು ಉತ್ಪಾದನೆಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದುವ ಯೋಜನೆಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.ತ್ಯಾಜ್ಯ ವಿಲೇವಾರಿ ಇತ್ತೀಚಿನ ದಿನಗಳಲ್ಲಿ ಬಹು ದೊಡ್ಡ ಸಮಸ್ಯೆಯಾಗುತ್ತಿದ್ದು ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ ಕಸ ವಿಲೇವಾರಿಗೆ ಸ್ಥಳೀಯ ಪುರಸಭೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಅವರು  ತಿಳಿಸಿದರು.ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಮಾತನಾಡಿ, ಪುರಸಭೆಗೆ ಬಿಡುಗಡೆಯಾಗುವ ಅನುದಾನದ ಹಣಗಳಲ್ಲಿ ಪುರಸಭೆಯು ಗುಣಮಟ್ಟದ ಕೆಲಸಗಳನ್ನು ಮಾಡಿಸಬೇಕು ಎಂದು ಸೂಚಿಸಿದರು. ಪಟ್ಟಣದಲ್ಲಿ ಇಂದು 210 ಲಕ್ಷರೂಗಳ ಕಾಮಗಾರಿಗಳು ಉದ್ಘಾಟನೆಯಾಗಿದ್ದು ಬೆಳೆಯುತ್ತಿರುವ ಪಟ್ಟಣವು ತಾಲ್ಲೂಕು ಕೇಂದ್ರವಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿರುವುದಾಗಿ ತಿಳಿಸಿದರು.ಕ್ಷೇತ್ರದ ಶಾಸಕ ಕೆ.ವೆಂಕಟಸ್ವಾಮಿ ಮಾತನಾಡಿ, ವಿಜಯಪುರ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡುವಂತೆ  ಸಚಿವರಲ್ಲಿ ಒತ್ತಾಯಿಸಿದರು.ಮಾಜಿ ಶಾಸಕ ಜಿ.ಚಂದ್ರಣ್ಣ ಪಟ್ಟಣದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಪುರಸಭಾಧ್ಯಕ್ಷೆ ಮಂಜುಳಾ ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿದ್ಯಾ ಮತ್ತು ತಂಡದವರು ಪ್ರಾರ್ಥಿಸಿದರು. ಪುರಸಭಾ ಸದಸ್ಯ ಎಂ. ಸತೀಶ್‌ಕುಮಾರ್ ಸ್ವಾಗತಿಸಿದರು. ಕೆ.ಎಚ್. ಚಂದ್ರಶೇಖರ್ ನಿರೂಪಿಸಿ ವಂದಿಸಿದರು.ಮಾಜಿ ಲೋಕಸಭಾ ಸದಸ್ಯ ಸಿ.ನಾರಾಯಣ ಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಬಚ್ಚೇಗೌಡ, ತ್ಲ್ಲಾಲೂಕು ದಂಡಾಧಿಕಾರಿ ಎಲ್. ಸಿ.ನಾಗರಾಜ್, ಜಿಲ್ಲಾಧಿಕಾರಿ ಕಚೇರಿಯ ಯೋಜನಾ ನಿರ್ದೇಶಕ ಅಶ್ವತ್ಥ್ ನಾರಾಯಣ ಗೌಡ, ಜಿ.ಪಂ. ಸದಸ್ಯ ಬಿ.ರಾಜಣ್ಣ, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷೀನಾರಾಯಣಪ್ಪ, ಪುರಸಭ ಮುಖ್ಯಾಧಿಕಾರಿ ಎಂ. ಆರ್. ಮಂಜುನಾಥ್, ಉಪಾಧ್ಯಕ್ಷ ಜೆ.ಎನ್. ಶ್ರಿನಿವಾಸ್, ಸ್ಥಾಯಿ ಸಮಿತಿ ಅಧ್ಯಕ್ಷ ಆರ್. ಮುನಿರಾಜು ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.