ಭಾನುವಾರ, ಜೂನ್ 13, 2021
22 °C

ವಿಜಯಶಂಕರ್ ಸ್ಪರ್ಧೆ ಬಹುತೇಕ ಖಚಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಹಾಸನ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ವಿಜಯಶಂಕರ್ ಸ್ಪರ್ಧಿಸುವುದು ಈಗ ಖಚಿತವಾಗಿದೆ. ಜತೆಯಲ್ಲೇ ಪಕ್ಷದೊಳಗೆ ಎಲ್ಲವೂ ಸರಿಯಾಗಿಲ್ಲ ಎಂಬ ಸಂದೇಶವನ್ನೂ ಸ್ಥಳೀಯ ಮುಖಂಡರು ಹೈಕಮಾಂಡ್‌ ಹಾಗೂ ಜಿಲ್ಲೆಯ ಮತದಾರರಿಗೆ ರವಾನೆ ಮಾಡಿದ್ದಾರೆ.ಹೊರ ಜಿಲ್ಲೆಯವರನ್ನು ತಂದು ಇಲ್ಲಿ ಅಭ್ಯರ್ಥಿ ಮಾಡುವುದನ್ನು ಜಿಲ್ಲೆಯ ಬಿಜೆಪಿ ಮುಖಂಡರು ಆರಂಭದಿಂದಲೇ ವಿರೋಧಿ­ಸುತ್ತಾ ಬಂದಿದ್ದಾರೆ. ಈ ಬಾರಿ ನವಿಲೆ ಅಣ್ಣಪ್ಪ ಟಿಕೆಟ್‌ಗೆ ಸಾಕಷ್ಟು ಪ್ರಯತ್ನ ಮಾಡಿದ್ದರು. ಇನ್ನೊಂದು ವರ್ಗ ಬಿ.ಬಿ. ಶಿವಪ್ಪ ಅವರಿಗೆ ಟಿಕೆಟ್‌ ನೀಡಬೇಕು ಎಂದು ಪಟ್ಟು ಹಿಡಿದಿತ್ತು. ಆದರೆ, ಹೈಕಮಾಂಡ್‌ ಮಾತ್ರ ಇವರಿಬ್ಬರನ್ನೂ ಪರಿಗಣಿಸಿರಲಿಲ್ಲ. ಹಿಂದಿನಿಂದಲೇ ಈ ಕ್ಷೇತ್ರಕ್ಕೆ ಬೇರೆಬೇರೆ ಹೆಸರುಗಳು ಕೇಳಿ ಬರುತ್ತಿದ್ದವು.ಮೈಸೂರು–ಕೊಡಗು ಕ್ಷೇತ್ರಕ್ಕೆ ಪ್ರತಾಪ ಸಿಂಹ ಹೆಸರು ಪ್ರಸ್ತಾಪವಾಗುವುದರ ಜತೆಗೆ ಅಲ್ಲಿಯ ಟಿಕೆಟ್‌ ಆಕಾಂಕ್ಷಿಯಾಗಿದ್ದ ವಿಜಯಶಂಕರ್‌ ಹಾಸನಕ್ಕೆ ಬರುತ್ತಾರೆ ಎಂಬ ಸುದ್ದಿಯೂ ಬಲವಾಗಿತ್ತು. ಆದರೆ, ವಿಜಯಶಂಕರ್‌ ಮಾತ್ರ ಹಾಸನದಿಂದ ಸ್ಪರ್ಧಿಸುವುದೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಅವರ ಮನವೊಲಿಕೆ ಪ್ರಯತ್ನಗಳು ವಿಫಲವಾದ ಬಳಿಕ, ಇತ್ತೀಚೆಗೆ ಹಾಸನ ಜಿಲ್ಲೆ ಜಾವಗಲ್‌ ಮೂಲದ, ಪ್ರಸಕ್ತ ಚಿಕ್ಕಮಗಳೂರಿನಲ್ಲಿರುವ ರೇಖಾ ಹುಲಿಯಪ್ಪಗೌಡ ಅವರಿಗೆ ಟಿಕೆಟ್‌ ನೀಡುವ ಬಗ್ಗೆಯೂ ವರದಿಗಳು ಬಂದಿದ್ದವು. ಬಿಜೆಪಿ ಮುಖಂಡರೇ ಇದನ್ನು ಖಚಿತಪಡಿ­ಸಿದ್ದರು. ಆದರೆ, ಗುರುವಾರ ಮಧ್ಯಾಹ್ನ ಮಾಧ್ಯಮ ಪ್ರತಿನಿಧಿಗಳಿಗೆ ಸಂದೇಶವೊಂದನ್ನು ಕಳುಹಿಸಿದ ಬಿಜೆಪಿ ಮುಖಂಡರೊಬ್ಬರು, ‘ವಿಜಯಶಂಕರ್‌ ಹಾಸನದಿಂದ ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದ್ದು, ಸಂಜೆ ಅವರು ಹಾಸನಕ್ಕೆ ಭೇಟಿ ನೀಡಲಿದ್ದಾರೆ’ ಎಂದಿದ್ದರು.ಅದರಂತೆ ಗುರುವಾರ ಸಂಜೆ ಹಾಸನದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಯಬಹುದೆಂಬ ನಿರೀಕ್ಷೆ ಇತ್ತು, ಸಭೆ ನಡೆಯಲಿಲ್ಲ. ಆದರೆ, ವಿಜಯಶಂಕರ್‌ ಹಾಸನಕ್ಕೆ ಬಂದು ಹಿರಿಯ ಮುಖಂಡರನ್ನು ಭೇಟಿ ಮಾಡಿದ್ದಾರೆ.ಶುಕ್ರವಾರ ಸಭೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಆದರೆ, ಮೊದಲ ಭೇಟಿಯಲ್ಲೇ ಜಿಲ್ಲೆಯ ಬಿಜೆಪಿ ಮುಖಂಡರು ಇವರಿಗೆ ನಿರಾಶಾದಾಯಕ ಪ್ರತಿಕ್ರಿಯೆ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಇದರ ಪ್ರಯೋಜನವನ್ನು ಕಾಂಗ್ರೆಸ್‌ ಪಡೆಯುವುದೇ ಎಂಬುದನ್ನು ಕಾಯ್ದು ನೋಡಬೇಕಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.