ಮಂಗಳವಾರ, ಮೇ 24, 2022
30 °C

ವಿಜಾಪುರ: ಬಾಂಧವ್ಯ ಬೆಸೆದ ಬನ್ನಿ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಜಿಲ್ಲೆಯಲ್ಲಿ ಎಲ್ಲೆಡೆ ಗುರುವಾರದಂದು ಜನರು ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಪ್ರಸಿದ್ಧ ವಿಜಯ ದಶಮಿ ಹಬ್ಬವನ್ನು ಆಚರಿಸಿದರು. ಸಹಸ್ರಾರು ಜನರು ಒಬ್ಬರಿಗೊಬ್ಬರು ಬನ್ನಿ ಪತ್ರೆಯನ್ನು ವಿನಿಮಯ ಮಾಡಿಕೊಂಡು `ನಾವು- ನೀವು ಬಂಗಾರವಾಗಿ ಇರೋಣ~ ಎಂದು ಪರಸ್ಪರ ಶುಭ ಹಾರೈಸುತ್ತ ಈ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.ಜಿಲ್ಲೆಯಲ್ಲಿ `ಬನ್ನಿ ಹಬ್ಬ~ವೆಂದೇ ಪ್ರಸಿದ್ಧವಾದ ಈ ಹಬ್ಬದ ದಿನದಂದು ಬೆಳಗ್ಗೆಯಿಂದಲೇ ಕೆಲವು ಯುವಕರು ತಮ್ಮ ತಮ್ಮ ಮೊಬೈಲ್‌ಗಳ ಮೂಲಕ ಬಂಧು ಬಳಗದವರಿಗೆ, ಸ್ನೇತರಿಗೆ ಎಸ್.ಎಂ.ಎಸ್. ಕಳಿಸಿ ವಿಜಯ ದಶಮಿ ಹಬ್ಬದ ಶುಭಾಶಯಗಳನ್ನು ಕೋರಿ ಸಂತಸಪಟ್ಟರು.ಕೆಲವರು ದೂರವಾಣಿ ಮೂಲಕ ಖುದ್ದು ಮಾತನಾಡಿ ಶುಭಾಶಯ ಕೋರಿದರು. ಇನ್ನೂ ಕೆಲವರು ತಮ್ಮ ಸ್ವ- ಗ್ರಾಮಗಳಿಗೆ ತೆರಳಿ ಬಂಧುಗಳೊಂದಿಗೆ ಹಬ್ಬದಲ್ಲಿ  ಪಾಲ್ಗೊಂಡು ಸಂಭ್ರಮಿಸಿದರು.ಜಿಲ್ಲೆಯಲ್ಲಿ ನಗರಕ್ಕಿಂತ ಗ್ರಾಮೀಣ ಭಾಗದ ಜನರು ಈ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಸಂಜೆಯ ವೇಳೆಯಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗೂಡಿ, ಊರ ಹೊರವಲಯದ ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಬನ್ನಿಯನ್ನು ತೆಗೆದುಕೊಂಡು ಗ್ರಾಮದ ದೇವಸ್ಥಾನಗಳಿಗೆ ತೆರಳಿ ದೇವರ ಸನ್ನಿಧಿಯಲ್ಲಿ ಬನ್ನಿ ಇಟ್ಟು ನಮಸ್ಕರಿಸಿದರು.ಬಳಿಕ ಮನೆಗೆ ತೆರಳಿ ಸಹೋದರಿಯರಿಂದ ಆರತಿ ಬೆಳಗಿಸಿಕೊಂಡು ಮನೆಯ ದೇವರಿಗೆ, ಬಂಧು ಭಗಿನಿಯರಿಗೆ, ನೆರೆ- ಹೊರೆಯವರಿಗೆ ಬನ್ನಿ, ಬಂಗಾರ ನೀಡಿ ನಮಸ್ಕರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತು.

 

ಇದು ಸಂಪ್ರದಾಯವೂ ಹೌದು. ಪೌರಾಣಿಕ ಕಾಲದಿಂದಲೂ ಮಹತ್ವ ಪಡೆದ ಈ ವಿಜಯ ದಶಮಿ ಹಬ್ಬದ ಸಂದರ್ಭದಲ್ಲಿ ಪರಸ್ಪರ ವಿನಿಮಯ ಮಾಡಿ ಕೊಳ್ಳಲು ಬಳಸುವ ಬನ್ನಿಗೆ ಬಲು ಬೇಡಿಕೆ. ಬುಧವಾರದಂದು ಕೂಡ ಜನರು ಈ ಬನ್ನಿ ಪತ್ರೆಯನ್ನೇ ಬಳಸಿ ಆಯುಧಗಳಿಗೆ ಪೂಜೆ ಸಲ್ಲಿಸಿದರು.

ಒಟ್ಟಾರೆ ಈ ಬಾರಿಯ ಬನ್ನಿಹಬ್ಬ ಜಿಲ್ಲೆಯ ಜನರಲ್ಲಿ ಬಾಂಧವ್ಯ ಬೆಸೆದು ಭಾವೈಕ್ಯತೆಯ ಸಂದೇಶ ಸಾರಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.