ಸೋಮವಾರ, ಮೇ 10, 2021
25 °C

ವಿಜೃಂಭಣೆಯ ಲಕ್ಷ್ಮೀದೇವಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನರಾಯಪಟ್ಟಣ: ಇತಿಹಾಸ ಪ್ರಸಿದ್ಧ ಲಕ್ಷ್ಮೀದೇವಿ ಅಮ್ಮನವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕತ್ತರಿಘಟ್ಟದ ಹೊರವಲಯದಲ್ಲಿ  ಶನಿವಾರ ವಿಜೃಂಭಣೆಯಿಂದ ಜರುಗಿತು.ಪ್ರತಿ ವರ್ಷ ಗೌರಿ ಹಬ್ಬ ಮುಗಿದ 12 ದಿನಗಳ ಬಳಿಕ ರಥೋತ್ಸವ ಜರುಗುವುದು ವಾಡಿಕೆ. ಶುಕ್ರವಾರ ರಾತ್ರಿ ದೇವಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ ಇಡೀ ರಾತ್ರಿ ಗ್ರಾಮದಲ್ಲಿ ಉತ್ಸವ ನಡೆಸಲಾಯಿತು.

 

ಶನಿವಾರ ಮುಂಜಾನೆ ಊರಿನಿಂದ ಸ್ವಲ್ಪ ದೂರದಲ್ಲಿರುವ ದೇಗುಲದ ಸುತ್ತು ರಥ ಪ್ರದಕ್ಷಿಣೆ ಹಾಕಿತು. ದೇಗುಲದ ಬಳಿ ತೇರು ಆಗಮಿಸುತ್ತಿದ್ದಂತೆ ಭಕ್ತಾದಿಗಳು ಬಾಳೆ ಹಣ್ಣು, ದವನವನ್ನು ತೇರಿನತ್ತ ಎಸೆದು ಭಕ್ತಿಯಿಂದ ನಮಿಸಿದರು. ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಹರಕೆ ಹೊತ್ತವರು ಬಾಯಿ ಬೀಗ ಧರಿಸಿದ್ದರು. ಮುಡಿ ಹರಕೆ ಒಪ್ಪಿಸಿದರು.ದೇವಸ್ಥಾನದ ಮುಂದೆ ಸಿಡಿ ಉತ್ಸವ ನಡೆಯಿತು. ಸಿಡಿ ನಡೆಸುವರು ಚಿಕ್ಕ ಮಕ್ಕಳನ್ನು ತಮ್ಮ ಜೊತೆ ಕಂಬಕ್ಕೆ ಕಟ್ಟಿಕೊಂಡು 3 ಸುತ್ತು ಹಾಕಿದರು.ಶನಿವಾರ ಬೆಳಿಗ್ಗೆಯಿಂದಲೇ ಎಲ್ಲಿ ನೋಡಿದರಲ್ಲಿ ಜನರು ಕಂಡು ಬಂದರು. ಜಾತ್ರೆಯ ಅಂಗವಾಗಿ ವಿವಿಧ ಕಡೆಗಳಿಂದ ಗ್ರಾಮಕ್ಕೆ ಬಸ್ ಸೌಲಭ್ಯ  ಕಲ್ಪಿಸಲಾಗಿತ್ತು. ಹಾಸನ ಜಿಲ್ಲೆ ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳಿಂದ ಭಕ್ತಾದಿಗಳು ಆಗಮಿಸಿದ್ದರು.ದೇಗುಲದ ಸುತ್ತಲಿನ ಜಮೀನಿನಲ್ಲಿ ಡೇರೆ ಹಾಕಿ ತಮ್ಮ ಶಕ್ತ್ಯಾನುಸಾರ ಕುರಿ, ಕೋಳಿಗಳನ್ನು ಬಲಿ ನೀಡಿ ಅಡುಗೆ ತಯಾರಿಸಿ, ಪೂಜೆ ಮಾಡುವ ದಾಸಪ್ಪ ಅವರನ್ನು ಕರೆಸಿ ~ಮೂಡಲಗಿರಿಯಪ್ಪ ದೇವರಿಗೆ~ ನೈವೇದ್ಯ ಅರ್ಪಿಸಿದರು.ಬಳಿಕ ಬಂಧುಗಳು, ಸ್ನೇಹಿತರೊಂದಿಗೆ ಮಾಂಸದೂಟ ಸವಿಯುವುದು ಹಬ್ಬದ ವಿಶೇಷ.ತಹಶೀಲ್ದಾರ್ ಬಿ.ಎನ್. ವರಪ್ರಸಾದರೆಡ್ಡಿ ಶನಿವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಭಾನುವಾರ ರಾತ್ರಿ ಜಾತ್ರೆಗೆ ತೆರೆ ಬೀಳಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.