ಸೋಮವಾರ, ಜೂನ್ 21, 2021
26 °C

ವಿಜೃಂಭಿಸಿದ ದೇಸಿ ಕ್ರೀಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಸಿ  ಕ್ರೀಡೆ ಕಬಡ್ಡಿಯಲ್ಲಿ ಭಾರತ ಮತ್ತೊಮ್ಮೆ ವಿಜೃಂಭಿಸಿದೆ. ಮಹಿಳಾ ತಂಡದವರು ಚೊಚ್ಚಿಲ ವಿಶ್ವಕಪ್ ಕಬಡ್ಡಿ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದು ಅದಕ್ಕೆ ಸಾಕ್ಷಿ. ಕರ್ನಾಟಕದ ಕುಗ್ರಾಮವೊಂದರ ಆಟಗಾರ್ತಿ ಮಮತಾ ಪೂಜಾರಿ ಈ ತಂಡದ ಸಾರಥ್ಯ ವಹಿಸಿ ಯಶಸ್ವಿಯಾಗಿದ್ದು ಮತ್ತೊಂದು ವಿಶೇಷ.ದೇಸಿ ಕ್ರೀಡೆಗಳು ಮರೆಯಾಗುತ್ತಿವೆ ಎನ್ನುವ ಈ ಸಂದರ್ಭದಲ್ಲಿ ಇಂತಹ ಸಾಧನೆ ಹೊರಹೊಮ್ಮಿದ್ದು ಕಬಡ್ಡಿಯತ್ತ ಎಲ್ಲರ ಗಮನ ಹರಿಯುವಂತೆ ಮಾಡಿದೆ. ಈ ತಂಡದಲ್ಲಿ ಆಡಿದ ಹೆಚ್ಚಿನವರು ಹಳ್ಳಿ ಹಾಗೂ ಬಡ ಕುಟುಂಬದಿಂದ ಬಂದವರು. ಆದರೆ ದೇಶದ ಕೀರ್ತಿ ಪತಾಕೆಯನ್ನು ಹಾರಿಸಲು ಅದ್ಯಾವುದೂ ಅಡ್ಡಿಯಾಗಿಲ್ಲ.ಕಬಡ್ಡಿಯಲ್ಲಿ ಭಾರತವೇ ಸೂಪರ್ ಪವರ್. ಏಷ್ಯನ್ ಕ್ರೀಡಾಕೂಟ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಸದಾ ಮಿಂಚು ಹರಿಸುತ್ತಿದೆ. ಆದರೆ ಸರ್ಕಾರವಾಗಲಿ, ಕಾರ್ಪೊರೇಟ್ ವಲಯವಾಗಲಿ ಕಬಡ್ಡಿ ಹಾಗೂ ಕಬಡ್ಡಿ ಆಟಗಾರರತ್ತ ಯಾವುದೇ ಗಮನ ಹರಿಸುತ್ತಿಲ್ಲ. ಇದಕ್ಕೆ ಕಾರಣ ಗ್ರಾಮೀಣ ಸೊಗಡಿನ ಕಬಡ್ಡಿಗೆ ಗ್ಲಾಮರ್ ಸ್ಪರ್ಶ ಇಲ್ಲ.

 

ಮೂರು ವರ್ಷದ ಮಗುವಿಗೆ ಚೆಂಡು, ಬ್ಯಾಟ್ ತಂದುಕೊಡುವ ಪೋಷಕರು ಕಬಡ್ಡಿಯಂಥ ಕ್ರೀಡೆಗಳತ್ತ ಆಸಕ್ತಿ ತೋರಿಸುತ್ತಿಲ್ಲ. ಇದರಿಂದ ಮಕ್ಕಳಲ್ಲಿ ಗ್ರಾಮೀಣ ಕ್ರೀಡೆಗಳ ಬಗ್ಗೆ ಸಹಜವಾಗಿಯೇ ಒಲವು ಇಲ್ಲದಂತಾಗಿದೆ. ಕ್ರಿಕೆಟ್, ಟೆನಿಸ್‌ನಷ್ಟು ಜನಪ್ರಿಯತೆ ಕಬಡ್ಡಿಗೆ ಇಲ್ಲದಿರುವುದು ಇದಕ್ಕೆ ಕಾರಣ.ಪ್ರಚಾರ ಹಾಗೂ ಪ್ರಾಯೋಜಕತ್ವದ ಕೊರತೆಯ ನಡುವೆಯೂ ಭಾರತದ ವನಿತೆಯರ ಈ ಸಾಧನೆ ಅದ್ಭುತ. ಇದು ಯುವ ಜನಾಂಗಕ್ಕೆ ಸ್ಫೂರ್ತಿ ಆಗಬೇಕು. ಪಟ್ನಾದಲ್ಲಿ ನಡೆದ ಈ ವಿಶ್ವಕಪ್ ವೀಕ್ಷಿಸಲು ಭಾರಿ ಜನಸ್ತೋಮ ನೆರೆದಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು. ಭಾರತದಲ್ಲಿ ಕ್ರಿಕೆಟ್ ಹೊರತುಪಡಿಸಿದರೆ ಬೇರೆ ಯಾವುದೇ ಕ್ರೀಡೆಗೆ ಈ ರೀತಿ ಜನ ಸೇರಿದ ನಿದರ್ಶನ ಕಡಿಮೆ.

 

ಇದು ಕಬಡ್ಡಿಯತ್ತ ಯುವ ಜನಾಂಗ ಒಲವು ತೋರಲು ಮುನ್ನುಡಿ ಆಗಬೇಕು. ಪಂಜಾಬ್, ಹರಿಯಾಣ ಹಾಗೂ ಬಿಹಾರದಲ್ಲಿ ಕಬಡ್ಡಿ ಜನಪ್ರಿಯವಾಗುತ್ತಿದೆ. ಅಲ್ಲಿನ ರಾಜ್ಯ ಸರ್ಕಾರಗಳು ಅಂತರರಾಷ್ಟ್ರೀಯ ಮಟ್ಟದ ಟೂರ್ನಿ ಆಯೋಜಿಸಿ ಬೆಂಬಲ ನೀಡುತ್ತಿರುವುದು ಇದಕ್ಕೆ ಕಾರಣ. ಇದರಿಂದ ಯುವ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯವಾಗಿದೆ.

 

`ಗೆದ್ದಾಗ ಮಾತ್ರ ಅಭಿನಂದನೆ ಹೇಳಿ ಸುಮ್ಮನಾಗುತ್ತಾರೆ. ಆಮೇಲೆ ಕಬಡ್ಡಿ ಕ್ರೀಡೆಯತ್ತ ತಲೆ ಕೂಡ ಹಾಕುವುದಿಲ್ಲ~ ಎಂಬುದು ಕೆಲ ಕ್ರೀಡಾಪಟುಗಳ ಅಸಮಾಧಾನ. ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ತಂಡದಲ್ಲೂ ಮಮತಾ ಇದ್ದರು. ಆದರೆ ಇದರಿಂದ ಅವರ ಹಾಗೂ ಕುಟುಂಬದ ಜೀವನಮಟ್ಟದಲ್ಲಿ ಯಾವುದೇ ಸುಧಾರಣೆ ಆಗಿಲ್ಲದಿರುವುದು ಬೇಸರದ ಸಂಗತಿ. ವಿಶ್ವಕಪ್ ಗೆಲುವು ಕಬಡ್ಡಿ ಕ್ರೀಡೆಯ ಜನಪ್ರಿಯತೆ ಮತ್ತು ಕ್ರೀಡಾಪಟುಗಳ ಬದುಕಿನಲ್ಲಿ ಸುಧಾರಣೆಗೆ ಪ್ರೇರಕವಾಗಲಿ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.