ಗುರುವಾರ , ಮೇ 6, 2021
26 °C

ವಿದೇಶಿಯರ ಮನೆಯಲ್ಲಿ ಕಳವು: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿದೇಶಿಯರ ಮನೆಯಲ್ಲಿ ಕೆಲಸಕ್ಕೆ ಸೇರಿ ಆಭರಣ ಕಳವು ಮಾಡುತ್ತಿದ್ದ ಆರೋಪದ ಮೇಲೆ ಯುವತಿಯೊಬ್ಬಳನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕೋರಮಂಗಲದ ವೆಂಕಟಾಪುರದ ಚಂದ್ರಿಕಾ (21) ಬಂಧಿತ ಆರೋಪಿ. ವಿದೇಶಿಯರ ಮನೆಯನ್ನು ಗುರುತಿಸುತ್ತಿದ್ದ ಚಂದ್ರಿಕಾ ಕೆಲಸಕ್ಕೆ ಸೇರುತ್ತಿದ್ದಳು. ಮನೆ ಮಾಲೀಕರಿಗೆ ನಂಬಿಕೆ ಮೂಡಿಸಿ ಆಭರಣ ಕಳವು ಮಾಡಿ ಪರಾರಿಯಾಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.ಕೋರಮಂಗಲ ನಿವಾಸಿ ಕೆನಡಾ ಪ್ರಜೆ ಅಲೇನ್ ಡೆಂಪ್ಸೆ ಎಂಬುವರ ಮನೆಯಲ್ಲಿ ಚಂದ್ರಿಕಾ ಕೆಲ ದಿನಗಳ ಹಿಂದೆ ಕೆಲಸಕ್ಕೆ ಸೇರಿದ್ದಳು. ಅವರ ಮನೆಯಿಂದ ಚಿನ್ನ ಮತ್ತು ವಜ್ರದ ಆಭರಣ ಕಳವು ಮಾಡಿ ಪರಾರಿಯಾಗಿದ್ದಳು. ಈ ಬಗ್ಗೆ ಅಲೇನ್ ಅವರು ದೂರು ನೀಡಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.`ಆರೋಪಿಯಿಂದ ರೂ 3.28 ಲಕ್ಷ  ಬೆಲೆ ಬಾಳುವ ಆಭರಣ ವಶಪಡಿಸಿಕೊಳ್ಳಲಾಗಿದೆ. ಕಳವು ಮಾಡವುದನ್ನೇ ಆಕೆ ವೃತ್ತಿ ಮಾಡಿಕೊಂಡಿದ್ದಳು. ಇಂತಹುದೇ ಪ್ರಕರಣದಲ್ಲಿ ಆಕೆಯನ್ನು ಎಚ್‌ಎಎಲ್ ಮತ್ತು ಕೋರಮಂಗಲ ಪೊಲೀಸರು ಬಂಧಿಸಿದ್ದರು~ ಎಂದು ಮಡಿವಾಳ ಉಪ ವಿಭಾಗದ ಎಸಿಪಿ ಸುಬ್ಬಣ್ಣ `ಪ್ರಜಾವಾಣಿ~ಗೆ ತಿಳಿಸಿದರು.ಬೀಗ ಹಾಕಿದ ಮನೆಗಳನ್ನು ಗುರುತಿಸಿ ಬಾಗಿಲು ಮುರಿದು ಕಳವು ಮಾಡುತ್ತಿದ್ದ ಆರೋಪದ ಮೇಲೆ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ಭೋಜರಾಜ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಆರೋಪಿಯಿಂದ ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ರುವ ಎರಡು ಮನೆಗಳಲ್ಲಿ ಆರೋಪಿ ಕಳವು ಮಾಡಿದ್ದ. ಹಾಸನ ನಗರದಲ್ಲಿಯೂ ಆತ ಕಳವು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ವೇಶ್ಯಾವಾಟಿಕೆ ಬಂಧನ

ಯುವತಿಯರನ್ನು ಅಕ್ರಮ ಬಂಧನದಲ್ಲಿಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬೊಮ್ಮನಹಳ್ಳಿಯ ಪ್ರಕಾಶ್ (33) ಮತ್ತು ಬಾಬು (33) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.`ಕೋರಮಂಗಲದಲ್ಲಿ ಫ್ಯಾಷನ್ ಬ್ಯೂಟಿ ಅಂಡ್ ಸ್ಪಾ ಎಂಬ ಮಸಾಜ್ ಪಾರ್ಲರ್ ನಡೆಸುತ್ತಿದ್ದ ಆರೋಪಿಗಳು ಅಲ್ಲಿ ಇಬ್ಬರು ಯುವತಿಯರನ್ನು ಕೂಡಿ ಹಾಕಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಿ ಯುವತಿಯರನ್ನು ರಕ್ಷಿಸಲಾಗಿದೆ~ ಎಂದು ಇನ್‌ಸ್ಪೆಕ್ಟರ್ ಎಸ್. ಸುಧೀರ್ ತಿಳಿಸಿದ್ದಾರೆ. ಆಗ್ನೇಯ ವಿಭಾಗದ ಡಿಸಿಪಿ ಡಾ. ಹರ್ಷಾ ಅವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.