ಬುಧವಾರ, ಮೇ 19, 2021
22 °C
ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣ

ವಿದೇಶಿ ಕೋರ್ಟ್ ವಿಚಾರಣೆಗೆ ಸಿಎಜಿ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅತಿಗಣ್ಯರ ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ವಿಚಾರಣೆಯನ್ನು ವಿದೇಶದ ನ್ಯಾಯಾಲಯದಲ್ಲಿ ನಡೆಸುತ್ತಿರುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಹಾಲೇಖಪಾಲರು (ಸಿಎಜಿ) ಆಕ್ಷೇಪ ಎತ್ತಿದ್ದಾರೆ.ವಿದೇಶದ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ಪ್ರಸ್ತಾವವನ್ನು ರಕ್ಷಣಾ ಸಚಿವಾಲಯ ಎರಡು ಬಾರಿ ತಿರಸ್ಕರಿಸಿತ್ತು. ಹೀಗಾದರೂ ವಿಚಾರಣೆಯನ್ನು ಇಟಲಿಯ ಕೋರ್ಟ್‌ನಲ್ಲಿ ನಡೆಸುತ್ತಿರುವುದನ್ನು ಸಿಎಜಿ ಪ್ರಶ್ನಿಸಿದ್ದಾರೆ.ಈ ಹಿಂದೆ ಸಿಎಜಿ ಆಗಿದ್ದ ವಿನೋದ್ ರಾಯ್ ಅವರ ಅವಧಿಯಲ್ಲಿ, ಅಂದರೆ ಏ.25ರಂದು ಅಂತಿಮಗೊಳಿಸಲಾದ ವರದಿಯಲ್ಲಿ ಈ ಆಕ್ಷೇಪಗಳನ್ನು ಎತ್ತಲಾಗಿದೆ. ಈಗ ಸಿಎಜಿ ಆಗಿರುವ ಶಶಿಕಾಂತ್ ಶರ್ಮ ಅವರ ನೇಮಕವಾಗುವುದಕ್ಕೆ ಒಂದು ತಿಂಗಳಷ್ಟು ಮುಂಚೆ ಈ ವರದಿ ಸಲ್ಲಿಕೆಯಾಗಿದೆ.ರಾಷ್ಟ್ರದೊಳಗಿನ ಸಂಚಾರಕ್ಕೆಂದೇ ಈ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಹೀಗಾಗಿ ದೇಶದೊಳಗಿನ ನ್ಯಾಯಾಲಯದಲ್ಲೇ ಈ ಹಗರಣದ ವಿಚಾರಣೆ ನಡೆಸಬೇಕು ಎಂದು ಮಹಾಲೇಖಪಾಲರು ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.ಹಗರಣದ ವಿಚಾರಣೆಯನ್ನು ವಿದೇಶದಲ್ಲಿ ನಡೆಸಬೇಕು ಎಂಬ ಭಾರತೀಯ ವಾಯುಪಡೆಯ (ಐಎಎಫ್) ಪ್ರಸ್ತಾವವನ್ನು ರಕ್ಷಣಾ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ರಕ್ಷಣಾ ಸಾಮಗ್ರಿ ಖರೀದಿ ಮಂಡಳಿಯು (ಡಿಪಿಬಿ) ತಿರಸ್ಕರಿಸಿತ್ತು. ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಕೂಡ ಆರಂಭದಲ್ಲಿ ವಿದೇಶದಲ್ಲಿನ ವಿಚಾರಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಐಎಎಫ್ ಒತ್ತಡದ ಮುಂದುವರಿದ ಹಿನ್ನೆಲೆಯಲ್ಲಿ ಅಂತಿಮವಾಗಿ ಅವರು ಅದಕ್ಕೆ ಒಪ್ಪಿಗೆ ನೀಡಿದ್ದರು.362 ಕೋಟಿ ರೂಪಾಯಿ ಲಂಚ ಹಗರಣದ ಈ ಪ್ರಕರಣದ ವಿಚಾರಣೆಯು ಇಟಲಿಯ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ವಿಚಾರಣೆಗೆ ಹಾಜರಾಗುತ್ತಿರುವ ಭಾರತವು, ಈ ಸಂಬಂಧ ಇಟಲಿಯ ನ್ಯಾಯಾಲಯ ನೀಡುವ ತೀರ್ಪನ್ನು ತಾನು ಒಪ್ಪಿಕೊಳ್ಳಬೇಕು ಎಂಬ ನಿಬಂಧನೆಯೇನೂ ಇಲ್ಲ ಎಂದು ಹೇಳಿದೆ. ಭಾರತೀಯ ಸಂವಿಧಾನದ ಚೌಕಟ್ಟಿನಲ್ಲಿ ನ್ಯಾಯ ಪರಿಹಾರ ಕೋರಲು ತನಗೆ ಹಕ್ಕುಗಳಿವೆ ಎಂದೂ ತರ್ಕ ಮಂಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.